ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ | ಕ್ರಿಸ್‌ಮಸ್‌ ಸಂಭ್ರಮಕ್ಕೆ ಅಲಂಕಾರದ ತೋರಣ

ಚರ್ಚ್‌ಗಳಲ್ಲಿ ಇಂದು ವಿಶೇಷ ಪ್ರಾರ್ಥನೆ, ಅಂತಿಮ ಸಿದ್ಧತೆಯಲ್ಲಿ ಕ್ರೈಸ್ತರು
ಪ್ರಮೋದ
Published 25 ಡಿಸೆಂಬರ್ 2023, 7:31 IST
Last Updated 25 ಡಿಸೆಂಬರ್ 2023, 7:31 IST
ಅಕ್ಷರ ಗಾತ್ರ

ಕೊಪ್ಪಳ: ಕ್ರೈಸ್ತ ಸಮುದಾಯದವರ ವರ್ಷದ ಪ್ರಮುಖ ಹಬ್ಬವಾದ ಕ್ರಿಸ್‌ಮಸ್‌ ಆಚರಣೆಗೆ ಜಿಲ್ಲೆಯೂ ಸೇರಿದಂತೆ ವಿವಿಧೆಡೆ ಸಿದ್ಧತೆ ಮಾಡಿಕೊಳ್ಳಲಾಗಿದೆ.    

ಯೇಸು ಕ್ರಿಸ್ತನ ಜನನದ ಅಂಗವಾಗಿ ಕ್ರೈಸ್ತರು ಕ್ರಿಸ್‌ಮಸ್‌ ಹಬ್ಬ ಆಚರಿಸುತ್ತಿದ್ದು, ಜಿಲ್ಲೆಯಲ್ಲಿ ಡಿಸೆಂಬರ್‌ ತಿಂಗಳ ಆರಂಭದಿಂದಲೇ ಹಬ್ಬದ ಸಿದ್ಧತೆ ನಡೆದಿದೆ. ಕುಟುಂಬದವರು ಹಾಗೂ ಆ ಸಮುದಾಯದವರ ನಡುವೆ ಮಕ್ಕಳಿಗಾಗಿ ನೃತ್ಯ, ಸಂಗೀತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಅವೆಲ್ಲವುಗಳ ಆಚರಣೆ ಮುಗಿದ ಬಳಿಕ ಈಗ ಭಾನುವಾರ ಕ್ರಿಸ್‌ಮಸ್‌ಗೆ ಜನ ಸಿದ್ಧಗೊಂಡಿದ್ದಾರೆ.

ಇಲ್ಲಿನ ನಗರಸಭೆ ಹಿಂಭಾಗದಲ್ಲಿರುವ ಇಸಿಐ ಚರ್ಚ್‌, ಬಿ.ಟಿ. ಪಾಟೀಲ ನಗರದಲ್ಲಿರುವ ಸೇಂಟ್‌ ಫ್ರಾನ್ಸಿಸ್‌ ಡೆಸೆಲ್ಸ್‌ (ಎಸ್‌ಎಫ್‌ಎಸ್‌), ಗಂಗಾವತಿ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿರುವ ಎಲ್ಲಾ ಚರ್ಚ್‌ಗಳಿಗೆ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಚರ್ಚ್‌ನ ಒಳಭಾಗ ಬಣ್ಣದ ಹೂವುಗಳಿಂದ ಕಂಗೊಳಿಸುತ್ತಿದೆ.

ಕೇಕ್‌ಗಳಿಗೂ ಬೇಡಿಕೆ: ಹಬ್ಬದ ಸಂದರ್ಭದಲ್ಲಿ ಮನೆಗಳಲ್ಲಿ ಕೇಕ್‌ ಕತ್ತರಿಸುವ ಸಂಪ್ರದಾಯವೂ ಚಾಲ್ತಿಯಲ್ಲಿದೆ. ಆದ್ದರಿಂದ ನಗರ ಪ್ರಮುಖ ಬೇಕರಿಗಳ ಬಳಿ ಭಾನುವಾರ ಜನಸಂದಣಿ ಕಂಡುಬಂದಿತು. ಕ್ರಿಸ್‌ಮಸ್‌ ಅಂಗವಾಗಿ ತರಹೇವಾರಿ ವಿನ್ಯಾಸಗಳ ಮತ್ತು ಗಾತ್ರಗಳ ಕೇಕ್‌ಗಳನ್ನು ತಯಾರಿಸಲಾಗಿತ್ತು.

ಶನಿವಾರ ಇಲ್ಲಿನ ಜ್ಞಾನಬಂಧು ಶಾಲೆಯ ಮಕ್ಕಳು ಸೆಂಟಾ ಕ್ಲಾಸ್‌ ವೇಷ ಧರಿಸಿ ಚರ್ಚ್‌ಗೆ ಭೇಟಿ ನೀಡಿದರು. ಪರಸ್ಪರ ಫೋಟೊ ತೆಗೆಯಿಸಿಕೊಂಡು ಖುಷಿ ಪಟ್ಟರು. 

ಯೇಸುಕ್ರಿಸ್ತನ ಬದುಕಿನ ಕಥನ ಅನಾವರಣ ಮಾಡುವ ಗೋದಲಿಗಳ ನಿರ್ಮಾಣ, ವಿದ್ಯುತ್‌ ದೀಪಗಳು ಮತ್ತು ಅಲಂಕಾರಿಕ ವಸ್ತುಗಳ ಹೊಳಪು ಆಕರ್ಷಿಸುತ್ತಿದೆ. ಕ್ರೈಸ್ತರ ಮನೆಗಳ ಮೇಲೆ ನಕ್ಷತ್ರ ಮಾದರಿಯ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಇಲ್ಲಿನ ಇಸಿಐ ಚರ್ಚ್‌ನಲ್ಲಿ ಭಾನುವಾರ ಬೆಳಿಗ್ಗೆ 9 ಗಂಟೆಗೆ ವಿಶೇಷ ಪ್ರಾರ್ಥನೆ ಆಯೋಜನೆಯಾಗಿದ್ದು, ಸಮುದಾಯದ ಜನ ಒಂದೆಡೆ ಸೇರಿ ಪ್ರಾರ್ಥನೆ ಸಲ್ಲಿಸುವರು.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಇಲ್ಲಿನ ಇಸಿಐ ಚರ್ಚ್‌ನ ರೆವರೆಂಡ್‌ ಜಿ. ರವಿಕುಮಾರ್ ‘ಲೋಕದ ಕಲ್ಯಾಣಕ್ಕಾಗಿ ಯೇಸುಕ್ರಿಸ್ತ ಭೂಮಿಗೆ ಅವತರಿಸಿದ ದಿನವನ್ನು ಕ್ರಿಸ್‌ಮಸ್‌ ಆಗಿ ಆಚರಿಸಲಾಗುತ್ತದೆ. ತಿಂಗಳ ಆರಂಭದಿಂದಲೇ ವಿವಿಧ ಕಾರ್ಯಕ್ರಮಗಳು ನಡೆದಿವೆ. ಸಮುದಾಯದ ಜನ ಒಂದೆಡೆ ಸೇರಿ ಊಟ ಮಾಡುವುದು, ನೃತ್ಯ, ಸಂಗೀತ ಆಯೋಜಿಸಲಾಗಿತ್ತು. ಬಡವರಿಗೆ ನಮ್ಮ ಕೈಲಾದಷ್ಟು ನೆರವಾಗುವುದು ಕೂಡ ಕ್ರಿಸ್‌ಮಸ್‌ ಆಚರಣೆಯ ಪ್ರಮುಖ ಭಾಗ’ ಎಂದು ತಿಳಿಸಿದರು.

ಸೆಂಟಾ ಕ್ಲಾಸ್‌ ವೇಷಧಾರಿಯಲ್ಲಿ ಕೊಪ್ಪಳದ ಜ್ಞಾನಬಂಧು ಶಾಲೆಯ ಮಕ್ಕಳು
ಸೆಂಟಾ ಕ್ಲಾಸ್‌ ವೇಷಧಾರಿಯಲ್ಲಿ ಕೊಪ್ಪಳದ ಜ್ಞಾನಬಂಧು ಶಾಲೆಯ ಮಕ್ಕಳು

ಮಕ್ಕಳಿಗಾಗಿ ತಿಂಗಳ ಪರ್ಯಂತ ವಿವಿಧ ಕಾರ್ಯಕ್ರಮಗಳ ಆಯೋಜನೆ ಇಂದು ಬೆಳಿಗ್ಗೆ 9 ಗಂಟೆಗೆ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಗೋದಲಿಯಲ್ಲಿ ಯೇಸುಕ್ರಿಸ್ತನ ಬದುಕಿನ ಕಥನ ಅನಾವರಣ

ಸುವಾರ್ತೆಯೊಂದಿಗೆ ಮನೆಮನೆಗೆ ಭೇಟಿ ಹಬ್ಬದ ಹಿನ್ನೆಲೆಯಲ್ಲಿ ಯೇಸುಕ್ರಿಸ್ತನ ಜನನದ ಶುಭವಾರ್ತೆಯನ್ನು ಮನೆಮನೆಗೆ ತೆರಳಿ ಭಜನೆ ಮೂಲಕ ತಿಳಿಸಲಾಯಿತು. ಭಾಗ್ಯನಗರದ ನವನಗರದ ಇರುವಾತನು ಚರ್ಚ್‌ನಿಂದ ಶನಿವಾರ ಸಂಜೆ ಆರಂಭವಾದ ಕಾರ್ಯಕ್ರಮ ಮೂರನೇ ವಾರ್ಡಿನ ನಿರ್ಮಿತಿ ಕೇಂದ್ರದ ಬಡಾವಣೆ ಭಾಗ್ಯನಗರದ ಕಿನ್ನಾಳ ರಸ್ತೆ ಮೂಲಕ ವಿವಿಧೆಡೆ ಸಂಚರಿಸಿತು. ಭಾನುವಾರ ಸಂಜೆ ಪ್ರಮುಖ ಬೀದಿಗಳಲ್ಲಿ ನವನಗರದ ಪ್ರಮುಖ ಬೀದಿಗಳಲ್ಲಿ ಭಜನೆ. ನೃತ್ಯದೊಂದಿಗೆ ಮೆರವಣಿಗೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT