ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಲಬುರ್ಗಾ | ಅಗತ್ಯಸೌಲಭ್ಯಗಳಿಲ್ಲದ ವಸತಿ ನಿಲಯ

ಯಲಬುರ್ಗಾ: ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ಅವ್ಯವಸ್ಥೆ
ಉಮಾಶಂಕರ ಹಿರೇಮಠ
Published 30 ನವೆಂಬರ್ 2023, 5:51 IST
Last Updated 30 ನವೆಂಬರ್ 2023, 5:51 IST
ಅಕ್ಷರ ಗಾತ್ರ

ಯಲಬುರ್ಗಾ: ಅಗತ್ಯ ಸೌಲಭ್ಯವಿಲ್ಲದೇ ತರಾತುರಿಯಾಗಿ ಪ್ರಾರಂಭಿಸಿರುವ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮೆಟ್ರಿಕ್‍ ನಂತರದ ಬಾಲಕರ ವಸತಿನಿಲಯ ಇದ್ದೂ ಇಲ್ಲದಂತಿದೆ. ಕಳೆದ ಆರೇಳು ತಿಂಗಳ ಹಿಂದಷ್ಟೇ ಶುರುವಾಗಿರುವ ಈ ನಿಲಯವು ಅಭಿವೃದ್ಧಿ ಕಾಣದ ನಿವೇಶನಗಳ ಮಧ್ಯೆ ತಲೆ ಎತ್ತಿದೆ.

ಪಟ್ಟಣದಿಂದ ಸುಮಾರು ಮೂರೂವರೆ ಕಿ.ಮೀ ಅಂತರದಲ್ಲಿ ಕೊಪ್ಪಳ ರಸ್ತೆಗೆ ಹೊಂದಿಕೊಂಡಿರುವ ಸರ್ವಮಂಗಳ ಹೊಸ ಬಡಾವಣೆಯಲ್ಲಿ ತಲೆ ಎತ್ತಿದ ಏಕೈಕ ಕಟ್ಟಡ ಇದಾಗಿದೆ. ಒಳ್ಳೆಯ ರಸ್ತೆಯಾಗಲಿ, ಗುಣಮಟ್ಟದ ನೀರು, ಸೂಕ್ತ ಭದ್ರತೆಯಾಗಲಿ ಇಲ್ಲಿ ಗಗನಕುಸುಮ. ಕಾಲೇಜಿಗೆ ಹೋಗಿ ಬರುವ ನಿಲಯದ ವಿದ್ಯಾರ್ಥಿಗಳು ನಿತ್ಯ ಹರಸಾಹಸ ಪಡಬೇಕು. ಬಸ್ ಸೌಲಭ್ಯವಿಲ್ಲದ ಕಾರಣ ನಡೆದು ಬರಬೇಕಾದ ಪರಿಸ್ಥಿತಿಯಿದೆ. ಈಗ ಹತ್ತಿರದಲ್ಲಿಯೇ ರೈಲು ಮಾರ್ಗಹಾದು ಹೋಗಿರುವುದರಿಂದ ಅದಕ್ಕೆ ನಿರ್ಮಾಣಗೊಂಡಿರುವ ಮೇಲ್ಸೇತುವೆಯಿಂದಾಗಿ ಮತ್ತಷ್ಟು ಅಸ್ತವ್ಯಸ್ತಕ್ಕೆ ಕಾರಣವಾಗಿದೆ.

ನಿಲಯದಲ್ಲಿಯೇ ಶುದ್ಧ ನೀರಿನ ಘಟಕ ಸ್ಥಾಪನೆಯಾಗಿದ್ದರೂ ಗಡಸುನೀರಿನ ಸಮಸ್ಯೆಯಿಂದ ಇದು ಬಳಕೆಯಾಗುತ್ತಿಲ್ಲ. ತೀರಾ ಸವಳು ನೀರು ಇರುವುದರಿಂದ ಘಟಕದ ಯಂತ್ರದಿಂದಲೂ ನೀರು ಶುದ್ಧವಾಗದೇ ಪದೇ ಪದೇ ಕೆಟ್ಟು ಹೋಗುತ್ತಿದೆ. 

ನಿರ್ಮಿತಿಕೇಂದ್ರದ ಉಸ್ತುವಾರಿಯಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡ ಅನೇಕ ಕಡೆಗಳಲ್ಲಿ ಬಿರುಕು ಬಿಟ್ಟಿದೆ. ಬಣ್ಣ ಮತ್ತು ಸಿಮೆಂಟ್ ಉದುರುತ್ತಿದೆ. ಸ್ನಾನ ಮತ್ತು ಶೌಚಾಲಯ ಕೊಠಡಿಗಳ ಬಾಗಿಲು ಕಿತ್ತು ಹೋಗಿವೆ. ಶೌಚಾಲಯ ಮತ್ತು ಸ್ನಾನದ ನೀರು ಒಂದೇ ಗುಂಡಿಗೆ ಜೋಡಿಸಿದ್ದರ ಪರಿಣಾಮ ಗುಂಡಿ ತುಂಬಿ ಕೊಳೆನೀರು ಹೊರಗಡೆ ಹರಿಯುತ್ತಿದೆ. 

ನಿಲಯಕ್ಕೆ ರಸ್ತೆ ನೀಡಿರುವ ಅಕ್ಕಪಕ್ಕದ ರೈತರಿಗೆ ಕೂಡಾ ಇನ್ನೂವರೆಗೂ ಸರ್ಕಾರ ಪರಿಹಾರ ನೀಡಿಲ್ಲ. ಅದಕ್ಕಾಗಿ ರಸ್ತೆ ಬಂದ್ ಮಾಡುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿ ಆಗಾಗ ರಸ್ತೆಯನ್ನು ಬಂದ್ ಮಾಡುತ್ತಾರೆ.

‘ಅಡುಗೆ ಮಾಡುವ ಇಬ್ಬರು ಮಹಿಳೆಯರು ಕೆಲಸ ಮುಗಿಸಿ ಮನೆಗೆ ಹೋಗಬೇಕಾದರೆ ಸಂಜೆಯಾಗುತ್ತದೆ. ರಸ್ತೆಯ ಅಕ್ಕಪಕ್ಕ ಮುಳ್ಳಿನ ಗಿಡಗಳು, ರಸ್ತೆಯುದ್ದಕ್ಕೂ ತಗ್ಗುದಿನ್ನೆಗಳು, ಮುಖ್ಯ ರಸ್ತೆಗೆ ಸೇತುವೆಯ ದೊಡ್ಡದಾದ ಗೋಡೆ ನಿರ್ಮಾಣಗೊಂಡಿದೆ, ರಸ್ತೆ ಬದಿಯಲ್ಲಿ ಯಾವುದೇ ವಿದ್ಯುತ್ ದೀಪಗಳಿಲ್ಲದೇ ಕತ್ತಲು ಆವರಿಸುವ ಈ ಭಯದ ಸನ್ನಿವೇಶಗಳ ನಡುವೆ ಆತಂಕದಲ್ಲಿಯೇ ನಿತ್ಯ ಬಂದು ಹೋಗಬೇಕಾದ ಅನಿವಾರ್ಯತೆ ಅಡುಗೆ ಅವರಿಗಿದೆ. ಆದ್ದರಿಂದ ಹಾಸ್ಟೆಲ್‌ಗೆ ತುರ್ತಾಗಿ ಸೌಲಭ್ಯ ಕಲ್ಪಿಸಬೇಕು’ ಎಂದು ಯುವ ಮುಖಂಡ ಶರಣಪ್ಪ ಪಾಟೀಲ ಒತ್ತಾಯಿಸಿದ್ದಾರೆ.

ವಸತಿ ನಿಲಯಕ್ಕೆ ಹೋಗುವ ದಾರಿಯ ಅವ್ಯವಸ್ಥೆ 
ವಸತಿ ನಿಲಯಕ್ಕೆ ಹೋಗುವ ದಾರಿಯ ಅವ್ಯವಸ್ಥೆ 
ವಸತಿನಿಲಯದಲ್ಲಿ ಅಳವಡಿಸಿದ ಶುದ್ಧ ನೀರಿನ ಘಟಕ ಇದ್ದೂ ಇಲ್ಲದಂತಿದೆ. ಹೊರಗಡೆಯಿಂದಲೇ ಕುಡಿಯುವ ನೀರು ತರಬೇಕಾಗಿದೆ
ವಸತಿನಿಲಯದಲ್ಲಿ ಅಳವಡಿಸಿದ ಶುದ್ಧ ನೀರಿನ ಘಟಕ ಇದ್ದೂ ಇಲ್ಲದಂತಿದೆ. ಹೊರಗಡೆಯಿಂದಲೇ ಕುಡಿಯುವ ನೀರು ತರಬೇಕಾಗಿದೆ

ಸಾರಿಗೆ ಸೌಲಭ್ಯ ವ್ಯವಸ್ಥೆಯಿಲ್ಲ ನಿಲಯಕ್ಕೆ ಹೋಗಲು ರಸ್ತೆಯಿಲ್ಲ ರಸ್ತೆಪಕ್ಕ ವಿದ್ಯುತ್‌ ದೀಪಗಳಿಲ್ಲ

‘ಕಟ್ಟಡ ಇಲಾಖೆಗೆ ಹಸ್ತಾಂತರಗೊಂಡಿಲ್ಲ’ ‘ನಿರ್ಮಿತಿ ಕೇಂದ್ರದಿಂದ ಕಟ್ಟಡ ಇನ್ನೂ ಇಲಾಖೆಗೆ ಹಸ್ತಾಂತರಗೊಂಡಿಲ್ಲ ಮೇಲಧಿಕಾರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಸುವುದು ಬೇಡ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸುವುದಂತೆ ಒತ್ತಡ ಹಾಕಿದ್ದರಿಂದ ಈ ಕಟ್ಟಡಕ್ಕೆ ಬರಲಾಗಿದೆ. ಸಾಕಷ್ಟು ಕೆಲಸ ಬಾಕಿಯಿದೆ. ಈ ಬಗ್ಗೆ ಇಲಾಖೆಯ ಮೇಲಧಿಕಾರಿಗಳಿಗೂ ಶಾಸಕರಿಗೂ ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೂ ಹಲವು ಬಾರಿ ಪತ್ರ ಬರೆಯಲಾಗಿದೆ. ಇನ್ನೂ ಪರಿಹಾರ ಸಿಕ್ಕಿಲ್ಲ’ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿನಿಲಯದ ಮೇಲ್ವಿಚಾರಕ ಮೂಕಪ್ಪ ಕೆ.ಎನ್. ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT