ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ಲೋಕಸಭಾ ಚುನಾವಣೆ: ಬಿಜೆಪಿ ಕೋಟೆ ಕೆಡವಿದ ರಾಜಶೇಖರ ಹಿಟ್ನಾಳ

ಸಿರಗುಪ್ಪ, ಗಂಗಾವತಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಮತಫಸಲು
Published 5 ಜೂನ್ 2024, 6:59 IST
Last Updated 5 ಜೂನ್ 2024, 6:59 IST
ಅಕ್ಷರ ಗಾತ್ರ

ಕೊಪ್ಪಳ: ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ 46,357 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು, ಹಿಂದಿನ ಮೂರೂ ಚುನಾವಣೆಗಳಲ್ಲಿ ಬಿಜೆಪಿ ಕಟ್ಟಿದ್ದ ಹ್ಯಾಟ್ರಿಕ್‌ ಗೆಲುವಿನ ಕೋಟೆ ಕೆಡವಿ ಹಾಕಿದ್ದಾರೆ.

ಮೇ 7ರಂದು ನಡೆದಿದ್ದ ಮತದಾನದ ಎಣಿಕೆ ಕಾರ್ಯವು ಮಂಗಳವಾರ ಇಲ್ಲಿನ ಗವಿಸಿದ್ಧೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆಯಿತು. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ನಡುವೆ ಒಂದು ಸಲ ಮಾತ್ರ ಹಿನ್ನಡೆ ಅನುಭವಿಸಿದ ರಾಜಶೇಖರ ಹಿಟ್ನಾಳ ಅಂತಿಮವಾಗಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಡಾ. ಬಸವರಾಜ ಕ್ಯಾವಟರ್‌ ಅವರ ವಿರುದ್ಧ ಜಯಭೇರಿ ಮೊಳಗಿಸಿದರು. ರಾಜಶೇಖರ ಹಿಟ್ನಾಳ 6,63,511 ಮತಗಳನ್ನು ಪಡೆದರೆ, ಕ್ಯಾವಟರ್‌ 6,17,154 ಮತಗಳನ್ನು ಗಳಿಸಿದರು.

ಸತತ ಎರಡನೇ ಬಾರಿಗೆ ಸ್ಪರ್ಧೆ ಮಾಡಿದ್ದ ರಾಜಶೇಖರ ಹಿಟ್ನಾಳ 2019ರ ಲೋಕಸಭಾ ಚುನಾವಣೆಯಲ್ಲಿ 38,397 ಮತಗಳಿಂದ ಬಿಜೆಪಿಯ ಸಂಗಣ್ಣ ಕರಡಿ ಎದುರು ಸೋಲು ಕಂಡಿದ್ದರು. ಇದಕ್ಕೂ ಮೊದಲು ಅವರ ತಂದೆ ಬಸವರಾಜ ಹಿಟ್ನಾಳ ಸ್ಪರ್ಧಿಸಿ ಸೋತಿದ್ದರು. ಹಿಂದಿನ ಎರಡು ಸಲ ಹಿಟ್ನಾಳ ಕುಟುಂಬಕ್ಕೆ ಕೈ ತಪ್ಪಿದ್ದ ಸಂಸದ ಸ್ಥಾನ ಈ ಬಾರಿ ಒಲಿದು ಬಂದಿತು.

ಸಂಗಣ್ಣ ಕರಡಿ ಈ ಬಾರಿ ಕಾಂಗ್ರೆಸ್‌ ಪಾಳೆಯ ಸೇರಿದ್ದು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ವ್ಯಾಪಕ ಪ್ರಚಾರ, ರಾಜ್ಯದಲ್ಲಿ ತಮ್ಮ ಪಕ್ಷದ ಸರ್ಕಾರ ಅಧಿಕಾರದಲ್ಲಿರುವುದು, ಹಿಂದಿನ ಚುನಾವಣೆಯಲ್ಲಿ ಸೋತ ಅನುಕಂಪ ಸೇರಿ ಅನೇಕ ವಿಚಾರಗಳನ್ನು ಮುಂದಿಟ್ಟು ರಾಜಶೇಖರ ಹಿಟ್ನಾಳ ಮತಯಾಚನೆ ಮಾಡಿದ್ದರು.

ರಾಜಶೇಖರ ಹಿಟ್ನಾಳ ಪಡೆದ ಗೆಲುವಿನಲ್ಲಿ ಸಿರಗುಪ್ಪ ಮತ್ತು ಗಂಗಾವತಿ ಕ್ಷೇತ್ರದ ಪಾಲು ಹೆಚ್ಚಿದೆ. ಈ ಎರಡೂ ವಿಧಾನಸಭಾ ಕ್ಷೇತ್ರಗಳಿಂದ ಅವರಿಗೆ ಒಟ್ಟು 36,070 ಮತಗಳು ಬಂದರೆ, ಮುನ್ನಡೆ ಪಡೆದುಕೊಂಡ ಇನ್ನು ನಾಲ್ಕು ಕ್ಷೇತ್ರಗಳಿಂದ ಲಭಿಸಿದ್ದು 10,587 ಮತಗಳು.

ಸಿರಗುಪ್ಪದಲ್ಲಿ ರಾಜಶೇಖರ 87,526 ಮತ್ತು ಗಂಗಾವತಿಯಲ್ಲಿ 84,199 ಮತಗಳನ್ನು ಪಡೆದುಕೊಂಡರೆ, ಬಸವರಾಜ ಕ್ಯಾವಟರ್‌ ಕ್ರಮವಾಗಿ 66,610 ಹಾಗೂ 69,045 ಮತಗಳನ್ನು ಗಳಿಸಿ ಹಿನ್ನಡೆ ಅನುಭವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT