ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರಿ ಬಿಸಿಲು: ‘ಹೊಟ್ಟೆಪಾಡಿನ ಮುಂದ ಬಿಸಿಲು ಲೆಕ್ಕಕ್ಕೇ ಇಲ್ರಿ’

ವ್ಯಾಪಾರಿಗಳಿಗೆ ಹರಿದ ಕೊಡೆಯೇ ನೆರಳಿಗೆ ಆಧಾರ, ತಂಪು ಪಾನೀಯ ಮಾರುವವನ ಬದುಕೂ ಬಿಸಿ ಬಿಸಿ
Published 5 ಏಪ್ರಿಲ್ 2024, 6:22 IST
Last Updated 5 ಏಪ್ರಿಲ್ 2024, 6:22 IST
ಅಕ್ಷರ ಗಾತ್ರ

ಕೊಪ್ಪಳ: ‘ನೀವು ಹೇಳಿದಂಗ ಬಿಸಿಲು ಭಾಳ್‌ ಐತ್ರಿ, ತಡಿಯೋಕೆ ಆಗದಷ್ಟು ಬಿಸಿಗಾಳಿ ಬರ್ತೈತಿ. ಆದರೆ ನಾನು ದುಡಿದಿದ್ರ ನಾವೆಲ್ಲ ಉಪವಾಸ ಸಾಯಬೇಕಾಗುತ್ತೈತೆ. ಬಡತನದ ಸಂಕಷ್ಟದ ಮುಂದೆ ಈ ಬಿಸಿಲು ಯಾವ ಲೆಕ್ಕಕ್ಕೂ ಇಲ್ರೀ...’

ಇಲ್ಲಿನ ಕೇಂದ್ರಿಯ ಬಸ್‌ ನಿಲ್ದಾಣದ ಸುತ್ತಮುತ್ತಲೂ ಮೂರು ದಶಕಗಳಿಂದ ಬಾಳೆಹಣ್ಣು, ದ್ರಾಕ್ಷಿಹಣ್ಣು ಹೀಗೆ ತರಹೇವಾರಿ ಹಣ್ಣುಗಳ ವ್ಯಾಪಾರದಲ್ಲಿ ತೊಡಗಿರುವ ಕೊಪ್ಪಳ ತಾಲ್ಲೂಕಿನ ಮಂಗಳಾಪುರ ಗ್ರಾಮದ ರೇಣವ್ವ ಅವರ ಮಾತುಗಳು ಇವು.

ಬಸ್‌ಗಳು ನಿಲ್ದಾಣ ಪ್ರವೇಶಿಸುವ ಮಾರ್ಗದಲ್ಲಿ ಬಿರುಬಿಸಿಲಿನ ನಡುವೆ ಕುಳಿತು ನಿತ್ಯ ಹಣ್ಣಿನ ವ್ಯಾಪಾರ ಮಾಡುತ್ತಾರೆ. ಬೆಳಿಗ್ಗೆ ಆರೇಳು ಗಂಟೆಗೆ ಶುರುವಾದರೆ 12 ತಾಸು ದುಡಿಮೆ. 40 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಷ್ಟು ಬಿಸಿಲು ಇರುವ ನಿತ್ಯದ ವಾತಾವರಣವಿರುವ ಜಿಲ್ಲೆಯಲ್ಲಿ ಅವರು ಈ ಬಿಸಿಲಿನ ಅಪಾಯ, ಪರಿಣಾಮದ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ.

ದಿನಕ್ಕೆ ಕನಿಷ್ಠ 10ರಿಂದ 12 ಬುಟ್ಟಿಗಳಷ್ಟು ಹಣ್ಣುಗಳನ್ನು ಮಾರಾಟ ಮಾಡಿ ಗಳಿಸುವ ₹300ರಿಂದ ₹400 ಆದಾಯ ಮನೆಗೆ ತೆಗೆದುಕೊಂಡು ಹೋಗಬೇಕು, ಈ ಮಹಿಳೆಯನ್ನು ನಂಬಿ ಕುಳಿತ ಮನೆಯವರನ್ನು ಸಾಕಬೇಕಾದ ಹೊಣೆಗಾರಿಕೆ ರೇಣವ್ವ ಅವರ ಮೇಲಿದೆ.

‘ಬಿಸಿಲಿಗೆ ಹೆದರಿದರೆ ನಮ್ಮ ಕುಟುಂಬದವರ ಹೊಟ್ಟೆ ತುಂಬೋದು ಯಾವಾಗ? ಗಂಡ ದುಡಿಯುವುದಿಲ್ಲ, ಮಕ್ಕಳೂ ನನ್ನ ಮೇಲೆ ಅವಲಂಬನೆ. ಹೀಗಾಗಿ ನಿತ್ಯ ದುಡಿಯುವುದು ಅನಿವಾರ್ಯ’ ಎಂದು ರೇಣವ್ವ ಹೇಳಿದರು.

ಇದು ರೇಣವ್ವ ಅವರ ಬದುಕಿನ ಕಥೆಯಷ್ಟೇ ಅಲ್ಲ. ಬೀದಿಬದಿ ವ್ಯಾಪಾರ ಮಾಡುತ್ತಿರುವ ಅನೇಕ ಜನ ಹೆಣ್ಣುಮಕ್ಕಳು, ಅಂಗವಿಕಲರು, ಪುರುಷರ ಬದುಕಿನ ವ್ಯಥೆಯಿದು. ಬೀದಿ ಬದಿ ಹಣ್ಣುಗಳು, ಹೂ, ತರಕಾರಿ, ತಂಪು ಪಾನೀಯ, ಇನ್ನೊಬ್ಬರ ಬದುಕಿಗೆ ತಂಪು ನೀಡುವ ಟೊಪ್ಪಿಗೆ, ಕೂಲಿಂಗ್‌ ಗ್ಲಾಸ್‌, ಮನೆಮನೆಗೆ ಬುಟ್ಟಿ ಹೊತ್ತು ತರಕಾರಿಗಳ ಮಾರಾಟ ಮಾಡುವವರು ಹೀಗೆ ವ್ಯಾಪಾರಿಗಳ ಬದುಕು ದಿನಪೂರ್ತಿ ‘ಬಿಸಿ ಬಿಸಿ‘ಯಾಗಿಯೇ ಇರುತ್ತದೆ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದು ಎ.ಸಿ., ಫ್ಯಾನ್‌ ಹಾಕಿಕೊಂಡು ಮನೆಯಲ್ಲಿದ್ದರೂ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂಥ ವಿಷಮ ಪರಿಸ್ಥಿತಿಯಲ್ಲಿಯೂ ಬೀದಿಬದಿ ವ್ಯಾಪಾರಿಗಳು ಹೊಟ್ಟೆ ಹೊರೆಯಲು ನಿತ್ಯ ತಮ್ಮನ್ನು ತಾವೇ ಸುಟ್ಟುಕೊಳ್ಳುತ್ತಿದ್ದಾರೆ. ಇವರಿಗೆಲ್ಲ ಹರಿದು ಹೋದ ಸಣ್ಣದೊಂದು ಕೊಡೆಯೇ ನೆರಳಿಗೆ ಆಧಾರವಾಗಿದೆ.

ಕೇಂದ್ರಿಯ ಬಸ್‌ ನಿಲ್ದಾಣದಲ್ಲಿ ಗೊಂಡಬಾಳದ ರಾಮಣ್ಣ ಹೂಗಾರ ಮತ್ತು ಹಲಗೇರಿಯ ಮಂಜುನಾಥ ಹೂಗಾರ ಅವರು ಮೇಲಿಂದ ಮೇಲೆ ನೀರು ಹೊಡೆದು ತಂಪು ಮಾಡಿ ಹೂವಿನ ವ್ಯಾಪಾರ ಮಾಡುತ್ತಾರೆ. ಆದರೆ ಅವರ ಬದುಕು ಮಾತ್ರ ತಂಪಿಲ್ಲ. ಕೇಂದ್ರಿಯ ಬಸ್‌ ನಿಲ್ದಾಣ, ಲೇಬರ್‌ ವೃತ್ತ, ಅಶೋಕ ಸರ್ಕಲ್‌, ಜವಾಹರ ರಸ್ತೆ ಹೀಗೆ ಅನೇಕ ಕಡೆ ವ್ಯಾಪಾರಿಗಳು ಬಿಸಿಲಿನಲ್ಲಿಯೇ ವಹಿವಾಟು ನಡೆಸಬೇಕಾಗಿದೆ.

ದಿನನಿತ್ಯದ ಹೊಟ್ಟೆ ಹೊರೆಯಲು ತಲೆಮೇಲೆ ಬುಟ್ಟಿಹೊತ್ತು ಸಾಗಿದ ಮಹಿಳೆಯರು
ದಿನನಿತ್ಯದ ಹೊಟ್ಟೆ ಹೊರೆಯಲು ತಲೆಮೇಲೆ ಬುಟ್ಟಿಹೊತ್ತು ಸಾಗಿದ ಮಹಿಳೆಯರು
ಕುಷ್ಟಗಿ ಪಟ್ಟಣದಲ್ಲಿ ಎಳೆನೀರು ವ್ಯಾಪಾರದಲ್ಲಿ ತೊಡಗಿದ್ದ ವ್ಯಾಪಾರಿ
ಕುಷ್ಟಗಿ ಪಟ್ಟಣದಲ್ಲಿ ಎಳೆನೀರು ವ್ಯಾಪಾರದಲ್ಲಿ ತೊಡಗಿದ್ದ ವ್ಯಾಪಾರಿ

ಎಳೆನೀರಿಗೆ ಬಂತು ಬಂಪರ್‌ ಬೇಡಿಕೆ

ಬೆಲೆಯೂ ದುಪ್ಪಟ್ಟು ಕುಷ್ಟಗಿ: ಬಿಸಿಲು ಹೆಚ್ಚುತ್ತಿರುವ ಕಾರಣಕ್ಕೆ ಜನರು ತತ್ತರಿಸುತ್ತಿದ್ದು ಎಳೆನೀರಿಗೆ ಭಾರಿ ಬೇಡಿಕೆ ಬರುತ್ತಿದೆ. ಬೆಲೆಯೂ ದುಪ್ಪಟ್ಟಾಗಿದೆ.  ಕಂದಾಯ ಇಲಾಖೆ ಮೂಲಗಳ ಪ್ರಕಾರ ಕಳೆದ ಎರಡು ಮೂರುದ ದಿನಗಳಲ್ಲಿ ಪಟ್ಟಣದ ಗರಿಷ್ಟ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಜಿಲ್ಲೆಯಲ್ಲಿಯೇ ತಂಪು ಪ್ರದೇಶ ಎಂದೆ ಈ ಪಟ್ಟಣ ಕರೆಯಿಸಿಕೊಳ್ಳುತ್ತಿದ್ದರೂ ಬಿಸಿಲಿನ ಪ್ರಕೋಪ ಹೆಚ್ಚುತ್ತಿರುವುದು ಜನರನ್ನು ಕಂಗಾಲಾಗುವಂತೆ ಮಾಡಿದೆ. ಎಳೆನೀರಿನ ಬೆಲೆ ₹50ಕ್ಕೆ ಏರಿಕೆಯಾಗಿದೆ. ‘ಎಳೆನೀರಿನ ಕಾಯಿಗಳು ಸ್ಥಳೀಯವಾಗಿ ದೊರಕುವುದಿಲ್ಲ ಮಂಡ್ಯ ಜಿಲ್ಲೆ ಮದ್ದೂರುನಿಂದ ಖರೀದಿಸಬೇಕಿದೆ. ಸ್ಥಳದಲ್ಲಿಯೇ ತಲಾ ಕಾಯಿಗೆ ₹35 ದರ ನಿಗದಿಯಾಗಿದೆ. ಸಾಗಾಣಿಕೆ ವೆಚ್ಚ ತೆಗೆದು ಲಾಭ ಉಳಿಸಿಕೊಳ್ಳಬೇಕು. ಹೆಚ್ಚಿನ ದರ ಹೇಳಿದರೆ ಗ್ರಾಹಕರು ಜಗಳ ತೆಗೆಯುತ್ತಿದ್ದು ಮಾರಾಟ ಕಷ್ಟದ ಕೆಲಸವಾಗಿದೆ’ ಎಂದು ವ್ಯಾಪಾರಿಗಳಾದ ಜಾವೇದ್ ಶರಣಪ್ಪ ಹೇಳಿದರು. ರಸ್ತೆಗಳು ಕಾದ ಬಾಣಲೆಯಂತಾಗಿದ್ದರೆ ಮನೆಗಳ ಚಾವಣಿ ಗೋಡೆಗಳು ಅಷ್ಟೇ ಅಲ್ಲ ಮನೆಯಲ್ಲಿನ ಬಟ್ಟೆ ಇತರೆ ಎಲ್ಲ ವಸ್ತುಗಳೂ ಬಿಸಿಯಾಗುತ್ತಿವೆ. ಹೊರಗೆ ಹೋಗುವಂತಿಲ್ಲ ಮನೆಯಲ್ಲಿ ಇರುವಂತೆಯೂ ಇಲ್ಲ ಫ್ಯಾನ್‌ಗಳು ಬಿಸಿ ಗಾಳಿಯನ್ನೇ ಬೀಸುತ್ತಿವೆ. ಮಾಳಿಗೆ ಮೇಲಿನ ತೊಟ್ಟಿಗಳಲ್ಲಿನ ನೀರು ಸಹ ಬಿಸಿಯಾಗಿರುತ್ತದೆ ಎಂದು ಜನರು ಬೇಸಿಗೆ ಸ್ಥಿತಿ ವಿವರಿಸಿದರು. ವ್ಯಾಪಾರಿಗಳು ಕಡಿಮೆ ಗುಣಮಟ್ಟ ಹಾಗೂ ಗಾತ್ರದ ಕಾಯಿಗಳನ್ನು ಖರೀದಿಸಿ ತಂದು ಇಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬುದು ಗ್ರಾಹಕರ ಅಸಮಾಧಾನ. ಜನ ತಂಪು ಪಾನೀಯ ಕೇಳುತ್ತಿದ್ದು ಚಹಾ ಕಾಫಿ ವ್ಯಾಪಾರದ ಮೇಲೂ ಪರಿಣಾಮ ಬೀರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT