ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ಜೂನ್‌ 4ಕ್ಕೆ ಮತ ಎಣಿಕೆಗೆ ಸಕಲ ಸಜ್ಜು: ಕೋಲಾರ ಜಿಲ್ಲಾಧಿಕಾರಿ

17 ಕೊಠಡಿ, 120 ಟೇಬಲ್‌, 414 ಸಿಬ್ಬಂದಿ
Published 1 ಜೂನ್ 2024, 15:17 IST
Last Updated 1 ಜೂನ್ 2024, 15:17 IST
ಅಕ್ಷರ ಗಾತ್ರ

ಕೋಲಾರ: ‘ಕೋಲಾರ ಮೀಸಲು ಲೋಕಸಭೆ ಕ್ಷೇತ್ರದ ಮತ ಎಣಿಕೆಗೆ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಜೂನ್‌ 4ರಂದು ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಕ್ರಂ ಪಾಷಾ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಶನಿವಾರ ಮತ ಎಣಿಕೆ ಪೂರ್ವ ಸಿದ್ಧತೆ ಸಂಬಂಧ ರಾಜಕೀಯ ಮುಖಂಡರ ಸಭೆ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ಶಾಂತಿಯುತವಾಗಿ ಹಾಗೂ ಯಶಸ್ವಿಯಾಗಿ ನಡೆದಿದೆ. ಎಂಟು ಕ್ಷೇತ್ರಗಳ ಮತಯಂತ್ರಗಳನ್ನು ಒಂದು ತಿಂಗಳಿಂದ 16 ಸ್ಟ್ರಾಂಗ್‌ ರೂಮ್‌ನಲ್ಲಿ ಇಟ್ಟು ಮೂರು ಹಂತದ ಭದ್ರತೆ ಒದಗಿಸಲಾಗಿತ್ತು. ದಿನದ 24 ಗಂಟೆಯೂ ನಿಗಾ ಇರಿಸಲಾಗಿತ್ತು’ ಎಂದರು.

‘ಸಿಬ್ಬಂದಿ ನಿಯೋಜನೆ, ಭದ್ರತೆ, ತರಬೇತಿ ಮೊದಲಾದ ಸಿದ್ಧತೆ ನಡೆದಿದೆ. 8 ವಿಧಾನಸಭಾ ಕ್ಷೇತ್ರದ ಮತಗಳು ಹಾಗೂ ಅಂಚೆ ಮತಗಳ ಎಣಿಕೆಗೆ ಒಟ್ಟು 17 ಕೊಠಡಿ, 120 ಟೇಬಲ್‌ ನಿಗದಿಪಡಿಸಲಾಗಿದೆ. 414 ಸಿಬ್ಬಂದಿ ನಿಯೋಜಿಸಲಾಗಿದೆ. ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಒಂದು ‌ಕೊಠಡಿ ನಿಗದಿಪಡಿಸಿದ್ದು, ಅದೇ ಕೊಠಡಿಯಲ್ಲಿ 14 ಟೇಬಲ್ ಹಾಕಲಾಗುವುದು. ಉಳಿದ ಕ್ಷೇತ್ರಕ್ಕೆ ತಲಾ ಎರಡು ‌ಕೊಠಡಿಗಳಿದ್ದು, ತಲಾ 7 ಟೇಬಲ್‌ ಹಾಕಲಾಗುವುದು. ಪ್ರವೇಶ ದ್ವಾರದಲ್ಲಿ ಕೋಲಾರ ಹಾಗೂ ಮಾಲೂರು ಕ್ಷೇತ್ರದ ಮತ ಎಣಿಕೆ, ಒಳಗಡೆ ಬಂಗಾರಪೇಟೆ, ಕೆಜಿಎಫ್‌ ಹಾಗೂ ಎರಡನೇ ಮಹಡಿಯಲ್ಲಿ ಇನ್ನುಳಿದ ನಾಲ್ಕು ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಮೊದಲ ಮಹಡಿಯಲ್ಲಿ ಸ್ಟ್ರಾಂಗ್‌ ರೂಮ್‌ ಇದ್ದು, ಯಾವುದೇ ಕೊಠಡಿಯಲ್ಲಿ ಎಣಿಕೆ ಇರುವುದಿಲ್ಲ. ಅಂಚೆ ಮತಗಳ ಎಣಿಕೆಗೆ ಎರಡು ಕೊಠಡಿ, 8 ಟೇಬಲ್‌ ನಿಗದಿಪಡಿಸಲಾಗಿದೆ. ಪ್ರತಿ ಟೇಬಲ್‌ಗೂ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ’ ಎಂದು ವಿವರಿಸಿದರು.

‘ಮೂರು ಹಂತಗಳಲ್ಲಿ ಮತ ಎಣಿಕೆ ಇರಲಿದೆ.‌ ಆರಂಭದಲ್ಲಿ ಅಂದರೆ 8 ಗಂಟೆಗೆ ಇಟಿಪಿಬಿಎಸ್, ಮನೆಯಿಂದಲೇ ಮತದಾನ ಮಾಡಿದವರದ್ದು, ಹೊರ ಜಿಲ್ಲೆಗಳ ಮತದಾರರು, ಅಗತ್ಯ ಸೇವೆ ಮತದಾರರದ್ದು, ಅಂಚೆ ಮತಗಳು ಸೇರಿ ಒಟ್ಟು 5,097 ಮತಪತ್ರಗಳ ಎಣಿಕೆ ನಡೆಯಲಿದೆ. ಅದಾದ ಬಳಿಕ ಮತಯಂತ್ರದಲ್ಲಿ ಇರುವ ಮತ ಎಣಿಕೆ ಆರಂಭವಾಗಲಿದೆ. ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಮತ ಎಣಿಕೆ (21) ಹೆಚ್ಚು ಸುತ್ತು ತೆಗೆದುಕೊಳ್ಳಲಿದೆ’ ಎಂದರು.

‘ಕಡ್ಡಾಯವಾಗಿ ಗುರುತಿನ ಚೀಟಿ ಇದ್ದವರಿಗೆ ಮಾತ್ರ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ನೀಡಲಾಗುವುದು. ಯಾರೂ ಮೊಬೈಲ್ ಒಳಗೆ ತರುವಂತಿಲ್ಲ. ಸಚಿವರು, ಶಾಸಕರು, ಪರಿಷತ್‌ ಸದಸ್ಯರು ಕೌಂಟಿಂಗ್ ಏಜೆಂಟ್ ಆಗುವಂತಿಲ್ಲ. ಜೂನ್‌ 4ರ ಬೆಳಿಗ್ಗೆ 6 ಗಂಟೆಯಿಂದ ಜೂನ್‌ 5ರ ಸಂಜೆ 6 ಗಂಟೆವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರಲಿದೆ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ್‌ ವಣಿಕ್ಯಾಳ್‌ ಮಾತನಾಡಿ, ‘ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 5 ವಿವಿ ಪ್ಯಾಟ್‌ ಯಂತ್ರಗಳ ಸ್ಲಿಪ್‌ಗಳನ್ನು ರಾಂಡಮ್ (ಚೀಟಿ ಎತ್ತುವ ಮೂಲ) ಆಗಿ ತಾಳೆ ನೋಡಲಾಗುತ್ತದೆ’ ಎಂದರು.

ಚುನಾವಣಾ ಘಟಕದ ಅಧಿಕಾರಿಗಳು, ಎನ್‌ಡಿಎ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್‌ ಬಾಬು ಸೇರಿದಂತೆ ಎರಡೂ ಪಕ್ಷಗಳ ಚುನಾವಣಾ ಏಜೆಂಟರು ಸಭೆಯಲ್ಲಿ ಭಾಗವಹಿಸಿದ್ದರು.

ಜೂನ್‌ 4ರಂದು ಬೆಳಿಗ್ಗೆ 8ರಿಂದ ಎಣಿಕೆ ಮೊದಲಿಗೆ ಅಂಚೆ ಮತದಾನ ಪರಿಗಣನೆ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ತಲಾ 14 ಮತ ಎಣಿಕೆ ಟೇಬಲ್‌

ಮತಯಂತ್ರ ಇಟ್ಟು ಸೀಲ್‌ ಆಗಿರುವ ಸ್ಟ್ರಾಂಗ್‌ ರೂಮ್‌ ಬಾಗಿಲನ್ನು ಜೂನ್‌ 4ರಂದು ಬೆಳಿಗ್ಗೆ 7 ಗಂಟೆಗೆ ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟರ ಸಮ್ಮುಖದಲ್ಲಿ ತೆರೆಯಲಾಗುವುದು
ಅಕ್ರಂ ಪಾಷಾ ಜಿಲ್ಲಾಧಿಕಾರಿ

ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಮತ ಎಣಿಕೆ ವಿಧಾನಸಭಾ ಕ್ಷೇತ್ರ; ಮತಗಟ್ಟೆ; ಕೊಠಡಿ ಟೇಬಲ್‌; ಸುತ್ತು ಶಿಡ್ಲಘಟ್ಟ; 244; 2; 14; 18 ಚಿಂತಾಮಣಿ; 271; 2; 14; 20 ಶ್ರೀನಿವಾಸಪುರ; 284; 2; 14; 21 ಮುಳಬಾಗಿಲು; 267; 2; 14; 20 ಕೆಜಿಎಫ್‌; 222; 2; 14; 16 ಬಂಗಾರಪೇಟೆ; 253; 2; 14; 19 ಕೋಲಾರ; 278; 1; 14; 20 ಮಾಲೂರು; 241; 2; 14; 18 ಅಂಚೆ ಮತ ಎಣಿಕೆ; 0; 2; 8; 0 ಒಟ್ಟು; 2060; 17; 120; 152

ವಿಜಯೋತ್ಸವಕ್ಕೆ ನಿರ್ಬಂಧ–ಎಸ್ಪಿ ‘ಜೂನ್‌ 3ರ ಸಂಜೆ 6 ಗಂಟೆಯಿಂದ ಜೂನ್‌ 4ರ ಸಂಜೆ 6 ಗಂಟೆವರೆಗೆ ಮತ ಎಣಿಕೆ ಕೇಂದ್ರದ 100 ಮೀಟರ್‌ ವ್ಯಾಪ್ತಿಯಲ್ಲಿ 144 ಸೆಕ್ಷನ್‌ನಡಿ ನಿಷೇಧಾಜ್ಞೆ ಇರಲಿದೆ. ಮತ ಎಣಿಕೆ ಕೇಂದ್ರದ ಬಳಿ ಮೆರವಣಿಗೆ ವಿಜಯೋತ್ಸವ ಪಟಾಕಿ ಸಿಡಿಸುವುದಕ್ಕೆ ಅವಕಾಶ ಇಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದರು. ‘ಮತ ಎಣಿಕೆ ದಿನ ಮುಂಜಾಗ್ರತೆ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗುವುದು. ಭದ್ರತೆಗೆ 354 ಪೊಲೀಸರನ್ನು ನಿಯೋಜಿಸಲಾಗುವುದು. 54 ಪೆಟ್ರೋಲಿಂಗ್‌ ತಂಡ ಹಾಗೂ ನಾಲ್ಕು ಕೆಎಸ್‌ಆರ್‌ಪಿ ತುಕಡಿ ಇರಲಿವೆ. 110 ಗೃಹ ರಕ್ಷಕ ದಳದವರನ್ನು ಟ್ರಾಫಿಕ್‌ಗೆ ನಿಯೋಜಿಸಲಾಗುವುದು’ ಎಂದರು. ‘ಮತ ಎಣಿಕೆ ದಿನ ಸರ್ಕಾರಿ ಪ್ರಥಮದರ್ಜೆ ಕಾಲೇಜು ಸೇರಿದಂತೆ ನಗರದ ವಿವಿಧೆಡೆ ಸಂಚಾರ ವ್ಯವಸ್ಥೆ ಬದಲಾಗಲಿದೆ. ಕಾಲೇಜಿನ ಮುಂಭಾಗದ ಬಂಗಾರಪೇಟೆ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದು ಮೆಥೋಡಿಸ್ಟ್ ಹಾಗೂ ಜೂನಿಯರ್ ಕಾಲೇಜಿನಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ. ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ. ಕಡ್ಡಾಯವಾಗಿ ಪಾಸ್‌ ಇದ್ದವರಿಗೆ ಮಾತ್ರ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ನೀಡಲಾಗುವುದು’ ಎಂದು ಹೇಳಿದರು.

ಒಂದು ಮತಗಟ್ಟೆಯಲ್ಲಿ ಇವಿಎಂನಲ್ಲೇ ಉಳಿದ ಅಣಕು ಮತ ‘ಮತದಾನ ದಿನ ಮುಳಬಾಗಿಲಿನ ಮತಗಟ್ಟೆ ಸಂಖ್ಯೆ 162ರಲ್ಲಿ (ಜಮ್ಮನಹಳ್ಳಿ) ಅಣಕು ಮತದಾನದ ಮತಗಳನ್ನು ಮತಯಂತ್ರದಿಂದ ತೆಗೆಯದೇ ಹಾಗೆಯೇ ಬಿಡಲಾಗಿದೆ. ಕ್ಷೇತ್ರದ ಒಟ್ಟು 2060 ಮತಗಟ್ಟೆಗಳಲ್ಲಿ ಒಂದರಲ್ಲಿ ಮಾತ್ರ ಸಿಬ್ಬಂದಿ ಈ ಪ್ರಮಾದ ಎಸಗಿದ್ದು ಇನ್ನುಳಿದ 2059 ಮತಗಟ್ಟೆಗಳಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ‌ಆದರೆ‌ ಮತ ಎಣಿಕೆ ವೇಳೆ ಅಣಕು ಮತಗಳನ್ನು ತೆಗೆದು ಎಣಿಕೆ ಮಾಡಲು ಅವಕಾಶವಿದೆ’ ಎಂದು ಅಕ್ರಂ ಪಾಷಾ ಹೇಳಿದರು. ‘ಕೆಲವೆಡೆ ಮತಯಂತ್ರ ಕೈಕೊಟ್ಟ ಕಾರಣ ಮತ್ತೊಂದು ಮತಯಂತ್ರ ಬಳಸಲಾಗಿದೆ. ಮತ ಎಣಿಕೆ ವೇಳೆ ಎರಡೂ ಯಂತ್ರಗಳಲ್ಲಿನ ಮತ ಎಣಿಕೆ ಮಾಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT