ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಜಿಎಫ್‌ | ಇ ಸ್ವತ್ತಿಗಾಗಿ ಗ್ರಾಮ ಪಂಚಾಯಿತಿಯಲ್ಲಿ ಲಂಚ: ಕ್ರಮಕ್ಕೆ ಆಗ್ರಹ

Published 12 ಜನವರಿ 2024, 16:59 IST
Last Updated 12 ಜನವರಿ 2024, 16:59 IST
ಅಕ್ಷರ ಗಾತ್ರ

ಕೆಜಿಎಫ್‌: ತಾಲ್ಲೂಕಿನ ಕ್ಯಾಸಂಬಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಇ ಸ್ವತ್ತು ಮುದ್ರಣದ ಪ್ರತಿ ನೀಡಲು ಬಿಲ್ ಕಲೆಕ್ಟರ್‌ ಲಂಚ ತೆಗೆದುಕೊಳ್ಳುತ್ತಿರುವ ದೃಶ್ಯ ಮತ್ತು ಲಂಚಕ್ಕಾಗಿ ಆಗ್ರಹಿಸಿ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕ್ಯಾಸಂಬಳ್ಳಿ ಗ್ರಾಮ ಪಂಚಾಯಿತಿಗೆ ಸೇರುವ ನಾಗೇನಹಳ್ಳಿಯ ಕೃಷಿ ಕಾರ್ಮಿಕ ಅನುಕುಮಾರ್‌ ಮನೆಯ ಮೇಲೆ ಸಾಲ ಪಡೆಯಲು ಇ ಸ್ವತ್ತುವಿನ ಮುದ್ರಣದ ಪ್ರತಿ ಕೇಳಿದ್ದಾರೆ. ಮೂರು ಬಾರಿ ಗ್ರಾಮ ಪಂಚಾಯಿತಿ ಕಚೇರಿಗೆ ಹೋಗಿದ್ದರೂ, ಸರ್ವರ್ ಇಲ್ಲ ಎಂಬಿತ್ಯಾದಿ ಕಾರಣಗಳನ್ನು ಹೇಳಿ ವಾಪಸ್‌ ಕಳಿಸಿದ್ದಾರೆ. ನಂತರ ಅವರು ಬಿಲ್ ಕಲೆಕ್ಟರ್ ಕೆ.ಆರ್‌.ಸುಬ್ರಹ್ಮಣಿ ಅವರ ಬಳಿ ಮೊಬೈಲ್‌ನಲ್ಲಿ ಮಾತನಾಡಿದ್ದಾರೆ. ಮೊಬೈಲ್ ಸಂಭಾಷಣೆಯಲ್ಲಿ ಇ ಸ್ವತ್ತು ಮುದ್ರಣ ನೀಡಲು ಈಗ 2000 ರೂಪಾಯಿ ನಿಗದಿ ಮಾಡಲಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಶ್ಮೀ ಮೇಡಂ ಅವರು ಅವರ ಬಳಿ ಹಣ ಕೊಡಿಸು ಎಂದು ಕೇಳುತ್ತಿದ್ದಾರೆ ಎಂದು ವಿವರವಾಗಿ ಕಚೇರಿಯಲ್ಲಿ ನಡೆಯುತ್ತಿರುವ ಲಂಚಾವತಾರಗಳನ್ನು ಬಿಚ್ಚಿಟ್ಟಿದ್ದಾರೆ.

ಪಂಚಾಯಿತಿ ಕಚೇರಿಗೆ ಶುಕ್ರವಾರ ಸ್ನೇಹಿತರ ಜೊತೆ ಹೋದ ಅನುಕುಮಾರ್‌ ಪುನಃ ಇ ಸ್ವತ್ತು ಮುದ್ರಣದ ಪ್ರತಿ ಕೇಳಿದ್ದಾರೆ. ಅದಕ್ಕೆ ಮುನ್ನ ಸುಬ್ರಹ್ಮಣಿ ಅವರಿಗೆ ಒಂದು ಸಾವಿರ ರೂಪಾಯಿ ಡಿಜಿಟಲ್‌ ಪಾವತಿ ಮಾಡಿದ್ದಾರೆ. ಅದನ್ನು ಕಚೇರಿಯಲ್ಲಿ ಸುಬ್ರಹ್ಮಣಿ ಅವರಿಗೆ ತೋರಿಸಿದಾಗ, ಅವರು ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ. ನಂತರ ಇನ್ನೂ 1200 ರೂಪಾಯಿ ನೀಡಿದ ಮೇಲೆ ಕೇವಲ ಎರಡು ಗಂಟೆಗಳಲ್ಲಿ ಇ ಸ್ವತ್ತು ಪ್ರತಿಯನ್ನು ನೀಡಿದ್ದಾರೆ.

ಸರ್ಕಾರ ಇ ಸ್ವತ್ತು ಪ್ರತಿಗೆ ಕೇವಲ 50 ರೂಪಾಯಿ ನಿಗದಿ ಮಾಡಿದೆ. ಆದರೆ ಅಧಿಕಾರಿಗಳು 2000 ರೂಪಾಯಿಗಳನ್ನು ನಿಗದಿ ಮಾಡಿದ್ದಾರೆ. ಬಡವರು ಎಲ್ಲಿಂದ ಹಣ ಹೊಂದಾಣಿಕೆ ಮಾಡಿಕೊಳ್ಳವುದು, ಮೇಲಾಧಿಕಾರಿಗಳಿಗೆ ಮಾಹಿತಿ ಇದ್ದರೂ ಕಣ್ಣುಮುಚ್ಚಿ ಕುಳಿತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಕೂಡಲೇ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅಂಬೇಡ್ಕರ್ ಯುವ ಸೇನೆಯ ಮುಖಂಡ ಶ್ರೀನಿವಾಸ್ ಒತ್ತಾಯಿಸಿದ್ದಾರೆ.

ಇ ಸ್ವತ್ತು ಪ್ರತಿ ಪಡೆಯಲು ಅನುಕುಮಾರ್ ಹೆಚ್ಚಿಗೆ ಹಣವನ್ನೇನೂ ಕೇಳಿಲ್ಲ. ಅವರು ನೀಡಿರುವ ಎರಡು ಸಾವಿರ ರೂಪಾಯಿಗೆ ಬಿಲ್ ಹಾಕಲಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಶ್ಮಿ ತಿಳಿಸಿದ್ದಾರೆ.

ನೋಟಿಸ್‌ ಜಾರಿ ಮಾಡಲಾಗಿದೆ
ಕ್ಯಾಸಂಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಣ ಪಡೆಯುತ್ತಿರುವ ದೃಶ್ಯಾವಳಿಯ ವಿಡಿಯೋ ಗಮನಿಸಿದ್ದೇನೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಬಿಲ್ ಕಲೆಕ್ಟರ್ ಅವರಿಗೆ ಕಾರಣ ಕೇಳುವ ನೋಟಿಸ್‌ ಜಾರಿ ಮಾಡಲಾಗಿದೆ. ಒಂದು ದಿನದಲ್ಲಿ ಉತ್ತರ ನೀಡುವಂತೆ ಕೇಳಲಾಗಿದೆ. ನಂತರ ಅವರ ವಿರುದ್ಧ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವರದಿ ನೀಡುವುದಾಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಹರ್ತಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT