ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಐಪಿಎಲ್‌ ಆಟಗಾರ'ನ ನಡೆ ನಿಗೂಢ

ಕಾಂಗ್ರೆಸ್‌, ಬಿಜೆಪಿ ಎರಡೂ ಕಡೆ ಬ್ಯಾಟ್‌ ಬೀಸುತ್ತಿರುವ ಶಾಸಕ ಗಾಲಿ ಜನಾರ್ದನ ರೆಡ್ಡಿ
ಪ್ರಮೋದ
Published 16 ಮಾರ್ಚ್ 2024, 5:29 IST
Last Updated 16 ಮಾರ್ಚ್ 2024, 5:29 IST
ಅಕ್ಷರ ಗಾತ್ರ

ಕೊಪ್ಪಳ: ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೆ ಮುಹೂರ್ತ ನಿಗದಿಯಾದರೂ ಒಮ್ಮೆ ಕಾಂಗ್ರೆಸ್‌ ಮತ್ತೊಮ್ಮೆ ಬಿಜೆಪಿ ಹೀಗೆ ಎರಡೂ ಪಕ್ಷಗಳ ಪರವಾಗಿ ಬ್ಯಾಟ್‌ ಬೀಸುತ್ತಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಸಂಸ್ಥಾಪಕ ಮತ್ತು ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ನಿಲುವು ನಿಗೂಢವಾಗಿಯೇ ಉಳಿದಿದೆ. 

ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆಯಲ್ಲದೆ ಎರಡೂ ಪಕ್ಷಗಳ ನಾಯಕರಲ್ಲಿ ಕುತೂಹಲ ಮೂಡಿಸಿದೆ. ಇಂಡಿಯನ್‌ ಪ್ರೀಮಿಯರ್‌ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಆಟಗಾರನಿಗೆ ಯಾವ ಫ್ರಾಂಚೈಸ್‌ ಹೆಚ್ಚು ಹಣ ಕೊಡುತ್ತಾರೆಯೊ ಅವರ ಪರ ಆಟಗಾರ ಆಡುವುದು ಸಹಜ.

ಇದನ್ನೇ ಉದಾಹರಣೆಯಾಗಿಟ್ಟುಕೊಂಡು ಜನಾರ್ದನ ರೆಡ್ಡಿ ಇತ್ತೀಚೆಗೆ ನಡೆದ ಆನೆಗೊಂದಿ ಉತ್ಸವದ ಸಮಾರೋಪ ಭಾಷಣದಲ್ಲಿ ’ನಾನು ಐಪಿಎಲ್‌ ಆಟಗಾರನಿದ್ದಂತೆ. ರಾಜ್ಯದಲ್ಲಿ ನನ್ನ ಪಕ್ಷದಿಂದ ಇರುವ ಶಾಸಕ ನಾನೊಬ್ಬನೇ. ಹೀಗಾಗಿ ಕ್ಷೇತ್ರದ ಅಭಿವೃದ್ಧಿಗೆ ಯಾವ ಪಕ್ಷದವರು ಅನುಕೂಲವಾಗುತ್ತಾರೆಯೋ ಅವರ ಪರ ನಾನಿರುತ್ತನೆ’ ಎಂದು 20 ಸಾವಿರಕ್ಕೂ ಹೆಚ್ಚು ಜನರ ಎದುರು ಹೇಳಿದ್ದರು. ಹೀಗಾಗಿ ’ಐಪಿಎಲ್‌ ಆಟಗಾರ’ ರೆಡ್ಡಿ ಅವರ ನಡೆ ಏನಿರುತ್ತದೆ ಎನ್ನುವುದು ಪಕ್ಷದ ಕಾರ್ಯಕರ್ತರು, ನಾಯಕರ ಕುತೂಹಲಕ್ಕೂ ಕಾರಣವಾಗಿದೆ.

ಬಿಜೆಪಿಯಿಂದ ವಿಧಾನಪರಿಷತ್‌ ಸದಸ್ಯರಾಗಿ ಸಚಿವರೂ ಆಗಿದ್ದ ರೆಡ್ಡಿ ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಬಳ್ಳಾರಿ ಬದಲು ಗಂಗಾವತಿಯಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದರು. ಆನೆಗೊಂದಿ ಉತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಗಳಿದ್ದರು. ಅದೇ ಕಾರ್ಯಕ್ರಮದಲ್ಲಿ ‘ಒಂದು ಹೆಜ್ಜೆ ಕಾಂಗ್ರೆಸ್‌ ಪರ ಇಟ್ಟಿದ್ದೇನೆ, ಲೋಕಸಭಾ ಚುನಾವಣೆ ಘೋಷಣೆಗೂ ಮೊದಲು ಬಿಜೆಪಿ ಅಂಜನಾದ್ರಿ ಅಭಿವೃದ್ಧಿಗೆ ₹2000 ಕೋಟಿ ಘೋಷಿಸಿದರೆ ನಿಮ್ಮ ಪಕ್ಷದ ಪರ ಬರುತ್ತೇನೆ’ ಎಂದು ಆಮಿಷವೊಡ್ಡಿದರು.

ಈ ಹೇಳಿಕೆಯ ಎರಡು ದಿನಗಳ ಬಳಿಕ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿದ್ದು ರಾಜಕೀಯ ಚರ್ಚೆಗೆ ಮತ್ತಷ್ಟು ಪುಷ್ಠಿ ನೀಡಿದೆ. ಬಿಜೆಪಿ ಮತ್ತು ಕಾಂಗ್ರೆಸ್ ರಾಜ್ಯದಲ್ಲಿ ಕೆಲವು ಕಡೆ ಟಿಕೆಟ್‌ ಘೋಷಿಸಿದ್ದು, ಇನ್ನೂ ಕೆಲ ಕ್ಷೇತ್ರಗಳಿಗೆ ಬಹುತೇಕ ಅಂತಿಮಗೊಳಿಸಿದೆ. ಹೀಗಾಗಿ ಕೆಆರ್‌ಪಿಪಿ ಜೊತೆ ಬಿಜೆಪಿ ಮೈತ್ರಿ ಈಗಿನ ಪರಿಸ್ಥಿತಿಯಲ್ಲಿ ಕಷ್ಟ. ಆದರೆ ಕೆಆರ್‌ಪಿಪಿ ಯಾವ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಬಿಜೆಪಿ–ಜೆಡಿಎಸ್‌ ಮೈತ್ರಿ ಅಥವಾ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ‘ಪರೋಕ್ಷ’ ಬೆಂಬಲ ನೀಡುವ ಅವಕಾಶವಂತೂ ಇದೆ.

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಡಾ. ಬಸವರಾಜ ಕ್ಯಾವಟರ್‌ ಅವರನ್ನು ಅಭ್ಯರ್ಥಿಯೆಂದು ಘೋಷಿಸಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಘೋಷಣೆ ಬಾಕಿಯಿದೆ. ಆದ್ದರಿಂದ ರೆಡ್ಡಿ ‘ಲೋಕ’ದ ಚುನಾವಣೆಯಲ್ಲಿ ಯಾರ ಪರ ಬ್ಯಾಟ್‌ ಬೀಸುತ್ತಾರೆ? ಎನ್ನುವ ಪ್ರಶ್ನೆಯಿದೆ. ಇಲ್ಲವೇ ಮೊದಲು ಹೇಳಿದಂತೆ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಘೋಷಣೆಯನ್ನು ಜನಾರ್ದನ ರೆಡ್ಡಿ ಮಾಡುತ್ತಾರೊ? ಇಲ್ಲವೊ? ಎನ್ನುವುದು ಕೂಡ ರೆಡ್ಡಿ ಅವರನ್ನು ಹೊರತುಪಡಿಸಿದರೆ ಯಾರಿಗೂ ತಿಳಿದಿಲ್ಲ.

ಲೋಕಸಭಾ ಚುನಾವಣೆ ಹಾಗೂ ಮುಂದಿನ ನಡೆ ಬಗ್ಗೆ ಚರ್ಚಿಸಲು ಜನಾರ್ದನ ರೆಡ್ಡಿ ಅವರು ಭಾನುವಾರ ಬೆಂಗಳೂರಿನಲ್ಲಿ ಸಭೆ ಕರೆದಿದ್ದು ಬಳಿಕ ಎಲ್ಲವೂ ಗೊತ್ತಾಗಲಿದೆ.
ಮನೋಹರ ಗೌಡ, ಕೆಆರ್‌ಪಿಪಿ ರಾಜ್ಯ ಉಪಾಧ್ಯಕ್ಷ

ಮತ ವಿಭಜನೆ ಆತಂಕ ಕೊಪ್ಪಳ: ಲೋಕಸಭಾ ಚುನಾವಣೆಯಲ್ಲಿ ರೆಡ್ಡಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಉಳಿದ ಪಕ್ಷಗಳಿಗೆ ಮತ ವಿಭಜನೆಯ ಆತಂಕ ಕಾಡುತ್ತದೆ. ಯಾಕೆಂದರೆ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೆಆರ್‌ಪಿಪಿ ವತಿಯಿಂದ ರಾಜ್ಯದ ವಿವಿಧ 41 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಒಂದೇ ಕ್ಷೇತ್ರದಲ್ಲಿ ಪಕ್ಷ ಗೆದ್ದರೂ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಸ್ಪರ್ಧೆ ಮಾಡಿದ್ದ ಬಳ್ಳಾರಿ ನಗರ ಕ್ಷೇತ್ರದಲ್ಲಿ ಈ ಪಕ್ಷ 48577 ಮತಗಳನ್ನು ಪಡೆದು ಎರಡನೇ ಸ್ಥಾನ ಗಳಿಸಿತ್ತು. ಹುನಗುಂದ ಕ್ಷೇತ್ರದಿಂದ ಸ್ಪರ್ಧಿಸಿದ್ದ ನವಲಿ ಹಿರೇಮಠ 33790 ನಾಗಠಾಣ ಅಭ್ಯರ್ಥಿಯಾಗಿದ್ದ ಬಂಡಿ ಹನುಮಂತಪ್ಪ 10770 ಲಿಂಗಸೂರು ಕ್ಷೇತ್ರದ ಆರ್‌. ರುದ್ರಯ್ಯ 13764 ಮತ್ತು ಸಂಡೂರು ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಕೆ.ಎಸ್‌. ದಿವಾಕರ್‌ 31375 ಮತಗಳನ್ನು ಗಳಿಸಿ ಪಕ್ಷದ ಅಭ್ಯರ್ಥಿಗಳು ಛಾಪು ಮೂಡಿಸಿದ್ದರು. ಹೀಗಾಗಿ ರೆಡ್ಡಿ ಮುಂದಿನ ನಡೆಯತ್ತ ಎಲ್ಲರ ಚಿತ್ತ ನೆಟ್ಟಿದೆ.

ಅಮಿತ್‌ ಶಾ–ರೆಡ್ಡಿ ಭೇಟಿ: ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಗುರುವಾರ ಭೇಟಿ ಮಾಡಿ ಸಮಾಲೋಚಿಸಿದರು.  ಶಾ ಆಹ್ವಾನದ ಮೇರೆಗೆ ಭೇಟಿ ಮಾಡಿ ಸಮಾಲೋಚಿಸಿದ್ದೇನೆ ಎಂದು ಜನಾರ್ದನ ರೆಡ್ಡಿ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ. ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಗಾಲಿ ಮತ ಚಲಾಯಿಸಿದ್ದರು.  ‘ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡುವಂತೆ ಶಾ ಅವರು ಗಾಲಿ ಅವರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ರೆಡ್ಡಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಮೂಲಗಳು ಹೇಳಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT