ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ಚಿತ್ರ ಇಲ್ಲ ಎಂಬ ನೆಪ: ಸ್ವಾಧೀನ ಪತ್ರಕ್ಕೆ ತಡೆ- ಆರೋಪ

ಸಂಸದ ಮುನಿಸ್ವಾಮಿ ವಿರುದ್ಧ ಸ್ಳಳೀಯ ನಿವಾಸಿಗಳ ಅಸಮಾಧಾನ
Published 16 ಫೆಬ್ರುವರಿ 2024, 13:42 IST
Last Updated 16 ಫೆಬ್ರುವರಿ 2024, 13:42 IST
ಅಕ್ಷರ ಗಾತ್ರ

ಕೆಜಿಎಫ್‌: ಎರಡು ದಶಕಗಳಿಂದ ವಾಸ ಮಾಡುತ್ತಿರುವ ಮನೆಗಳ ಸ್ವಾಧೀನ ಪತ್ರ ನೀಡಬೇಕೆಂದು ಗಣಿ ಕಾರ್ಮಿಕರು ಹೋರಾಟ ನಡೆಸುತ್ತಿದ್ದರೂ ಸ್ವಾಧೀನ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಇಲ್ಲ ಎಂಬ ಕಾರಣಕ್ಕೆ ಸಂಸದ ಎಸ್‌.ಮುನಿಸ್ವಾಮಿ ಪತ್ರ ವಿತರಣೆಗೆ ತಡೆ ಹಿಡಿದಿದ್ದಾರೆ ಎಂದು ಸಿಐಟಿಯು ಮುಖಂಡ ಎ.ಆರ್.ಬಾಬು ಆರೋಪಿಸಿದರು.

ರಾಬರ್ಟಸನ್‌ಪೇಟೆಯಲ್ಲಿ ಶುಕ್ರವಾರ ಸಿಐಟಿಯು ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಗಣಿ ಸಚಿವಾಲಯದಿಂದ ಸ್ವಯಂ ನಿವೃತ್ತಿ ಯೋಜನೆ ಪಡೆದ ಕಾರ್ಮಿಕರಿಗೆ ಅವರು ವಾಸ ಮಾಡುತ್ತಿರುವ ಮನೆಗಳನ್ನು ನೀಡಲು ಎಲ್ಲ ದಾಖಲೆ ಸಿದ್ಧಪಡಿಸಿಕೊಂಡಿದ್ದರೂ ಸ್ವಾಧೀನ ಪತ್ರದಲ್ಲಿ ಪ್ರಧಾನಿ ಮೋದಿ ಭಾವಚಿತ್ರ ಇಲ್ಲ ಎಂದು ಸಂಸದ ಎಸ್‌.ಮುನಿಸ್ವಾಮಿ ಕೆಲವೇ ಕಾರ್ಮಿಕರಿಗೆ ಮನೆ ಸ್ವಾಧೀನ ಪತ್ರ ನೀಡಿ, ಉಳಿದವುಗಳನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಗಣಿ ಪುನರಾರಂಭ ಮತ್ತು ಹೆಚ್ಚಿನ ಉದ್ಯೋಗಾವಕಾಶಕ್ಕೆ ಒತ್ತು ಕೊಡಲು ಒತ್ತಾಯ ನಿರಂತರವಾಗಿ ತರುತ್ತಿದ್ದರೂ, ಸಂಸದರು ಆಸಕ್ತಿ ತೋರುತ್ತಿಲ್ಲ ಎಂದು ದೂರಿದರು.

ಬೆಮಲ್‌ ಖಾಸಗೀಕರಣಕ್ಕೆ ಒತ್ತು ನೀಡಲಾಗುತ್ತಿದೆ. ಬೆಮಲ್‌ನಲ್ಲಿ ಕಾಯಂ ನೌಕರರಿಗೆ ಸಮನಾಗಿ ದುಡಿಯುತ್ತಿರುವ ಕಾಂಟ್ರಾಕ್ಟ್‌ ಆಪರೇಟರ್ಸ್‌ ಅರ್ಹತೆಗೆ ತಕ್ಕಷ್ಟು ಸಂಬಳ ನೀಡುತ್ತಿಲ್ಲ. ಸವಲತ್ತು ಕೇಳಿದರೆ ಅವರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಕಾರ್ಮಿಕರನ್ನು ಗುಲಾಮರ ರೀತಿ ನೋಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ದೇಶದಲ್ಲಿ ಕಾರ್ಮಿಕರು ಮತ್ತು ರೈತರ ಸ್ಥಿತಿ ಶೋಚನೀಯವಾಗಿದೆ. ದೇಶವನ್ನು ಕಟ್ಟಿದವರು ಈ ಎರಡು ವರ್ಗದವರು ಎಂಬುದನ್ನು ಸರ್ಕಾರ ಮರೆತಿದೆ. ಸಮಸ್ಯೆ ಬಗೆಹರಿಸಿ ಎಂದು ದೆಹಲಿಗೆ ಬರುತ್ತಿರುವ ರೈತರ ಮೇಲೆ ಕೇಂದ್ರ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ. ದೇಶದಲ್ಲಿ ಬೆಲೆ ಏರಿಕೆ ನಿರಂತರವಾಗಿ ನಡೆಯುತ್ತಿದೆ. ದಿನನಿತ್ಯ ಜೀವನ ಮಾಡುವುದೇ ಕಷ್ಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕನಿಷ್ಠ ವೇತನ ₹31 ಸಾವಿರ ನೀಡಿ ಎಂದರೆ ಅದಕ್ಕೆ ಗಮನ ಹರಿಸುತ್ತಿಲ್ಲ. ಕಾರ್ಮಿಕರ ವರ್ಗದವರೇ ಹೆಚ್ಚಾಗಿ ವಾಸ ಮಾಡುತ್ತಿರುವ ಕೆಜಿಎಫ್ ನಗರದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಕೆಲಸ ಆಗುತ್ತಿಲ್ಲ ಎಂದು ನಗರಸಭೆ ಸದಸ್ಯ ಪಿ.ತಂಗರಾಜ್‌ ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಮಿಕ ಮುಖಂಡರಾದ ವಿ.ತಿರುಪತಿ, ಪೊನ್ ಆನಂದರಾಜ್‌, ಟಿ.ಶ್ರೀನಿವಾಸನ್‌, ಲಿಯೋ ರಾಜ್‌, ವೆಂಕೋಬರಾವ್‌, ಶಿವಪ್ರಕಾಶ್‌, ಜಯರಾಮ, ಕೇಶವರಾವ್, ರಾಕೇಶ ಎಡ್ವಿನ್‌, ಗಜೇಂದ್ರನ್‌, ನಾಮದೇವನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT