ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನುಮಸಾಗರ: ದಾಳಿಂಬೆ ಬೆಳೆಗೆ ದುಂಡಾಣು ರೋಗ

ಲಕ್ಷಾಂತರ ಖರ್ಚು ಮಾಡಿ ಕೈ ಸುಟ್ಟುಕೊಂಡ ರೈತ
ಡಿ.ಎಮ್.ಕಲಾಲಬಂಡಿ
Published 13 ಮೇ 2024, 4:55 IST
Last Updated 13 ಮೇ 2024, 4:55 IST
ಅಕ್ಷರ ಗಾತ್ರ

ಹನುಮಸಾಗರ: ದಾಳಿಂಬೆ ಬೆಳೆಗೆ ದುಂಡಾಣು ಮತ್ತು ಚುಕ್ಕಿ ರೋಗ ಕಾಣಿಸಿಕೊಂಡಿದ್ದು ರೈತರಲ್ಲಿ ಆತಂಕ ಮನೆ ಮಾಡಿದೆ.

ಹಿರೇಗೊಣ್ಣಾಗರ ಗ್ರಾಮದ ರೈತ ಭೀಮಪ್ಪ ಇಟಗಿ ಅವರ 5 ಎಕರೆ ಹೊಲದಲ್ಲಿ ₹18 ರಿಂದ ₹20 ಲಕ್ಷ ಖರ್ಚು ಮಾಡಿ ರೈತ ದಾಳಿಂಬೆ ಬೆಳೆದಿದ್ದು, ರೋಗದಿಂದಾಗಿ ಕೈಗೆ ಬಂದ ಫಸಲು ಬಾಯಿಗೆ ಬರಲಿಲ್ಲ ಎಂಬಂತಾಗಿದೆ.

ದುಂಡಾಣು ಅಂಗಮಾರಿ (ಚುಕ್ಕೆ) ರೋಗವು ದಾಳಿಂಬೆ ಬೆಳೆಯ ಕಾಂಡ, ಎಲೆ, ಹೂವು, ಕಾಯಿ ಕಟ್ಟುವ ವೇಳೆಯಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂದು ತಿಳಿದು ಬಂದಿದೆ. ಇದಕ್ಕೆ ಅಗತ್ಯ ಔಷಧಿ ಸಿಂಪಡಣೆಯ ಬಗ್ಗೆ ರೈತರಿಗೆ ಸೂಕ್ತ ಮಾರ್ಗದರ್ಶನವೂ ಇಲ್ಲ. ಕೆಲ ಕೀಟನಾಶಕ ಔಷಧ ಸಿಂಪಡಿಸಿದರೂ ರೋಗ ಹತೋಟಿಗೆ ಬರುತ್ತಿಲ್ಲ.

ದಾಳಿಂಬೆ ಒಣಹವೆಯಲ್ಲಿ ಉತ್ತಮವಾಗಿ ಇಳುವರಿ ನೀಡುವ ಬೆಳೆಯಾಗಿದೆ. ಆದರೆ, ಈ ಭಾಗದಲ್ಲಿ ಇತ್ತೀಚೆಗೆ ಹೆಚ್ಚಿನ ಬಿಸಿಲು ದಾಳಿಂಬೆ ಬೆಳೆಗಾರರನ್ನು ಆತಂಕಕ್ಕೆ ತಳ್ಳಿದೆ.  ದಾಳಿಂಬೆ, ಪಪ್ಪಾಯಿ, ದ್ರಾಕ್ಷಿ ಇತರೆ ಬೆಳೆ ಬೆಳೆಯಲು ರೈತರಲ್ಲಿ ಪೈಪೋಟಿಯಿದ್ದು, ಇಂತಹ ವೇಳೆ ದಾಳಿಂಬೆ ಬೆಳೆಗೆ ರೋಗ ಕಾಣಿಸಿಕೊಂಡಿದೆ ಎಂದು ಭೀಮಪ್ಪ ಇಟಗಿ ಅಳಲು ತೋಡಿಕೊಂಡರು.

ತಿಂಗಳಿಗೆ ₹ 25 ಸಾವಿರ ಹಣ ನೀಡಿ ಕ್ರಿಮಿನಾಶಕ ಸಿಂಪಡಣೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನೂರಾರು ಟನ್‌ ದಾಳಿಂಬೆ ಹಾನಿಗೀಡಾಗಿದೆ ಎಂದು ತಿಳಿಸಿದರು.

ರೋಗದ ಲಕ್ಷಣಗಳು: ದಾಳಿಂಬೆ ಗಿಡದ ಎಲೆಗಳ ಮೇಲೆ ಹಳದಿ ಉಂಗುರದಿಂದ ಆವೃತವಾದ ಕಂದು, ಕಪ್ಪು ಚುಕ್ಕೆಗಳು ಕಂಡು ಬಂದು ಎಲೆ ಹಳದಿ ವರ್ಣಕ್ಕೆ ತಿರುಗಿ ಉದುರುತ್ತವೆ. ರೋಗವು ಕಾಂಡಗಳಿಗೂ ಹಬ್ಬಿ ರೆಂಬೆಗಳನ್ನು ಒಣಗುವಂತೆ ಮಾಡುತ್ತದೆ. ಹೂಗಳ ಮೇಲೆ ರೋಗಬಾಧೆ ಕಂಡು ಬಂದರೆ ಹೂ ಉದುರುತ್ತವೆ. ಒಂದು ಕಾಯಿಯಿಂದ ಮತ್ತೊಂದು ಕಾಯಿಗೆ ಹರಡುತ್ತದೆ. ಹಣ್ಣುಗಳ ಮೇಲೆ ಕಪ್ಪು ಚುಕ್ಕೆಗಳು ಕಂಡು ಬಂದು ಕ್ರಮೇಣ ಚುಕ್ಕೆಗಳು ವೃದ್ಧಿಯಾಗಿ ಹಣ್ಣುಗಳ ಮೇಲ್ಮೈ ತುಂಬೆಲ್ಲಾ ಆವರಿಸಿ ಹಣ್ಣುಗಳು ಸೀಳುವಂತೆ ಹಾಗೂ ಕೊಳೆಯುವಂತೆ ಮಾಡುತ್ತವೆ. ಕೀಟ ಬಾಧೆ ಹಾಗೂ ಉಷ್ಣ ಮಿಶ್ರಿತ ತೇವಾಂಶದ ವಾತಾವರಣವಿದ್ದಲ್ಲಿ ರೋಗ ತೀವ್ರವಾಗಿ ಹರಡಿ ಬಹಳ ಹಾನಿಯನ್ನುಂಟು ಮಾಡುತ್ತದೆ.

ಹವಾಮಾನ ವೈಪರೀತ್ಯದಿಂದ ಬೆಳೆಗಳಿಗೆ ಹಾನಿ: ರೈತರು ಈ ಬೆಳೆಗಾಗಿ ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡಬೇಕು. ಇಳುವರಿ ಬರುವವರೆಗೂ ಜೋಪಾನವಾಗಿ ಕಾಪಾಡಿಕೊಂಡು ಬರಬೇಕು. ದಾಳಿಂಬೆ ತುಂಬಾ ಸೂಕ್ಷ್ಮವಾದ ಬೆಳೆಯಾಗಿದೆ. ಹೆಚ್ಚಿನ ಮಳೆಯಾದರೆ, ಇಳುವರಿ ಸರಿಯಾಗಿ ಬರುವುದಿಲ್ಲ. ಇತ್ತೀಚೆಗೆ ರೋಗಗಳು ಹೆಚ್ಚಾಗಿ ಕಂಡು ಬರುತ್ತಿದ್ದು ಹವಾಮಾನ ವೈಪರೀತ್ಯ ಉಂಟಾಗಿ ಬೆಳೆ ಹಾನಿಯಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಮಾರುಕಟ್ಟೆಯಲ್ಲಿಯೂ ಸಿಗದ ಬೆಲೆ: ಚುಕ್ಕಿ ರೋಗದಿಂದ ಬಣ್ಣ ಮತ್ತು ಕಳೆ ಹಾಳಾಗಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ದಾಳಿಂಬೆ ಬೆಳೆಯ ವಿಸ್ತೀರ್ಣ ಕುಸಿಯುತ್ತಿದೆ. ಬೆಳೆಗೆ ರೋಗದ ಭೀತಿಯಿಂದ ಈ ವರ್ಷ ದಾಳಿಂಬೆ ಬೆಳೆಯುವವರ ರೈತರ ಸಂಖ್ಯೆ ಕಡಿಮೆ ಆಗಿದೆ.

ರೋಗ ತಡೆಗಟ್ಟುವ ಕ್ರಮ

ರೋಗ ರಹಿತ ಸಸಿಗಳನ್ನು ನಾಟಿಗೆ ಉಪಯೋಗಿಸಬೇಕು. ಶಿಫಾರಸು ಮಾಡಿದ ಪೋಷಕಾಂಶಗಳು ಜೊತೆಗೆ ಕೊಟ್ಟಿಗೆ ಗೊಬ್ಬರ ಅಥವಾ ಎರೆ ಹುಳುವಿನ ಗೊಬ್ಬರ ಹೆಚ್ಚಾಗಿ ಬಳಸುವುದರಿಂದ ರೋಗದ ತೀವ್ರತೆ ಕಡಿಮೆ ಗೊಳಿಸಬಹುದು. ದಾಳಿಂಬೆ ತೋಟ ಸ್ವಚ್ಛವಾಗಿಡುವುದು. ರೋಗ ಪೀಡಿತ ಎಲೆ ಕಾಂಡ ಮತ್ತು ಕಾಯಿಗಳನ್ನು ಕಿತ್ತು ಸುಡಬೇಕು. ಇದರಿಂದ ರೋಗ ತಡೆಗಟ್ಟ ಬಹುದು.  ಪ್ರತಿ ಜೀವನಾಶಕದ ಸಿಂಪಡಣೆ ನಂತರ ಸತುವಿನ ಸಲ್ಪೇಟ್‌ ಒಂದು ಗ್ರಾಂ ಮೆಗ್ನೆಶಿಯಂ ಸಲ್ಪೇಟ್‌ ಒಂದು ಗ್ರಾಂ ಸುಣ್ಣದ ಸಲ್ಪೇಟ್‌ ಹಾಗೂ ಬೋರಾನ್‌ ಒಂದು ಗ್ರಾಂ ಪ್ರತಿ ಲೀಟರ್‌ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡುವುದರಿಂದ ಸಸ್ಯಗಳಲ್ಲಿ ರೋಗ ನಿರೋಧಕತೆ ಹೆಚ್ಚಿಸಿ ರೋಗದ ತೀವ್ರತೆ ಕಡಿಮೆಗೊಳಿಸಬಹುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT