ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೃದಯಾಘಾತದಿಂದಲೇ ಶೇ 35ರಷ್ಟು ಸಾವು: ಡಾ.ಮಂಜುನಾಥ್‌

ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ತಗ್ಗಿದ ಸಂಶೋಧನೆ ಪ್ರಮಾಣ: ಡಾ.ಮಂಜುನಾಥ್‌ ಬೇಸರ
Published 13 ಫೆಬ್ರುವರಿ 2024, 14:13 IST
Last Updated 13 ಫೆಬ್ರುವರಿ 2024, 14:13 IST
ಅಕ್ಷರ ಗಾತ್ರ

ಕೋಲಾರ: ‘ದೇಶದಲ್ಲಿ ಸಂಭವಿಸುತ್ತಿರುವ ಶೇ 35ರಷ್ಟು ಸಾವುಗಳಿಗೆ ಹೃದಯಾಘಾತವೇ ಕಾರಣ. ಅದರಲ್ಲೀ 40 ವರ್ಷದೊಳಗಿನವರೇ ಹೆಚ್ಚು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ’ ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.

ನಗರ ಹೊರವಲಯದ ಟಮಕದಲ್ಲಿರುವ ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಸಂಶೋಧನಾ ಹಾಗೂ ಅಭಿವೃದ್ಧಿ ಘಟಕವು ರಜತ ಮಹೋತ್ಸವ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ನ್ಯಾಷನಲ್‌ ಸೈಂಟಿಫಿಕ್‌ ಕಾನ್‌ಕ್ಲೇವ್‌ ಆನ್‌ ಟ್ರಾನ್ಸಲೇಷನ್‌ ರಿಸರ್ಚ್‌’ ವಿಚಾರಣ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತದಲ್ಲಿ ಶೇ 65ರಷ್ಟು ಸಾವುಗಳಿಗೆ ಜೀವನಶೈಲಿಯೇ ಕಾರಣವಾಗಿದೆ. ಹೃದ್ರೋಗ, ಮಧುಮೇಹ, ಕ್ಯಾನ್ಸರ್‌ನಿಂದ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಶೇ 30 ರಷ್ಟು ಹೃದಯಾಘಾತಗಳು 40 ವರ್ಷದೊಳಗಿನವರಲ್ಲಿ ಸಂಭವಿಸುತ್ತಿದೆ. ಕೆಲವರಲ್ಲಿ ಯಾವುದೇ ಸಮಸ್ಯೆಯೂ ಇರುವುದಿಲ್ಲ’ ಎಂದರು.

‘ದೇಶದಲ್ಲಿ ಸುಮಾರು 8 ಸಾವಿರ ಉನ್ನತ ಶಿಕ್ಷಣ ಸಂಸ್ಥೆಗಳಿವೆ.‌ ಆದರೆ, ಶೇ 1 ಅಥವಾ 2 ರಷ್ಟು ಸಂಸ್ಥೆಗಳು ಮಾತ್ರ ಮೂಲ ಸಂಶೋಧನೆಗೆ ಒತ್ತು ಕೊಡುತ್ತಿವೆ. ಸಂಶೋಧಕರಿಗೆ ಮಹತ್ವದ ಸ್ಥಾನ ಇದೆ. ಕೆಲವೇ ಕೆಲ ಸಂಸ್ಥೆಗಳು ಸಂಶೋಧನೆಗಾಗಿ ಹಣ ಹಾಗೂ ಸಮಯ ಮೀಸಲಿಡುತ್ತಿವೆ. ಅದರಲ್ಲಿ ಅರಸು ಅಕಾಡೆಮಿ ಕೂಡ ಒಂದು’ ಎಂದು ಶ್ಲಾಘಿಸಿದರು.

‘ಕೋವಿಡ್ ಜಗತ್ತಿಗೆ ದೊಡ್ಡ ಪಾಠ ಕಲಿಸಿದೆ. ಸಂಶೋಧನೆಗೆ ದಾರಿ ಮಾಡಿಕೊಟ್ಟಿದೆ. ಹಿಂದೆಲ್ಲಾ ಲಸಿಕೆ ಅಭಿವೃದ್ಧಿಗೆ 12 ವರ್ಷ ಕಾಲಾವಕಾಶ ಬೇಕಾಗುತಿತ್ತು. ಆದರೆ, ಕೋವಿಡ್ ಲಸಿಕೆಯನ್ನು ಕೇವಲ ಒಂದೂವರೆ ವರ್ಷದಲ್ಲಿ ಅಭಿವೃದ್ಧಿಪಡಿಸಲಾಯಿತು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘10 ವರ್ಷಗಳ ನಂತರ ಕ್ಯಾನ್ಸರ್ ಬರಲಿದೆ‌‌,‌ 5 ವರ್ಷಗಳ ನಂತರ ಹೃದಯಾಘಾತವಾಗಲಿದೆ ಎಂಬುದನ್ನು ಮುಂಚಿತವಾಗಿ ಪತ್ತೆ ಹಚ್ಚಲು ಬೇಕಾದ ವ್ಯವಸ್ಥೆ ಬಗ್ಗೆ ಸಂಶೋಧನೆ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯು (ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌) ಸಂಶೋಧನಾ ಕ್ಷೇತ್ರದಲ್ಲಿ ‌ಪ್ರಮುಖ ಪಾತ್ರ ವಹಿಸಲಿದೆ’ ಎಂದು ನುಡಿದರು.

ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಹಲವರು ತಜ್ಞರು ವಿವಿಧ ವಿಚಾರಗಳ ಬಗ್ಗೆ ವಿಚಾರ ಮಂಡಿಸಿದರು. ಶ್ರೀ ದೇವರಾಜ ಅರಸು ಶೈಕ್ಷಣಿಕ ಟ್ರಸ್ಟ್‌ನ ಅಧ್ಯಕ್ಷ, ಅಕಾಡೆಮಿ ಚಾನ್ಸಲರ್‌ ಜಿ.ಎಚ್.ನಾಗರಾಜ, ಉಪಾಧ್ಯಕ್ಷ ಜೆ.ರಾಜೇಂದ್ರ, ಕಾರ್ಯದರ್ಶಿ ಕೆ.ಜಿ.ಹನುಮಂತರಾಜು, ಟ್ರಸ್ಟಿ ರಾಜೇಶ್ ಜಗದಾಳೆ, ಕುಲಪತಿ ಡಾ.ಬಿ.ವೆಂಗಮ್ಮ, ಡೀನ್ ಡಾ.ಕೆ.ಪ್ರಭಾಕರ್, ಕುಲಸಚಿವ ಡಿ.ವಿ.ಎಲ್.ಎನ್.ಪ್ರಸಾದ್, ಸಲಹೆಗಾರ ಡಾ.ಎಸ್.ಚಂದ್ರಶೇಖರ್ ಶೆಟ್ಟಿ, ಯೆನಪೋಯಾ ವಿಶ್ವವಿದ್ಯಾಲಯದ ಡಾ.ವಿಜಯ ಕುಮಾರ್, ವೈದ್ಯಕೀಯ ಅಧೀಕ್ಷಕ ಡಾ.ಜೆ.ಕೃಷ್ಣಪ್ಪ, ಡೀನ್‌ ಡಾ.ಸಿ.ಡಿ.ದಯಾನಂದ್, ನಿರ್ದೇಶಕ ಡಾ.ಕಲ್ಯಾಣಿ, ವಿಶ್ರಾಂತ ಕುಲಪತಿ ಸಚ್ಚಿದಾನಂದ ಇದ್ದರು.

ದೇಶದಲ್ಲಿ ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಸಂಶೋಧನೆಗೆ ಹೆಚ್ಚು ಹಣ ಸಮಯ ಮೀಸಲಿಡುತ್ತಿರುವ ಪಾಶ್ಚಾತ್ಯ ದೇಶಗಳನ್ನು ನಾವು ಅನುಕರಿಸಬೇಕಿದೆ
-ಡಾ.ಸಿ.ಎನ್.ಮಂಜುನಾಥ್ ಮಾಜಿ ನಿರ್ದೇಶಕ ಜಯದೇವ ಹೃದ್ರೋಗ ಸಂಸ್ಥೆ ಬೆಂಗಳೂರು
‘ದೇಶದ ಜಿಡಿಪಿಯ ಶೇ 0.6ರಷ್ಟು ಹಣ ಸಂಶೋಧನೆಗೆ‘
‘ಅಮೆರಿಕ ಚೀನಾ ದಕ್ಷಿಣ ಕೊರಿಯಾ ಇಸ್ರೇಲ್‌ ಕೆನಡಾದಂಥ ದೇಶಗಳು ಜಿಡಿಪಿಯ ಶೇ 3.5ರಷ್ಟು ಹಣವನ್ನು ಸಂಶೋಧನೆಗೆ ವೆಚ್ಚ ಮಾಡುತ್ತಿವೆ. ಆದರೆ ಭಾರತದಲ್ಲಿ ಜಿಡಿಪಿಯ ಕೇವಲ ಶೇ 0.6ರಷ್ಟು ಹಣವನ್ನು ಸಂಶೋಧನೆಗೆ ವೆಚ್ಚ ಮಾಡಲಾಗುತ್ತಿದೆ. ವಿವಿಧ ಕಾರಣಗಳಿಂದ ಕಳೆದ 10 ವರ್ಷಗಳಲ್ಲಿ ಸಂಶೋಧನೆ ಪ್ರಮಾಣ ಇನ್ನೂ ಕಡಿಮೆ ಆಗಿದೆ’ ಎಂದು ಡಾ.ಸಿ.ಎನ್‌.ಮಂಜುನಾಥ್‌ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT