ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಆಯ್ಕೆಗೆ ಅಸಮಾಧಾನವಿಲ್ಲ

Last Updated 16 ಅಕ್ಟೋಬರ್ 2019, 18:45 IST
ಅಕ್ಷರ ಗಾತ್ರ

ಕೋಲಾರ: ‘ಸಿದ್ದರಾಮಯ್ಯ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿರುವುದಕ್ಕೆ ಕಾಂಗ್ರೆಸ್‌ನಲ್ಲಿ ಯಾವುದೇ ಅಸಮಾಧಾನವಿಲ್ಲ’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್‌ ಎಂದು ಹೇಳಿದರು.

ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷದ ನಾಯಕರಾಗಿ ಹಾಗೂ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಅನುಭವವಿದೆ. ಪಕ್ಷದ ವರಿಷ್ಠರಿಗೆ ಅವರ ಆಯ್ಕೆ ಸೂಕ್ತ ಎನಿಸಿರುವುದರಿಂದ ವಿಪಕ್ಷ ನಾಯಕರನ್ನಾಗಿ ಮಾಡಿದ್ದಾರೆ. ಈ ಬಗ್ಗೆ ಪಕ್ಷದ ಮುಖಂಡರಲ್ಲಿ ಅತೃಪ್ತಿಯಿಲ್ಲ’ ಎಂದರು.

‘ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲಾ ಬದ್ಧ. ಯಾವ ಸ್ಥಾನದಲ್ಲಿದ್ದಾಗ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಅರಿತಿದ್ದರೆ ಮಾತ್ರ ಪ್ರಜಾಪ್ರಭುತ್ವಕ್ಕೆ ಬೆಲೆ ಸಿಗುತ್ತದೆ ಹಾಗೂ ಪಕ್ಷಕ್ಕೆ ಒಳ್ಳೆಯದಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಲಹೆಗಾರರನ್ನು ನೇಮಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಸಲಹೆಗಾರರನ್ನು ನೇಮಿಸಿಕೊಳ್ಳುವುದು ಸ್ಪೀಕರ್‌ರ ವಿವೇಚನೆಗೆ ಬಿಟ್ಟ ವಿಷಯ. ವಿಧಾನ ಮಂಡಲದಲ್ಲಿ ಅನುಭವ ಹೊಂದಿರುವವರ ಸಲಹೆ ಪಡೆಯುವುದು ಸರಿಯಲ್ಲ ಎಂದು ಹೇಗೆ ಹೇಳಲಿ. ಸ್ಪೀಕರ್‌ರ ಆಪ್ತ ಸಿಬ್ಬಂದಿ ವಿರುದ್ಧ ವ್ಯಾಖ್ಯಾನ ಮಾಡುವುದಿಲ್ಲ’ ಎಂದು ತಿಳಿಸಿದರು.

ಶ್ರಮವಿದೆ: ‘ಕೋಲಾರದ ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸುಸಜ್ಜಿತ ಮಕ್ಕಳ ಆಸ್ಪತ್ರೆ ನಿರ್ಮಾಣದ ಹಿಂದೆ ನನ್ನ ಶ್ರಮವಿದೆ. ಆಸ್ಪತ್ರೆಗೆ ವೈದ್ಯಕೀಯ ಉಪಕರಣ ಬೇಕೆಂದು ಕೇಳಿದಾಗ ತರಿಸಿ ಕೊಟ್ಟಿದ್ದೇನೆ’ ಎಂದು ವಿವರಿಸಿದರು.

‘ಮಕ್ಕಳ ಆಸ್ಪತ್ರೆಯನ್ನು ಅ.19ರಂದು ಉದ್ಘಾಟಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಂಪುಟ ಸಭೆ ಇರುತ್ತದೆ, ಬೇರೆ ಕೆಲಸವೂ ಇರುತ್ತದೆ. ಅದಕ್ಕೆ ಅವರು ಅ.23ರಂದು ಆಸ್ಪತ್ರೆ ಉದ್ಘಾಟಿಸುವಂತೆ ಎಂದಿದ್ದಾರೆ. ಅದಕ್ಕೆ ನನ್ನ ತಕರಾರಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಸ್ವಪ್ರತಿಷ್ಠೆಯಿಲ್ಲ. ನನಗೆ ಜಿಲ್ಲೆಯ ಅಭಿವೃದ್ಧಿ ಮುಖ್ಯ. ಸಚಿವರು ವಯಸ್ಸಿನಲ್ಲಿ ನನಗಿಂತ ಚಿಕ್ಕವರಾಗಿದ್ದು, ಎಲ್ಲರಿಗೂ ಸಲಹೆ ನೀಡಿ ಜತೆಯಲ್ಲೇ ಕರೆದೊಯ್ಯುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT