ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಪೋಕ್ಲು: ಬಿಸಿಲಿನ ನಡುವೆ ಅರಳಿವೆ ಸುವರ್ಣಧಾರೆ

ಕಾಂಪೌಂಡ್‌ಗಳಲ್ಲಿ ಹೊದ್ದು ಮಲಗಿವೆ ಸೌಂದರ್ಯ ತೋರುವ ಸುಂದರ ಹೂಗಳು
Published 20 ಫೆಬ್ರುವರಿ 2024, 6:12 IST
Last Updated 20 ಫೆಬ್ರುವರಿ 2024, 6:12 IST
ಅಕ್ಷರ ಗಾತ್ರ

ನಾಪೋಕ್ಲು: ಮನೆಯ ಮುಂದಿನ ಗೇಟ್‌ಗಳಲ್ಲಿ, ಕಾಂಪೌಂಡ್‌ಗಳಲ್ಲಿ, ಮನೆಯ ಗೋಡೆಗಳಲ್ಲಿ ಹಬ್ಬಿರುವ ಬಳ್ಳಿಗಳಲ್ಲಿ ಹೂಗೊಂಚಲುಗಳು ಇಳಿ ಬಿದ್ದಿದ್ದು ನೋಡುಗರ ಕಣ್ಮನ ಸೆಳೆಯುತ್ತಿವೆ.

ಇವು ಪ್ರಕೃತಿಯ ಕೊಡುಗೆಯಾದ ಸುವರ್ಣಧಾರೆಯ ಹೂಗಳು. ನಾಪೋಕ್ಲು ಪಟ್ಟಣದ ಮನೆಗಳ ಮುಂದೆ ಹಾಗೂ ಕಾಂಪೌಂಡ್‌ಗಳಲ್ಲಿ ಹೂವಿನ ರಾಶಿ ಹೊದ್ದು ಮಲಗಿದ್ದರೆ ಮನೆಯ ಗೇಟ್, ಗೋಡೆ, ತಡೆಗೋಡೆ ಸೇರಿದಂತೆ ಹೂಬಳ್ಳಿಗಳ ತುಂಬಾ ಅರಳಿರುವ ಚಿನ್ನದ ಬಣ್ಣದ ಹೂಗಳಿಂದ ಮನೆಗಳ ಸೌಂದರ್ಯ ಇಮ್ಮಡಿಸಿದೆ. ದಾರಿಯಲ್ಲಿ ಸಾಗುವವರು ಮನೆಗಳತ್ತ ಕಣ್ಣೆತ್ತಿ ನೋಡುವಂತೆ ಮಾಡಿವೆ.

ಇದು ಸುವರ್ಣಧಾರೆ. ಇಂಗ್ಲಿಷಿನಲ್ಲಿ ಗೋಲ್ಡನ್ ಷವರ್. ಬಿಗ್ನೋನಿಯ ಎಂಬುದು ವೈಜ್ಞಾನಿಕ ಹೆಸರು. ಮನೆಯ ಮುಂದೆ ಬಿಗ್ನೋನಿಯ ಬಳ್ಳಿಯನ್ನು ಹಬ್ಬಿಸಿದರೆ ಆ ಮನೆಯತ್ತ ದೃಷ್ಟಿ ಹಾಯಿಸದೇ ಇರುವವರೇ ಇಲ್ಲ. ಏಕೆಂದರೆ, ಮನೆಯ ಎದುರು ಚಳಿಗಾಲದಲ್ಲಿ ಹೂಗಳ ರಾಶಿಯನ್ನೇ ಕಾಣಬಹುದು. ಪಟ್ಟಣದ ರಫೀಕ್ ಅವರು ವಾಹನ ನಿಲುಗಡೆಗೆ ನಿರ್ಮಿಸಿರುವ ಶೆಡ್ ಹಾಗೂ ಮನೆಯ ಗೋಡೆಗಳಲ್ಲಿ ಹೂವಿನ ಬಳ್ಳಿ ಹಬ್ಬಿಸಿದ್ದು, ಕಿತ್ತಳೆ ಹಳದಿ ಬಣ್ಣದ ಹೂಗಳಿಂದ ನೋಡುಗರ ಕಣ್ಮನ ಸೆಳೆಯುತ್ತಿವೆ. ಸ್ಥಳೀಯ ನಿವಾಸಿ ಕಾವೇರಪ್ಪ ಅವರ ಮನೆಯ ಕಾಂಪೌಂಡ್ ಕೂಡಾ ಹೂಭರಿತವಾಗಿದೆ.

ಸುವರ್ಣಧಾರೆಯ ಹೂವಿನ ಆಕಾರ ನಾಳದಂತೆ. ಹೂ ಬಿಟ್ಟಾಗ ಎಲೆಗಳಲ್ಲವೂ ಹೂವಿನಿಂದ ಮುಚ್ಚಿ ಹೋಗುತ್ತದೆ. ಹೂವುಗಳು ಗೊಂಚಲು ಗೊಂಚಲಾಗಿ ಹಾರದಂತೆ ಇಳಿಬಿದ್ದು ನೋಡುಗರ ಮನಸೆಳೆಯುತ್ತವೆ. ಬಿಗ್ನೋನಿಯ ಬಳ್ಳಿಗಳನ್ನು ಗೋಡೆಗಳನ್ನು ಮುಚ್ಚಲು, ಮನೆಯ ಮುಂದಿನ ಗೇಟುಗಳಲ್ಲಿ ಹಬ್ಬಿಸಲು ಬೆಳೆಸುತ್ತಾರೆ.

ಇವು ಹಗುರ ಬಳ್ಳಿಗಳಾಗಿದ್ದು ಸುಲಭವಾಗಿ ಬೆಳೆದು ಹರಡಬಲ್ಲವು. ನಾಳಾಕಾರದ ಹೂಗಳ ತುದಿಯಲ್ಲಿ 5 ದಳಗಳು ಹರಡಿರುತ್ತವೆ. ನಿತ್ಯ ಹಸುರಿನ ಬಳ್ಳಿಯಾಗಿದ್ದು ಬಹುಬೇಗನೆ ಹಬ್ಬಿ ಮುಚ್ಚುತ್ತವೆ. ಚಳಿಗಾಲದಲ್ಲಿ ಎಲೆಗಳೆಲ್ಲಾ ಹೂವಿನಿಂದಲೇ ಮುಚ್ಚಿಹೋಗುವುದರಿಂದ ಅಲಂಕಾರಿಕ ಹೂಗಳು ಸೊಬಗು ತೋರುತ್ತವೆ. ಪೈರೋ ಸ್ಟೀಜಿಯಾ ವೆನುಸ್ಟಾ ಎಂಬುದು ಸಸ್ಯಶಾಸ್ತ್ರೀಯ ಹೆಸರು.

ಮನೆಯ ಗೋಡೆಗಳನ್ನೂ ಅಲಂಕರಿಸಿವೆ ಸುವರ್ಣಧಾರೆ ಹೂಗಳು
ಮನೆಯ ಗೋಡೆಗಳನ್ನೂ ಅಲಂಕರಿಸಿವೆ ಸುವರ್ಣಧಾರೆ ಹೂಗಳು

‘ಗೋಡು ಮಣ್ಣು, ಮರಳು ಹಾಗೂ ಗೊಬ್ಬರ ಮಿಶ್ರಿತ ಮಣ್ಣಿನಲ್ಲಿ ಚೆನ್ನಾಗಿ ಹಬ್ಬಿ ಬೆಳೆಯುತ್ತದೆ. ಸಾಕಷ್ಟು ನೀರು ಬೇಕು. ಈ ಬಳ್ಳಿಯನ್ನು ಒಣಗುವುದಕ್ಕೆ ಬಿಡಬಾರದು. ಸುವರ್ಣಧಾರೆಯ ಬಳ್ಳಿಯ ಕೃಷಿ ಸುಲಭ. ತುಂಡುಗಳಿಂದ ಹೆಚ್ಚಿಸಿಕೊಳ್ಳಬಹುದು’ ಎನ್ನುತ್ತಾರೆ ಉದ್ಯಾನ ಕಲೆಯಲ್ಲಿ ಆಸಕ್ತಿ ಹೊಂದಿರುವ ಸರಸ್ವತಿ ಮನೋಹರಿ.

ಸೂರ್ಯನ ಬೆಳಕು ಧಾರಾಳವಾಗಿ ಸಿಕ್ಕಿದಲ್ಲಿ ರಾಶಿ ರಾಶಿ ಹೂಗಳು ಬಿಡುತ್ತವೆ ಎನ್ನುತ್ತಾರೆ ಅವರು. ಮನೆಯ ಗೋಡೆಗಳಲ್ಲಿ ಚಾವಣಿಯಲ್ಲಿ ಕಿತ್ತಳೆ ಬಣ್ಣದ ಸುವರ್ಣಧಾರೆ ಹಬ್ಬಿ ಹೂ ಅರಳಿತೆಂದರೆ ಸೌಂದರ್ಯರಾಶಿಯೇ ಮೈದಳೆದಂತೆ. ಅದಕ್ಕಾಗಿ ಹಲವು ಮಹಿಳೆಯರು ಸುವರ್ಣಧಾರೆ ಬೆಳೆಯುವಲ್ಲಿ ಆಸಕ್ತಿ ತೋರುತ್ತಾರೆ. ಹೂ ಬಳ್ಳಿಯಿಂದಾಗಿ ಮನೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಮನಸೂರೆಗೊಳ್ಳುವ ರಾಶಿರಾಶಿ ಸುವರ್ಣಧಾರೆ ಹೂಗಳು.
ಮನಸೂರೆಗೊಳ್ಳುವ ರಾಶಿರಾಶಿ ಸುವರ್ಣಧಾರೆ ಹೂಗಳು.

ಸುವರ್ಣಧಾರೆಯ ಬಳ್ಳಿಗಳಲ್ಲಿ ಇನ್ನೂ ಸಾಕಷ್ಟು ವಿಧಗಳಿವೆ. ಅಗಲವಾಗಿ ಹರಡಿಕೊಂಡು ಬೆಳೆಯುವ ಬಿಗ್ನೋನಿಯ ಚೆಂಬರ್ಲೇನೈ, ಗೋಡೆಗಳಲ್ಲಿ ತಾನಾಗಿಯೇ ಹತ್ತಿ ಬೆಳೆಯುವ ಬಿಗ್ನೋನಿಯ ಗ್ರಾಸಿಲಿಸ್, ಹೊಳಪಿನಿಂದ ಕೂಡಿದ ಬಿಗ್ನೋನಿಯ ಚಿರೆರೆ, ವರ್ಷದಲ್ಲಿ ಹಲವು ಬಾರಿ ಹೂಗಳನ್ನು ಬಿಡುವ ಬಿಗ್ನೋನಿಯ ಪರಫ್ಯೂರಿಯ, ಬೇಸಿಗೆಯಲ್ಲಿ ಹೆಚ್ಚಾಗಿ ಹೂ ಬಿಡುವ ಗೊಂಚಲು ಗೊಂಚಲಾದ ಹೂಗಳ ಬಿಗ್ನೋನಿಯ ಮ್ಯಾಗ್ನಿಫಿಕಾ, ಹಾಗೂ ನೀಲಿಕೆಂಪು ಪಟ್ಟಿಗಳಿರುವ ಹೂಗಳ ಬಿಗ್ನೋನಿಯ ಇನ್ಕಾರ್ನಾಟ ಇವು ಕೆಲವು ಬಿಗ್ನೋನಿಯಾದ ಉತ್ತಮವಾದ ಬಳ್ಳಿಗಳು. ಮನೆಯ ಅಲಂಕಾರಕ್ಕೆ ಹೇಳಿ ಮಾಡಿಸಿದ ಬಳ್ಳಿಗಳಿವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT