ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿಯ ಬೆಳ್ಳಿಚುಕ್ಕಿ ಬಾಬಣ್ಣ...

ಬದುಕಿನುದ್ದಕ್ಕೂ ನೋವು ಉಂಡರೂ ಮೊಗದ ಮೇಲೆ ಸದಾ ನಗುವಿನ ‘ಹಿರಿಯಜ್ಜ’
ಜೀವನಸಾಬ್ ಬಿನ್ನಾಳ
Published 11 ಡಿಸೆಂಬರ್ 2023, 7:04 IST
Last Updated 11 ಡಿಸೆಂಬರ್ 2023, 7:04 IST
ಅಕ್ಷರ ಗಾತ್ರ

ಕೊಪ್ಪಳ: ರಂಗಭೂಮಿಯನ್ನೇ ಜೀವನದ ಉಸಿರಾಗಿಸಿಕೊಂಡಿದ್ದ ಬಾಬಣ್ಣ ಕಲ್ಮನಿ ತಮ್ಮ ಏಳೂವರೆ ದಶಕಗಳ ನಟನೆಯ ಪರದೆಯ ರಂಗಮಂಟಪದಿಂದ ಮರೆಯಾಗಿ ರಂಗಬದುಕಿನ ಪರದೆ ಸರಿಸಿದ್ದಾರೆ. ಬದುಕಿನ ಏಳುಬೀಳುಗಳ ನಡುವೆಯೂ ರಂಗ ಉತ್ಸಾಹವನ್ನು ಕಳೆದುಕೊಳ್ಳದ ಅವರು ಸದಾ ಚೈತನ್ಯದ ಚಿಲುಮೆಯಾಗಿದ್ದು ವಿಶೇಷ.

ಕನ್ನಡ ನಾಡಿನ ರಂಗಭೂಮಿಯ ಧೀಮಂತ ನಟಿಯಾಗಿದ್ದ ರೆಹಮಾವ್ವ ಕಲ್ಮನಿಯವರ ಪುತ್ರ ಬಾಬಣ್ಣ ತನ್ನವ್ವ ಕಟ್ಟಿದ ರಂಗಕಂಪನಿಯನ್ನು ಮುಂದುವರಿಸಲು ಬದುಕಿನುದ್ದಕ್ಕೂ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಾ ಬಂದವರು. ರಂಗ ಮಂಟಪಗಳ ಮೇಲೆ ವರ್ಣರಂಜಿತವಾಗಿ ಬದುಕಿದ ಬಾಬಣ್ಣ ನೈಜ ಬದುಕಿನಲ್ಲಿ ಆರ್ಥಿಕ ಸಂಕಷ್ಟಗಳಿಗೆ ಬಳಲಿ ಬೆಂಡಾದವರು.

ಇತ್ತೀಚಿಗೆ ತಮ್ಮ ವಯೋಸಹಜ ಕಾಯಿಲೆಗೆ ಚಿಕಿತ್ಸೆ ಮತ್ತು ಔಷಧಿಗಾಗಿ ಹಣ ಹೊಂದಿಸಲು ಪ್ರಯಾಸ ಪಟ್ಟವರು. ಇಂಥ ಸಂಕಷ್ಟದ ನಡುವೆಯೂ ರಂಗೋತ್ಸಾಹ ಕಳೆದುಕೊಳ್ಳದೆ ನಿರಂತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.

ಮುಳುಗುವನಿಗೆ ಹುಲ್ಲು ಕಡ್ಡಿ ಆಸರೆ ಎಂಬಂತೆ ಹಿಂದಿನ ಸರ್ಕಾರ ಇವರಿಗೆ ಗುಬ್ಬಿ ವೀರಣ್ಣ ಪ್ರಶಸ್ತಿ ಘೋಷಿಸಿದಾಗ ಸಂಭ್ರಮ ಮನೆಮಾಡಿತ್ತು. ಗುಬ್ಬಿ ವೀರಣ್ಣ ಪ್ರಶಸ್ತಿಯಿಂದ ಬರುವ ₹5 ಲಕ್ಷ ಅವರ ಬದುಕಿನ ಸಂಕಷ್ಟಗಳಿಗೆ, ನೋವುಗಳಿಗೆ ಪರಿಹಾರವಾದೀತು ಎಂಬ ಮಹಾದಾಸೆಯನ್ನು ಇಟ್ಟುಕೊಂಡಿದ್ದರು.

ದುರ್ದೈವ ಪ್ರಶಸ್ತಿ ಘೋಷಣೆಯಾಗಿ ಆರೇಳು ತಿಂಗಳ ಕಳೆದರೂ ಪ್ರಶಸ್ತಿ ಪ್ರದಾನವಾಗಲಿಲ್ಲ. ಸರ್ಕಾರವು ಬಾಬಣ್ಣನ ಮನೆಯ ಆರ್ಥಿಕ ಪರಿಸ್ಥಿತಿ ಅವಲೋಕಿಸಿ ಅವರ ಮಡದಿಗಾದರೂ ಆರ್ಥಿಕ ಸಹಾಯ ಮಾಡುವ ನಿಟ್ಟಿನಲ್ಲಿ ಚಿಂತಿಸಬೇಕಿದೆ.

ನಾಗಲಿಂಗನ ಮಹಾತ್ಮೆ ಎಂಬ ನಾಟಕದಲ್ಲಿ ಶಿಶುನಾಳ ಶರೀಫರ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸಿರುವ ಬಾಬಣ್ಣ, ಇವರ ಅಭಿನಯ ಕಂಡು ಪ್ರೇಕ್ಷಕರು ವೇದಿಕೆಯ ಮೇಲೆ ಬಂದು ಕಾಲಿಗೆ ನಮಸ್ಕರಿಸಿ ಜೋಳಗಿಗೆ ಹಣ ಹಾಕುವ ಅನೇಕ ಸಂದರ್ಭಗಳನ್ನು ಕಣ್ಣಾರೆ ಕಂಡಿರುವೆ. ಇದು ಇವರ ಅತ್ಯುತ್ತಮ ಅಭಿನಯಕ್ಕೆ ಸಾಕ್ಷಿ, ಸಿರಿಕಂಠದ ಗಾಯನವು ಕಲಾಸಿರಿತನಕ್ಕೆ ಸಾಕ್ಷಿಯಂತಿತ್ತು. 

ಮನಸ್ಸಿನಲ್ಲಿ ಹೇಳಿಕೊಳ್ಳಲಾಗದಷ್ಟು ನೋವು, ಸಂಕಟ, ತುಮುಲಗಳಿದ್ದರೂ ಹೊರನೋಟದಲ್ಲಿ ಎಂದಿಗೂ  ಬೇಸರದ ಮುಖವನ್ನೇ ತೋರದಿದ್ದ ಬಾಬಣ್ಣ, ರಂಗಭೂಮಿಯಲ್ಲಿ ಸದಾ ಹಸನ್ಮುಖಿಯಾಗಿದ್ದರು. ಅವರ ನಗುಮೊಗವೇ ಸಾಕಷ್ಟು ರಂಗಾಸಕ್ತರ ನೋವುಗಳಿಗೆ ಮುಲಾಮಿನಂತೆ ಇರುತ್ತಿತ್ತು. ಕೊನೆಯ ದಿನಗಳಲ್ಲಿ ಅವರು ಅಳುವಿನೊಂದಿಗೇ ಜೀವನದ ನಾಟಕ ಮುಗಿಸಿದ್ದು ದುರಂತವೇ ಸರಿ ಎನ್ನುತ್ತಾರೆ ಕುಕನೂರಿನ ರಂಗಸಕ್ತಾರಾದ ಬಣ್ಣದಬಾವಿಯವರು.

ನೋವಿನ ಕ್ಷಣದಲ್ಲಿದ್ದ ಬಾಬಣ್ಣ
ನೋವಿನ ಕ್ಷಣದಲ್ಲಿದ್ದ ಬಾಬಣ್ಣ

ಬಾಬಣ್ಣ ತಮ್ಮ 10ನೇ ವಯಸ್ಸಿನಲ್ಲಿ ರಂಗನಟನೆಗೆ ಪ್ರವೇಶಿಸಿ 77 ವರ್ಷ ಕಲಾವಿದರಾಗಿದ್ದರು. ಇವರ ಇಡೀ ಕುಟುಂಬವೇ ರಂಗಭೂಮಿಗೆ ಮೀಸಲು. ಇವರ ತಾಯಿ ದಿ. ರೆಹೆಮಾನವ್ವ ಕಲ್ಮನಿ. ವೃತ್ತಿ ರಂಗಭೂಮಿಯ ದಿಗ್ಗಜೆ ಎಂದೇ ಹೆಸರುವಾಸಿ.

ಸ್ರ್ರೀ ಪಾತ್ರದಲ್ಲಿ ಬಾಬಣ್ಣ 
ಸ್ರ್ರೀ ಪಾತ್ರದಲ್ಲಿ ಬಾಬಣ್ಣ 

ತಾವು ಕಟ್ಟಿ ಬೆಳೆಸಿದ ಕಂಪನಿ ನಿಂತ ಮೇಲೆ ಮತ್ತೆ ಬೇರೆ ಬೇರೆ ಕಂಪನಿಗಳಲ್ಲಿ ಪುರುಷ, ಸ್ತ್ರೀ ಪಾತ್ರ ಸೇರಿದಂತೆ ಎಲ್ಲ ಬಗೆಯ ಪಾತ್ರಗಳಲ್ಲಿ ನಟಿಸಿ ಪ್ರಖ್ಯಾತ ನಟರೆನಿಸಿಕೊಂಡರು. ಹೇಮರೆಡ್ಡಿ ಮಲ್ಲಮ್ಮ ನಾಟಕದಲ್ಲಿ ನಾಗಮ್ಮ, ಮಹಾದೇವಿ, ಪದ್ಮವ್ವ, ಚಿತ್ತರಂಜನಿ, ಮಲ್ಲಿಕಾರ್ಜುನ, ವೇಮನ ಸೇರಿದಂತೆ ಅಷ್ಟೂ ಪಾತ್ರಗಳಲ್ಲಿ ನಟಿಸಿದರು. ಸಂತ ಶಿಶುನಾಳ ಶನಿಪರ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದಾರೆ.

ಪ್ರಸಕ್ತ ದಿನಮಾನಗಳಲ್ಲಿ ಹಲವಾರು ಉದಯೋನ್ಮುಖ ರಂಗ ಕಲಾವಿದರಿಗೆ ಸಲಹೆ ಮಾರ್ಗದರ್ಶನ ರಂಗ ವಿಚಾರಗಳನ್ನು ಹಂಚಿಕೊಂಡು ಮಾದರಿ ಎನಿಸಿದ್ದರು.

ಬಾಬಣ್ಣ ಕಲ್ಮನಿಯವರ ರಂಗಪ್ರತಿಭೆಗೆ ಹಲವು ಸಂಘ ಸಂಸ್ಥೆಗಳು ಅಭಿಮಾನದಿಂದ ಸನ್ಮಾನಿಸಿವೆ. ಇವರಿಗೆ ವರದರಾಜ ಪ್ರಶಸ್ತಿ, ಬಳ್ಳಾರಿಯ ರಾಘವ ಕಲಾ ಬಳಗ ಕೊಡುವ ರಾಘವ ರಾಜ್ಯ ಪ್ರಶಸ್ತಿ ಸಂದಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಗುಬ್ಬಿ ವೀರಣ್ಣ ಪುರಸ್ಕಾರಗಳನ್ನು ಪಡೆಯಬೇಕೆನ್ನುವ ಕನಸು ಅವರಲ್ಲಿ ಇತ್ತು. ಈ ಪುರಸ್ಕಾರಗಳು ಇವರ ಮುಡಿಗೇರಿದ್ದರೆ ಬಹುಶ ಇವರ ರಂಗಪಯಣ ಸಂತೃಪ್ತಿಯಾಗುತ್ತಿತ್ತು ಎನ್ನುವುದು ಇವರ ಅಭಿಮಾನಿಗಳ ಆಶಯ.

ಎಂಥ ಕಷ್ಟದ ಸಂದರ್ಭಗಳಲ್ಲೂ ತಮ್ಮ ಆದರ್ಶಗಳನ್ನು ಬಿಟ್ಟುಕೊಡದೆ ಸಮಾಜಮುಖಿಯಾಗಿ ಬದುಕಿದ ಬಾಬಣ್ಣ ಅವರ ಹೆಸರಿನಲ್ಲಿ ಕುಕನೂರಿನಲ್ಲಿ ರಂಗಮಂದಿರ ಆಗಬೇಕು ಎನ್ನುವುದು ರಂಗಸಾಕ್ತರ ಬಯಕೆ. ನೋವು ತುಂಬಿ ಬೆಳದಿಂಗಳಂತೆ ನಗುವಿನ ಬೆಳಕು ಚೆಲ್ಲಿದ ಬಾಬಣ್ಣ ರಂಗಲೋಕ ಎಂದೂ ಮರೆಯಲಾಗದ, ಮರೆಯಬಾರದ ಬೆಳ್ಳಿಚುಕ್ಕಿಯಾಗಿದ್ದಾರೆ.   

ಲೇಖಕರು: ಜಾನಪದ ಕಲಾವಿದರು

ನಾಟಕದ ಪಾತ್ರದಲ್ಲಿ ಬಾಬಣ್ಣ
ನಾಟಕದ ಪಾತ್ರದಲ್ಲಿ ಬಾಬಣ್ಣ
ರಂಗಭೂಮಿಗಾಗಿ ಜೀವನವನ್ನೇ ತೇಯ್ದ ಬಾಬಣ್ಣ ಅವರಿಗೆ ಬದುಕಿರುವಾಗಲೇ ಘೋಷಣೆಯಾಗಿದ್ದ ಗುಬ್ಬಿವೀರಣ್ಣ ಪ್ರಶಸ್ತಿ ಪ್ರದಾನ ಮಾಡಬೇಕಾಗಿತ್ತು. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಪ್ರಶಸ್ತಿ ಹಾಗೂ ನಗದು ಅವರ ಕುಟುಂಬದವರಿಗೆ ನೀಡಲಿ.
ಕೆ.ಬಿ. ಬ್ಯಾಳಿ ಸಾಹಿತಿ ಕುಕನೂರು
ಪ್ರಶಸ್ತಿ ಕೊಟ್ಟು ಪುಣ್ಯ ಕಟ್ಟಿಕೊಳ್ರಿ ಎಂದಿದ್ದರು ಬಾಬಣ್ಣ- ಮಂಜುನಾಥ ಅಂಗಡಿ
‘ಗುಬ್ಬಿ ವೀರಣ್ಣ ಪ್ರಶಸ್ತಿ ಘೋಷಣೆ ಮಾಡಿದರೂ ಇನ್ನೂ ಪ್ರದಾನ ಮಾಡಿಲ್ಲ. ಸರ್ಕಾರದಿಂದ ಫೋನ್‌ ಬರ್ತದಂತ ನಿತ್ಯವೂ ಕಾಯುತ್ತಿದ್ದೇನೆ. ಅದೊಂದು ಪ್ರಶಸ್ತಿ ಕೊಟ್ಟು ಸರ್ಕಾರ ಪುಣ್ಯ ಕಟ್ಕೊಳ್ಳಲಿ’ ನಾಲ್ಕು ದಿನಗಳ ಹಿಂದೆ(ಡಿ.7) ‘ಪ್ರಜಾವಾಣಿ’ ಪ್ರತಿನಿಧಿಗೆ ಕರೆ ಮಾಡಿದ್ದ ರಂಗಭೂಮಿ ಕಲಾವಿದ ಬಾಬಣ್ಣ ಕಲ್ಮನಿ ಹೀಗೆ ಮನವಿ ಮಾಡಿದ್ದರು. ‘ನಿಮ್ಮ ವರದಿ ಮೂಲಕ ಸರ್ಕಾರದವರಿಗೆ ನನ್ನ ಆಸೆ ತಿಳಸ್ರೀ’ ಎಂದು ಕೋರಿದ್ದರು. ಅದರ ಮರುದಿನವೇ ಅವರು ಮತ್ತಷ್ಟು ಅನಾರೋಗ್ಯಕ್ಕೆ ಒಳಗಾದರು. ಕಡುಕಷ್ಟದ ಬದುಕಿನ ನಡುವೆಯೂ ರಂಗಭೂಮಿಯಾಗಿ ಜೀವ ಹಾಗೂ ಜೀವನವನ್ನು ಮುಡಿಪಾಗಿಟ್ಟಿದ್ದ ಬಾಬಣ್ಣ ಕಲ್ಮನಿ ಅವರ ಆಸೆ ಕೊನೆಗೂ ಈಡೇರಲಿಲ್ಲ. 2021–22ನೇ ಸಾಲಿನ ಗುಬ್ಬಿ ವೀರಣ್ಣ ಪ್ರಶಸ್ತಿ ಅವರಿಗೆ ಘೋಷಣೆಯಾದರೂ ಪ್ರದಾನವಾಗಿಲ್ಲ. ಬಾಬಣ್ಣ ಅವರು ದೊಡ್ಡವಾಡ ಅರಿಷಿಣಗೋಡಿ ಚಿಂದೋಡಿ ಗುಡಿಗೇರಿ ಶೇಖಮಾಸ್ತರ ಪುಟ್ಟರಾಜ ಗವಾಯಿಗಳ ಕಂಪನಿ ಸೇರಿದಂತೆ ಕರ್ನಾಟಕದ ಹಲವು ಹತ್ತು ನಾಟಕ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಬಾಬಣ್ಣ 1976ರಿಂದ ತಮ್ಮ ತಾಯಿಯ ಲಲಿತ ನಾಟ್ಯ ಸಂಘ ನಂತರ ಅವರದೇ ಸ್ವಂತ ಕಂಪನಿ ವಿಜಯಲಕ್ಷ್ಮಿ ನಾಟ್ಯ ಸಂಘ ಆರಂಭಿಸಿ ಹತ್ತು ವರ್ಷ ನಡೆಸಿಕೊಂಡು ಬಂದರು. ಕಂಪನಿ ನಿಂತ ಮೇಲೆ ಮತ್ತೆ ಬೇರೆ ಬೇರೆ ಕಂಪನಿಗಳಲ್ಲಿ ಪುರುಷ ಸ್ತ್ರೀ ಸೇರಿದಂತೆ ಎಲ್ಲ ಬಗೆಯ ಪಾತ್ರಗಳಲ್ಲಿ ನಟಿಸಿದರು. ಹೇಮರೆಡ್ಡಿ ಮಲ್ಲಮ್ಮ ನಾಟಕದಲ್ಲಿ ನಾಗಮ್ಮ ಮಹಾದೇವಿ ಪದ್ಮವ್ವ ಚಿತ್ತರಂಜನಿ ಮಲ್ಲಿಕಾರ್ಜುನ ವೇಮನ ಸೇರಿದಂತೆ ಅಷ್ಟೂ ಪಾತ್ರಗಳಲ್ಲಿ ನಟಿಸಿದರು.
ಕುಕನೂರಿನಲ್ಲಿ ಅಂತಿಮ ಸಂಸ್ಕಾರ
ಕುಕನೂರು: ಭಾನುವಾರ ಬೆಳಿಗ್ಗೆ ನಿಧನರಾದ ಬಾಬಣ್ಣ ಕಲ್ಮನಿ ಅವರ ಅಂತ್ಯಕ್ರಿಯೆ ಸಂಜೆ ಕುಕನೂರಿನಲ್ಲಿ ನೆರವೇರಿತು. ಇದಕ್ಕೆ ಹಲವಾರು ಕಲಾವಿದರು ಸಾಕ್ಷಿಯಾದರು. ಹೆಸರಾಂತ ರಂಗಭೂಮಿ ಕಲಾವಿದೆ ಎಚ್.ಬಿ. ಸರೋಜಮ್ಮˌ ಸಾಹಿತಿಗಳಾದ ಎ.ಎಂ.ಮದರಿ ಅಲ್ಲಮಪ್ರಭು ಬೆಟ್ಟದೂರ ಕೆ.ಬಿ. ಬ್ಯಾಳಿ ಮಹಾಂತೇಶ ಕೊತಬಾಳ ಅಂದಪ್ಪ ಅಂಗಡಿ ಡಿ.ಎಂ. ಬಡಿಗೇರ ಎಸ್.ಆರ್. ಅಂಗಡಿˌ ಎಂ.ಎಸ್. ಕೊಟ್ರೇಶ ಖಾನಸಾಬ ಕಲ್ಲೂರುˌ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ ರವಿತೇಜ ಅಬ್ಬಿಗೇರಿ ಅಜಿತ್ ಘೊರ್ಪಡೆ ಸೊಪ್ಪಯ್ಯ ಹಾಳಕೇರಿ ಅನೇಕರು ಅಂತಿಮ ದರ್ಶನ ಪಡೆದರು. ಶಾಸಕ ಬಸವರಾಜ ರಾಯರಡ್ಡಿ ಫೋನ್‌ ಕರೆ ಮಾಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT