ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ಜಿಲ್ಲಾಸ್ಪತ್ರೆ ರೋಗಿಗಳಿಗೆ ಅರೆಝಳದ ಸಂಕಟ

ಕಾರ್ಯನಿರ್ವಹಿಸದ ಎ.ಸಿ., ಪರದಾಡುತ್ತಿರುವ ರೋಗಿಗಳು
Published 23 ಫೆಬ್ರುವರಿ 2024, 20:53 IST
Last Updated 23 ಫೆಬ್ರುವರಿ 2024, 20:53 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲು ತೀವ್ರವಾಗಿ ಏರಿಕೆಯಾಗುತ್ತಿದ್ದು, ಇಲ್ಲಿನ ಜಿಲ್ಲಾಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್‌ಐಸಿಯು) ಹವಾನಿಯಂತ್ರಿತ ಸೌಲಭ್ಯ ಕಾರ್ಯನಿರ್ವಹಿಸದ ಪರಿಣಾಮ ರೋಗಿಗಳು ಪರದಾಡುವಂತಾಗಿದೆ.

ಹಲವು ದಿನಗಳಿಂದ ಜಿಲ್ಲೆಯಲ್ಲಿ ಬಿಸಿಲು ಏರಿಕೆಯಾಗುತ್ತಲೇ ಇದೆ. ಅರೆಝಳದ ಸಂಕಟ ತಡೆಯಲಾಗದೆ ಜನ ತಂಪಿನ ಮೊರೆ ಹೋಗುತ್ತಿದ್ದಾರೆ. ಆದರೆ, ಜಿಲ್ಲಾಸ್ಪತ್ರೆಯಲ್ಲಿ ಎ.ಸಿ. ಇದ್ದರೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಫ್ಯಾನ್‌ಗಳೂ ಇಲ್ಲ. ಚಿಕಿತ್ಸೆಗಾಗಿ ದಾಖಲಾಗಿರುವ ಮಕ್ಕಳು ಹಾಗೂ ಅವರ ಪೋಷಕರು ಬಿಸಿಲಿನ ಝಳಕ್ಕೆ ಆಸ್ಪತ್ರೆಯೊಳಗೆ ಸಂಕಟ ಅನುಭವಿಸುವಂತಾಗಿದೆ.

ಅನಾರೋಗ್ಯದಿಂದ ಗುಣಮಖರಾದರೆ ಸಾಕು ಎಂದು ಪೋಷಕರು ತಮ್ಮ ಮಕ್ಕಳಿಗೆ ರಟ್ಟು, ಟವಲ್‌ಗಳನ್ನು ಬೀಸುವ ಮೂಲಕ ಗಾಳಿ ಹಾಕುತ್ತಿದ್ದಾರೆ. ಈ ವಾರ್ಡ್‌ನಲ್ಲಿ ಸುಟ್ಟು ಗಾಯಗಳಾದ ಮಕ್ಕಳು ಸೇರಿದಂತೆ ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ನಿರ್ವಹಣೆಯ ಹೊಣೆ ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯದ್ದಾಗಿದೆ. 

‘ಹಗಲು ಹೊತ್ತಿನಲ್ಲಾದರೆ ರಟ್ಟು ಬೀಸಿ ಗಾಳಿ ನೀಡಿ ಮಕ್ಕಳನ್ನು ಆರೈಕೆ ಮಾಡಬಹುದು. ರಾತ್ರಿ ಪೂರ್ತಿ ಹೀಗೆಯೇ ಮಾಡಲು ಹೇಗೆ ಸಾಧ್ಯ? ಹೊರಗಿನಿಂದಲೂ ಗಾಳಿ ಬರುವುದಿಲ್ಲ. ಅರೆಝಳಕ್ಕೆ ಸಾಕಾಗಿ ಹೋಗಿದೆ’ ಎಂದು ಮಗುವಿನ ಪೋಷಕರೊಬ್ಬರು ನೋವು ತೋಡಿಕೊಂಡರು.

‘ಜಿಲ್ಲಾಸ್ಪತ್ರೆಯಲ್ಲಿ ನಾಲ್ಕು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ. ಉತ್ತಮ ಚಿಕಿತ್ಸೆ ನೀಡಲಾಗುತ್ತಿದ್ದರೂ ಎ.ಸಿ. ಕೆಲಸ ಮಾಡದ ಕಾರಣ ನಿತ್ಯ ರಾತ್ರಿ ನಿದ್ದೆಯೇ ಬರುತ್ತಿಲ್ಲ. ಬಿಸಿಲು ಹೆಚ್ಚಿರುವುದರಿಂದ ಸಮಸ್ಯೆ ಪರಿಹರಿಸಿ ಎಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಕೊಪ್ಪಳ ತಾಲ್ಲೂಕಿನ ಕಾಸನಕಂಡಿ ಗ್ರಾಮದ ಸಿದ್ದಪ್ಪ ಬೇಸರ ವ್ಯಕ್ತಪಡಿಸಿದರು.

‘ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗುವವರಲ್ಲಿ ಹಳ್ಳಿಗಳ ಜನರೇ ಹೆಚ್ಚು. ಎನ್‌ಐಸಿಯು ಘಟಕ ಸೂಕ್ಷ್ಮ ಜಾಗವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಒಳಗಡೆ ಬರಬೇಡಿ ಎಂದು ಹೇಳಿದರೂ ಕೇಳುವುದಿಲ್ಲ. ಹೀಗಾಗಿ ಘಟಕದ ಒಳಗೆ ಎ.ಸಿ. ಇದ್ದರೂ ರೋಗಿಗಳಿಗೆ ಅನುಕೂಲವಾಗುತ್ತಿಲ್ಲ’ ಎಂದು ಆಸ್ಪತ್ರೆ ಸಿಬ್ಬಂದಿಯೊಬ್ಬರು ತಿಳಿಸಿದರು.

ಆಸ್ಪತ್ರೆಗೆ ದಾಖಲಾಗುವ ರೋಗಿಗಳನ್ನು ನೋಡಲು ಸಂಬಂಧಿಕರು ಹೆಚ್ಚಾಗಿ ಬರುತ್ತಾರೆ. ಪದೇ ಪದೇ ಬಂದು ಹೋಗುವುದರಿಂದ ಎ.ಸಿ. ಪ್ರಮಾಣ ಕಡಿಮೆಯಾಗುತ್ತಿದ್ದು ಸಮಸ್ಯೆಯಿದ್ದರೆ ಸರಿಪಡಿಸಲಾಗುವುದು

–ವಿಜಯನಾಥ ಇಟಗಿ ಕಿಮ್ಸ್‌ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT