ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ಲೋಕಸಭಾ ಕ್ಷೇತ್ರ | ಚುನಾವಣಾ ಕಣದಲ್ಲಿ ವೈದ್ಯ, ಎಂಜಿನಿಯರ್‌...

ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಕುತೂಹಲಕಾರಿ
Published 27 ಏಪ್ರಿಲ್ 2024, 5:58 IST
Last Updated 27 ಏಪ್ರಿಲ್ 2024, 5:58 IST
ಅಕ್ಷರ ಗಾತ್ರ

ಕೊಪ್ಪಳ: ಲೋಕಸಭಾ ಚುನಾವಣೆಯ ಮತದಾನಕ್ಕೆ ದಿನಗಣನೆ ಶುರುವಾಗಿದ್ದು, ಅಭ್ಯರ್ಥಿಗಳ ವೈಯಕ್ತಿಕ ವಿವರಗಳ ಕೂಡ ಜನರಲ್ಲಿ ಕುತೂಹಲ ಮೂಡಿಸಿವೆ. ನಮ್ಮನ್ನು ಆಳಲು ಬಯಸಿ ನಾಮಪತ್ರ ಸಲ್ಲಿಸಿರುವ ಸಂಸದ ಸ್ಥಾನದ ಆಕಾಂಕ್ಷಿಗಳ ಶೈಕ್ಷಣಿಕ ವಿದ್ಯಾರ್ಹತೆ ಏನು ಎನ್ನುವ ಚರ್ಚೆಯೂ ಶುರುವಾಗಿದೆ.

ಬಿಜೆಪಿ ಅಭ್ಯರ್ಥಿಯಾಗಿರುವ ಡಾ. ಬಸವರಾಜ ಕ್ಯಾವಟರ್‌ ಎಂ.ಎಸ್‌. ಆರ್ಥೊಪೆಡಿಕ್‌ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದರೆ, ಕೆಲ ಅಭ್ಯರ್ಥಿಗಳು ಏನೂ ಓದಿಯೇ ಇಲ್ಲ. ಇನ್ನೂ ಕೆಲವರು, ಎರಡನೇ ತರಗತಿ, ಇನ್ನೂ ಕೆಲವರು ಪಿಯುಸಿ ಹಾಗೂ ಪದವಿ ಮುಗಿಸಿದ್ದಾರೆ. ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಕ್ಯಾವಟರ್‌ ಅವರದ್ದೇ ಗರಿಷ್ಠ ವಿದ್ಯಾರ್ಹತೆಯಾಗಿದೆ.

ಪಕ್ಷೇತರರಾಗಿರುವ ನಾಗರಾಜ್‌ ಕಲಾಲ್‌ 2008–09ರಲ್ಲಿ ಮೈಸೂರಿನ ಮಾನಸ ಗಂಗೋತ್ರಿ ವಿ.ವಿ.ಯಿಂದ ದೂರ ಶಿಕ್ಷಣದ ಮೂಲಕ ಎಂ.ಎ. ಕನ್ನಡ ಸ್ನಾತಕೋತ್ತರ ಪದವಿ ಪಡೆದರೆ, ಪ.ಯು. ಗಣೇಶ ಪದವಿ, ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಕೆ. ರಾಜಶೇಖರ ಹಿಟ್ನಾಳ ಧಾರವಾಡದ ಜೆಎಸ್‌ಎಸ್‌ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪಿಯುಸಿ ಪೂರ್ಣಗೊಳಿಸಿದ್ದಾರೆ.

ಪ‍ಕ್ಷೇತರ ಅಭ್ಯರ್ಥಿ ಕರೀಂಪಾಶ ಗಚ್ಚಿನಮನಿ ಎಸ್ಸೆಸ್ಸೆಲ್ಸಿ ಓದಿದ್ದರೆ, ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ, ಕರ್ನಾಟಕ ಪಕ್ಷದ ಸಿ. ಶರಣಬಸಪ್ಪ ಎಸ್ಸೆಸ್ಸೆಲ್ಸಿ, ಆಲ್‌ ಇಂಡಿಯಾ ಉಲಾಮಾ ಕಾಂಗ್ರೆಸ್‌ ಪಕ್ಷದ ರಮನಾಜಬಿ ಏನೂ ಓದಿಯೇ ಇಲ್ಲ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾಗಿರುವ ಕಾಳಪ್ಪ ಬಡಿಗೇರ ವಿಶ್ವಕರ್ಮ ಗದಗ ಬೆಟಗೇರಿಯಲ್ಲಿ ನಾಲ್ಕನೇ ತರಗತಿ ಓದಿದ್ದರೆ, ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಶಂಕರ ಗಂಗಾವತಿಯ ಕೊಲ್ಲಿ ನಾಗೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ಪೂರ್ಣಗೊಳಿಸಿದ್ದು, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯಲ್ಲಿ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದಾರೆ.

ಸರ್ವ ಜನತಾ ಪಕ್ಷದ ಅಭ್ಯರ್ಥಿ ಜಿ. ಅನೋಜಿ ರಾವ್‌ ಬಿ.ಎ. ದ್ವಿತೀಯ ವರ್ಷ ಮಾತ್ರ ಮುಗಿಸಿದ್ದರೆ, ಪಕ್ಷೇತರರಾಗಿರುವ ಕರಡಿ ಬಸವರಾಜ ಬಿ.ಎ., ಎಸ್‌ಯುಸಿಐ ಸೋಷಲಿಸ್ಟ್‌ ಪಕ್ಷದ ಶರಣಪ್ಪ ಗಡ್ಡಿ ಬಿ.ಎ. ದ್ವಿತೀಯ ವರ್ಷ ಓದಿದ್ದಾರೆ. ಚಾಲೆಂಜರ್ಸ್‌ ಪಾರ್ಟಿ ಅಭ್ಯರ್ಥಿ ಬಳ್ಳಾರಿಯ ಡಿ. ದುರ್ಗಾಪ್ರಸಾದ್ ಬ್ಯಾಟರಾಯನಜಿ ಬಿ.ಇ. ಸಿವಿಲ್ ಎಂಜಿನಿಯರ್‌, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನಿರುಪಾದಿ ಕೆ. ಗೋಮರ್ಸಿ ಬಿ.ಎ. ಪದವಿ, ಪಕ್ಷೇತರ ಅಭ್ಯರ್ಥಿ ಕುಷ್ಟಗಿಯ ಇಮಾಮಸಾಬ್‌ ಜಂಗ್ಲಿಸಾಬ್‌ ಮುಲ್ಲಾ 8ನೇ ತರಗತಿ ಓದಿದ್ದಾರೆ.

ವೃತ್ತಿಯಲ್ಲಿ ಫ್ಯಾಷನ್‌ ಡಿಸೈನರ್‌ ಆಗಿರುವ ಬಳ್ಳಾರಿಯ ರುಕ್ಮಿಣಿ ದ್ವಿತೀಯ ಪಿಯುಸಿ, ಹಿಂದಿನ ಹಲವು ಚುನಾವಣೆಗಳಲ್ಲಿ ಸ್ಪರ್ಧೆ ಮಾಡಿರುವ ಕೊಪ್ಪಳದ ಮಲ್ಲಿಕಾರ್ಜುನ ಹಡಪದ 2ನೇ ತರಗತಿ ಮ್ತು  ಸುರೇಶಗೌಡ ಮುಂದಿನಮನಿ 5ನೇ ತರಗತಿ ವಿದ್ಯಾಭ್ಯಾಸ ಮಾಡಿದ್ದಾರೆ. ಶಾಖಾಪುರದ ಹನಮೇಶ ಎಸ್‌.ಎಚ್‌. ಪಿಯುಸಿ ಪೂರ್ಣಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT