ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಪೋಕ್ಲು | ಹೆಚ್ಚಿದ ಕಾಡು ಹಂದಿ ಉಪಟಳ

Published 6 ಫೆಬ್ರುವರಿ 2024, 6:08 IST
Last Updated 6 ಫೆಬ್ರುವರಿ 2024, 6:08 IST
ಅಕ್ಷರ ಗಾತ್ರ

ನಾಪೋಕ್ಲು: ಹೋಬಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡುಹಂದಿಗಳ ಉಪಟಳ ಹೆಚ್ಚಿದ್ದು, ರೈತರು ಮತ್ತು ಬೆಳೆಗಾರರು ಕಂಗಾಲಾಗಿದ್ದಾರೆ. ಎಷ್ಟರಮಟ್ಟಿಗೆ ಎಂದರೆ, ಕೆಲವೊಂದು ಕಡೆ ಕೊಯ್ಲಿಗೆ ಬಂದ ಭತ್ತವನ್ನು ಕೊಯ್ಲು ಮಾಡದೇ ಗದ್ದೆಯಲ್ಲೇ ರೈತರು ಬಿಟ್ಟಿರುವ ನಿರ್ದಶನಗಳೂ ಇವೆ. ಕಾಡುಹಂದಿಗಳು ರೈತರ ಪಾಲಿಗೆ ಇನ್ನಿಲ್ಲದ ಸಮಸ್ಯೆಗಳನ್ನು ತಂದೊಡ್ಡಿವೆ.

ಕಕ್ಕಬ್ಬೆ, ಕುಂಜಿಲ, ಪಾರಣೆ, ಕೊಳಕೇರಿ, ಬೇತು, ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ಕಾಡಹಂದಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಆತಂಕ ಮೂಡಿಸಿವೆ.

ಇಲ್ಲಿಗೆ ಸಮೀಪದ ವೆಸ್ಟ್ ಕೊಳಕೇರಿ ಗ್ರಾಮದಲ್ಲಿ ಕಾಡು ಹಂದಿಗಳ ಉಪಟಳ ವಿಪರೀತವಾಗಿದ್ದು, ಭತ್ತದ ಬೆಳೆ ಸಂಪೂರ್ಣ ನಾಶವಾಗಿದೆ. ತಡವಾಗಿ ಭತ್ತಕೊಯ್ಲು ಮಾಡಲು ಹೊರಟ ಬೆಳೆಗಾರರಿಗೆ ಏನು ದಕ್ಕದ ಪರಿಸ್ಥಿತಿ ನಿರ್ಮಾಣವಾಗಿದೆ. ವೆಸ್ಟ್ ಕೊಳಕೇರಿ ಗ್ರಾಮದ ನಿವಾಸಿ ಕಲಿಯಂಡ ದರ್ಶನ್ ಅಯ್ಯಪ್ಪ ಅವರ ಗದ್ದೆಯಲ್ಲಿ ಕಾಡು ಹಂದಿಗಳು ಪೈರುಗಳನ್ನು ನಾಶಪಡಿಸಿವೆ. ಸುಮಾರು ಒಂದು ಎಕರೆಯಷ್ಟು ಕೃಷಿ ಭೂಮಿ ಕಾಡು ಹಂದಿಗಳ ದಾಳಿಗೆ ತುತ್ತಾಗಿದೆ. ಇಳುವರಿ ಹೋಗಲಿ, ಪಶುಗಳಿಗೆ ಮೇವಾದ ಹುಲ್ಲು ಕೂಡ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಲಿಯ೦ಡ ದರ್ಶನ್ ಅಯ್ಯಪ್ಪ ಅಳಲು ತೋಡಿಕೊಂಡರು.

ತಮಿಳುನಾಡಿನ ನಾಟಿ ಭತ್ತದ ತಳಿಯನ್ನು ಬಿತ್ತಿದ್ದು ಆಗಸ್ಟ್ ತಿಂಗಳಲ್ಲಿ ನಾಟಿ ಕೈಗೊಳ್ಳಲಾಗಿದೆ. ಇದೀಗ ಬೆಳೆ ಕೊಯ್ಲು ಮಾಡುವ ಅವಧಿಯಾಗಿದ್ದು, ಬೆಳೆ ಕೈಗೆ ದಕ್ಕುತ್ತಿಲ್ಲ. ಭತ್ತ ಬೆಳೆದು ಪ್ರಯೋಜನವೇ ಇಲ್ಲದಂತಾಗಿದೆ ಎಂದರು.

ಸರ್ಕಾರ ಹಾಗೂ ವಿವಿಧ ಇಲಾಖೆಗಳು ಕ್ರಮ ಕೈಗೊಳ್ಳುತ್ತಿಲ್ಲ. ರೈತರಿಗೆ ಸೂಕ್ತ ಪರಿಹಾರ ಒದಗಿಸಿದರಷ್ಟೇ ಕೃಷಿ ಮಾಡಲು ಸಾಧ್ಯ. ಕಾಡುಪ್ರಾಣಿಗಳ ಉಪಟಳದಿಂದ ರೈತರು ಕೃಷಿಯಲ್ಲಿ ಆಸಕ್ತಿ ಕಳೆದುಕೊಳ್ಳುವಂತಾಗಿದೆ ಎಂದರು.

ಕಾಡಾನೆಗಳು, ಕಾಡುಹಂದಿಗಳು ಭತ್ತ, ಕಾಫಿ ಗಿಡಗಳನ್ನು ನಾಶಪಡಿಸಿದರೆ ಇತ್ತ ತೋಟಕ್ಕೆ ನುಸುಳುವ ಮುಳ್ಳು ಹಂದಿಗಳು ಕಾಳುಮೆಣಸಿನ ಬಳ್ಳಿಗಳನ್ನು ಕಡಿದು ತುಂಡುಮಾಡುತ್ತಿವೆ. ಇಳುವರಿ ಕೈಗೆ ಬರುವ ಸಮಯದಲ್ಲಿ ಬಳ್ಳಿಗಳು ಒಣಗುತ್ತಿವೆ. ಪರಿಶೀಲಿಸಿ ನೋಡಿದರೆ ಮುಳ್ಳುಹಂದಿಗಳು ರಾತ್ರಿ ವೇಳೆ ತೋಟಗಳಲ್ಲಿ ಅಡ್ಡಾಡಿ ಕಾಳುಮೆಣಸಿನ ಬಳ್ಳಿಗಳನ್ನು ತುಂಡರಿಸುತ್ತಿವೆ. ಬಳ್ಳಿಗಳು ಒಣಗುತ್ತಿವೆ ಎಂದು ಬೇತು ಗ್ರಾಮದ ಕೃಷಿಕ ಶಂಭು ಮಂದಪ್ಪ ಬೇಸರ ವ್ಯಕ್ತಪಡಿಸಿದರು.

ಇನ್ನು ನರಿಯಂದಡ, ಚೇಲಾವರ, ಪಾಲಂಗಾಲ, ಪೇರೂರು ಭಾಗಗಳಲ್ಲಿ ಕಾಡು ಹಂದಿಗಳ ಕಾಟ ಒಂದೆಡೆಯಾದರೆ ಕಾಡಾನೆಗಳ ಕಾಟ ಮತ್ತೊಂದೆಡೆ. ಕೃಷಿ ಮಾಡುವುದೇ ಬೇಡ ಎನ್ನುವ ಸ್ಥಿತಿ ಈ ಗ್ರಾಮಗಳ ಜನರದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT