ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ | ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕ: ಮುಂಚೂಣಿಯಲ್ಲಿ ನಾರಾಯಣಸ್ವಾಮಿ ಹೆಸರು

Published 25 ನವೆಂಬರ್ 2023, 7:01 IST
Last Updated 25 ನವೆಂಬರ್ 2023, 7:01 IST
ಅಕ್ಷರ ಗಾತ್ರ

ಕೋಲಾರ: ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಕೊನೆಗೂ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಕ್ಕೆ ಕಾಲ ಕೂಡಿಬಂದಿದ್ದು, ಜಿಲ್ಲೆಯ ಶಾಸಕರಾದ ಎಸ್.ಎನ್‌.ನಾರಾಯಣಸ್ವಾಮಿ ಹಾಗೂ ಕೆ.ವೈ.ನಂಜೇಗೌಡರ ಹೆಸರು ಮುಂಚೂಣಿಯಲ್ಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಆರು ತಿಂಗಳಾಗಿದ್ದು, ಈಗ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಪ್ರಕ್ರಿಯೆ ಅಂತಿಮ ಘಟ್ಟ ತಲುಪಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಈಗಾಗಲೇ ಬೆಂಗಳೂರಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದು, ಪಟ್ಟಿ ಸದ್ಯದಲ್ಲೇ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.

ಸಚಿವ ಸ್ಥಾನದಿಂದ ವಂಚಿತರಾದ ಶಾಸಕರನ್ನು ಪ್ರಮುಖ ಸ್ಥಾನಗಳಿಗೆ ನೇಮಕ ಮಾಡುವುದು ಬಹುತೇಕ ನಿಶ್ಚಿತವಾಗಿದೆ. ಕೋಲಾರ ಜಿಲ್ಲೆಯ ಯಾರೂ ಸಚಿವ ಸಂಪುಟದಲ್ಲಿ ಇಲ್ಲ. ಹೀಗಾಗಿ, ಜಿಲ್ಲೆಗೆ ಹೆಚ್ಚಿನ ಆದ್ಯತೆ ಸಿಗುವ ನಿರೀಕ್ಷೆ ಇದೆ.

ಬಂಗಾರಪೇಟೆ ಮೀಸಲು ಕ್ಷೇತ್ರದಿಂದ ಹ್ಯಾಟ್ರಿಕ್‌ ಗೆಲುವಿನ ಸಾಧನೆ ಮಾಡಿರುವ ನಾರಾಯಣಸ್ವಾಮಿ ಅವರಿಗೆ ‘ಬಂಪರ್‌’ ಅವಕಾಶ ಒಲಿಯುವ ಸಾಧ್ಯತೆ ದಟ್ಟವಾಗಿದೆ. ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಅವರು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ, ಅವಕಾಶ ಒಲಿದಿರಲಿಲ್ಲ.

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಹಿಂದಿನ ಭೂಸೇನಾ ನಿಗಮದ (ಕೆಆರ್‌ಐಡಿಎಲ್‌) ಅಧ್ಯಕ್ಷ ಸ್ಥಾನ ಬಯಸಿರುವುದಾಗಿ ನಾರಾಯಣಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಲೂರು ಕ್ಷೇತ್ರದಲ್ಲಿ ಭಾರಿ ಪೈಪೋಟಿ ನಡುವೆ ಸತತ ಎರಡನೇ ಬಾರಿ ಗೆದ್ದಿರುವ ನಂಜೇಗೌಡರ ಹೆಸರು ಮುನ್ನೆಲೆಗೆ ಬಂದಿದೆ. ಅವರು ಕೋಚಿಮುಲ್‌ ಅಧ್ಯಕ್ಷರೂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್‌ ಶಾಸಕರು ಇದ್ದಾರೆ. ತಮ್ಮ ನಾಯಕರ ಗೆಲುವಿಗಾಗಿ ಚುನಾವಣಾ ಸಮಯದಲ್ಲಿ ಶ್ರಮಿಸಿದವರಿಗೂ ನಿಗಮ ಮಂಡಳಿ ಸ್ಥಾನಮಾನ ಕೊಡಬೇಕು ಎನ್ನುವ ಬೇಡಿಕೆಯನ್ನು ಪಕ್ಷದ ಕಾರ್ಯಕರ್ತರು ಮುಂದಿಡುತ್ತಿದ್ದಾರೆ.

ಕೋಲಾರದಿಂದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ, ಜಿಲ್ಲಾ ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್‌, ಜಿಲ್ಲಾ ಎಸ್‌ಸಿ ಘಟಕದ ಅಧ್ಯಕ್ಷ ಕೆ.ಜಯದೇವ್‌ ಪ್ರಯತ್ನಪಡುತ್ತಿದ್ದಾರೆ.

‘ನನಗೆ ಅವಕಾಶ ಸಿಗುವ ಭರವಸೆ ಇದೆ. ನಾಲ್ವರು ಶಾಸಕರ ಗೆಲುವಿನಲ್ಲಿ ನನ್ನ ಪಾತ್ರವೂ ಇದೆ. ಕೆಪಿಸಿಸಿ ಅಧ್ಯಕ್ಷರ ಸೂಚನೆ ಮೇರೆಗೆ ಎಲ್ಲಾ ಕೆಲಸ ಅಚ್ಚುಕಟ್ಟಾಗಿ ಮಾಡಿದ್ದೇನೆ’ ಎಂದು ಲಕ್ಷ್ಮಿನಾರಾಯಣ ಹೇಳಿದರು.

ಪ್ರಮುಖ ನಿಗಮ ಮಂಡಳಿಗಳ ಜತೆಗೆ, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ) ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ನಾಮನಿರ್ದೇಶಿತ ಸದಸ್ಯರಾಗಲೂ ಲಾಬಿ ನಡೆಯುತ್ತಿದೆ.

ಲೋಕಸಭೆ ಚುನಾವಣೆ ಯಾವುದೇ ಸಮಯದಲ್ಲಿ ಬರಬಹುದು ಎನ್ನುವ ಸೂಚನೆ ಇರುವುದರಿಂದ ಈಗಿನಿಂದಲೇ ನಿಷ್ಠಾವಂತ ಮುಖಂಡರಿಗೆ ಅವಕಾಶ ಮಾಡಿಕೊಡಬೇಕು ಎನ್ನುವುದು ವರಿಷ್ಠರ ಚಿಂತನೆ.

ನಿಗಮ ಮಂಡಳಿಯಲ್ಲಿ ಶಾಸಕರಿಗೂ ಸ್ಥಾನ ಕೊಡಬೇಕು. ಪಕ್ಷಕ್ಕಾಗಿ ದುಡಿದಿರುವ ಕಾರ್ಯಕರ್ತರಿಗೂ ಅವಕಾಶ ಮಾಡಿಕೊಡಬೇಕು.
ಕೆ.ಎಚ್‌.ಮುನಿಯಪ್ಪ, ಆಹಾರ ಸಚಿವ
ಕೆಆರ್‌ಐಡಿಎಲ್‌ ಅಧ್ಯಕ್ಷ ಸ್ಥಾನ ನೀಡುವಂತೆ ವರಿಷ್ಠರನ್ನು ಭೇಟಿಯಾಗಿ ಕೋರಿದ್ದೇನೆ. ಅವಕಾಶ ಸಿಗುವ ನಿರೀಕ್ಷೆಯಲ್ಲಿ ಇದ್ದೇನೆ. ಈ ಸಂಬಂಧ ಭರವಸೆಯೂ ಸಿಕ್ಕಿದೆ.
ಎಸ್‌.ಎನ್‌.ನಾರಾಯಣಸ್ವಾಮಿ, ಬಂಗಾರಪೇಟೆ ಶಾಸಕ
ಜಿಲ್ಲೆಯ ಇಬ್ಬರು ಶಾಸಕರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಯಾರಿಗೇ ಅವಕಾಶ ಸಿಕ್ಕರೂ ಜಿಲ್ಲೆಗೆ ಸಂದ ಕೊಡುಗೆ. ಕಾರ್ಯಕರ್ತರಿಗೂ ಅವಕಾಶ ಸಿಗಲಿದ್ದು ತುಸು ವಿಳಂಬವಾಗಲಿದೆ.
ಸಿ.ಲಕ್ಷ್ಮಿನಾರಾಯಣ ಕೋಲಾರ, ಜಿಲ್ಲಾ ಅಧ್ಯಕ್ಷ
 ಲಕ್ಷ್ಮಿನಾರಾಯಣ
 ಲಕ್ಷ್ಮಿನಾರಾಯಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT