ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ ಸದಸ್ಯರ ದೌರ್ಜನ್ಯ: ಆರೋಪ

ಪಾಲಾರ್ ಮೀನುಗಾರರ ಅಭಿವೃದ್ಧಿ ಮಾರಾಟ ಸಹಕಾರ ಸಂಘದ ಸದಸ್ಯರ ಧರಣಿ
Last Updated 14 ಸೆಪ್ಟೆಂಬರ್ 2019, 11:34 IST
ಅಕ್ಷರ ಗಾತ್ರ

ಕೋಲಾರ: ಮೀನು ಸಾಕಾಣಿಕೆದಾರರು ಹಾಗೂ ಮಾರಾಟಗಾರರನ್ನು ವಂಚಿಸುತ್ತಿರುವ ವ್ಯಕ್ತಿಗಳ ವಿರುದ್ಧ ಶಿಸ್ತುಕ್ರಮ ಕೈಗೊಂಡು, ಕೆರೆ ಬಿಡಿಸಿಕೊಡುವಂತೆ ಒತ್ತಾಯಿಸಿ ಜಿಲ್ಲೆಯ ಕೆಜಿಎಫ್‌ ತಾಲ್ಲೂಕಿನ ರಾಮಸಾಗರ ಗ್ರಾಮದ ಮೀನು ಮಾರಾಟಗಾರರು ಇಲ್ಲಿ ಶನಿವಾರ ಧರಣಿ ನಡೆಸಿದರು.

‘ರಾಮಸಾಗರ ಕೆರೆಯಲ್ಲಿ ಹಲವು ವರ್ಷಗಳಿಂದ ಮೀನು ಸಾಕಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಪಾಲಾರ್ ಮೀನುಗಾರರ ಅಭಿವೃದ್ಧಿ ಮಾರಾಟ ಸಹಕಾರ ಸಂಘ ರಚಿಸಿಕೊಂಡು ಕೆರೆ ಹರಾಜು ಪಡೆದು ವಹಿವಾಟು ನಡೆಸುತ್ತಿದ್ದೇವೆ’ ಎಂದು ಸಂಘದ ಪಾಪಣ್ಣ ತಿಳಿಸಿದರು.

‘ಹಲವು ವರ್ಷಗಳಿಂದ ಕೆರೆಯಲ್ಲಿ ನೀರು ಬತ್ತಿದ ಕಾರಣ ಮೀನು ವಾಹಿವಾಟು ಸ್ಥಗಿತಗೊಂಡಿತ್ತು. ಹೀಗಾಗಿ ಸಂಘವು ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿತ್ತು. ಸಂಘದ ಪುನರ್ ಸ್ಥಾಪನೆಗೆ ಆರ್ಥಿಕ ಶಕ್ತಿಯಿಲ್ಲ. ಈ ಕಾರಣಕ್ಕೆ ಸಂಘ ಪುನರ್ ಸ್ಥಾಪಿಸಲು ಜಿಲ್ಲಾ ಸಹಕಾರ ನಿಬಂಧಕರು ವೆಂಕಟೇಶ್‌ಬಾಬು ಎಂಬ ಅಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ನೇಮಿಸಿದ್ದಾರೆ’ ಎಂದು ಹೇಳಿದರು.

‘ಸಂಘದಲ್ಲಿ ರಾಜಕೀಯ ಮುಖಂಡರ ಹಸ್ತಕ್ಷೇಪದ ಕಾರಣಕ್ಕೆ ವೆಂಕಟೇಶ್‌ಬಾಬು ವಿಶೇಷಾಧಿಕಾರಿಯಾಗಿ ಮುಂದುವರಿಯಲು ಆಗುವುದಿಲ್ಲ ಎಂದು ಸಹಕಾರ ನಿಬಂಧಕರಿಗೆ ಮನವಿ ಸಲ್ಲಿಸಿದ್ದಾರೆ. ಈ ನಡುವೆ ವೆಂಕಟೇಶ್‌ಬಾಬು ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಯಪ್ರಕಾಶ್ ನಾಯ್ಡು, ಮಹೇಶ್ ಹಾಗೂ ಗುತ್ತಿಗೆದಾರ ಪ್ರಕಾಶ್‌ ನಾಯ್ಡು ಅವರ ಒತ್ತಡಕ್ಕೆ ಮಣಿದು ಸಂಘದ ಸರ್ವ ಸದಸ್ಯರ ಸಭೆ ನಡೆಸಲು ಮುಂದಾಗಿದ್ದಾರೆ’ ಎಂದು ಆರೋಪಿಸಿದರು.

ಮೂಲೆಗುಂಪು: ‘ವೆಂಕಟೇಶ್‌ಬಾಬು ಅವರು ಜಯಪ್ರಕಾಶ್ ನಾಯ್ಡು, ಮಹೇಶ್‌ ಮತ್ತು ಪ್ರಕಾಶ್‌ ನಾಯ್ಡು ಜತೆ ಶಾಮೀಲಾಗಿ ಸಂಘದ ಅಸಲಿ ಷೇರುದಾರರನ್ನು ವಂಚಿಸಿ ನಕಲಿ ಮತದಾರರ ಪಟ್ಟಿ ಸಿದ್ಧಪಡಿಸಿ ಸಂಘಕ್ಕೆ ಚುನಾವಣೆ ನಡೆಸಲು ಮುಂದಾಗಿದ್ದರು. ನಂತರ ನ್ಯಾಯಾಲಯ ಚುನಾವಣೆ ರದ್ದುಪಡಿಸಿತು. ಇದೀಗ ಪ್ರಕಾಶ್‌ ನಾಯ್ಡು ತಮ್ಮ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರನ್ನೇ ಷೇರುದಾರರಾಗಿಸಿಕೊಂಡು ಅಸಲಿ ಷೇರುದಾರರನ್ನು ಮೂಲೆಗುಂಪು ಮಾಡಿದ್ದಾರೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಕಾಶ್ ನಾಯ್ಡು ರಾಜಕೀಯ ಪ್ರಭಾವ ಬಳಸಿ ₹ 58 ಲಕ್ಷಕ್ಕೆ ರಾಮಸಾಗರ ಕೆರೆಯ ಹರಾಜು ಪಡೆದುಕೊಂಡಿದ್ದಾರೆ. ನಮ್ಮಿಂದ ಮೀನು ಮಾರಾಟ ಮಾಡಿಸಿ ದಿನಗೂಲಿ ಸಹ ನೀಡದೆ ವಂಚಿಸಿದ್ದಾರೆ. ಇದರಿಂದ ಜೀವನ ನಿರ್ವಹಣೆಗೆ ಸಮಸ್ಯೆಯಾಗಿದೆ. ಬಡ್ಡಿ ಸಾಲ ಮಾಡಿ ಬದುಕು ಸಾಗಿಸುತ್ತಿದ್ದು, ಸಂಬಳ ಕೇಳಿದರೆ ಬೆದರಿಕೆ ಹಾಕುತ್ತಾರೆ’ ಎಂದು ಅಳಲು ತೋಡಿಕೊಂಡರು.

‘ಜಿ.ಪಂ ಸದಸ್ಯರಾದ ಮಹೇಶ್‌ ಹಾಗೂ ಜಯಪ್ರಕಾಶ್‌ ನಾಯ್ಡು ಅಧಿಕಾರ ದುರುಪಯೋಗಪಡಿಸಿಕೊಂಡು ಶೋಷಣೆ ನಡೆಸುತ್ತಿದ್ದಾರೆ. ಬೈಲಾ ಉಲ್ಲಂಘಿಸಿ ಸಂಘವನ್ನು ನಿಯಮಬಾಹಿರವಾಗಿ ಪುನರ್‌ ರಚಿಸುವ ಸಂಚು ನಡೆದಿದೆ. ಈ ಸಂಚಿನಲ್ಲಿ ಸಂಘದ ಅಧ್ಯಕ್ಷ ಶರವಣ ಸಹ ಶಾಮೀಲಾಗಿದ್ದಾರೆ. ಇವರ ಕುತಂತ್ರದಿಂದಲೇ ಸಂಘ ಸೂಪರ್‌ ಸೀಡ್ ಆಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಂಘದ ಸದಸ್ಯರಾದ ತಿಮ್ಮರಾಯಪ್ಪ, ಭೂವಮ್ಮ, ರತ್ನಮ್ಮ, ಚೆನ್ನಮ್ಮ, ಸರಸಮ್ಮ, ಸಾಲಕ್ಕ, ನಾರಾಯಣಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT