ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಹೋರಾಟದ ಬದುಕು ಅನುಸರಣೀಯ

ಜಿಲ್ಲಾಡಳಿತದಿಂದ 128ನೇ ಅಂಬೇಡ್ಕರ್ ಜಯಂತಿ ಆಚರಣೆ
Last Updated 14 ಏಪ್ರಿಲ್ 2019, 13:38 IST
ಅಕ್ಷರ ಗಾತ್ರ

ಕೋಲಾರ: ‘ಶೋಷಿತರ ಏಳಿಗೆಯನ್ನೇ ಜೀವನದ ಗುರಿಯನ್ನಾಗಿಸಿಕೊಂಡಿದ್ದ ಮಹಾನ್ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್, ಅವರ ಹೋರಾಟದ ಬದುಕು ಅನುಸರಣೀಯ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತದಿಂದ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ 128ನೇ ಜಯಂತಿಗೆ ಚಾಲನೆ ನೀಡಿ ಮಾತನಾಡಿ, ‘ರಾಷ್ಟ್ರದ ಪ್ರತಿಯೊಬ್ಬರಿಗೂ ಸಂವಿಧಾನದಡಿಯಲ್ಲಿ ಪ್ರಧಾನ ಮತ್ತು ಕರ್ತವ್ಯಗಳನ್ನು ಕಲ್ಪಿಸಿಕೊಟ್ಟ ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಾವು ಎಂದಿಗೂ ಮರೆಯುವಂತಿಲ್ಲ’ ಎಂದರು.

‘ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ನೊಂದ ಮಹಿಳೆಯರು, ದಲಿತರು, ಬಡವರು ಪರವಾಗಿ ಧನಿ ಎತ್ತಿದ್ದು, ರಿಸರ್ವ್ ಬ್ಯಾಂಕ್ ಸ್ಥಾಪನೆ ಮಾಡುವ ಮೂಲಕ ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ’ ಎಂದು ಹೇಳಿದರು.

‘ಭಾರತವು ಬಹುದೊಡ್ಡ ರಾಷ್ಟ್ರವಾಗಿದ್ದು, ಹಲವಾರು ಜಾತಿ, ಧರ್ಮ, ಮತಗಳು ಇದ್ದರೂ ಸಹ ವಿವಿಧತೆಯಲ್ಲಿ ಏಕತೆಯನ್ನು ಒಳಗೊಂಡು ಸಂವಿಧಾನ ಆಶ್ರಯದಲ್ಲಿ ನಡೆಯುತ್ತಿದೆ. ಅಲ್ಲದೆ ವಿಶ್ವದಲ್ಲೇ ದೊಡ್ಡ ಪ್ರಜಾಪ್ರಭುತ್ವವನ್ನೂ ಒಳಗೊಂಡಿದ್ದು ಅದಕ್ಕೆ ಕಾರಣ ಭಾರತ ಭಾಗ್ಯವಿಧಾತ ಅಂಬೇಡ್ಕರ್’ ಎಂದು ಅಭಿಪ್ರಾಯಪಟ್ಟರು.

‘ಮಹಿಳೆ, ಅಲ್ಪಸಂಖ್ಯಾತರು, ದಲಿತರು ಸೇರಿದಂತೆ ಎಲ್ಲರಿಗೂ ಸಮಾನತೆಯನ್ನು ನೀಡಲು ಪಣತೊಟ್ಟ ಅಂಬೇಡ್ಕರ್ ಪ್ರತಿಯೊಬ್ಬರಿಗೂ ಹಕ್ಕುಗಳನ್ನು ನೀಡಿ ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಮುಂದಾದರು. ಅಂತಹ ಮಹಾನ್ ಚೇತನರನ್ನು ಎಂದಿಗೂ ಮರೆಯದೆ, ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗಬೇಕು’ ಎಂದು ಸಲಹೆ ನೀಡಿದರು.

‘ವಿಶ್ವಕ್ಕೆ ಮಾದರಿ ಸಂವಿಧಾನವನ್ನು ನೀಡಿದ ಬಾಬಾ ಸಾಹೇಬ ಅಂಬೇಡ್ಕರರನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸಿ ಮರೆಯಬಾರದು. ಜತೆಗೆ ಅವರ ಸ್ಮರಣೆ ನಿರಂತರವಾಗಿರಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜಗದೀಶ್ ತಿಳಿಸಿದರು.

‘ಅಂಬೇಡ್ಕರರ ಮೀಸಲಾತಿಯಿಂದಲೇ ನಾನು ಇಂದು ಐಎಎಸ್ ಅಧಿಕಾರಿಯಾಗಿ ಬಂದು ನಿಂತಿಯಿದ್ದೇನೆ. ಎಂದೆಂದಿಗೂ ಅದನ್ನು ಮರೆಯಲಾರೆ. ಶಾಲಾ ಹಂತದಿಂದಲೇ ಮಕ್ಕಳಲ್ಲಿ ಅಂಬೇಡ್ಕರ್ ಕುರಿತು ಅರಿವು ಮೂಡಿಸಬೇಕು’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿ ಕಟೋಚ್ ಸಪೆಟ್ ಮಾತನಾಡಿ, ‘ಅಂಬೇಡ್ಕರ್ ಹೇಳಿರುವಂತೆಯೇ ಜಾತಿ, ಧರ್ಮ, ಲಿಂಗಬೇಧಗಳನ್ನು ಕೊನೆಗಾಣಿಸಲು ನಮ್ಮೆಲ್ಲರ ಕರ್ತವ್ಯವೂ ಅತಿಮುಖ್ಯವಾಗಿದ್ದು, ಅವರ ಸಿದ್ಧಾಂತಗಳನ್ನು ಅನುಸರಿಸಬೇಕಾಗಿದೆ’ ಎಂದು ತಿಳಿಸಿದರು.

‘ಅಂಬೇಡ್ಕರ್ ಭವ್ಯ ಭಾರತದ ರಚನೆಗೆ ಸಾಕಷ್ಟು ಪಣತೊಟ್ಟಿದ್ದರು. ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಸಮಾನತೆ, ಒಗ್ಗಟ್ಟು ಮೂಲಕ ನಾವೆಲ್ಲರೂ ಒಂದಾಗಿ ಅವರ ಗುರಿಯನ್ನು ಮುಟ್ಟಲು ಮುಂದಾಗಬೇಕು’ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಬಂಗಾರಪೇಟೆ ವೃತ್ತದಲ್ಲಿನ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಸಿಂಧು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಎಂ.ಸೌಮ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ, ನಗರಸಭೆ ಆಯುಕ್ತ ಟಿ.ಆರ್.ಸತ್ಯನಾರಾಯಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT