ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹನುಮಸಾಗರ: ಮಳೆ ಬಂದಾಗ ಸಂತೆ ಮಾರುಕಟ್ಟೆಗೆ ಕಾಡುವ ಫಜೀತಿ

ಹನುಮಸಾಗರದಲ್ಲಿ ತರಕಾರಿ ವ್ಯಾಪಾರಿಗಳಿಗೆ ಬೇಕಿದೆ ಕಾಯಂ ಮಾರುಕಟ್ಟೆ
ಡಿ.ಎಂ. ಕಲಾಲಬಂಡಿ
Published 30 ಮೇ 2024, 4:38 IST
Last Updated 30 ಮೇ 2024, 4:38 IST
ಅಕ್ಷರ ಗಾತ್ರ

ಹನುಮಸಾಗರ: ಪ್ರತಿ ಬಾರಿ ಮಳೆ ಬಂದಾಗಲೊಮ್ಮೆ ಇಲ್ಲಿನ ಸಂತೆ ಮಾರುಕಟ್ಟೆ ಕೊಳಚೆ ತಾಣವಾಗಿ ಮಾರ್ಪಾಡುಗುತ್ತದೆ. ಇದರ ನಡುವೆಯೇ ಸಾರ್ವಜನಿಕರು ನಿತ್ಯ ಬಳಕೆಗೆ ತರಕಾರಿಗಳನ್ನು ಖರೀದಿ ಮಾಡಬೇಕಾದ ಅನಿವಾರ್ಯತೆಯಿದೆ.

ಇತ್ತೀಚೆಗೆ ಪಟ್ಟಣದಲ್ಲಿ ಸುರಿದ ಮಳೆಯಿಂದಾಗಿ ಹನುಮಸಾಗರ ಸಂತೆಯ ಮಾರುಕಟ್ಟೆಯು ಕೊಳಚೆ ನೀರಿನಿಂದ ಆವೃತವಾಗಿತ್ತು. ಇದರ ನಡುವೆಯೇ ವ್ಯಾಪಾರ ನಡೆಯುತ್ತಿದ್ದು, ಇದರಿಂದ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಸಂಕಷ್ಟ ಎದುರಾಗಿದೆ.

ಮಳೆ ಸುರಿದರೆ ಸಂತೆ ಮಾರುಕಟ್ಟೆ ತಿಪ್ಪೆಯಂತಾಗುತ್ತದೆ. ಬಿಡಾಡಿ ದನಗಳು, ಬೀದಿನಾಯಿಗಳು ಓಡಾಟದ ನಡುವೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಜನರು ಕಾಯಿಪಲ್ಲೆ ಮಾರುಕಟ್ಟೆಯ ಬಯಲಿನಲ್ಲೇ ಶೌಚ ಮಾಡುತ್ತಿದ್ದು, ವಾತಾವರಣ ದುರ್ನಾತಗೊಂಡಿದೆ. ಕುಳಿತುಕೊಳ್ಳಲು ಜಾಗವಿಲ್ಲದೆ ಕೊಳಚೆ ನೀರಿನ ಪಕ್ಕದಲ್ಲಿಯೇ ಸಂತೆ ಮಾಡುವ ಪರಿಸ್ಥಿತಿಯಿದೆ. 

‘ಪ್ರತಿ ವಾರ ಸಂತೆ ದಿನದಂದು ಜಾಗದ ಮಾಲೀಕರು ನಮ್ಮಿಂದ ಒಂದಷ್ಟು ಹಣ ಪಡೆಯುತ್ತಾರೆ. ನಮಗೆ ಕುಳಿತುಕೊಳ್ಳಲು ಸ್ವಚ್ಛ ಜಾಗ ಮಾಡಿಕೊಡಿ ಎಂದು ಕೇಳಿದರೆ ನೀವು ಗ್ರಾಮ ಪಂಚಾಯಿತಿಗೆ ಹೋಗಿ ಕೇಳಿ ಎಂದು ನುಣಿಚಿಕೊಳ್ಳುತ್ತಾರೆ. ಯಾವುದೇ ಸೌಕರ್ಯಗಳನ್ನು ಕಲ್ಪಿಸಿಲ್ಲ’ ಎಂದು ವ್ಯಾಪಾರಿ ಮರ್ತುಜಾ ಬೇಸರ ವ್ಯಕ್ತಪಡಿಸಿದರು.

‘ಅಸ್ವಚ್ಛತೆ ತಾಂಡವಾಡುತ್ತಿರುವ ಕಾರಣ ಗ್ರಾಹಕರು ನಮ್ಮಲ್ಲಿ ಬಂದು ತರಕಾರಿ ಖರೀದಿಸಲು ಹಿಂದೇಟು ಹಾಕುತ್ತಾರೆ. ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ ಸಗಟು ಮಾರುಕಟ್ಟೆಯಲ್ಲಿ ತರಕಾರಿ ತರುತ್ತೇವೆ. ಇದರ ವ್ಯಾಪಾರದ ಮೇಲೆಯೇ ನಮ್ಮ ಬದುಕಿನ ಬಂಡಿ ನಡೆಯಬೇಕು. ವ್ಯಾಪಾರವೇ ಆಗದಿದ್ದರೆ ಬದುಕು ಸಾಗುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದರು.

‘ಗ್ರಾಹಕರು ಸದಾಕಾಲ ತರಕಾರಿ ತಾಜಾ ಇರಬೇಕು ಎಂದು ಬಯಸುತ್ತಾರೆ. ಆದರೆ ಅನೈರ್ಮಲ್ಯದ ವಾತಾವರಣದಲ್ಲಿ ವ್ಯಾಪಾರ ಮಾಡಿದರೆ ಕಡಿಮೆ ಬೆಲೆಗೆ ನೀಡುವಂತೆ ಕೇಳುತ್ತಾರೆ. ತರಕಾರಿ ಗುಣಮಟ್ಟ ಗುರುತಿಸಿ ಚೌಕಾಸಿ ಮಾಡುತ್ತಾರೆ. ಇದರಿಂದ ನಮಗೆ ನಷ್ಟವಾಗುತ್ತದೆ’ ಎಂದು ಅಲ್ಲಿನ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದರು. ಇದೇ ರೀತಿ ಸಮಸ್ಯೆ ಮುಂದುವರಿದರೆ ವಾರದ ಸಂತೆಯನ್ನು ಎಪಿಎಂಸಿಗೆ ಸ್ಥಳಾಂತರ ಮಾಡುತ್ತೇವೆ ಎಂದರು.  

ವ್ಯಾಪಾರಿಗಳು ಕಂಗಾಲು: ಗ್ರಾಮದಲ್ಲಿ ಕೆಲವು ವರ್ಷಗಳು ಕಳೆದರೂ ಇಲ್ಲಿಯವರೆಗೆ ತರಕಾರಿ ಮಾರುಕಟ್ಟೆಯಿಲ್ಲದೆ ಬೀದಿ ಬದಿಯಲ್ಲಿಯೇ ತರಕಾರಿ ಮಾರಾಟ ಮಾಡುತ್ತಿದ್ದಾರೆ.

ಸುತ್ತಮುತ್ತಲಿನ ಗ್ರಾಮಗಳಿಂದ ಕಾಯಿಪಲ್ಲೆ ಮಾರಾಟಕ್ಕಾಗಿ ಗ್ರಾಮಗಳಿಂದ ತರಕಾರಿ ಖರೀದಿಸಿ ಮಾರಾಟ ಮಾಡುತ್ತಾರೆ ರಸ್ತೆಯ ಬದಿಯಲ್ಲಿ ತಮ್ಮ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಾರೆ. ಗ್ರಾಮದ ಒಳಗಡೆ ಬರುವ ಹೋಗುವ ವಾಹನಗಳ ದೂಳಿನಲ್ಲಿ ಬೀದಿ ಬದಿಯಲ್ಲಿಯೇ ವ್ಯಾಪಾರ ಮಾಡುತ್ತಿರುವಾಗ ವಾಹನಗಳ ಅಡ್ಡಾದಿಡ್ಡಿ ಓಡಾಟವೂ ವ್ಯಾಪಾರಸ್ಥರಲ್ಲಿ ಆತಂಕ ಮೂಡಿಸಿದೆ. 

‘ಗ್ರಾಮದಲ್ಲಿ ಜನದಟ್ಟಣೆ ತಪ್ಪಿಸಲು ಸಂತೆ ಸ್ಥಳಾಂತರ ಮಾಡಿದ್ದರೂ ಉದ್ದೇಶ ಈಡೇರಿಲ್ಲ. ಅಲ್ಲಿಯೂ ನಿತ್ಯ ದಟ್ಟಣೆ ಇದ್ದೇ ಇರುತ್ತದೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಗ್ರಾಮ ಪಂಚಾಯಿತಿ ಮಾತ್ರ ಕಣ್ಮುಚ್ಚಿ ಕುಳಿತಿದೆ’ ಎಂದು ವ್ಯಾಪಾರಿಗಳು ದೂರಿದ್ದಾರೆ. ಹೀಗಾಗಿ ಮಳಿಗೆಗಳನ್ನು ನಿರ್ಮಿಸಿಕೊಡಬೇಕು ಎಂಬುದು ಅವರ ಬೇಡಿಕೆಯಾಗಿದೆ.

ಗ್ರಾಮದ ಸಂತೆ ಮೈದಾನದಲ್ಲಿ ಗ್ರಾಹಕರು ಮತ್ತು ವರ್ತಕರಿಗೆ ಸೂಕ್ತ ಮೂಲ ಸೌಕರ್ಯಗಳು ಇಲ್ಲ. ವ್ಯಾಪಾರ ನಡೆಸಲು ಕಟ್ಟೆ, ಚಾವಣಿ ನಿರ್ಮಾಣ, ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ, ರಸ್ತೆಗಳ ಡಾಂಬರೀಕರಣ ಸಮರ್ಪಕವಾಗಿಲ್ಲ. ಮಾರುಕಟ್ಟೆ ಪ್ರದೇಶವನ್ನು ಸುಸಜ್ಜಿತಗೊಳಿಸುವಲ್ಲಿ ಗ್ರಾಮ ಪಂಚಾಯಿತಿ ಆದ್ಯತೆ ನೀಡಬೇಕಿದೆ.

ಹನುಮಸಾಗರದಲ್ಲಿ ಕೊಳಚೆ ನೀರಿನ ಸಮೀಪದಲ್ಲಿ ವ್ಯಾಪಾರ ಮಾಡುತ್ತಿರುವುದು
ಹನುಮಸಾಗರದಲ್ಲಿ ಕೊಳಚೆ ನೀರಿನ ಸಮೀಪದಲ್ಲಿ ವ್ಯಾಪಾರ ಮಾಡುತ್ತಿರುವುದು

‌ವಾರದ ಸಂತೆ ಪ್ರದೇಶದಲ್ಲಿ ಮಳೆ ಬಂದಿದ್ದರಿಂದ ಸಮಸ್ಯೆಯಾಗಿತ್ತು. ಸಂತೆ ಮರುದಿನ ಸಿಬ್ಬಂದಿಯನ್ನು ಕಳುಹಿಸಿ ಸ್ವಚ್ಛತೆ ಮಾಡಿಸಲಾಗಿದೆ.

–ರುದ್ರಗೌಡ ಗೌಡಪ್ಪನವರ ಹನುಮಸಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT