ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಅಧ್ಯಕ್ಷೆ, ಉಪಾಧ್ಯಕ್ಷೆಯ ಬಿರುಕು ಬಹಿರಂಗ

ಮಡಿಕೇರಿ ನಗರಸಭೆಯಲ್ಲಿ ವಿರೋಧ ಪಕ್ಷದಂತೆ ವರ್ತಿಸಿದ ಆಡಳಿತ ಪಕ್ಷ!
Last Updated 5 ಮಾರ್ಚ್ 2023, 6:23 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿ ಶನಿವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಅನಿತಾ ಪೂವಯ್ಯ ಹಾಗೂ ಉಪಾಧ್ಯಕ್ಷೆ ಸವಿತಾ ರಾಕೇಶ್ ನಡುವಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಳ್ಳುವುದರ ಜತೆಗೆ, ಆಡಳಿತ ಪಕ್ಷದ ಸದಸ್ಯರೇ ವಿರೋಧ ಪಕ್ಷದ ಸದಸ್ಯರಂತೆ ಮಾತನಾಡುವ ಮೂಲಕ ಅಚ್ಚರಿ ಮೂಡಿಸಿದರು.

‘ನನ್ನ ವಾರ್ಡ್‌ನ ಕೆಲಸಕ್ಕೆ ಉಪಾಧ್ಯಕ್ಷರು ಈಚೆಗೆ ಜೆಸಿಬಿ ಕಳುಹಿಸಿ ಕೊಟ್ಟಿದ್ದರು. ಅದನ್ನು ಅಧ್ಯಕ್ಷರು ವಾಪಸ್ ಕರೆಸಿಕೊಂಡರು’ ಎಂದು ಎಸ್‌ಡಿಪಿಐ ಸದಸ್ಯ ಅಮಿನ್‌ ಮೊಹಿಸಿನ್ ಅವರು ವಿಷಯ ಪ್ರಸ್ತಾಪಿಸುವ ಮೂಲಕ ಗಮನ ಸೆಳೆದರು.

‘ಜೆಸಿಬಿಯ ಅಗತ್ಯ ಇದೆ ಎಂದು ಯಾರೂ ನನ್ನನ್ನು ಕೇಳಿಲ್ಲ. ನಾನು ವಾಪಸ್ ಕರೆಸಿಕೊಂಡೂ ಇಲ್ಲ’ ಎಂದು ಅನಿತಾ ಪೂವಯ್ಯ ಹೇಳಿದಕ್ಕೆ ಪ್ರತಿಕ್ರಿಯಿ ಸಿದ ಸವಿತಾ ರಾಕೇಶ್, ‘ಅಧ್ಯಕ್ಷರು ಹೇಳಿದ್ದರಿಂದಲೇ ಜೆಸಿಬಿಯನ್ನು ವಾಪಸ್ ಕರೆಸಲಾಗಿದೆ’ ಎಂದು ಹೇಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು.

ಮಧ್ಯೆ ಪ್ರವೇಶಿಸಿದ ಬಿಜೆಪಿ ಸದಸ್ಯ ರಮೇಶ್‌, ‘ಒಂದು ಜೆಸಿಬಿ ಕರೆಸುವುದಕ್ಕೂ ಅಧ್ಯಕ್ಷರ ಅನುಮತಿ ಬೇಕು ಎನ್ನುವುದು ಸರಿಯಲ್ಲ’ ಎಂದರು.

ಅನಿತಾ ಪೂವಯ್ಯ ಮಾತನಾಡಿ, ‘ಹಿಂದೆ ನಗರಸಭೆಯ ಜೆಸಿಬಿಯಿಂದ ಅನಧಿಕೃತವಾಗಿ ಕೆಲಸ ಮಾಡಲಾಗಿತ್ತು. ಅದಕ್ಕಾಗಿ ನನ್ನ ಗಮನಕ್ಕೆ ತರಬೇಕು ಎಂದು ಹೇಳುತ್ತಿದ್ದೇನೆ’ ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು.

ಆಡಳಿತ ಪಕ್ಷದ ಸದಸ್ಯರಿಂದಲೇ ತರಾಟೆ: ಸ್ಟೋನ್‌ ಹಿಲ್‌ನಲ್ಲಿರುವ ತ್ಯಾಜ್ಯ ವಿಲೇವಾರಿ, ಗಾಂಧಿ ಮೈದಾನವನ್ನು ಬಾಡಿಗೆಗೆ ನೀಡಿರುವ ವಿಚಾರ, ಮಾಂಸ ಮಾರುಕಟ್ಟೆಯ ಸಮಸ್ಯೆಗಳು ಸೇರಿದಂತೆ ಹಲವು ಸಮಸ್ಯೆಗಳನ್ನು ಆಡಳಿತ ಪಕ್ಷದ ಸದಸ್ಯರೇ ಪ್ರಸ್ತಾಪಿಸಿ ಅಧ್ಯಕ್ಷರ ಜತೆ ವಾಗ್ವಾದ ನಡೆಸಿದ ಪ್ರಸಂಗಕ್ಕೂ ನಗರಸಭೆ ಸಾಕ್ಷಿಯಾಯಿತು.

ಸ್ಟೋನ್‌ ಹಿಲ್‌ನಲ್ಲಿರುವ ತ್ಯಾಜ್ಯ ವಿಲೇವಾರಿ ಕುರಿತು ಟೆಂಡರ್‌ ಪ್ರಕ್ರಿಯೆ ಇನ್ನೂ ನಡೆದಿಲ್ಲ ಎಂದು ಬಿಜೆಪಿ ಸದಸ್ಯ ಅಪ್ಪಣ್ಣ ಅಸಮಾಧಾನ ವ್ಯಕ್ತಪಡಿಸಿದರೆ, ಗಾಂಧಿ ಮೈದಾನವನ್ನು ವಾಣಿಜ್ಯ ಉದ್ದೇಶಕ್ಕೆ ಬಾಡಿಗೆಗೆ ನೀಡುವ ವಿಚಾರವನ್ನ ಸದಸ್ಯರ ಗಮನಕ್ಕೆ ತಂದಿಲ್ಲ ಎಂದು ರಮೇಶ್‌ ಹಾಗೂ ಇನ್ನಿತರ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಗಾಂಧಿ ಮೈದಾನ ಬಾಡಿಗೆಗೆ ನೀಡಿರುವುದರಿಂದ ನಿತ್ಯ ₹ 10 ಸಾವಿರ ಆದಾಯ ಬರುತ್ತಿದೆ ಎಂದು ಆಯುಕ್ತ ವಿಜಯ್ ಹೇಳಿದರೂ, ‘ಇನ್ನು ಮುಂದೆ ದೀರ್ಘ ಅವಧಿಗೆ ಬಾಡಿಗೆಗೆ ಕೊಡುವಾಗ ಕೌನ್ಸಿಲ್‌ ಗಮನಕ್ಕೆ ತರಬೇಕು’ ಎಂದು ಸದಸ್ಯರು ಒತ್ತಾಯಿಸಿದರು.

ಉಳಿದಂತೆ, ಪ್ರತಿಬಾರಿಯಂತೆ ಈ ಬಾರಿಯೂ ರಾಜಕಾಲವೆ ಒತ್ತುವರಿ ಸಮಸ್ಯೆ ಮತ್ತೊಮ್ಮೆ ಪ್ರತಿಧ್ವನಿಸಿತು. ಯಾವುದೇ ಸ್ಪಷ್ಟ ನಿರ್ಣಯ ಇಲ್ಲದೆ ಅದು ಹಾಗೆಯೇ ಉಳಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT