ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ಜಿಲ್ಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಆರಂಭ

ಮಡಿಕೇರಿಯಲ್ಲಿ ನೀರಸ, ಸೋಮವಾರಪೇಟೆಯಲ್ಲಿ ಉತ್ತಮ‌‌ ಪ್ರತಿಕ್ರಿಯೆ
Published 13 ಏಪ್ರಿಲ್ 2024, 6:50 IST
Last Updated 13 ಏಪ್ರಿಲ್ 2024, 6:50 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನೂ ಬರಪೀಡಿತ ಪ್ರದೇಶ ಎಂದು ಘೋಷಿಸಿರುವುದರಿಂದ ಜಿಲ್ಲೆಯಲ್ಲೂ ಶಾಲಾ ವಿದ್ಯಾರ್ಥಿಗಳಿಗೆ 41 ದಿನಗಳ ಕಾಲ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ.

ಕುಶಾಲನಗರ ಒಳಗೊಂಡ ಸೋಮವಾರಪೇಟೆ ಹಾಗೂ ಪೊನ್ನಂಪೇಟೆ ಒಳಗೊಂಡ ವಿರಾಜಪೇಟೆ ತಾಲ್ಲೂಕುಗಳ ಆಯ್ದ ಶಾಲೆಗಳಲ್ಲಿ ಈಗಾಗಲೇ ಮಧ್ಯಾಹ್ನದ ಬಿಸಿಯೂಟ ಆರಂಭವಾಗಿದೆ. ಆದರೆ, ಮಡಿಕೇರಿ ತಾಲ್ಲೂಕಿನಲ್ಲಿ ಒಬ್ಬ ವಿದ್ಯಾರ್ಥಿಯ ಪೋಷಕರೂ ಬಿಸಿಯೂಟಕ್ಕಾಗಿ ತಮ್ಮ ಮಕ್ಕಳನ್ನು ಕಳುಹಿಸಲು ಒಪ್ಪಿಗೆ ಸೂಚಿಸಿಲ್ಲದ ಕಾರಣ ಬೇಸಿಗೆ ರಜೆಯ ಅವಧಿಯಲ್ಲಿ ಮಕ್ಕಳಿಗೆ ಇಲ್ಲಿ ಬಿಸಿಯೂಟ ಇನ್ನೂ ಆರಂಭವಾಗಿಲ್ಲ.

ಏನಿದು ಬೇಸಿಗೆ ರಜೆಯ ಬಿಸಿಯೂಟ?: ಯಾವ ಯಾವ ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆಯಾಗುತ್ತವೆಯೋ ಆ ತಾಲ್ಲೂಕುಗಳಲ್ಲಿ ಪ್ರತಿ ವರ್ಷವೂ ಬೇಸಿಗೆ ರಜೆಯ ಅವಧಿಯಲ್ಲಿ ಬಿಸಿಯೂಟ ನೀಡಲಾಗುತ್ತಿದೆ. ಮಕ್ಕಳು ಶಾಲೆಗೆ ರಜೆ ಎಂಬ ಕಾರಣಕ್ಕೆ ಹಸಿದಿರಬಾರದು ಅಥವಾ ಪೌಷ್ಟಿಕಾಂಶ ಭರಿತ ಆಹಾರ ಸೇವಿಸದೇ ಅಪೌಷ್ಟಿಕತೆಯಿಂದ ಬಳಲಬಾರದು ಎಂಬ ಕಾರಣಕ್ಕೆ ಬರಪೀಡಿತ ಎಂದು ಘೋಷಣೆಯಾದ ತಾಲ್ಲೂಕುಗಳಲ್ಲಿ ಬೇಸಿಗೆ ರಜೆ ಅವಧಿಯಲ್ಲಿ ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತದೆ‌. ಪೌಷ್ಟಿಕಾಂಶ ಭರಿತ ಬಿಸಿಯೂಟ ಇದಾಗಿರುವುದರಿಂದ‌ ಮಕ್ಕಳಿಗೆ ಅಪೌಷ್ಟಿಕತೆ ಉಂಟಾಗುವುದಿಲ್ಲ. ಆದರೆ ಬಿಸಿಯೂಟ ಪಡೆಯುವ ಮಕ್ಕಳು ಕಡ್ಡಾಯವಾಗಿ ತಮ್ಮ ಪೋಷಕರಿಂದ‌ ಒಪ್ಪಿಗೆ ಪತ್ರ ನೀಡಬೇಕಿದೆ.

ಮಡಿಕೇರಿ ತಾಲ್ಲೂಕಿನಲ್ಲಿ ಸುಮಾರು‌ 105 ಬಿಸಿಯೂಟ ಕೇಂದ್ರಗಳಿದ್ದರೂ ಅದರ ವ್ಯಾಪ್ತಿಯ ಯಾವೊಬ್ಬ ಮಕ್ಕಳೂ ತಮ್ಮ ಪೋಷಕರಿಂದ ಬಿಸಿಯೂಟ ಪಡೆಯಲು ಒಪ್ಪಿಗೆ ಪತ್ರ ನೀಡಿಲ್ಲದ ಕಾರಣ ಯಾವೊಂದೂ ಕೇಂದ್ರದಲ್ಲೂ ಬಿಸಿಯೂಟ ಆರಂಭವೇ ಆಗಿಲ್ಲ. ಕುಶಾಲನಗರ ತಾಲ್ಲೂಕನ್ನು ಒಳಗೊಂಡ ಸೋಮವಾರಪೇಟೆ ತಾಲೂಕಿನಲ್ಲಿ 1,064 ವಿದ್ಯಾರ್ಥಿಗಳು ಒಪ್ಪಿಗೆ ನೀಡಿರುವುದರಿಂದ ಇಲ್ಲಿನ 35 ಕೇಂದ್ರಗಳಲ್ಲಿ ಬಿಸಿಯೂಟ ಆರಂಭವಾಗಿದೆ. ಪೊನ್ನಂಪೇಟೆ ತಾಲ್ಲೂಕನ್ನು ಒಳಗೊಂಡ ವಿರಾಜಪೇಟೆ ತಾಲ್ಲೂಕಿನಲ್ಲಿ 77 ಮಕ್ಕಳ ಪೋಷಕರು ಮಾತ್ರ ಒಪ್ಪಿಗೆ ಪತ್ರ ನೀಡಿದ್ದಾರೆ. ಹೀಗಾಗಿ ಇಲ್ಲಿ‌ ಕೇವಲ 3 ಕೇಂದ್ರಗಳಲ್ಲಿ ಮಾತ್ರವೇ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ‌.

ಬಿಸಿಯೂಟದ ಮೇಲೆ ನಿಗಾ: ಬೇಸಿಗೆ ಅವಧಿಯಲ್ಲಿ ರಜೆ ಇರುವಾಗ ನೀಡುವ ಬಿಸಿಯೂಟದ ಗುಣಮಟ್ಟ ಹಾಗೂ ಮಕ್ಕಳ ಸಂಖ್ಯೆಯ ಮೇಲೆ ನಿಗಾ ಇಡಲು ವಿವಿಧ ಅಧಿಕಾರಿಗಳ ತಂಡಗಳನ್ನು ನಿಯೋಜಿಸಲಾಗಿದೆ.

ಜಿಲ್ಲಾ‌ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ, ಶಿಕ್ಷಣಾಧಿಕಾರಿ, ಡಿಡಿಪಿಐ, ಡಯಟ್ ಪ್ರಾಂಶುಪಾಲರು ಹೀಗೆ ಕೆಲವಾರು ಅಧಿಕಾರಿಗಳ ನೇತೃತ್ವದ ತಂಡಗಳು ನಿರಂತರವಾಗಿ ಪರಿಶೀಲನೆ ನಡೆಸಬೇಕಿದೆ. ಜೊತೆಗೆ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿಗಳ ನೇತೃತ್ವದ ತಂಡವು 2 ಕೇಂದ್ರಗಳಿಗೆ ಭೇಟಿ‌ ನೀಡಿ ವರದಿ‌‌ ಸಲ್ಲಿಸಬೇಕಿದೆ.

ಪೋಷಕರ ನಿರಾಸಕ್ತಿಗೆ ಕಾರಣ: ಜಿಲ್ಲೆಯಲ್ಲಿ ಅನುದಾನಿತ ಹಾಗೂ ಸರ್ಕಾರಿ ಶಾಲೆಯಲ್ಲಿ ಕೇವಲ 1,064 ಪೋಷಕರು ಮಾತ್ರವೇ ತಮ್ಮ ಮಕ್ಕಳು ಮಧ್ಯಾಹ್ನದ ಬಿಸಿಯೂಟ ಸೇವಿಸಲು ಒಪ್ಪಿಗೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಮಡಿಕೇರಿ ತಾಲ್ಲೂಕು ಶೂನ್ಯ ಸಾಧನೆ ಮಾಡಿದೆ. ಇದಕ್ಕೆ ಮುಖ್ಯವಾಗಿ ಮಕ್ಕಳು ರಜೆ ಅವಧಿಯಲ್ಲಿ ಬೇರೆ ಊರಿಗೆ ಹೋಗಿರುವುದು, ವಿವಿಧ ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಂಡಿರುವುದು ಮುಖ್ಯ ಕಾರಣ. ಹಾಗೆಯೇ ಕೆಲವು ಪೋಷಕರು ರಜಾ ಅವಧಿಯಲ್ಲಿ ಊಟಕ್ಕಾಗಿ ಮಾತ್ರವೇ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದ್ದಾರೆ. ಇದರೊಂದಿಗೆ ಈ ಕುರಿತ ಪ್ರಚಾರ ಕಾರ್ಯದ ಕೊರತೆಯಿಂದಾಗಿಯೂ ಹೆಚ್ಚಿ‌ನ‌ ಪೋಷಕರು ನಿರಾಸಕ್ತಿ ತೋರಿದ್ದಾರೆ. 

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅಕ್ಷರ ದಾಸೋಹ ಕಾರ್ಯಕ್ರಮದ ಶಿಕ್ಷಣಾಧಿಕಾರಿ ಎಚ್.ಟಿ.ಶಶಿಕಲಾ, ‘ಕೊಡಗು ಜಿಲ್ಲೆಯ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲ್ಲೂಕಿನಲ್ಲಿ ಬೇಸಿಗೆ ರಜೆಯಲ್ಲಿ ಪೌಷ್ಟಿಕಾಂಶವುಳ್ಳ ಬಿಸಿಯೂಟ ನೀಡುತ್ತಿದ್ದೇವೆ. ಮಕ್ಕಳು ಖುಷಿಯಿಂದ ಶಾಲೆಗೆ ಬಂದು ಆಟವಾಡಿ ಬಿಸಿಯೂಟ ಸೇವಿಸುತ್ತಿದ್ದಾರೆ’ ಎಂದು ತಿಳಿಸಿದರು.

ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ
ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ

ಸೋಮವಾರಪೇಟೆ: 35 ಕೇಂದ್ರಗಳಲ್ಲಿ ಬಿಸಿಯೂಟ ಆರಂಭ ವಿರಾಜಪೇಟೆ: 77 ಪೋಷಕರು ಒಪ್ಪಿಗೆ ಪತ್ರ ನೀಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT