ಆಪ್ತರೊಂದಿಗೆ ಕಾಲ ಕಳೆದ ಅಭ್ಯರ್ಥಿಗಳು

ಭಾನುವಾರ, ಮೇ 26, 2019
32 °C
ಚುನಾವಣೆ ಜಂಜಾಟದಿಂದ ಮುಕ್ತಿ: ಸೋಲು-ಗೆಲುವಿನ ಲೆಕ್ಕಾಚಾರ

ಆಪ್ತರೊಂದಿಗೆ ಕಾಲ ಕಳೆದ ಅಭ್ಯರ್ಥಿಗಳು

Published:
Updated:
Prajavani

ಕೊಪ್ಪಳ: ಎರಡು ತಿಂಗಳಿಂದ ಚುನಾವಣೆ ಒತ್ತಡದಿಂದ ಬಳಲಿದ್ದ ಅಭ್ಯರ್ಥಿಗಳು ಬುಧವಾರ ಲೋಕಾಭಿರಾಮವಾಗಿ ಕಾಲ ಕಳೆದರು. ತಮ್ಮದೇ ಗೆಲುವು ಎಂಬ ವಿಶ್ವಾಸದಲ್ಲಿ ಸೋಲು, ಗೆಲುವಿನ ಲೆಕ್ಕಾಚಾರ ಹಾಕುತ್ತಿರುವುದು, ಬೆಂಬಲಿಗ, ಆಪ್ತರನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳುತ್ತಿರುವುದು ಕಂಡು ಬಂತು.

ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಚುನಾವಣೆ ಮುಗಿದ ನಂತರವೂ ಯಥಾಸ್ಥಿತಿಯಂತೆ ಮನೆಯಲ್ಲಿ ಸ್ನಾನ, ಪೂಜೆ, ಉಪಾಹಾರ ಮುಗಿಸಿ ಆಪ್ತರೊಂದಿಗೆ ಚರ್ಚೆ ನಡೆಸುತ್ತಿರುವುದು ಕಂಡು ಬಂತು. ಚುನಾವಣೆ ಫಲಿತಾಂಶದ ಒತ್ತಡವನ್ನು ತಲೆಗೆ ಹಚ್ಚಿಕೊಳ್ಳದೇ ರಿಲ್ಯಾಕ್ಸ್ ಮೂಡಿನಲ್ಲಿಯೇ ಇದ್ದರು. ಮನೆಗೆ ಬಂದ ಕಾರ್ಯಕರ್ತರನ್ನು ಭೇಟಿ ಮಾಡಿ ನಂತರ ವಾಕಿಂಗ್‌ಗೆ ತೆರಳಿದರು.

ಗವಿಸಿದ್ಧೇಶ್ವರ ದೇವಸ್ಥಾನ, ನಗರದ ರಾಘವೇಂದ್ರ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಅಲ್ಲಿನ ನಿವಾಸಿಗಳೊಂದಿಗೆ ಚರ್ಚೆ ನಡೆಸಿದರು. ಮಳೆಮಲ್ಲೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ನಡೆದ ಆಪ್ತರ ಮದುವೆ ಸಮಾರಂಭದಲ್ಲಿ ಭಾಗವಹಿಸಿದರು. ನಂತರ ಕುಕನೂರಿಗೆ ತೆರಳುವ ಮಾರ್ಗ ಮಧ್ಯೆ ಸಿಗುವ ಗ್ರಾಮಗಳ ಜನರನ್ನು ಮಾತನಾಡಿಸಿದರು. 

ಕುಕನೂರಿನ ಪಕ್ಷದ ಕಚೇರಿಗೆ ಭೇಟಿ ನೀಡಿ ಅಲ್ಲಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು. ಶಾಸಕ ಹಾಲಪ್ಪ ಆಚಾರ್ ಅವರೊಂದಿಗೆ ಲೋಕಸಭಾ ಕ್ಷೇತ್ರದ ಚುನಾವಣೆ ಕುರಿತು ಚರ್ಚೆ ನಡೆಸಿದರು. ಹಿರಿಯ ವಯಸ್ಸಿನಲ್ಲಿಯೂ ಕಿರಿಯರನ್ನು ನಾಚಿಸುವಂತೆ ಬೆಳಿಗ್ಗೆಯಿಂದಲೇ ಕ್ಷೇತ್ರದ ವಿವಿಧೆಡೆ ತೆರಳಿ ಮತದಾರರಿಗೆ ಅಭಿನಂದಿಸಿದ್ದು ಕಂಡು ಬಂತು.

ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಅವರು, ತಮ್ಮ ಸ್ವಗ್ರಾಮ ಮುನಿರಾಬಾದ್ ಸಮೀಪದ ಹಿಟ್ನಾಳ ಗ್ರಾಮದಲ್ಲಿ ಇಡೀ ದಿನ ವಿಶ್ರಾಂತಿ ಮಾಡಿದರು. ಸಹೋದರ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ತಂದೆ ಕೆ.ಬಸವರಾಜ ಹಿಟ್ನಾಳ ಅವರ ಜೊತೆ ಮಾತುಕತೆ ನಡೆಸಿದರು. ಮನೆ ಬಿಟ್ಟು ಎಲ್ಲಿಗೂ ಹೊರ ಹೋಗಲಿಲ್ಲ.

ಅಭ್ಯರ್ಥಿ ಸಹೋದರ ಶಾಸಕ ರಾಘವೇಂದ್ರ ಹಿಟ್ನಾಳ ಎಂದಿನಂತೆ ತಮ್ಮ ಕಾರ್ಯವನ್ನು ಆರಂಭಿಸಿದರು. ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. 

ನಂತರ ಇಬ್ಬರೂ ಅಭ್ಯರ್ಥಿಗಳು ಪತ್ರಕರ್ತರೊಂದಿಗೆ ಮಾತನಾಡಿ ಲಕ್ಷಕ್ಕೂ ಹೆಚ್ಚು ಅಂತರದಿಂದ ಗೆಲುವು ಸಾಧಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಅವರು ಮಾತನಾಡಿ, ಕ್ಷೇತ್ರದಲ್ಲಿ ಮೋದಿ ಅಲೆ ಮತ್ತು ನಾವು ಮಾಡಿದ ಅಭಿವೃದ್ಧಿ ಕಾರ್ಯಕ್ಕೆ ಜನರು ಬೆಂಬಲ ನೀಡಿದ್ದು ಈ ಚುನಾವಣೆಯಲ್ಲಿ ವ್ಯಕ್ತವಾಗಿದೆ. ಒಂದು ಲಕ್ಷಕ್ಕಿಂತಲೂ ಅಧಿಕ ಮತಗಳೊಂದಿಗೆ ಜಯಸಾಧಿಸುವುದಾಗಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಮಾತನಾಡಿ, ಕ್ಷೇತ್ರದಲ್ಲಿ ಮೋದಿ ಅಲೆ ಏನೂ ಇಲ್ಲ. ಕಾಂಗ್ರೆಸ್‌ನ ಜನಪರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಜನ ಬದಲಾವಣೆ ಬಯಸಿದ್ದು, ಲಕ್ಷಕ್ಕಿಂತಲೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವುದಾಗಿ ಹೇಳಿದರು.

ಇಬ್ಬರು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ನಗರದ ಗವಿಸಿದ್ಧೇಶ್ವರ ಕಾಲೇಜಿನಲ್ಲಿ ಬಿಗಿಭದ್ರತೆಯಲ್ಲಿ ವಿವಿ ಪ್ಯಾಟ್‌, ಇವಿಎಂ ಮಷಿನ್‌ಗಳನ್ನು ಇರಿಸಲಾಗಿದೆ. ಜನರ ಒಲವು ಯಾರ ಕಡೆಗೆ ಇದೆ ಎಂಬುವುದು ಮೇ 23ರಂದು ಗೊತ್ತಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !