ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ನಗರಸಭೆ: ಜನರಿಂದ ಗೆದ್ದರೂ ಇಲ್ಲ ಅಧಿಕಾರ ಭಾಗ್ಯ!

ಅಕ್ಟೋಬರ್‌ನಿಂದ ಖಾಲಿ ಉಳಿದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ
Published 23 ಫೆಬ್ರುವರಿ 2024, 4:43 IST
Last Updated 23 ಫೆಬ್ರುವರಿ 2024, 4:43 IST
ಅಕ್ಷರ ಗಾತ್ರ

ಕೊಪ್ಪಳ: ಇಲ್ಲಿನ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಘೋಷಣೆಯಾಗದ ಕಾರಣ ಜನರಿಂದ ಆಯ್ಕೆಯಾದ ಸದಸ್ಯರಿಗೆ ಅಧಿಕಾರ ಇದ್ದೂ ಇಲ್ಲದಂತಾಗಿದೆ. ಇದು ಇಲ್ಲಿನ ಅಭಿವೃದ್ಧಿ ಕೆಲಸಗಳ ಮೇಲೆ ಪರಿಣಾಮ ಬೀರುತ್ತಿದೆ.

ಹಿಂದಿನ ಅಧ್ಯಕ್ಷೆ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ ಹಾಗೂ ಉಪಾಧ್ಯಕ್ಷೆ ಆಯೇಷಾ ರುಬಿನಾ ಅವರ ಅಧಿಕಾರವಧಿ ಕಳೆದ ವರ್ಷ ಅಕ್ಟೋಬರ್‌ನಲ್ಲಿಯೇ ಪೂರ್ಣಗೊಂಡಿದೆ. ಸರ್ಕಾರದ ಹೊಸ ಮೀಸಲಾತಿ ಘೋಷಣೆಗೆ ನಗರಸಭೆ ಸದಸ್ಯರು ಎದುರು ನೋಡುತ್ತಿದ್ದಾರೆ.

ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳು ಇದ್ದು, ನಗರದ ಸಮಸ್ಯೆಗಳ ಪರಿಹಾರಕ್ಕೆ ಚರ್ಚೆ, ಹೊಸ ಸೌಲಭ್ಯಗಳನ್ನು ಕಲ್ಪಿಸುವುದು, ಹೊಸ ಯೋಜನೆಗಳಿಗೆ ಅನುಮೋದನೆ, ವಾರ್ಡ್‌ವಾರು ಬಜೆಟ್‌ ಹಂಚಿಕೆ, ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ ಜನರಿಗೆ ಅನುಕೂಲ ಕಲ್ಪಿಸಲು ಸದಸ್ಯರಿಗೆ ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಅಧಿಕಾರವಿದ್ದಿದ್ದರೆ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳನ್ನು, ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಪ್ರಶ್ನಿಸಲು ಸಾಧ್ಯವಾಗುತ್ತಿತ್ತು. ಈಗ ಸದಸ್ಯರಿಗೆ ಅಧಿಕಾರವಿದ್ದರೂ ಚಲಾಯಿಸಲು ಸಾಧ್ಯವಾಗದ ಪರಿಸ್ಥಿತಿಯಿದೆ.

ಒಂದೆಡೆ ವಿವಿಧ ವಾರ್ಡ್‌ಗಳ ಜನ ಆಯಾ ಸದಸ್ಯರ ಮೇಲೆ ಅಭಿವೃದ್ಧಿ ಕೆಲಸಗಳನ್ನು ಮಾಡಿಸುವಂತೆ, ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ದುಂಬಾಲು ಬೀಳುತ್ತಿದ್ದಾರೆ. ಆದರೆ, ಸದಸ್ಯರಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಜೊತೆ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ವೇದಿಕೆಯೇ ಇಲ್ಲದಂತಾಗಿದೆ. ಹೀಗಾಗಿ ಸದಸ್ಯರು ಕೂಡ ಇಕ್ಕಟ್ಟಿಗೆ ಸಿಲುಕಿದ್ದಾರೆ. ಸಭೆ ಕರೆದು ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಿದ್ದ ನಗರಸಭೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಲಿನ್‌ ಅತುಲ್‌ ಕೂಡ ಸದಸ್ಯರ ಜೊತೆ ಸಭೆ ನಡೆಸಿಲ್ಲ. ಹಲವು ಸದಸ್ಯರು ಈ ಕುರಿತು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಪತ್ರ ಬರೆದವರಲ್ಲಿ ನಗರಸಭೆಯ ಹಿರಿಯ ಸದಸ್ಯ ಮಹೇಂದ್ರ ಚೋಪ್ರಾ ಕೂಡ ಒಬ್ಬರಾಗಿದ್ದು,‘ಬೇಸಿಗೆ ಕಾಲ ಈಗಾಗಲೇ ಆರಂಭವಾಗಿದ್ದು, ಕೊಪ್ಪಳ ನಗರದ ಜನರಿಗೆ ನೀರಿನ ಸಮಸ್ಯೆ ಎದುರಾಗುವ ಆತಂಕವಿದೆ. ಆದ್ದರಿಂದ ನೀರಿಗಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಬೇಸಿಗೆ ನಿರ್ವಹಣೆ ಸವಾಲು ಎದುರಿಸಲು ಸಿದ್ಧತಾ ಕ್ರಮಗಳ ತುರ್ತಾಗಿ ಚರ್ಚಿಸಬೇಕಿತ್ತು. ಇಲ್ಲವಾದರೆ ನಾವು ಜನರಿಂದ ಟೀಕೆ ಎದುರಿಸಬೇಕಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.

ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಅಕ್ಬರಪಾಷ ಪಲ್ಟನ್, ‘ಜಿಲ್ಲಾಧಿಕಾರಿ ತುರ್ತಾಗಿ ಸಭೆ ನಡೆಸುವ ಅಗತ್ಯವಿದೆ. ಹಲವು ಬಾರಿ ಹೇಳಿದರೂ ಪ್ರಯೋಜನವಿಲ್ಲ’ ಎಂದು ಹೇಳಿದರು.

ಸುನಿತಾ ಗಾಳಿ
ಸುನಿತಾ ಗಾಳಿ

ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿಯನ್ನು ಸರ್ಕಾರ ಪ್ರಕಟಿಸಬೇಕಿದೆ. ಬಳಿಕ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.

-ಗಣಪತಿ ಪಾಟೀಲ ಪೌರಾಯುಕ್ತ ನಗರಸಭೆ

ಸಹಾಯವಾಣಿ ಕೇಂದ್ರ ಆರಂಭ

ಕೊಪ್ಪಳ: ನಗರದ ಎಲ್ಲ ವಾರ್ಡ್‌ಗಳಲ್ಲಿ ನಗರಸಭೆಯಿಂದ ನಿಗದಿತ ಅವಧಿಯಲ್ಲಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಮಳೆ ಕೊರತೆಯಿಂದ ನದಿ ಪಾತ್ರದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುವುದರಿಂದ ಮತ್ತು ವಿದ್ಯುತ್ ವ್ಯತ್ಯಯದಿಂದಾಗಿ ಕೆಲವೊಮ್ಮೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಈ ಕುರಿತು ಮಾಹಿತಿ ನೀಡಲು ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ. ನಗರದ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದಲ್ಲಿ ಸಾರ್ವಜನಿಕರು ನಗರಸಭೆ ಕಾರ್ಯಾಲಯದ ಸಹಾಯವಾಣಿ 08539-230192 ಕರೆ ಮಾಡಿ ದೂರು ದಾಖಲಿಸಬಹುದು ಎಂದು ಅವರು ಹೇಳಿದ್ದಾರೆ.

ಸದಸ್ಯೆ ಸುನಿತಾ ರಾಜೀನಾಮೆ

ಕೊಪ್ಪಳ ನಗರಸಭೆಯ ಎಂಟನೇ ವಾರ್ಡ್‌ನ ಕಾಂಗ್ರೆಸ್‌ ಪಕ್ಷದ ಸದಸ್ಯೆಯಾಗಿದ್ದ ಸುನಿತಾ ಗಾಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಜಿಲ್ಲಾಧಿಕಾರಿ ನಲಿನ್‌ ಅತುಲ್‌ ಅದನ್ನು ಅಂಗೀಕರಿಸಿದ್ದಾರೆ. ಸುನಿತಾ ಗುನ್ನಾಳದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಮೇಲ್ವಿಚಾರಕಿಯಾಗಿ ನೇಮಕವಾಗಿರುವ ಹಿನ್ನೆಲೆಯಲ್ಲಿ ಅವರು ಫೆ. 9ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಮೂರು ದಿನಗಳ ಹಿಂದೆ ಅವರ ರಾಜೀನಾಮೆ ಅಂಗೀಕಾರವಾಗಿದೆ. ಸದ್ಯದ ಸದಸ್ಯರ ಅಧಿಕಾರದ ಅವಧಿ 30 ತಿಂಗಳು ಬಾಕಿಯಿರುವ ಕಾರಣ ಉಪ ಚುನಾವಣೆ ಜರುಗಲಿದೆ. ರಾಜಕೀಯ ಹಿನ್ನೆಲೆಯ ಸುನಿತಾ ತಂದೆ ರುದ್ರಮುನಿ ಗಾಳಿ ಎರಡು ಬಾರಿ ನಗರಸಭೆ ಸದಸ್ಯರು ಎಪಿಎಂಸಿ ಅಧ್ಯಕ್ಷರಾಗಿದ್ದರು. ಇವರ ಸಹೋದರ ಮಂಜುನಾಥ ಗಾಳಿ ಕೂಡ ನಗರಸಭೆ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT