ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ | ನೂತನ ಸಂಸದ ಮಲ್ಲೇಶ್‌ ಬಾಬು ಮೇಲೆ ನಿರೀಕ್ಷೆಯ ಭಾರ

ಕ್ಷೇತ್ರದ ಶಾಸಕರು, ನೂತನ ಸಂಸದರು ಹೊಂದಿಕೊಂಡು ಕೆಲಸ ಮಾಡುವರೇ?
Published 9 ಜೂನ್ 2024, 7:18 IST
Last Updated 9 ಜೂನ್ 2024, 7:18 IST
ಅಕ್ಷರ ಗಾತ್ರ

ಕೋಲಾರ: ರಾಜಧಾನಿ ಬೆಂಗಳೂರಿಗೆ ಹತ್ತಿರವಿದ್ದರೂ ಕೋಲಾರ ಜಿಲ್ಲೆ ಅಭಿವೃದ್ಧಿ ಆಗಿಲ್ಲ, ಬಹಳ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ರಾಜ್ಯದಲ್ಲಿ ಸರ್ಕಾರ ಬದಲಾದರೂ, ಸಂಸದರ ಬದಲಾದರೂ ಜಿಲ್ಲೆ ಹಣೆಬರಹ ಮಾತ್ರ ಬದಲಾಗಿಲ್ಲ ಎಂದು ಜನರ ದೂರು.

ಉದ್ಯೋಗ, ಉದ್ಯಮ, ವಹಿವಾಟು, ಶಿಕ್ಷಣ, ಆಸ್ಪತ್ರೆ ಸೇರಿದಂತೆ ಕೋಲಾರದ ಜನ ಹೆಚ್ಚು ಅವಲಂಬಿತವಾಗಿರುವುದು ಬೆಂಗಳೂರಿನ ಮೇಲೆಯೇ.

ಸಮಸ್ಯೆಗಳನ್ನೇ ಹೊದ್ದು ಮಲಗಿದಂತಿರುವ ಕೋಲಾರ ಕ್ಷೇತ್ರಕ್ಕೆ ನೂತನ ಸಂಸದರಾಗಿರುವ ಎಂ.ಮಲ್ಲೇಶ್‌ ಬಾಬು ಮುಂದೆ ಈಗ ಬೆಟ್ಟದಷ್ಟು ಸವಾಲು ಇದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿರವುದು, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಡ ಇರುವುದು ಕೂಡ ಮತ್ತೊಂದು ಸವಾಲು. ಹತ್ತು ವರ್ಷಗಳ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಲಾರಕ್ಕೆಂದೇ ವಿಶೇಷ ಯೋಜನೆ ಬಂದಿಲ್ಲ.

ಕ್ಷೇತ್ರದಲ್ಲಿ ಐವರು ಕಾಂಗ್ರೆಸ್‌ ಶಾಸಕರು, ಮೂವರು ಜೆಡಿಎಸ್‌ ಶಾಸಕರು ಇದ್ದಾರೆ. ಹಿಂದಿನ ಬಿಜೆಪಿ ಸಂಸದ ಎಸ್‌.ಮುನಿಸ್ವಾಮಿ ಹಾಗೂ ಕಾಂಗ್ರೆಸ್‌ ಶಾಸಕರು ಪದೇಪದೇ ವಾಗ್ದಾಳಿಯಲ್ಲಿ ತೊಡಗಿದ್ದರು. ಒಂದು ಪ್ರಕರಣ ಹೊಡೆದಾಟ ಹಂತಕ್ಕೂ ತಲುಪಿತ್ತು. ಹೀಗಾಗಿ, ಕ್ಷೇತ್ರದ ಶಾಸಕರು ಹಾಗೂ ನೂತನ ಸಂಸದರು ಹೊಂದಿಕೊಂಡು ಕೆಲಸ ಮಾಡುವರೇ ಎಂಬ ಪ್ರಶ್ನೆಯೂ ಜನರಲ್ಲಿದೆ.

ಇದರ ಹೊರತಾಗಿಯೂ ಜೆಡಿಎಸ್‌ನ ಮಲ್ಲೇಶ್‌ ಬಾಬು ಅವರ ಮೇಲೆ ಕ್ಷೇತ್ರದ ಜನರ ನಿರೀಕ್ಷೆಯ ಭಾರವಿದೆ. ಪ್ರಮುಖವಾಗಿ ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ಇದೆ. ಯರಗೋಳ್‌ ಜಲಾಶಯದ ಉಪಯೋಗ ಮೂರು ಪಟ್ಟಣಗಳಿಗೆ ಸೀಮಿತವಾಗಿದೆ. ಎತ್ತಿನ ಹೊಳೆ ಯೋಜನೆ ಕುಂಟುತ್ತಾ ಸಾಗಿದೆ.

ಬಯಲು ಸೀಮೆಯ ಜಿಲ್ಲೆಗಳ ಕುಡಿಯುವ ನೀರಿನ ಕೊಳವೆ ಬಾವಿಗಳಲ್ಲಿ ಯುರೇನಿಯಂ ಪತ್ತೆಯಾಗಿದ್ದು, ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಿದೆ. ಅದಕ್ಕಾಗಿ ಕೃಷ್ಣ–ಪೆನ್ನಾರ್‌ ನದಿ ಜೋಡಣೆ ಮಾಡಿ ರಾಜ್ಯದ ಪೆನ್ನಾರ್‌ ನದಿಪಾತ್ರದ ರೈತರಿಗೆ ನೀರು ಕೊಡಬೇಕು ಎಂಬುದು ನೀರಾವರಿ ಹೋರಾಟಗಾರರು ಆಗ್ರಹ. ಅದಕ್ಕಾಗಿ ಈಗಾಗಲೇ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ.

ಇನ್ನು ಎಪಿಎಂಸಿ ಮಾರುಕಟ್ಟೆಗೆ ಜಾಗ ಕೊಡಿಸುವ ವಿಚಾರವಾಗಿ ಹಿಂದಿನ ಸಂಸದ ಮುನಿಸ್ವಾಮಿ ಪ್ರಯತ್ನ ಹಾಕಿದ್ದರು. ಆದರೆ, ಅದರಲ್ಲಿ ಅವರು ಯಶಸ್ಸು ಕಾಣಲಿಲ್ಲ. ತಾಲ್ಲೂಕಿನ ಕಪರಸಿದ್ದನಹಳ್ಳಿ ಹಾಗೂ ಮಡೇರಹಳ್ಳಿಯಲ್ಲಿ ಗುರುತಿಸಿದ್ದ ಜಾಗಕ್ಕೆ ಕೇಂದ್ರ ಸರ್ಕಾರದಿಂದ ಹಸಿರು ನಿಶಾನೆ ಕೊಡಿಸಲು ಸಾಧ್ಯವಾಗಲಿಲ್ಲ. ಈಗ ಹೊಸ ಜಾಗದ ಹುಡುಕಾಟ ನಡೆಯುತ್ತಿದೆ.

ಕೋಲಾರದಿಂದ ಟೊಮೆಟೊ, ತರಕಾರಿ, ಹೂವು ಶ್ರೀನಿವಾಸಪುರದಿಂದ ಮಾವು ಸಾಗಿಸಲು ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲವಾಗಿದೆ. ಹೆಚ್ಚುವರಿ ರೈಲು, ಗೂಡ್ಸ್‌ ರೈಲು ಕಲ್ಪಿಸಿ ರೈತರಿಗೆ ಅನುಕೂಲ ಮಾಡಬೇಕಿದೆ. ‌ಬೇಗನೇ ಹಾಳಾಗುವ ಟೊಮೆಟೊ ಹಾಗೂ ಮಾವು ಸಾಗಿಸಲು ಗೂಡ್ಸ್‌ ರೈಲಿನ ವ್ಯವಸ್ಥೆ ಇದ್ದರೆ ಉತ್ತರ ಭಾರತ ಹಾಗೂ ಇನ್ನಿತರ ಕಡೆಗೆ ತ್ವರಿತವಾಗಿ ಸಾಗಿಸಬಹುದು ಎಂಬುದು ರೈತರ ಆಗ್ರಹವಾಗಿದೆ.

ರಾಜ್ಯ ಸರ್ಕಾರವಿದ್ದರೂ ಅಭಿವೃದ್ಧಿ ವಿಚಾರದಲ್ಲಿ ಜಿಲ್ಲೆಗೆ ಬಜೆಟ್‌ನಲ್ಲಿ ಏನೇನೂ ಸಿಕ್ಕಿಲ್ಲ. ಕೆಜಿಎಫ್‌ನ ಬಿಜಿಎಂಎಲ್‌ ಜಾಗದಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪಿಸಲು, ಕೋಲಾರದಲ್ಲಿ ರಿಂಗ್‌ ರಸ್ತೆ ನಿರ್ಮಾಣಕ್ಕೆ ಮಾತ್ರ ಅನುಮತಿ ಲಭಿಸಿದೆ. ಇನ್ನುಳಿದಂತೆ ವೈದ್ಯಕೀಯ ಕಾಲೇಜು, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಕೆ.ಸಿ.ವ್ಯಾಲಿ ಮೂರನೇ ಹಂತದ ಶುದ್ಧೀಕರಣ ಘಟಕ ಸ್ಥಾಪನೆ ವಿಚಾರ ನನೆಗುದಿಗೆ ಬಿದ್ದಿವೆ.

ಪ್ರಮುಖ ಸವಾಲುಗಳು

 • ಶುದ್ಧ ಕುಡಿಯುವ ನೀರು ಪೂರೈಕೆಗೆ ನೀರಾವರಿ ಯೋಜನೆ

 • ಕೋಲಾರಕ್ಕೆ ಕೃಷ್ಣಾ ನದಿ ನೀರು ತರುವುದು

 • ಮಾವು, ಟೊಮೆಟೊ ಸಂಸ್ಕರಣ ಘಟಕ, ಶಿಥಲೀಕರಣ ಘಟಕ ಸ್ಥಾಪನೆ

 • ಟೊಮೆಟೊ, ಮಾವು ಸಾಗಣೆಗೆ ವ್ಯವಸ್ಥೆ

 • ವೈದ್ಯಕೀಯ ಕಾಲೇಜು ಸ್ಥಾಪನೆ, ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ

 • ಕೆಜಿಎಫ್‌: ಬಿಜಿಎಂಎಲ್‌ ಕಾರ್ಮಿಕರಿಗೆ ಬಾಕಿ ಹಣ ‌ಪಾವತಿಸಬೇಕು

 • ಎಪಿಎಂಸಿ ಮಾರುಕಟ್ಟೆಗೆ ಜಾಗ ಸಮಸ್ಯೆ ನಿವಾರಣೆ

 • ಎನ್‌ಎಚ್‌ 75: ಆರು ಪಥ ವಿಸ್ತರಣೆಗೆ ಹಣ ತಂದು ಕಾಮಗಾರಿ ಪೂರ್ಣ ಗೊಳಿಸುವುದು

 • ಯುವ ಜನತೆಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಲು ಯೋಜನೆ

 • ಕೋಲಾರ‌ದಲ್ಲೂ ಕೇಂದ್ರೀಯ ವಿದ್ಯಾಲಯ ಸ್ಥಾಪನೆ (ಕೆಜಿಎಫ್‌ನಲ್ಲಿದೆ)

 • ಪ್ರವಾಸಿ ತಾಣಗಳ ಅಭಿವೃದ್ಧಿ

ಎಲ್ಲರ ಬೆಂಬಲದೊಂದಿಗೆ ಅಭಿವೃದ್ಧಿ

ಕೋಲಾರ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್‌ ಶಾಸಕರಿಂದಲೂ ಬೆಂಬಲ ಸಿಗುವ ವಿಶ್ವಾಸವಿದೆ. ಯಾವುದೇ ಪಕ್ಷದವರು ಗೆದ್ದರೂ ಜನರಿಗೆ ಕೆಲಸ ಮಾಡಿಕೊಡುವುದೇ ಎಲ್ಲರ ಉದ್ದೇಶ. ಅಭಿವೃದ್ಧಿ ವಿಚಾರ ಬಂದಾಗ ಪಕ್ಷಗಳನ್ನು ಆಚೆಗಿಟ್ಟು ಜನತೆಗೆ ಒಳ್ಳೆಯದು ಮಾಡಬೇಕು. ಯುವಕರಿಗೆ ಉದ್ಯೋಗ, ನೀರಾವರಿ ಯೋಜನೆ ಜಾರಿ ನನ್ನ ಮೊದಲ ಆದ್ಯತೆ. ಎಚ್‌.ಡಿ.ಕುಮಾರಸ್ವಾಮಿ ಸಚಿವರಾಗಬಹುದೆಂಬ ಚರ್ಚೆ ಇದೆ, ಅವರ ನೆರವಿನಿಂದ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕುತ್ತೇವೆ- ಎಂ.ಮಲ್ಲೇಶ್‌ ಬಾಬು, ನೂತನ ಸಂಸದ, ಕೋಲಾರ

ಇಎಸ್‌ಐ ಆಸ್ಪತ್ರೆ ಸ್ಥಾಪನೆ ಯಾವಾಗ?

ನರಸಾಪುರ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ಇಎಸ್‌ಐ ಆಸ್ಪತ್ರೆ ಸ್ಥಾಪಿಸುವ ಯೋಜನೆ ಇದೆ. ಆದರೆ, ಅನುದಾನ ಬಿಡುಗಡೆ ಹಾಗೂ ನಂತರದ ಪ್ರಕ್ರಿಯೆ ನಡೆದಿಲ್ಲ.‌ ನರಸಾಪುರ ಹಾಗೂ ವೇಮಗಲ್‌ನಲ್ಲಿ ಕೈಗಾರಿಕೆಗಳು ಹೆಚ್ಚು ಇರುವುದರಿಂದ 50 ಹಾಸಿಗೆಗಳ ಇಎಸ್‌ಐ ಆಸ್ಪತ್ರೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದರಿಂದ ಸುಮಾರು 80 ಸಾವಿರ ಕಾರ್ಮಿಕರಿಗೆ ಉಪಯೋಗವಾಗಲಿದೆ ಎಂದು ಅಂದಾಜಿಸಲಾಗಿದೆ.

ರೈಲ್ವೆ ವರ್ಕ್‌ಶಾಪ್‌ ಕನಸು ಈಡೇರುವುದೇ?

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ರೈಲ್ವೆ ವರ್ಕ್‌ಶಾಪ್‌ ಸ್ಥಾಪಿಸುವ ಘೋಷಣೆ ಹಲವು ವರ್ಷಗಳಿಂದ ಕನಸಾಗಿಯೇ ಉಳಿದಿದೆ.

ರೈಲ್ವೆ ವರ್ಕ್‌ಶಾಪ್‌ ಸ್ಥಾಪನೆಗೆ ಅನುದಾನ ಬಿಡುಗಡೆ, ಕೋಲಾರ–ಬೆಂಗಳೂರು ನೇರ ರೈಲು ಮಾರ್ಗ ಯೋಜನೆ ಘೋಷಣೆ ಯಾವಾಗ ಎಂಬುದು ಜಿಲ್ಲೆಯ ಜನರ ಪ್ರಶ್ನೆ.

ಎಸ್‌.ಮುನಿಸ್ವಾಮಿ ಸಂಸದರಾಗಿದ್ದಾಗ ಪದೇಪದೇ ಪ್ರಸ್ತಾಪ ಮಾಡುತ್ತಿದ್ದರೂ ಯೋಜನೆ ಪ್ರಗತಿ ಕಂಡಿಲ್ಲ. ಅನುದಾನ ಬಿಡುಗಡೆ ಸಂಬಂಧ ಪಿಂಕ್‌ ಬುಕ್‌ನಲ್ಲಿಯೂ ನಮೂದಾಗಿಲ್ಲ. ವರ್ಕ್‌ಶಾಪ್‌ ಸ್ಥಾಪನೆಗೆ ಜಾಗ ವಿಚಾರದಲ್ಲಿ ರಾಜ್ಯ ಸರ್ಕಾರವೂ ಸ್ಪಂದಿಸಿಲ್ಲ.

ಯುಪಿಎ ಸರ್ಕಾರದ ಅವಧಿಯಯಲ್ಲಿ ‘ರೈಲ್ವೆ ಕೋಚ್‌ ಫ್ಯಾಕ್ಟರಿ’ ನಿರ್ಮಿಸುವ ಘೋಷಣೆ ಮಾಡಲಾಗಿತ್ತು. 2020–21ರ ಬಜೆಟ್‌ನಲ್ಲಿ ಕೋಚ್‌ ಫ್ಯಾಕ್ಟರಿ ಹೋಗಿ 400 ಎಕರೆ ಜಾಗದಲ್ಲಿ ₹ 495 ಕೋಟಿ ವೆಚ್ಚದಲ್ಲಿ ‘ರೈಲ್ವೆ ವರ್ಕ್‌ಶಾಪ್‌’ ಸ್ಥಾಪಿಸುವ ಬಗ್ಗೆ ಘೋಷಣೆ ಮಾಡಲಾಗಿತ್ತು.

ಕೋಲಾರದಿಂದ ಬೆಂಗಳೂರಿಗೆ ನೇರ ರೈಲು ಮಾರ್ಗ

ಕೋಲಾರ ನಗರದಿಂದ ಬೆಂಗಳೂರಿಗೆ ಸರಿಯಾಗಿ ರೈಲಿನ ವ್ಯವಸ್ಥೆ ಇಲ್ಲ. ಹಿಂದೆ ಘೋಷಿಸಿದ್ದ ಯೋಜನೆಗಳು ಜಾರಿ ಆಗಿಲ್ಲ. ಹೆಚ್ಚುವರಿ ರೈಲು ಸಂಚಾರಕ್ಕೆ ಆಗ್ರಹ ವ್ಯಕ್ತವಾಗುತ್ತಿದ್ದರೂ ಈ ವರೆಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಚಿಂತಾಮಣಿ ಮಾರ್ಗವಾಗಿ ಬೆಂಗಳೂರಿಗೆ ಎರಡು ರೈಲುಗಳು ಸಂಚರಿಸುತ್ತಿವೆ. ಇದರಿಂದ ಪ್ರಯಾಣ ವಿಳಂಬವಾಗುತ್ತಿದ್ದು, ಸಾರ್ವಜನಿಕರಿಗೆ ಅನುಕೂಲವಾಗುತ್ತಿಲ್ಲ. ಚಿಕ್ಕಬಳ್ಳಾಪುರಕ್ಕೆ ಸಂಚರಿಸುತ್ತಿರುವ ಹೆಚ್ಚುವರಿ ರೈಲುಗಳನ್ನು ಕೋಲಾರಕ್ಕೂ ವಿಸ್ತರಿಸಬೇಕು, ಕೋಲಾರ–ಬೆಂಗಳೂರು ನೇರ ರೈಲು ಮಾರ್ಗ ನಿರ್ಮಿಸಬೇಕೆಂಬ ಒತ್ತಡ ಹೆಚ್ಚುತ್ತಿದೆ.

ಮುಳಬಾಗಿಲಿಗೆ ರೈಲಿನ ವ್ಯವಸ್ಥೆಯೇ ಇಲ್ಲ. ಸರ್ವೇ ಮಾಡಿದ್ದು, ನನೆಗುದಿಗೆ ಬಿದ್ದಿದೆ. ಈ ಬಗ್ಗೆ ಹೊಸ ಸಂಸದರು ಗಮನ ಹರಿಸಬೇಕೆಂಬ ಒತ್ತಡ ಆ ಭಾಗದ ಜನರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT