ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರ ಗೋಳು ಕೇಳುವವರಿಲ್ಲ | ರಾಜ್ಯ ಹೆದ್ದಾರಿಯೇ ಹೊಂಡಮಯ

ಕೊಣನೂರು– ಮಾಕುಟ್ಟ ರಾಜ್ಯ ಹೆದ್ದಾರಿಯೇ ಹೊಂಡಮಯ
Last Updated 8 ನವೆಂಬರ್ 2022, 8:46 IST
ಅಕ್ಷರ ಗಾತ್ರ

ಸಿದ್ದಾಪುರ: ಕೊಣನೂರಿನಿಂದ ಮಾಕುಟ್ಟಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯು ಬಹುತೇಕ ಗುಂಡಿಗಳಿಂದ ಕೂಡಿದ್ದು, ಪ್ರತಿದಿನ ವಾಹನ ಸವಾರರು ನರಕಯಾತನೆ ಅನುಭವಿಸುವಂತಾಗಿದೆ.

ಕೊಣನೂರು-ಮಾಕುಟ್ಟ ರಸ್ತೆಯ ಸಿದ್ದಾಪುರ– ಕಾವೇರಿ ಸೇತುವೆಯಿಂದ ಅಮ್ಮತ್ತಿಯ ಕಾವಾಡಿ ಗ್ರಾಮದವರೆಗೂ ರಸ್ತೆ ಹೊಂಡಮಯವಾಗಿದ್ದು, ಪ್ರಯಾಣ ದುಸ್ತರವಾಗಿದೆ. ಸಿದ್ದಾಪುರದಿಂದ ಅಮ್ಮತ್ತಿಯವರೆಗೆ ಭಾರಿ ಸ್ವರೂಪದ ಹೊಂಡಗಳಿದ್ದು, ವಾಹನ ಸವಾರರು ನಿಧಾನವಾಗಿ ಚಲಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ತೇಪೆ ಕಾಣದ ರಸ್ತೆ: ಕಳೆದ ಕೆಲವು ವರ್ಷಗಳಿಂದಲೂ ಸಿದ್ದಾಪುರ-ವಿರಾಜಪೇಟೆ ರಸ್ತೆ ತೀರಾ ಹದಗೆಟ್ಟಿದ್ದು, ರಸ್ತೆಯ ಡಾಂಬರೀಕರಣಕ್ಕೆ ಒತ್ತಾಯ ಕೇಳಿ ಬಂದಿತ್ತು. ಆದರೆ, ವರ್ಷಗಳು ಕಳೆದರೂ ರಸ್ತೆಯ ಡಾಂಬರೀಕರಣ ಇನ್ನೂ ನಡೆದಿಲ್ಲ. ಇಂಜಲಗರೆ, ಆನಂದಪುರ, ಅಮ್ಮತ್ತಿ, ಕಾವಾಡಿ ಗ್ರಾಮಗಳಲ್ಲಿ ರಸ್ತೆಯಲ್ಲಿ ಡಾಂಬರು ಇಲ್ಲದೇ ಗುಂಡಿಗಳು ನಿರ್ಮಾಣವಾಗಿದೆ. ಆನಂದಪುರದಿಂದ ಇಂಜಲಗೆರೆಗೆ ತೆರಳುವ ಭಾಗದಲ್ಲಿ ರಸ್ತೆ ಮತ್ತಷ್ಟು ಹದಗೆಟ್ಟಿದ್ದು, ಬಹುತೇಕ ಹೊಂಡಗಳಿಂದ ಕೂಡಿದೆ.

ಸಂಚಾರಕ್ಕೆ ಅಡಚಣೆ: ಅಂತರರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ರಸ್ತೆಯ ದುಸ್ಥಿತಿಯಿಂದ ಸರಕು ಸಾಗಾಣೆಯ ಸಾಗಾಟಕ್ಕೆ ಸಮಸ್ಯೆಯಾದರೆ ಅಗತ್ಯ ಕೆಲಸಗಳಿಗೆ ತಾಲ್ಲೂಕು ಕೇಂದ್ರಕ್ಕೆ ತೆರಳುವ ಗ್ರಾಮಸ್ಥರ ಗೋಳು ಮತ್ತೊಂದು.

ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು, ಕಂದಾಯ ಇಲಾಖೆಯಿಂದ ದಾಖಲೆಗಳನ್ನು ಪಡೆಯಲು ಹಾಗೂ ಇನ್ನಿತರ ಕೆಲಸಗಳಿಗೆ ಸಿದ್ದಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಪ್ರತಿದಿನ ವಿರಾಜಪೇಟೆಗೆ ತೆರಳುತ್ತಾರೆ. ಹೊಂಡಮಯ ರಸ್ತೆಯಿಂದಾಗಿ ಸ್ವಂತ ವಾಹನದಲ್ಲಿ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಪಟ್ಟಣದಲ್ಲಿ ತಮ್ಮ ಕಾರುಗಳನ್ನು ನಿಲ್ಲಿಸಿ ಬಸ್‌ನಲ್ಲಿ ಪ್ರಯಾಣಿಸುವ ಪರಿಸ್ಥಿತಿ ಇದೆ. ರಸ್ತೆ ಸರಿಯಿಲ್ಲದ ಕಾರಣ ಆಟೊ ರಿಕ್ಷಾಗಳು ಕೂಡಾ ಹೋಗಲು ಹಿಂದೇಟು ಹಾಕುತ್ತಿದ್ದು, ಹೆಚ್ಚಿನ ಬಾಡಿಗೆಯನ್ನು ನೀಡಬೇಕಾದ ಅನಿವಾರ್ಯತೆ ಗ್ರಾಮಸ್ಥರಿಗೆ ಎದುರಾಗಿದೆ.

‘ನಿತ್ಯವೂ ಮಕ್ಕಳು, ವೃದ್ಧರು ಸೇರಿದಂತೆ ಸಾರ್ವಜನಿಕರು ಕಷ್ಟದಿಂದ ಸಂಚರಿಸುತ್ತಿದ್ದಾರೆ. ರಸ್ತೆ ಡಾಂಬರೀಕರಣಕ್ಕೆ ಹಣ ಬಿಡುಗಡೆಯಾಗಿದೆ ಎಂದು ಹೇಳುತ್ತಿದ್ದರೂ, ಈವರೆಗೂ ರಸ್ತೆ ಕಾಮಗಾರಿ ಮಾಡದಿರುವ ಉದ್ದೇಶವೇನು? ಚುನಾವಣೆಯ ಸಂದರ್ಭ ಮಾತ್ರ ರಸ್ತೆ ದುರಸ್ತಿಗೊಳಿಸುವ ರಾಜಕೀಯವನ್ನು ಬಿಡಬೇಕು. ಜನರ ಹಿತಕ್ಕಾಗಿ ಶೀಘ್ರದಲ್ಲಿ ರಸ್ತೆ ಡಾಂಬರೀಕರಣ ಮಾಡಬೇಕು. ಇಲ್ಲವಾದಲ್ಲಿ ಬೃಹತ್ ಹೋರಾಟ ರೂಪಿಸಲಾಗುವುದು’ ಎಂದು ಕೆ.ಪಿ.ಸಿ.ಸಿ ಕಾನೂನು ಘಟಕದ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್ ಪೊನ್ನಣ್ಣ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT