ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ | ಎಪಿಎಂಸಿಗೆ ಜಾಗ; ಇನ್ನೆಷ್ಟು ದಿನ ಕಾಯಬೇಕು?

ಕೆರೆ, ಗೋಮಾಳ ಒತ್ತುವರಿ ಆದರೂ ಕಣ್ಣಿಗೆ ಕಾಣಲ್ಲ; ಮಾರುಕಟ್ಟೆಗೆ ಮಾತ್ರ ಜಾಗವಿಲ್ಲ–ಆಕ್ರೋಶ
Published 20 ಫೆಬ್ರುವರಿ 2024, 5:39 IST
Last Updated 20 ಫೆಬ್ರುವರಿ 2024, 5:39 IST
ಅಕ್ಷರ ಗಾತ್ರ

ಕೋಲಾರ: ಬಹಳ ವರ್ಷಗಳಿಂದ ರೈತರು, ಮಂಡಿ ಮಾಲೀಕರು, ವರ್ತಕರು, ಕೂಲಿಕಾರರಿಗೆ ಸಮಸ್ಯೆಯಾಗಿ ಕಾಡುತ್ತಿರುವ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಜಾಗ ಕೊಡಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.

ಹತ್ತಾರು ಜಿಲ್ಲಾಧಿಕಾರಿಗಳು, ಐದಾರು ಉಸ್ತುವಾರಿ ಮಂತ್ರಿಗಳು, ನಾಲ್ಕೈದು ಸರ್ಕಾರಗಳು ಬದಲಾದರೂ ನನೆಗುದ್ದಿಗೆ ಬಿದ್ದಿರುವ ಜಾಗದ ಸಮಸ್ಯೆ ಮಾತ್ರ ನೀಗಿಲ್ಲ.

ಕಂದಾಯ ಸಚಿವ ಕೃಷ್ಣ ಬೈರೇಗೌಡ, ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಇದೇ ಜಿಲ್ಲೆಯವರಾಗಿದ್ದು, ಜಾಗ ನೀಡಲು ಅವರೂ ಆಸಕ್ತಿ ತೋರಿಸಿದಂತಿಲ್ಲ. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌, ಶಾಸಕ ಕೊತ್ತೂರು ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಕೂಡ ಗಮನ ಹರಿಸಿದಂತಿಲ್ಲ. ಸಂಸದ ಎಸ್‌.ಮುನಿಸ್ವಾಮಿ ಅವರಾದರೂ  ಕೇಂದ್ರ ಅರಣ್ಯ ಇಲಾಖೆ ಮೇಲೆ ಒತ್ತಡ ಹೇರಿ ಜಾಗಕ್ಕೆ ಹಸಿರು ನಿಶಾನೆ ಕೊಡಿಸಬಹುದಿತ್ತು. ಅವರ ಪ್ರಯತ್ನವೂ ಸಾಕಾಗಲಿಲ್ಲ.

ಜಾಗ ದೊರಕಿಸಿ ಕೊಡುವ ಇಚ್ಛಾಶಕ್ತಿ ಇಲ್ಲದಿರುವುದು, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ಈ ಸಮಸ್ಯೆ ಬಗೆಹರಿಯದಿರಲು ಕಾರಣ ಎನ್ನಲಾಗಿದೆ. ಇತ್ತ ಕೆರೆ, ಗೋಮಾಳ ಒತ್ತುವರಿ ಆಗುತ್ತಿರುವುದು ಮಾತ್ರ ಜನಪ್ರತಿನಿಧಿಗಳಿಗೆ, ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲ ಎಂಬ ಆರೋಪವನ್ನು ರೈತರು ಮಾಡುತ್ತಿದ್ದಾರೆ.

ಏಷ್ಯಾದಲ್ಲೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೋಲಾರ ಎಪಿಎಂಸಿಗೆ ಅಗತ್ಯವಾದ ಜಮೀನು ಬೇಕಿದೆ. ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಿರುವ, 1980ರಲ್ಲಿ ಆರಂಭವಾದ ಈ ಮಾರುಕಟ್ಟೆ ಕಿರಿದಾಗಿದ್ದು, ಬೇರೆಡೆಗೆ ಸ್ಥಳಾಂತರಿಸಬೇಕೆಂದು ದಶಕಗಳಿಂದ ಹೋರಾಟ ನಡೆಯುತ್ತಿದೆ.

ಈ ಹಿಂದೆ ತಾಲ್ಲೂಕಿನ ಕಪರಸಿದ್ದನಹಳ್ಳಿ ಹಾಗೂ ಮಡೇರಹಳ್ಳಿಯಲ್ಲಿ ಗುರುತಿಸಿದ್ದ 37 ಎಕರೆ ಜಾಗವನ್ನು ಕೇಂದ್ರ ಅರಣ್ಯ ಇಲಾಖೆ ಈಚೆಗೆ ತಿರಸ್ಕರಿಸಿದೆ. ಹೊಸ ಜಾಗ ಇನ್ನೂ ಸಿಕ್ಕಿಲ್ಲ.

‘ಎಪಿಎಂಸಿಗಾಗಿ ಇದೇ ಜಾಗ ಕೋರಿ ಮತ್ತೆ ಕೇಂದ್ರ ಅರಣ್ಯ ಇಲಾಖೆಗೆ ಪತ್ರ ಬರೆಯಲು ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಜಾಗ ಪಡೆಯಲು ವರ್ಷಗಳಿಂದ ಪ್ರಯತ್ನ ನಡೆಸುತ್ತಲೇ ಇದ್ದೇವೆ. ಆದರೂ ಜಾಗ ಸಿಗುತ್ತಿಲ್ಲ’ ಎಂದು ಕೋಲಾರ ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈಗಿರುವ ಮಾರುಕಟ್ಟೆಯಲ್ಲಿ ಮಳೆ ಇದ್ದರೆ ಲೋಡ್ ಮಾಡಲು ಕಷ್ಟ. ಬಿಸಿಲು ಇದ್ದರೆ ಟೊಮೆಟೊ ಕೊಳೆಯುವ ಭೀತಿ. ನಿತ್ಯ ನೂರಾರು ಲೋಡ್‌ ಟೊಮೆಟೊ ವಿವಿಧ ರಾಜ್ಯಗಳಿಗೆ ಲಾರಿ ಹಾಗೂ ಟೆಂಪೊ ಮೂಲಕ ಸರಬರಾಜಾಗುತ್ತಿದೆ. ಬೆಲೆ ಕಡಿಮೆ ಇರಲಿ, ಹೆಚ್ಚಿರಲಿ ಒಂದೇ ದಿನದಲ್ಲಿ ಸಾಗಾಟ ಮಾಡಬೇಕು. ಆದರೆ, ಟೊಮೆಟೊ ಋತುವಿನಲ್ಲಿ ಟ್ರಾಫಿಕ್‌ನಿಂದ ರೈತರು, ವರ್ತಕರು ಹೈರಾಣಾಗುತ್ತಿದ್ದಾರೆ.

ತಾಲ್ಲೂಕಿನ ವಕ್ಕಲೇರಿಯ ಹೋಬಳಿಯ ಚೆಲುವನಹಳ್ಳಿ ಕೆರೆ ಸರ್ವೆ ನಂಬರ್‌ 73 ರಲ್ಲಿನ 43 ಎಕರೆ 20 ಗುಂಟೆ ಜಮೀನನ್ನು ಕೋಲಾರ ಎಪಿಎಂಸಿ ಮಾರುಕಟ್ಟೆ ನಿರ್ಮಾಣಕ್ಕೆ ಮಂಜೂರು ಮಾಡಬೇಕೆಂದು ರೈತ ಸಂಘದವರು ಒತ್ತಾಯಿಸುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಕೆರೆ ಜಮೀನು ಕಬಳಿಕೆಯಾಗಿದ್ದ ಸಂಬಂಧ ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿ ಸರ್ಕಾರದ ಸುಪರ್ದಿಗೆ ಬರಲು ಕಾರಣರಾಗಿದ್ದಾರೆ.

ಈ ಕೆರೆ ಜಮೀನನ್ನು ಎಪಿಎಂಸಿ ಮಾರುಕಟ್ಟೆಗೆ ಮಂಜೂರು ಮಾಡಿ ಅಭಿವೃದ್ಧಿಪಡಿಸುವ ಸಂಬಂಧ ಪರಿಶೀಲಿಸಲು ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಕೂಡ ಸೂಚಿಸಿದ್ದಾರೆ. ಆದರೆ, ಈ ವರೆಗೆ ಯಾವುದೇ ಪ್ರಗತಿ ಆಗಿಲ್ಲ. ಇತ್ತ ಜಿಲ್ಲಾಧಿಕಾರಿ ಅಕ್ರಂ ಪಾಷ, ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮಿ ಹಾಗೂ ತಹಶೀಲ್ದಾರ್‌ ಹರ್ಷವರ್ಧನ್‌ ವಿವಿಧೆಡೆ ಜಾಗ ಹುಡುಕುತ್ತಲೇ ಇದ್ದಾರೆ.

ಟೊಮೆಟೊ ಬೆಳೆಯಲ್ಲಿ ಇಡೀ ರಾಜ್ಯದಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಗೆ ಸಂಸ್ಕರಣಾ ಘಟಕ, ಶಿಥಲೀಕರಣ ಘಟಕ ಬೇಕೆಂಬ ಬೇಡಿಕೆ ಹಲವು ವರ್ಷಗಳದ್ದು. ಆದರೆ, ಈ ಕೂಗು ಸರ್ಕಾರದ ಯಾರಿಗೂ ಕೇಳುತ್ತಿಲ್ಲ.

ವಿಜಯಲಕ್ಷ್ಮಿ
ವಿಜಯಲಕ್ಷ್ಮಿ
ಈಕಂಬಳ್ಳಿ ಸೇರಿದಂತೆ ವಿವಿಧೆಡೆ ಜಾಗ ನೋಡುತ್ತಿದ್ದೇವೆ. ಜಿಲ್ಲಾಧಿಕಾರಿಯೂ ಶ್ರಮ ಹಾಕುತ್ತಿದ್ದಾರೆ. 50 ಎಕರೆಯಾದರೂ ಬೇಕು. ಈವರೆಗೆ ಜಾಗ ನಿಗದಿಯಾಗಿಲ್ಲ. ಎಲ್ಲಾ ಕಡೆಯಿಂದ ಒತ್ತಡ ಹೆಚ್ಚುತ್ತಿದೆ
ವಿಜಯಲಕ್ಷ್ಮಿ ಕೋಲಾರ ಎಪಿಎಂಸಿ ಕಾರ್ಯದರ್ಶಿ
ನಳಿನಿ ಗೌಡ
ನಳಿನಿ ಗೌಡ
ಚೆಲುವನಹಳ್ಳಿ ಕೆರೆ ಜಾಗವನ್ನಾದರೂ ನೀಡಬಹುದಿತ್ತು. ಇಚ್ಛಾಶಕ್ತಿ ಇದ್ದಿದ್ದರೆ ಇಷ್ಟರಲ್ಲಿ ಜಾಗ ಹುಡುಕಿ ಕೊಡುತ್ತಿದ್ದರು. ಆದರೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಭರವಸೆ ನೀಡಿದ್ದು ಕಾಯುತ್ತಿದ್ದೇವೆ
ನಳಿನಿಗೌಡ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರೈತ ಸಂಘ
ಸಿಎಂಆರ್‌ ಶ್ರೀನಾಥ್‌
ಸಿಎಂಆರ್‌ ಶ್ರೀನಾಥ್‌
‘ಕೋಲಾರ ಎಂದರೆ ಏಕಿಷ್ಟು ನಿರ್ಲಕ್ಷ್ಯ?’ ಸಾವಿರಾರು ಕುಟುಂಬಗಳ ಬದುಕು ಎಪಿಎಂಸಿ ಮೇಲೆ ಅವಲಂಬಿತವಾಗಿವೆ. ಈ ಸಂಬಂಧ ಎಷ್ಟೇ ಹೋರಾಟ ನಡೆಸಿದರೂ ಸರ್ಕಾರ ಕಣ್ಣು ತೆರೆಯದಿದ್ದರೆ ಹೇಗೆ? ಇದೊಂದು ಕಣ್ಣು ಕಿವಿ ಇಲ್ಲದ ಸರ್ಕಾರವಾಗಿದೆ ಇಚ್ಛಾಶಕ್ತಿಯೂ ಇಲ್ಲ. ರೈತರ ಬಗ್ಗೆ ಕಾಳಜಿಯಂತೂ ಇಲ್ಲವೇ ಇಲ್ಲ. ಕೋಲಾರ ಎಂದರೆ ಏಕಿಷ್ಟು ನಿರ್ಲಕ್ಷ್ಯ? ಇಲ್ಲಿಂದ ಗೆದ್ದಿರುವ ಜನಪ್ರತಿನಿಧಿಗಳೂ ಗಮನ ಹರಿಸದಿರುವುದು ದುರದೃಷ್ಟಕರ
–ಸಿಎಂಆರ್‌ ಶ್ರೀನಾಥ್‌ ಮಂಡಿ ಮಾಲೀಕ ಜೆಡಿಎಸ್‌ ಮುಖಂಡ
ಕಸ ವಿಲೇವಾರಿಗೆ 10 ಎಕರೆ ಜಾಗ
ಕೋಲಾರ ಎಪಿಎಂಸಿ ಕಸ ವಿಲೇವಾರಿಗೆ ಕೊನೆಗೂ ಜಾಗ ಸಿಕ್ಕಿದೆ. ಕೆಂದಟ್ಟಿಯಲ್ಲಿ 10 ಎಕರೆ ಜಾಗವನ್ನು ಜಿಲ್ಲಾಧಿಕಾರಿ ಮಂಜೂರು ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಹಾಕಲೂ ಜಾಗವಿಲ್ಲದಂತಾಗಿತ್ತು. ವಿಲೇವಾರಿಯಾಗದೆ ಉಳಿದ ತರಕಾರಿಗಳು ಸ್ಥಳದಲ್ಲೇ ಕೊಳೆತು ಸುತ್ತಮುತ್ತಲ ಪ್ರದೇಶದಲ್ಲಿ ದುರ್ನಾತ ಹೆಚ್ಚಿತ್ತು. ತ್ಯಾಜ್ಯವನ್ನು ಮಾರುಕಟ್ಟೆಯ ಸಿಬ್ಬಂದಿ ಟ್ರಾಕ್ಟರ್‌ಗಳಲ್ಲಿ ತಂದು ಸುತ್ತಲಿನ ಗ್ರಾಮದ ಖಾಲಿ ಜಾಗದಲ್ಲಿ ಸುರಿಯುತ್ತಿದ್ದರಿಂದ ಅಲ್ಲಿನ ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾಗುತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT