ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಬ್ಬಿ ಮರಿ ಪುರ್ ಪುರ್ರಂತ ಹಾರಿ ಹೋಗಿದ್ದು ಎಲ್ಲಿಗೆ?

ಮಡಿಕೇರಿಯಲ್ಲಿ ಗುಬ್ಬಚ್ಚಿಗಳನ್ನು ವಾಪಸ್ ಕರೆತರುವ ಯತ್ನ
Published 20 ಮಾರ್ಚ್ 2024, 9:02 IST
Last Updated 20 ಮಾರ್ಚ್ 2024, 9:02 IST
ಅಕ್ಷರ ಗಾತ್ರ

ಮಡಿಕೇರಿ: ಗುಬ್ಬಿ ಮರಿ ಪುರ್ ಪುರ್ರಂತ ಹಾರಿ ಬಂತು ಅಮ್ಮನ ಹತ್ರ...

ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಈ ಪದ್ಯಕ್ಕೆ ತಲೆದೂಗುವವರೇ ಇಲ್ಲ. ಅತಿ ವೇಗವಾಗಿ ಬದಲಾಗುತ್ತಿರುವ ಪ್ರಪಂಚದಲ್ಲಿ ಗುಬ್ಬಚ್ಚಿಗಳೂ ತೆರೆಮರೆಗೆ ಸರಿಯುತ್ತಿವೆ. ದೊಡ್ಡ ದೊಡ್ಡ ನಗರಗಳಲ್ಲಿ ಈಗಾಗಲೇ ಗುಬ್ಬಿಗಳನ್ನು ಹುಡುಕುವಂತಹ ಸ್ಥಿತಿ ಇದೆ. ಕೊಡಗಿನಲ್ಲೂ ಗುಬ್ಬಚ್ಚಿಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.

ಮೊಬೈಲ್‌ ಟವರ್‌ಗಳಿಂದ ಗುಬ್ಬಚ್ಚಿಗಳು ಅಳಿಯುತ್ತಿವೆ ಎಂಬ ಸಾಮಾನ್ಯ ಅಭಿಪ್ರಾಯವೊಂದು ಜನಜನಿತವಾಗಿದೆ. ಆದರೆ, ಇದು ಒಂದು ಕಾರಣವಾದರೂ, ಇದಕ್ಕಿಂತಲೂ ಹೆಚ್ಚಾಗಿ ಗುಬ್ಬಿಗಳು ಗೂಡು ಕಟ್ಟಬೇಕಾದ ಜಾಗವನ್ನು ಕಸಿದುಕೊಂಡಿರುವುದು ಹಾಗೂ ಅವುಗಳಿಗೆ ಒಂದು ಅಕ್ಕಿ ಕಾಳೂ ಸಿಗದ ಹಾಗೆ ಮಾಡುತ್ತಿರುವುದು ಪ್ರಮುಖ ಕಾರಣ ಎನಿಸಿದೆ.

ಹೆಂಚು ಹಾಗೂ ಶೀಟ್‌ ಮನೆಗಳೆಲ್ಲವೂ ಆರ್‌ಸಿಸಿ ಆಗುತ್ತಿರುವುದು, ಮಣ್ಣಿನ ನೆಲವೆಲ್ಲ ಕಾಂಕ್ರೀಟಿಕರಣಗೊಳ್ಳುತ್ತಿರುವುದರಿಂದ ಗುಬ್ಬಿಗಳಿಗೆ ಗೂಡು ಕಟ್ಟಲು ಬೇಕಾದ ಸಂದಗೊಂದುಗಳು ಸಿಗುತ್ತಿಲ್ಲ. ಹಾಗಾಗಿ, ಅವುಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ.

ಮತ್ತೊಂದೆಡೆ, ಈಗ ಎಲ್ಲವೂ ಪ್ಲಾಸ್ಟಿಕ್‌ ಕವರ್‌ನಲ್ಲಿ ಸಂಪೂರ್ಣ ಪ್ಯಾಕ್ ಮಾಡಿರುವಂತಹ ಧಾನ್ಯಗಳೇ ಎಲ್ಲೆಲ್ಲೂ ಸಿಗುತ್ತಿವೆ. ಇದರಿಂದ ಆಹಾರ ಧಾನ್ಯಗಳ ಒಂದು ಕಾಳೂ ನೆಲಕ್ಕೆ ಬೀಳುತ್ತಿಲ್ಲ. ಇಂತಹ ಕಾಳುಗಳನ್ನೇ ಬಹುವಾಗಿ ನೆಚ್ಚಿಕೊಂಡಿದ್ದ ಗುಬ್ಬಚ್ಚಿಗಳಿಗೆ ಈಗ ಆಹಾರ ಸಿಗದಂತಾಗಿ ಅವು ನಮ್ಮಿಂದ ಕ್ರಮೇಣ ದೂರ ಸರಿಯುತ್ತಿವೆ ಎಂದು ಪಕ್ಷಿತಜ್ಞ ಡಾ.ಎಸ್.ವಿ.ನರಸಿಂಹನ್ ಹೇಳುತ್ತಾರೆ.

ಗುಬ್ಬಚ್ಚಿಯನ್ನು ವಾಪಸ್ ಕರೆ ತರಬಹುದು!: ಗುಬ್ಬಚ್ಚಿಗಳನ್ನು ವಾಪಸ್ ಕರೆತರುವ ಪ್ರಯತ್ನಗಳು ಕೊಡಗಿನ ಅಲ್ಲಲ್ಲಿ ನಡೆದಿದೆ. ಒಂದು ಗುಬ್ಬಚ್ಚಿ ಒಳನುಗ್ಗುವಷ್ಟು ಕಿರಿದಾಗಿರುವ ತೂತು ಮಾಡಿ ಒಂದು ಗೂಡಿನ ಸ್ವರೂಪದ ಪರಿಕರವನ್ನು ತಯಾರಿಸಿದರೆ ಸಾಕು. ಇಲ್ಲವೇ ಮಣ್ಣಿನಿಂದ ಮಾಡಿದ ಗುಬ್ಬಿಗೂಡುಗಳನ್ನು ಖರೀದಿಸಿ ಮನೆಯಂಗಳದಲ್ಲಿ ಇಟ್ಟು, ಅಲ್ಲಿ ನಮ್ಮ ಹಸ್ತಕ್ಷೇಪ ಮಾಡದಿದ್ದರೆ, ಅದಕ್ಕೊಂದು ಗುಟುಕು ನೀರು, ಒಂದು ಹಿಡಿ ಧಾನ್ಯವನ್ನು ಇಟ್ಟರೆ ಒಂದು ತಿಂಗಳಿನಲ್ಲಿ ಗುಬ್ಬಿಗಳು ಬಂದು ಗೂಡು ಕಟ್ಟುತ್ತವೆ. ಈ ಬಗೆಯ ಪ್ರಯತ್ನ ಟಿ.ಜಾನ್ ಬಡಾವಣೆಯ ಮನೆಯೊಂದರಲ್ಲಿ ನಡೆದಿದೆ.

ಸೋಮವಾರಪೇಟೆಯ ‘ನಾವು ಪ್ರತಿಷ್ಠಾನ’ದ ವತಿಯಿಂದ ‘ಹಕ್ಕಿಗಳಿಗೊಂದು ಗುಟುಕು ಅಭಿಯಾನ’ವು ಸತತ 4ನೇ ವರ್ಷವೂ ಮುಂದುವರಿದಿದೆ. ಪ್ರತಿ ವರ್ಷ ಗುಬ್ಬಿ ದಿನದಂದು ಆರಂಭಿಸಲಾಗುತ್ತಿದ್ದ ಈ ಅಭಿಯಾನವನ್ನು ಈ ಬಾರಿ ಜನವರಿಯಿಂದ ಇಲ್ಲಿಯವರೆಗೂ ಮಳೆ ಬೀಳದ ಕಾರಣ ಮಾರ್ಚ್ 1ರಿಂದಲೇ ಆರಂಭಿಸಲಾಗಿದೆ

ಏನಿದು ಅಭಿಯಾನ?: ಮಾರ್ಚ್ ತಿಂಗಳಿನಿಂದ ಮೇ ಅಂತ್ಯದವರೆಗೆ ಹಕ್ಕಿಗಳಿಗಾಗಿ ನೀರನ್ನು ಇಟ್ಟು, ಅದರ ಚಿತ್ರ ಅಥವಾ ಅದರೊಂದಿಗೆ ಸೆಲ್ಫಿ ಅಥವಾ ಫೋಟೊ, ವಿಡಿಯೊವನ್ನು ಕಳುಹಿಸಿಕೊಡುವ ಅಭಿಯಾನ ಇದಾಗಿದೆ. ಅತ್ಯುತ್ತಮ 3 ಚಿತ್ರ, ವಿಡಿಯೊಗಳಿಗೆ ಬಹುಮಾನ ವಿತರಿಸಲಾಗುತ್ತದೆ.

ಕಳೆದ ವರ್ಷ ಈ ಅಭಿಯಾನದಲ್ಲಿ 150ಕ್ಕೂ ಹೆಚ್ಚು ಫೋಟೊಗಳು ಬಂದಿದ್ದವು. ಕೊಡಗು ಮಾತ್ರವಲ್ಲ ಧಾರವಾಡ, ಕೇರಳ, ಬೆಳಗಾವಿ, ಹಾಸನ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದವು ಎಂದು ಪ್ರತಿಷ್ಠಾನದ ಕಾರ್ಯಕಾರಿ ನಿರ್ದೇಶಕಿ ಸುಮನಾ ಹೇಳುತ್ತಾರೆ.

ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು, ಕಾರ್ಯಕಾರಿ ನಿರ್ದೇಶಕಿ ಸುಮನಾ ಜೊತೆಗೆ 10ಕ್ಕೂ ಅಧಿಕ ಸ್ವಯಂ ಸೇವಕರು ಈ ಪ್ರತಿಷ್ಠಾನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಮಡಿಕೇರಿಯ ಟಿ.ಜಾನ್ ಬಡಾವಣೆಯ ಮನೆಯೊಂದರ ಅಂಗಳದಲ್ಲಿ ಹಾಕಿರುವ ಕೃತಕ ಗುಬ್ಬಿಗೂಡಿನಲ್ಲಿ ಗುಬ್ಬಚ್ಚಿಗಳು ವಾಸಿಸುತ್ತಿರುವುದು
ಮಡಿಕೇರಿಯ ಟಿ.ಜಾನ್ ಬಡಾವಣೆಯ ಮನೆಯೊಂದರ ಅಂಗಳದಲ್ಲಿ ಹಾಕಿರುವ ಕೃತಕ ಗುಬ್ಬಿಗೂಡಿನಲ್ಲಿ ಗುಬ್ಬಚ್ಚಿಗಳು ವಾಸಿಸುತ್ತಿರುವುದು
ಸೋಮವಾರಪೇಟೆಯ ಡಾ.ಸುಪರ್ಣ ಅವರು ನಾವು ಪ್ರತಿಷ್ಠಾನದ ಸ್ಪರ್ಧೆಗೆ ಕಳುಹಿಸಿರುವ ಚಿತ್ರ
ಸೋಮವಾರಪೇಟೆಯ ಡಾ.ಸುಪರ್ಣ ಅವರು ನಾವು ಪ್ರತಿಷ್ಠಾನದ ಸ್ಪರ್ಧೆಗೆ ಕಳುಹಿಸಿರುವ ಚಿತ್ರ
ಮಡಿಕೇರಿಯ ಮುತ್ತಪ್ಪ ದೇಗುಲದ ರಸ್ತೆಯಲ್ಲಿರುವ ಇರ್ಫಾನ್ ಅವರು ತಮ್ ಅಂಗಡಿ ಮುಂದೆ ಮಂಗಳವಾರ ಹಾಕಿದ ಧಾನ್ಯಗಳನ್ನು ಗುಬ್ಬಿಮರಿಗಳು ತಿನ್ನುತ್ತಿರುವುದು
ಮಡಿಕೇರಿಯ ಮುತ್ತಪ್ಪ ದೇಗುಲದ ರಸ್ತೆಯಲ್ಲಿರುವ ಇರ್ಫಾನ್ ಅವರು ತಮ್ ಅಂಗಡಿ ಮುಂದೆ ಮಂಗಳವಾರ ಹಾಕಿದ ಧಾನ್ಯಗಳನ್ನು ಗುಬ್ಬಿಮರಿಗಳು ತಿನ್ನುತ್ತಿರುವುದು
ಡಾ.ಎಸ್.ವಿ.ನರಸಿಂಹನ್
ಡಾ.ಎಸ್.ವಿ.ನರಸಿಂಹನ್
ಸುಮನಾ ಮ್ಯಾಥ್ಯೂ
ಸುಮನಾ ಮ್ಯಾಥ್ಯೂ

ಗುಬ್ಬಚ್ಚಿಗಳಿಗೆ ಬೇಕಾದ ಗೂಡು ನೀಡಿದರೆ ಗೂಡು ಕಟ್ಟಲು ಬೇಕಾದ ಜಾಗ ಕೊಟ್ಟರೆ ಒಂದಿಷ್ಟು ನೀರು ಧಾನ್ಯ ಇರಿಸಿದರೆ ಖಂಡಿತವಾಗಿಯೂ ಗುಬ್ಬಚ್ಚಿಗಳನ್ನು ವಾಪಸ್ ನಮ್ಮ ಮನೆಯಂಗಳಕ್ಕೆ ಕರೆತರಬಹುದು –ಡಾ.ಎಸ್.ವಿ.ನರಸಿಂಹನ್ ಪಕ್ಷಿ ವೀಕ್ಷಕ.

ಬಿರು ಬೇಸಿಗೆಯ ಈ ದಿನಗಳಲ್ಲಿ ಎಲ್ಲರೂ ತಮ್ಮ ಮನೆಯ ಬಳಿ ಒಂದು ಗುಟುಕು ನೀರು ಒಂದು ಹಿಡಿ ಧಾನ್ಯ ಇಡಿ. ಹಕ್ಕಿಗಳನ್ನು ಉಳಿಸೋಣ

–ಸುಮನಾ, ನಾವು ಪ‍್ರತಿಷ್ಠಾನದ ಕಾರ್ಯಕಾರಿ ನಿರ್ದೇಶಕಿ.

ಅಂಗಡಿ ಮುಂದಕ್ಕೆ ಗುಬ್ಬಿ ಕರೆತಂದ ಇರ್ಫಾನ್ ಮಡಿಕೇರಿಯ ರಾಣಿಪೇಟೆಯ ರೇಷ್ಮಾ ಸ್ಟೋರ್‌ನ ಎಂ.ಎನ್.ಇರ್ಫಾನ್ ಅಹಮ್ಮದ್ ಹಾಗೂ ಅವರ ಪತ್ನಿ ತಮ್ಮ ಅಂಗಡಿಯ ಮುಂದೆ ಧಾನ್ಯಗಳನ್ನು ಹಾಕಿ ಹತ್ತಾರು ಗುಬ್ಬಚ್ಚಿಗಳಿಗೆ ನಿತ್ಯ ಆಹಾರ ಹಾಕುತ್ತಾರೆ. ಇದರಿಂದ ಬೆಳಿಗ್ಗೆ ಮತ್ತು ಸಂಜೆ ನಿತ್ಯವೂ ಹತ್ತಾರು ಗುಬ್ಬಚ್ಚಿಗಳು ಇಲ್ಲಿ ಸೇರುತ್ತವೆ. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎಂ.ಎನ್.ಇರ್ಫಾನ್ ಅಹಮ್ಮದ್ ‘ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗಿರುವುದನ್ನು ಗಮನಿಸಿ ನಾವು ನಮ್ಮ ಅಂಗಡಿಯ ಮುಂದೆ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಒಂದು ಹಿಡಿ ಧಾನ್ಯವನ್ನು ಚೆಲ್ಲುತ್ತೇವೆ. ಇವುಗಳನ್ನು 20ಕ್ಕೂ ಅಧಿಕ ಗುಬ್ಬಿಚ್ಚಿಗಳು ಬಂದು ತಿನ್ನುತ್ತವೆ. ಇದರಿಂದ ನಮ್ಮ ಮನಸ್ಸಿಗೆ ಸಮಾಧಾನವಾಗುತ್ತದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT