ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಶಕಗಳ ಕನಸು ನನಸಿಗೆ ದಿನಗಣನೆ

ಗದಗ-ವಾಡಿ ಎಕ್ಸ್‌ಪ್ರೆಸ್‌ ರೈಲು: ಚುನಾವಣೆ ಹಿನ್ನೆಲೆ ತರಾತುರಿ ರೈಲ್ವೆ ಕಾಮಗಾರಿ
ನಾರಾಯಣರಾವ ಕುಲಕರ್ಣಿ
Published 25 ಜನವರಿ 2024, 5:20 IST
Last Updated 25 ಜನವರಿ 2024, 5:20 IST
ಅಕ್ಷರ ಗಾತ್ರ

ಕುಷ್ಟಗಿ: ಪಟ್ಟಣದವರೆಗಿನ ಗದಗ–ವಾಡಿ ನೂತನ ರೈಲ್ವೆ ಮಾರ್ಗದ ಕೆಲಸ ಭರದಿಂದ ಸಾಗಿದೆ. ಅಲ್ಪಸ್ವಲ್ಪ ಕಾಮಗಾರಿ ಮಾತ್ರ ಉಳಿದಿದೆ.

ಇಲಾಖೆ ಅಂದಾಜಿಸಿದಂತೆ ಎಲ್ಲ ಕಾಮಗಾರಿ ಮುಗಿದರೆ ಫೆಬ್ರುವರಿ ಎರಡನೇ ವಾರದೊಳಗೇ ಕುಷ್ಟಗಿವರೆಗೆ ರೈಲು ಸಂಚಾರ ಆರಂಭಗೊಳ್ಳಲಿದ್ದು, ಈ ಭಾಗದ ಜನರ ಶತಮಾನದ ಕನಸು ನನಸಾಗುವುದಕ್ಕೆ ದಿನಗಣನೆ ಆರಂಭಗೊಂಡಿದೆ.

ಶತಾಯ ಗತಾಯ ಲೋಕಸಭೆ ಚುನಾವಣೆ ವೇಳಾಪಟ್ಟಿ ಘೋಷಣೆಯಾಗುವ ಮೊದಲೇ ಕುಷ್ಟಗಿಯವರೆಗಾದರೂ ರೈಲು ಓಡಿಸಲೇ ಬೇಕೆಂಬ ಒತ್ತಡ ಕೇಂದ್ರ ಸರ್ಕಾರ ರೈಲ್ವೆ ಮಂಡಳಿಯ ಮೇಲಿದೆ ಎಂಬುದನ್ನು ಸ್ವತಃ ರೈಲ್ವೆ ಮೂಲಗಳೇ ಒಪ್ಪಿಕೊಳ್ಳುತ್ತಿವೆ.

ಹಾಗಾಗಿ ಹಗಲು ರಾತ್ರಿ ಎನ್ನದೇ ಬೃಹತ್ ಯಂತ್ರಗಳು, ಕಾರ್ಮಿಕರಿಂದ ರೈಲ್ವೆ ಮಾರ್ಗದ ಕಾಮಗಾರಿ ಅವಸರದಲ್ಲಿ ನಡೆಯುತ್ತಿರುವುದು ಕಂಡುಬಂದಿದೆ. ಹಿರೇಅರಳಿಹಳ್ಳಿವರೆಗೆ ಹಳಿ ಜೋಡಣೆ ಕೆಲಸ ಮುಗಿದಿದ್ದು ಆ ಗ್ರಾಮದ ಮತ್ತು ಕುಷ್ಟಗಿಯ ರಾಷ್ಟ್ರೀಯ ಹೆದ್ದಾರಿ ಬಳಿ ಮಾತ್ರ ಅಲ್ಪಸ್ವಲ್ಪ ಹಳಿ ಜೋಡಣೆ ಕೆಲಸ ನಡೆಯಬೇಕಿದೆ.

ಯಲಬುರ್ಗಾ ತಾಲ್ಲೂಕು ಲಿಂಗನಬಂಡಿಯಿಂದ ಕುಷ್ಟಗಿವರೆಗೆ ಸಿಗ್ನಲ್‌ ಅಳವಡಿಸುವ ಕೆಲಸ ಆರಂಭಗೊಂಡಿದ್ದು ಜನವರಿ ಅಂತ್ಯದಲ್ಲಿ ರೈಲು ಮಾರ್ಗದ ಅಂತಿಮ ಹಂತದ ಪರಿಶೀಲನೆ ನಡೆಯಲಿದೆ.

ಫೆಬ್ರುವರಿ 2ನೇ ವಾರದಲ್ಲಿ ಕುಷ್ಟಗಿವರೆಗೆ ರೈಲು ಓಡಿಸಲು ಸಜ್ಜಾಗಿದ್ದೇವೆ. ರಾಷ್ಟ್ರೀಯ ಹೆದ್ದಾರಿ ಬಳಿಯ ಬ್ರಿಡ್ಜ್‌ಗೆ ಸ್ಲ್ಯಾಬ್ ಅಳವಡಿಸುವ ಮತ್ತು ನಿಲ್ದಾಣದ ಕಾರ್ಯ ಪ್ರಗತಿಯಲ್ಲಿದೆ. ಕುಷ್ಟಗಿಯಿಂದ ಬೆಂಗಳೂರು, ಹುಬ್ಬಳ್ಳಿವರೆಗೂ ರೈಲು ಸಂಚಾರ ಆರಂಭಿಸುವುದಕ್ಕೆ ಅವಕಾಶ ದೊರೆಯಲಿದೆ ಎನ್ನುತ್ತವೆ ನೈಋತ್ಯ ರೈಲ್ವೆ ಮೂಲಗಳು.

ಪ್ರಯೋಜನ ಹೀಗಿದೆ: ಗದಗ ವಾಡಿ ರೈಲ್ವೆ ಮಾರ್ಗ ಪೂರ್ಣಗೊಂಡರೆ ಪ್ರಮುಖ ನಗರಗಳ ಮಧ್ಯೆ ಸಂಚಾರಕ್ಕೆ ಅನುಕೂಲವಾಗುತ್ತದೆ. ಪಾಸ್‌ ವ್ಯವಸ್ಥೆ ಕಲ್ಪಿಸಿಕೊಂಡರೆ ನಿತ್ಯ ಓಡಾಡುವವರಿಗೆ, ಕೂಲಿಕಾರರು, ಸರಕು ಸಾಗಣೆಗೆ ಹೆಚ್ಚಿನ ಪ್ರಯೋಜನ ದೊರೆಯಲಿದೆ. ಕೇವಲ ಎರಡೂವರೆ ತಾಸಿನಲ್ಲಿ ಹುಬ್ಬಳ್ಳಿ ತಲುಪಲು ಸಾಧ್ಯವಾಗುತ್ತದೆ ಎನ್ನುತ್ತಾರೆ ರೈಲ್ವೆ ಎಂಜಿನಿಯರ್‌ಗಳು.

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೆಲಸ ಮುಗಿಸಲು ಬಹಳಷ್ಟು ಒತ್ತಡವಿದ್ದು ಈ ಬಗ್ಗೆ ವರ್ಷದ ಹಿಂದೆಯೇ ಮಂಡಳಿಯಿಂದಲೇ ಗುರಿ ನಿಗದಿಪಡಿಸಲಾಗಿದೆ. ತರಾತುರಿಯಲ್ಲಿ ಕೆಲಸ ನಡೆಯುವುದರಿಂದ ಅಲ್ಪಸ್ವಲ್ಪ ವ್ಯತ್ಯಾಸಗಳು ಆಗುವುದು ಸಹಜ. ಆದರೂ ಗುಣಮಟ್ಟದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ, ಅಲ್ಲಲ್ಲಿ ಜಮೀನಿನ ಮಾಲೀಕರ ಅಸಹಕಾರ, ಪದೇ ಪದೇ ತಕರಾರು ತೆಗೆಯುತ್ತಿರುವುದರಿಂದ ಸ್ವಲ್ಪ ವಿಳಂಬವಾಗುತ್ತಿದೆ ಎಂದು ಹೆಸರು ಬಹಿರಂಗಪಡಿಸದ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದರು.

ಹಳಿ ಜೋಡಣೆ ಕೆಲಸಕ್ಕೆ ಅಂತಿಮಸ್ಪರ್ಶ ಲಿಂಗನಬಂಡಿವರೆಗೆ ಸಿಗ್ನಲ್‌ ಅಳವಡಿಕೆ ಪೂರ್ಣ ಅವಸರದಲ್ಲಿ ಕಳಪೆ ಕಾಮಗಾರಿ; ಆರೋಪ

ತಮ್ಮ ಅವಧಿಯಲ್ಲಿ ಕೆಲಸವಾಗಲಿ ಎಂಬ ಅಪೇಕ್ಷೆ ಸಹಜ ಮೊದಲೇ ನಿಗದಿಯಾಗಿರುವಂತೆ ರೈಲ್ವೆ ಕೆಲಸ ನಡೆಯುತ್ತಿದೆ. ಗುಣಮಟ್ಟದಲ್ಲಿ ರಾಜಿ ಇಲ್ಲ
. ಸಂಗಣ್ಣ ಕರಡಿ ಕೊಪ್ಪಳ ಸಂಸದ
ಶೀಘ್ರದಲ್ಲಿ ಕುಷ್ಟಗಿವರೆಗೆ ರೈಲು ಸಂಚಾರ ಆರಂಭಗೊಳ್ಳಬೇರುವುದರಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಅಶೋಕ ಮುದಗೌಡರ, ಎಇಇ ನೈಋತ್ಯ ರೈಲ್ವೆ ವಲಯ

- ಮೇಲ್ಸೇತುವೆ ಬದಲು ಲೆವಲ್ ಕ್ರಾಸಿಂಗ್ ಚುನಾವಣೆ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಯುದ್ಧೋಪಾದಿಯಲ್ಲಿ ಕೆಲಸ ನಡೆಸಿದ್ದರೂ ಯೋಜನೆಯ ಪಟ್ಟಿಯಲ್ಲಿರುವ ಕುಷ್ಟಗಿ ಕೊಪ್ಪಳ ರಾಜ್ಯ ಹೆದ್ದಾರಿಯಲ್ಲಿ ನಿರ್ಮಾಣಗೊಳ್ಳಬೇಕಿದ್ದ ರಸ್ತೆ ಸಹಿತ ಮೇಲ್ಸೇತುವೆ ಕಾಮಗಾರಿಯನ್ನು ಸದ್ಯಕ್ಕೆ ಕೈಬಿಟ್ಟಿರುವುದು ಸ್ಪಷ್ಟವಾಗಿದೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಕೆಲಸ ಮಾತ್ರ ಆರಂಭಿಸಿಲ್ಲ. ಆದರೆ ಮೇಲ್ಸೇತುವೆ ಬದಲಾಗಿ ತಾತ್ಕಾಲಿಕವಾಗಿ ರೈಲ್ವೆ ಕ್ರಾಸಿಂಗ್ ನಿರ್ಮಾಣದ ಕೆಲಸ ನಡೆಯುತ್ತಿರುವುದು ಕಂಡುಬಂದಿದೆ. ಈ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಎಂಜಿನಿಯರ್‌ಗಳು ತಾತ್ಕಾಲಿಕವಾಗಿ ಲೆವಲ್ ಕ್ರಾಸಿಂಗ್ ಅಳವಡಿಸಲಾಗುತ್ತದೆ. ಫ್ಲೈಒವರ್ ಕೆಲಸವೂ ಆರಂಭಗೊಳ್ಳಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT