ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಜಿಎಫ್‌ | ನಿವೇಶನ ಅರ್ಜಿಗಾಗಿ ಮುಗಿಬಿದ್ದ ಸಾರ್ವಜನಿಕರು

ಸರ್ಕಾರದ ಎಲ್ಲಾ ಯೋಜನೆಗಳನ್ನು ಜನತೆಗೆ ತಲುಪಿಸಲು ವಾರ್ಡ್‌ವಾರು ಕಾರ್ಯಕ್ರಮ ಆಯೋಜನೆ
Published 5 ಮಾರ್ಚ್ 2024, 14:50 IST
Last Updated 5 ಮಾರ್ಚ್ 2024, 14:50 IST
ಅಕ್ಷರ ಗಾತ್ರ

ಕೆಜಿಎಫ್‌: ಗ್ಯಾರಂಟಿ ಯೋಜನೆ ಅನುಷ್ಠಾನ ಕಾರ್ಯಕ್ರಮದಲ್ಲಿ ಶಾಸಕಿ ರೂಪಕಲಾ ನಗರಸಭೆಯಿಂದ ವಿತರಿಸುವ ನಿವೇಶನ ಅರ್ಜಿ ವಿತರಿಸುವಾಗ ಅರ್ಜಿಗಾಗಿ ಸಾರ್ವಜನಿಕರು ಮುಗಿಬಿದ್ದರು.

ಅರ್ಜಿ ವಿತರಿಸಿ ರಾಬರ್ಟಸನ್‌ಪೇಟೆ ನಗರಸಭೆ ವ್ಯಾಪ್ತಿಗೆ ಸೇರುವ ಎಂಟು ವಾರ್ಡ್‌ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶಾಸಕಿ ರೂಪಕಲಾ ಅವರು, ಸರ್ಕಾರದ ಎಲ್ಲಾ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ಸರ್ಕಾರ ಮನೆ ಬಾಗಿಲಿಗೆ ಬರುವ ಉದ್ದೇಶದಿಂದ ವಾರ್ಡುವಾರು ಈ ರೀತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳ ನಿವಾರಣೆಗಾಗಿ ಸರ್ಕಾರಿ ಕಚೇರಿಗೆ ಅಲೆಯುವ ಬದಲು ಎಲ್ಲಾ ಅಧಿಕಾರಿಗಳು ಒಂದೆಡೆ ಖುದ್ದಾಗಿ ಹಾಜರಿದ್ದು, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.

ಕಾಂಗ್ರೆಸ್‌ ಪಕ್ಷವು ಆಡಳಿತಕ್ಕೆ ಬಂದ ಕೇವಲ ಆರು ತಿಂಗಳಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿತು. ಇದರಿಂದ ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸುತ್ತಿವೆ. ವಿಶೇಷವಾಗಿ ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆಗಳಿಂದ ಮಹಿಳೆಯರಿಗೆ ತಮ್ಮ ಕುಟುಂಬಗಳನ್ನು ಪೋಷಿಸಿಕೊಳ್ಳಲು ಶಕ್ತಿ ತುಂಬಿದಂತಾಗಿದೆ ಎಂದು ತಿಳಿಸಿದರು.

ಮುಖಂಡ ನೂರಿ ಶಹಜಾದ ಮಾತನಾಡಿ, ಆಂಡರಸನ್‌ಪೇಟೆಯಲ್ಲಿ ನಗರಸಭೆಗೆ ಸೇರಿದ ಜಾಗವನ್ನು ಅಕ್ರಮವಾಗಿ ನಗರಸಭೆಯ ಮಾಜಿ ಸದಸ್ಯರೊಬ್ಬರು ಒತ್ತುವರಿ ಮಾಡಿಕೊಂಡಿದ್ದಾರೆ. ನ್ಯಾಯಾಲಯ ಕೂಡ ಈ ಜಾಗ ಸರ್ಕಾರಕ್ಕೆ ಸೇರಿದ್ದು ಎಂದು ತೀರ್ಪು ನೀಡಿದೆ. ಅದನ್ನು ಸಾರ್ವಜನಿಕ ಉದ್ಯಾನಕ್ಕೆ ಮೀಸಲಿಟ್ಟು, ಅಭಿವೃದ್ಧಿ ಮಾಡಬೇಕು ಎಂದು ಮನವಿ ಮಾಡಿದರು.

ನಗರಸಭೆ ಮಾಜಿ ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ, ನಗರಸಭೆ ಆಯುಕ್ತ ಪವನ್‌ಕುಮಾರ್‌, ಸಿಡಿಪಿಒ ರಾಜೇಶ್‌, ಬೆಸ್ಕಾಂ ಎಇಇ ಹೇಮಲತಾ ಇತರ ಇಲಾಖೆಗಳ ಅಧಿಕಾರಿಗಳು, ನಗರಸಭೆ ಸದಸ್ಯರು ಹಾಜರಿದ್ದರು.

ಅನ್ಯಭಾಷೆ ಭಾಷಣ ಸಮರ್ಥನೆ ಹಳ್ಳಿಗಳಿಗೆ ಹೋದರೆ ನಾನು ತೆಲುಗು ಮಾತನಾಡುತ್ತೇನೆ. ಕೆಜಿಎಫ್‌ಗೆ ಬಂದರೆ ತಮಿಳು ಮಾತನಾಡುತ್ತೇನೆ. ಅದರಲ್ಲಿ ಸಮಸ್ಯೆ ಏನಿದೆ. ಸರ್ಕಾರ ಏನು ಮಾಡಿದೆ ಎಂಬುದನ್ನು ಮುಗ್ದ ಜನರಿಗೆ ನಾನು ಹೇಗೆ ಅರ್ಥ ಮಾಡಿಸುವುದು. ನನ್ನನ್ನು ನಂಬಿ ಅವರು ಮತ ಹಾಕಿದ್ದಾರೆ. ಮೇಡಂ ತಮಿಳು ಮಾತನಾಡುತ್ತಾರೆ ಎಂದು ದೂರುತ್ತಾರೆ. ಮಾತನಾಡುವುದರಲ್ಲಿ ತಪ್ಪೇನಿದೆ. ಎಲ್ಲಿ ಕನ್ನಡ ಗೊತ್ತಿಲ್ಲವೋ ಅಲ್ಲಿ ತಮಿಳು ಮಾತನಾಡುತ್ತೇನೆ. ಮಾತನಾಡುವುದಕ್ಕೆ ನನಗೆ ಹಕ್ಕಿದೆ. ಅಭಿಮಾನ ಪ್ರೀತಿ ಮನಸ್ಸಿನಲ್ಲಿರಬೇಕು ಎಂದು ತಾವು ಸರ್ಕಾರಿ ಕಾರ್ಯಕ್ರಮದಲ್ಲಿ ಅನ್ಯ ಭಾಷೆ ಮಾತನಾಡುವುದನ್ನು ಶಾಸಕಿ ರೂಪಕಲಾ ಸಮರ್ಥಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT