ಇಲ್ಲಿ ಓಡಾಡಲು ಬ್ಯಾಟರಿ ಕಡ್ಡಾಯ!

7
ಜವಾಬ್ದಾರಿ ಮರೆತ ರೈಲ್ವೆ ಇಲಾಖೆ, ಬೆಮಲ್ ನಗರದ ನಿವಾಸಿಗಳ ಪರದಾಟ

ಇಲ್ಲಿ ಓಡಾಡಲು ಬ್ಯಾಟರಿ ಕಡ್ಡಾಯ!

Published:
Updated:
Prajavani

ಕೆಜಿಎಫ್: ರಾತ್ರಿ ವೇಳೆ ಬರುವ ರೈಲಿನಿಂದ ಇಳಿಯಬೇಕಾದರೆ ಇಲ್ಲವೇ ಹತ್ತಬೇಕಾದರೆ ಕಡ್ಡಾಯವಾಗಿ ಬ್ಯಾಟರಿ ಹೊಂದಿರಲೇ ಬೇಕು. ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಇದು ಬೆಮಲ್ ನಗರದಲ್ಲಿರುವ ರೈಲ್ವೆ ಸ್ಟೇಷನ್ ಪರಿಸ್ಥಿತಿ.

ಕೆಜಿಎಫ್‌ನ ಮಾರಿಕುಪ್ಪಂನಿಂದ ಬಂಗಾರಪೇಟೆ, ಬೆಂಗಳೂರಿನ ಕಡೆಗೆ ಹೋಗುವ ಎಲ್ಲ ರೈಲುಗಳು ಬೆಮಲ್ ನಗರದಲ್ಲಿ ನಿಲುಗಡೆ ಮಾಡುತ್ತವೆ. ಸಾವಿರಾರು ಮಂದಿ ಬೆಮಲ್ ನಗರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ರೈಲಿನಲ್ಲಿ ನಿತ್ಯ ಪ್ರಯಾಣಿಸುತ್ತಾರೆ. ರೈಲು ಬರುವ ಸಮಯದಲ್ಲಿ ಮಾತ್ರ ಸ್ಟೇಷನ್‌ ಸಿಬ್ಬಂದಿ ಹಾಜರಿರುತ್ತಾರೆ. ಉಳಿದ ಸಮಯದಲ್ಲಿ ನಿಲ್ದಾಣದಲ್ಲಿ ಒಬ್ಬ ನರಪಿಳ್ಳೆ ಕೂಡ ಇರುವುದಿಲ್ಲ. ಇದರಿಂದಾಗಿ ಬೆಮಲ್ ನಿಲ್ದಾಣ ರೈಲ್ವೆ ಇಲಾಖೆಯ ನಿರ್ಲಕ್ಷ್ಯಕ್ಕೆ ತುತ್ತಾಗಿದೆ.

ಎಲ್ಲೆಂದರಲ್ಲಿ ಕಾಣುವ ತ್ಯಾಜ್ಯ ವಸ್ತುಗಳು, ತಿಂದು ಬಿಸಾಕಿದ ಊಟದ ಎಲೆಗಳು, ಪ್ಲಾಸ್ಟಿಕ್ ರಾಶಿಗಳು, ಪ್ಲಾಟ್‌ಫಾರಂ ಬಿಟ್ಟು ಸ್ವಲ್ಪ ಆಚೆ ನಡೆದರೆ ಮೈಗೆ ತಾಕುವ ಮುಳ್ಳುಗಳು ಇವು ಸಾಮಾನ್ಯ ದೃಶ್ಯ. ಇಡೀ ನಿಲ್ದಾಣದಲ್ಲಿ ಒಂದು ಬೀದಿ ದೀಪ ಕೂಡ ಇಲ್ಲ. ಬೆಮಲ್ ಕಾರ್ಖಾನೆಯ ಸುಪರ್ದಿಯಲ್ಲಿ ಹಾಕಿರುವ ದೀಪದ ಕಿರಣಗಳು ಅಲ್ಲಲ್ಲಿ ಕಾಣಿಸಬಹುದು.

ಮುಂಜಾನೆ ಸೂರ್ಯೋದಯದ ಮುಂಚೆ ಬರುವ ಬೆಂಗಳೂರು ರೈಲು ಮತ್ತು ಸಂಜೆ ಮೇಲೆ ಬರುವ ಬೈಯಪ್ಪನಹಳ್ಳಿ ಮತ್ತು ಸ್ವರ್ಣ ರೈಲು ಕತ್ತಲಲ್ಲಿ ಇಲ್ಲಿಗೆ ಬರುತ್ತದೆ. ರೈಲಿನಲ್ಲಿ ಇಳಿಯುವ ಪ್ರಯಾಣಿಕರಿಗೆ ಎಲ್ಲಿ ಕಾಲಿಡಬೇಕೆಂದು ಕಾಣಿಸುವುದಿಲ್ಲ.

ಪ್ಲಾಟ್ ಫಾರಂ ಚಿಕ್ಕದಾಗಿರುವುದರಿಂದ ರೈಲಿನ ಕೆಲವೇ ಬೋಗಿಗಳು ಫ್ಲಾಟ್ ಫಾರಂನಲ್ಲಿ ನಿಲ್ಲುತ್ತದೆ. ಉಳಿದ ಬೋಗಿಗಳು ನಿಲ್ದಾಣದಿಂದ ಅತಿ ದೂರದಲ್ಲಿ ನಿಲ್ಲುತ್ತದೆ. ಕತ್ತಲಲ್ಲಿ ಅಲ್ಲಿಂದ ನಿಲ್ದಾಣಕ್ಕೆ ನಡೆದುಕೊಂಡು ಬರುವುದು ಮತ್ತು ಕತ್ತಲಲ್ಲಿ ರೈಲಿನಿಂದ ಇಳಿಯವುದು ದೊಡ್ಡ ಸಾಹಸವೇ ಆಗಿದೆ. ಕಳೆದ ವರ್ಷ ಪ್ಲಾಟ್ ಫಾರಂ ಹೊರಗೆ ನಿಂತ ರೈಲಿನಿಂದ ಇಳಿಯಲು ಹೋದ ಬೆಮಲ್ ಕಾರ್ಮಿಕರೊಬ್ಬರು ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಇನ್ನೂ ಹಸಿರಾಗಿಯೇ ಇದೆ.

ಸ್ಥಳೀಯ ಸಿಬ್ಬಂದಿ ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲವನ್ನೂ ಹಿರಿಯ ಅಧಿಕಾರಿಗಳ ಹೊಣೆಗಾರಿಕೆ ಎಂದು ತಪ್ಪಿಸಿಕೊಳ್ಳುತ್ತಾರೆ.

ನಗರದಿಂದ ಬೆಂಗಳೂರಿಗೆ ಹೊರಡುವ ಸ್ವರ್ಣ ರೈಲಿಗೆ 17 ಬೋಗಿಗಳಿವೆ. ಬೆಳಿಗ್ಗೆ ಮಾರಿಕುಪ್ಪಂನಿಂದ ಹೊರಟು ಬೆಂಗಳೂರಿಗೆ ಹೋಗುವ ರೈಲು ಬೆಮಲ್ ನಿಲ್ದಾಣಕ್ಕೆ ಬರುವ ಸಮಯದಲ್ಲಿ ಬೆಳಕಿರುತ್ತದೆ. ಬೆಳಕಿಲ್ಲದ ವೇಳೆಯಲ್ಲಿ ಪ್ಲಾಟ್ ಫಾರಂನಲ್ಲಿ ನಡೆದು ಬರುವುದು ಕೂಡ ಕಷ್ಟವೇ. ಚಾವಣಿ ಹಾಕಲು ಪಾಯ ಹಾಕಿ, ಅದರ ಮೇಲೆ ನೆಲದ ಮಟ್ಟದಿಂದ ಒಂದು ಅಡಿ ಕಬ್ಬಿಣದ ಕಂಬಿಗಳನ್ನು ಬಿಡಲಾಗಿದೆ. ಕತ್ತಲಲ್ಲಿ ನಡೆದುಬರುವ ಪ್ರಯಾಣಿಕರು ಕಂಬಿ ತಾಕಿ ಕೆಳಗೆ ಬಿದ್ದಿರುವ ಘಟನೆಗಳು ಸಾಕಷ್ಟಿವೆ ಎಂದು ರೈಲ್ವೆ ಪ್ರಯಾಣಿಕ ಶೇಖರಪ್ಪ ಹೇಳುತ್ತಾರೆ.

ರೈಲು ನಿಲ್ದಾಣ ಮೂಲಸೌಕರ್ಯಗಳಿಂದ ಕೂಡ ವಂಚಿತವಾಗಿದೆ. ಕುಡಿಯುವ ನೀರಿನ ಸೌಲಭ್ಯ ಇಲ್ಲ. ಶೌಚಾಲಯ ಇದ್ದರೂ, ಅದರೊಳಗೆ ಹೋಗಲು ಅಸಾಧ್ಯವಾದ ಪರಿಸ್ಥಿತಿ ಇದೆ. ಶೌಚಾಲಯ ಸುತ್ತಲೂ ಮುಳ್ಳುಗಳು ಬೆಳೆದುಕೊಂಡಿದೆ. ಚಾವಣಿ ಕೂಡ ಸ್ವಲ್ಪವೇ ಇದೆ. ಮಳೆ ಬಂದರೆ ಪ್ರಯಾಣಿಕರು ಮಳೆಯಲ್ಲಿ ನೆನೆಯಲೇ ಬೇಕು.

ಬೆಮಲ್ ರೈಲ್ವೆಗೆ ಆದಾಯ ತರುವ ನಿಲ್ದಾಣವಾಗಿಲ್ಲ. ಜನಪ್ರತಿನಿಧಿಗಳು ಒತ್ತಡ ಹೇರಿದರೆ ಅಭಿವೃದ್ಧಿ ಮಾಡುವುದು ಅಸಾಧ್ಯವೇನಲ್ಲ. ಒಮ್ಮೆ ಜನರಲ್ ಮಾನೇಜರ್ ಬಂದು ಸ್ಥಳ ತನಿಖೆ ಮಾಡಿ ಹೋಗಿದ್ದರು. ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದರು. ಆದರೆ ಅದು ಈಡೇರಿಲ್ಲ ಎಂದು ರೈಲ್ವೆ ಸಲಹಾ ಸಮಿತಿಯ ಮಾಜಿ ಸದಸ್ಯ ಕಿಶೋರ್ ಕುಮಾರ್ ಅಭಿಪ್ರಾಯ ಪಡುತ್ತಾರೆ.

*
ನಿಲ್ದಾಣದಲ್ಲಿ ದೀಪದ ವ್ಯವಸ್ಥೆ ಮಾಡುವುದು ರೈಲ್ವೆ ಇಲಾಖೆಯ ಜವಾಬ್ದಾರಿ. ದೀಪಗಳನ್ನು ಹೊರಭಾಗದಲ್ಲಿ ಹಾಕಿದರೂ ದುಷ್ಕರ್ಮಿಗಳು ದೀಪ ಒಡೆದು ವೈರ್ ಕಿತ್ತುಕೊಂಡು ಹೋಗುತ್ತಾರೆ.
-ಆಂಜನೇಯರೆಡ್ಡಿ, ಬೆಮಲ್ ಕಾರ್ಮಿಕ ಸಂಘದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !