ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ‘ತಳಮಟ್ಟ’ ಗಟ್ಟಿಗೊಳಿಸಲು ಪಕ್ಷಗಳ ಕಸರತ್ತು

ನಾಮಪತ್ರ ಸಲ್ಲಿಕೆ ಬಳಿಕ ಪಕ್ಷಾಂತರ ಪರ್ವ ಚುರುಕು, ಮತ ಬ್ಯಾಂಕ್‌ ಮೇಲೆ ಕಣ್ಣು
Published 16 ಏಪ್ರಿಲ್ 2024, 5:02 IST
Last Updated 16 ಏಪ್ರಿಲ್ 2024, 5:02 IST
ಅಕ್ಷರ ಗಾತ್ರ

ಕೊಪ್ಪಳ: ನಾಮಪತ್ರ ಸಲ್ಲಿಕೆ ಆರಂಭವಾಗಿ ಪ್ರಚಾರದ ಕಣ ರಂಗೇರಲು ವೇದಿಕೆ ಸಿದ್ಧಗೊಳ್ಳುತ್ತಿದ್ದಂತೆಯೇ ಪಕ್ಷಾಂತರ ಪರ್ವವೂ ಚುರುಕು ಪಡೆದುಕೊಂಡಿದೆ.

ಸತತ ಎರಡು ಬಾರಿ ಸಂಸದರಾಗಿದ್ದ ಸಂಗಣ್ಣ ಕರಡಿ ಅವರಿಗೆ ಈ ಬಾರಿ ಟಿಕೆಟ್‌ ನಿರಾಕರಿಸಿದ ಕೆಲ ದಿನಗಳಲ್ಲಿ ಅವರ ಕಟ್ಟಾ ಬೆಂಬಲಿಗರು ಮತ್ತು ರಾಜಕೀಯ ಹಿಂಬಾಲಕರು ಸೇರಿ ಹಲವರು ಇತ್ತೀಚೆಗೆ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಈಗ ಇನ್ನಷ್ಟು ಬಿಜೆಪಿ ಮುಖಂಡರು ‘ಕೈ’ ಹಿಡಿಯುತ್ತಿದ್ದಾರೆ.

ಸಂಗಣ್ಣ ಕರಡಿ ಬೆಂಬಲಿಗರಾದ ಹಲಗೇರಿಯ ಶರಣಪ್ಪ ಬಿನ್ನಾಳ, ಫಕೀರಗೌಡ್ರ ಪಾಟೀಲ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ಪ ಓಜನಹಳ್ಳಿ, ವದ್ನಾಳ ಗ್ರಾಮದ ಮಹಾಂತೇಶ ಪಾಟೀಲ, ಗ್ರಾ.ಪಂ ಮಾಜಿ ಸದಸ್ಯ ಬಸನಗೌಡ್ರ ಮಾಲಿಪಾಟೀಲ ಮತ್ತು ಬೆಂಬಲಿಗರು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಿದ್ದಾರೆ.

ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿರುವುದು ಹೆಚ್ಚಾಗುತ್ತಿರುವುದರ ನಡುವೆಯೂ ಹಲವರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಮಾಜಿ ಸಂಸದ ಶಿವರಾಮಗೌಡ ಇತ್ತೀಚಿಗೆ ಬಿಜೆಪಿಗೆ ಬಂದರು. ಆದರೆ ಕಾಂಗ್ರೆಸ್ ಜಿಲ್ಲಾ ಪಂಚಾಯಿತಿ ಕ್ಷೇತ್ರವಾಗಿ ತಳಮಟ್ಟದಲ್ಲಿ ‘ಆಪ‍ರೇಷನ್‌’ ನಡೆಸುವ ಮೂಲಕ ಪಕ್ಷವನ್ನು ಬೂತ್‌ ಮಟ್ಟದಿಂದ ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತಿದೆ. ಸ್ಥಳೀಯವಾಗಿ ಒಂದಷ್ಟು ಮತಗಳನ್ನು ಪಕ್ಷಕ್ಕೆ ತಂದುಕೊಡುವ ಸಾಮರ್ಥ್ಯ ಮತ್ತು ವಿವಿಧ ಸಮುದಾಯಗಳ ಪ್ರಮುಖ ನಾಯಕರನ್ನು ಗುರಿಯಾಗಿರಿಸಿ ಪಕ್ಷದ ಮುಖಂಡರು ಗಾಳ ಹಾಕುತ್ತಿದ್ದಾರೆ. 

ಹುಲಿಗೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಪ್ರಮುಖ ನಾಯಕರನ್ನು ತನ್ನ ಪಕ್ಷಕ್ಕೆ ಸೆಳೆದಿರುವ ಕಾಂಗ್ರೆಸ್‌ ಈಗ ಲೇಬಗೇರಾ ಮತ್ತು ಹೀರೆಸಿಂದೋಗಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಸ್ಥಳೀಯ ಮುಖಂಡರನ್ನು ಸೆಳೆಯುತ್ತಿದೆ.

ಚುನಾವಣೆ ಬಂದಾಗ ಒಂದಷ್ಟು ಮುಖಂಡರು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಹೋಗುವುದು ಸಾಮಾನ್ಯ. ಪಕ್ಷ ಬಿಟ್ಟು ಹೋದವರನ್ನು ಮರಳಿ ಕರೆತರುವ ಪ್ರಯತ್ನ ಮಾಡುತ್ತೇವೆ.
ಡಾ. ಬಸವರಾಜ ಕ್ಯಾವಟರ್‌, ಬಿಜೆಪಿ ಅಭ್ಯರ್ಥಿ

ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಮಾರುತಿ ಅಂಗಡಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದು ‘ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲ. ಬಿಜೆಪಿ-ಜೆಡಿಎಸ್ ಹೊಂದಾಣಿಕೆಯಿಂದ ಮೂಲ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಅನಿವಾರ್ಯವಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇವೆ’ ಎಂದು ಹೇಳಿದ್ದಾರೆ.

ದಿನದಿಂದ ದಿನಕ್ಕೆ ಪಕ್ಷಾಂತರ ಪರ್ವ ಹೆಚ್ಚಾಗುತ್ತಿರುವುದು ಬಿಜೆಪಿಗೆ ತಲೆನೋವಾಗುತ್ತಿದ್ದರೂ ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಡೆಸುತ್ತಿರುವ ಕಸರತ್ತು ಫಲ ನೀಡಿಲ್ಲ.

ಸಂಸದ ಸಂಗಣ್ಣ ಕರಡಿ ಮೌನ

ಬಿಜೆಪಿ ಅಭ್ಯರ್ಥಿ ಬಸವರಾಜ ಪರ ಪಕ್ಷದ ಕಾರ್ಯಕ್ರಮಗಳಲ್ಲಿ ಮತಯಾಚನೆ ಮಾಡಿರುವ ಸಂಸದ ಸಂಗಣ್ಣ ಕರಡಿ ಅವರ ಮೌನ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಟಿಕೆಟ್‌ ಕೈ ತಪ್ಪಿದ ಆರಂಭದಲ್ಲಿ ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಿದ್ದ ಅವರನ್ನು ರಾಜ್ಯದ ನಾಯಕರು ಸಮಾಧಾನಪಡಿಸುವ ಕೆಲಸ ಮಾಡಿದ್ದಾರಾದರೂ ಪೂರ್ಣ ಸಮಾಧಾನಗೊಂಡಂತೆ ಕಾಣುತ್ತಿಲ್ಲ. ಹೀಗಾಗಿ ವರಿಷ್ಠರ ಭೇಟಿ ಬಳಿಕ ಕೊಪ್ಪಳಕ್ಕೆ ಮರಳಿರುವ ಅವರು ಕುಷ್ಟಗಿ ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಳಿಕ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ನಾಲ್ಕು ದಶಕಗಳಿಂದ ಸಂಗಣ್ಣ ಕರಡಿ ಹಲವು ಏರುಪೇರುಗಳನ್ನು ಕಂಡಾಗಲೂ ಅವರ ಜೊತೆಯಲ್ಲಿದ್ದ ಬೆಂಬಲಿಗರು ಈಗ ಕಾಂಗ್ರೆಸ್ ಸೇರಿದ್ದಾರೆ. ಇದರ ಬಗ್ಗೆ ಸಂಗಣ್ಣ ಅವರು ಮೌನಕ್ಕೆ ಜಾರಿದ್ದಾರೆ.

ಪಕ್ಷಾಂತರಕ್ಕೆ ಭಾರಿ ಹುಮ್ಮಸ್ಸು

ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ಪಕ್ಷಾಂತರಕ್ಕೆ ಭಾರಿ ಪೈಪೋಟಿ ಕಂಡು ಬರುತ್ತಿದೆ‌. ಬಿಜೆಪಿಯ ಕೊಪ್ಪಳ ಗ್ರಾಮೀಣ ಮಂಡಲ ಅಧ್ಯಕ್ಷ ಮಂಜುನಾಥ ಎನ್.ಪೊಲೀಸ್‌ಪಾಟೀಲ(ಹಂದ್ರಾಳ) ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ ಕೊಪ್ಪಳ ವಿಧಾನಸಭಾ ಕ್ಷೇತ್ರದ ಸಂಚಾಲಕರನ್ನಾಗಿ ಪ್ರದೀಪ್ ಹಿಟ್ನಾಳ ಅವರನ್ನು ನೇಮಿಸಿದ್ದಾರೆ. ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಅವರ ನೇತೃತ್ವದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ ಹಾಲವರ್ತಿ ಬಿಜೆಪಿ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT