ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಟೆರಸ್ತೆ ಗಣಪನಿಗೆ 40ನೇ ವರ್ಷದ ಸಂಭ್ರಮ

ಕೊಪ್ಪಳದಲ್ಲಿ ಗಮನ ಸೆಳೆಯುತ್ತಿರುವ ಸಾರ್ವಜನಿಕ ಬೃಹತ್‌ ಗಣೇಶ ಮೂರ್ತಿಗಳು
Last Updated 1 ಸೆಪ್ಟೆಂಬರ್ 2022, 16:50 IST
ಅಕ್ಷರ ಗಾತ್ರ

ಕೊಪ್ಪಳ: ಪ್ರತಿವರ್ಷವೂ ವಿಭಿನ್ನ ಮತ್ತು ಆಕರ್ಷಕವಾಗಿ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತ ಬಂದಿರುವ ಇಲ್ಲಿನ ’ಕೋಟೆ ರಸ್ತೆ ಗಣೇಶ‘ನಿಗೆ ಈಗ ನಾಲ್ಕು ದಶಕಗಳ ಸಂಭ್ರಮ.

ವಿನಾಯಕ ಮಿತ್ರ ಮಂಡಳಿ 1983ರಿಂದ ಕೋಟೆ ರಸ್ತೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುತ್ತ ಬಂದಿದೆ. ಇದು ಕೊಪ್ಪಳದ ಮಟ್ಟಿಗೆ ಅತ್ಯಂತ ಹಳೆಯದಾದಸಾರ್ವಜನಿಕ ಗಣೇಶ ಮೂರ್ತಿ ಕೂಡಿಸುವ ಮಂಡಳಿಯಾಗಿದೆ.

ಈ ಮಂಡಳಿಯು 2019ರಲ್ಲಿ ಗ್ರಾಮೀಣ ಸೊಗಡು ಬಿಂಬಿಸುವ ರೀತಿಯಲ್ಲಿ ಚಿತ್ರಣ ನಿರ್ಮಿಸಿತ್ತು. 2021ರಲ್ಲಿ ಮಂಟಪದ ಒಳಗೆ ಪ್ರತಿಷ್ಠಾಪನೆ ಮಾಡಲಾಗಿತ್ತು. ಈ ಬಾರಿ ಕಮಲ ಸರೋವರದ ಮೇಲೆ ಮೂರ್ತಿ ಕೂಡಿಸಲಾಗಿದೆ. ಹೀಗೆ ಪ್ರತಿ ಬಾರಿಯೂ ಒಂದಿಲ್ಲೊಂದು ವಿಶೇಷ ಸೃಷ್ಟಿಸಿ ಗಣಪತಿ ಹಬ್ಬದ ಸಂಭ್ರಮ ಹೆಚ್ಚಿಸುತ್ತದೆ. ಇತ್ತೀಚಿನ ಕೆಲ ವರ್ಷಗಳಿಂದ ಹಬ್ಬದ ಸಮಯದಲ್ಲಿಯೇ ಸಾಮೂಹಿಕ ಮದುವೆಗಳನ್ನು ಮಾಡಲಾಗುತ್ತಿದೆ. ಈ ಸಲ ಸೆ. 4ರಂದು ಐದು ಜೋಡಿಯ ವಿವಾಹ ಜರುಗಲಿದೆ.

ವಿಶೇಷವೆಂದರೆ ನಾಲ್ಕು ದಶಕಗಳ ಹಿಂದೆ ಕೂಡಿಸಿದ್ದ ಜಾಗದಲ್ಲಿಯೇ ಈಗಲೂ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಮಂಡಳಿಗೆ ಯಾಸೀನ್‌ ಹಿರೇಬಸೂತಿ ಅವರು ಮೊದಲ ಅಧ್ಯಕ್ಷರಾಗಿದ್ದರು. ಹೀಗಾಗಿ ಇಲ್ಲಿ ಮೊದಲಿನಿಂದಲೂ ಏನೇ ಕಾರ್ಯಕ್ರಮ ನಡೆದರೂ ಭಾವೈಕ್ಯ ಕಂಡು ಬರುತ್ತದೆ.

ಮಂಡಳಿ ಸದಸ್ಯ ನಿತೇಶ್ ಪುಲಸ್ಕರ್ ‘ಪ್ರಜಾವಾಣಿ’ ಜೊತೆ ಮಾತನಾಡಿ ’ಕೋಟೆ ಪ್ರದೇಶ ಸಾಂಸ್ಕೃತಿಕವಾಗಿ ಮೊದಲಿನಿಂದಲೂ ಸಕ್ರಿಯವಾಗಿದೆ. ಎಲ್ಲಾ ಸಾಂಪ್ರದಾಯಿಕ ಆಚರಣೆಗಳನ್ನು ಮಾಡಿಕೊಂಡು ಬಂದಿದ್ದೇವೆ. ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಿದ್ದೇವೆ. ಹೀಗಾಗಿ ಇಲ್ಲಿನ ಗಣೇಶನಿಗೆ ವಿಶೇಷ ಮಹತ್ವವಿದೆ’ ಎಂದರು.

ಈಶ್ವರ ಪಾರ್ಕ್‌ನಲ್ಲಿ ಹಿಂದೂ‌ ಮಹಾಮಂಡಳಿ, ಬಸವೇಶ್ವರ ‌ನಗರದಲ್ಲಿರುವ 15 ಅಡಿಯ ಬುದ್ದಿನಾಥ ಮಿತ್ರ ಮಂಡಳಿ, ಶಿವಶಾಂತವೀರ ನಗರದಲ್ಲಿರುವ 16 ಅಡಿಯ ‘ಕೊಪ್ಪಳ ಕಾ ರಾಜ’ ಹೀಗೆ ಅನೇಕ ದೊಡ್ಡ ಸಾರ್ವಜನಿಕ ಗಣೇಶ ಮೂರ್ತಿಗಳು ಎಲ್ಲರನ್ನೂ ಸೆಳೆಯುತ್ತಿವೆ. ಬುಧವಾರ ಹಬ್ಬದ ಆಚರಣೆ ಮಾಡಿರುವ ಜನ ಗುರುವಾರ ಸಂಜೆ ಈ ಮೂರ್ತಿಗಳ ವೈಭವ ಕಣ್ತುಂಬಿಕೊಂಡ ಚಿತ್ರಣ ಕಂಡು ಬಂತು.

‘ಕೊಪ್ಪಳ ಕಾ ರಾಜ’ ಗೆಳೆಯರ ಬಳಗ ಸಂಘಟನೆಅಧ್ಯಕ್ಷ ಉಮೇಶ ಕೌಡೇಕರ್ ಮಾತನಾಡಿ ‘ಮೊದಲ ಬಾರಿಗೆ ಗಣೇಶ ಮೂರ್ತಿಗೆ ಬೆಳ್ಳಿ ಪಾದುಕೆ ಮಾಡಿಸಲಾಗಿದೆ. ಮುಂದೆ ಪ್ರತಿ ವರ್ಷವೂ ಈಗಿರುವಷ್ಟೇ ಅಳತೆಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು’ ಎಂದರು.

ಸಾವರ್ಕರ್‌ ವೇದಿಕೆ

ಶಿವಶಾಂತವೀರ ನಗರದಲ್ಲಿ ಪ್ರತಿಷ್ಠಾಪಿಸಿರುವ‘ಕೊಪ್ಪಳ ಕಾ ರಾಜಾ‘ದಲ್ಲಿ ಸಾವರ್ಕರ್‌ ಅವರ ವೇದಿಕೆ ನಿರ್ಮಿಸಲಾಗಿದೆ.

ಭಕ್ತರನ್ನು ಸ್ವಾಗತಿಸುವ ಆರಂಭದಿಂದ ಹಿಡಿದು ಮೂರ್ತಿ ಪ್ರತಿಷ್ಠಾಪನೆ ಮಾಡಿದ ಜಾಗದ ತನಕ ಸಾರ್ವಕರ್‌ ಅವರ ಫೋಟೊಗಳನ್ನು ಹಾಕಲಾಗಿದ್ದು ಅವರ ಸಾಧನೆ ಹಾಗೂ ಬದುಕಿನ ಪ್ರೇರಣೆಯ ಮಾತುಗಳ ಭಿತ್ತಿಚಿತ್ರಗಳನ್ನು ಹಾಕಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT