ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ಏಕವ್ಯಕ್ತಿಯ ಬಹುಕಲಾ ಆಯಾಮ

ಗಾಯಕ, ತಬಲಾ, ಹಾರ್ಮೋನಿಯಂ ಕ್ಷೇತ್ರಗಳಲ್ಲಿ ನಾಲ್ಕು ದಶಕಗಳ ಸಾಧನೆ
Published 31 ಮಾರ್ಚ್ 2024, 5:57 IST
Last Updated 31 ಮಾರ್ಚ್ 2024, 5:57 IST
ಅಕ್ಷರ ಗಾತ್ರ

ಕೊಪ್ಪಳ: ಗಾಯನ, ಹಾರ್ಮೋನಿಯಂ, ತಬಲಾ, ಶಾಸ್ತ್ರೀಯ ಸಂಗೀತ ಹೀಗೆ ಕಲೆಯ ಹಲವು ಮಜಲುಗಳನ್ನು ಹಂತಹಂತವಾಗಿ ರೂಢಿಸಿಕೊಂಡಿರುವ ಕೊಪ್ಪಳ ತಾಲ್ಲೂಕಿನ ಕಿನ್ನಾಳದ ಕಲಾವಿದ ಲಚ್ಚಣ್ಣ ಹಳಪೇಟೆ ನಾಲ್ಕು ದಶಕಗಳಿಂದ ಸಂಗೀತ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

ಸರ್ಕಾರದ ಉತ್ಸವಗಳು, ವಿವಿಧ ಕಲಾ ಸಂಸ್ಥೆಗಳು, ಸಂಗೀತ ಸಂಘಟನೆಗಳು ನಡೆಸುವ ಬಹಳಷ್ಟು ಕಾರ್ಯಕ್ರಮಗಳಲ್ಲಿ ಲಚ್ಚಣ್ಣ ಅವರ ಕಲಾ ಪ್ರದರ್ಶನ ಇದ್ದೇ ಇರುತ್ತದೆ. ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಆನೆಗೊಂದಿ ಉತ್ಸವದಲ್ಲಿ ಗಾಯನ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು.

ಕಲೆ ಹಾಗೂ ಸಂಗೀತ ಪರಂಪರೆಯ ಕೌಟುಂಬಿಕ ಹಿನ್ನೆಲೆಯಿಂದ ಬಂದ ಲಚ್ಚಣ್ಣ ಅವರ ತಾತ ರೇಖಪ್ಪ ಶಿವ ಅವರು ರೇಖಾಚಿತ್ರಗಳನ್ನು ಬಿಡಿಸುತ್ತಿದ್ದರು. ವೈದಿಕ ವೃತ್ತಿ ಮಾಡುವ ಜೊತೆಗೆ ಸಾಮಾಜಿಕವಾಗಿಯೂ ಜನರ ಜೊತೆ ತೊಡಗಿಕೊಂಡಿದ್ದರು. ಇವರ ತಂದೆ ಗೋವಿಂದಪ್ಪ ಹಳಪೇಟೆ ವೈದಿಕ, ಪುರಾಣಿಕರು ಮತ್ತು ಸಂಸ್ಕೃತ ಪಂಡಿತರಾಗಿದ್ದರು. ಜ್ಯೋತಿಷ್ಯ ಶಾಸ್ತ್ರ ಓದಿಕೊಂಡಿದ್ದರು. ಮಗ ಲಚ್ಚಣ್ಣ ಅವರಿಗೆ ಕಲೆಯ ಬಗ್ಗೆ ಮೊದಲಿನಿಂದಲೂ ಆಸಕ್ತಿಯಿತ್ತು.

1981ರಿಂದ ಗದಗ ಬೆಟಗೇರಿಯಲ್ಲಿ ನಡೆದಿದ್ದ ಬಾಲ ಪ್ರತಿಭೆಗಳ ನಾಟಕ ಪ್ರದರ್ಶನದಲ್ಲಿ ಅವರು ‘ಕನಕಾಂಗಿ ಕಲ್ಯಾಣ’ದಲ್ಲಿ ಉತ್ತರೆಯ ಹೆಣ್ಣು ಪಾತ್ರದಲ್ಲಿ ಅಭಿನಯಿಸಿ ಮೊದಲ ಅಭಿನಯದಲ್ಲಿಯೇ ಗಮನ ಸೆಳೆದಿದ್ದರು. ಹೀಗೆ ಆರಂಭವಾದ ಕಲಾ ಪಯಣ ಈಗಲೂ ಮುಂದುವರೆದಿದೆ. ಭಜನೆ, ಬಯಲಾಟದ ಹಾಡುಗಳು, ನೀಲಕಂಠನ ಕಥೆ, ಕುರುಕ್ಷೇತ್ರ ನಾಟಕದಲ್ಲಿ ಹಾರ್ಮೊನಿಯಂ, ಗಾಯನ ಹೀಗೆ ಎಲ್ಲವನ್ನೂ ಕರಗತ ಮಾಡಿಕೊಂಡಿದ್ದಾರೆ.

ತಮ್ಮ ಬದುಕಿನ ಗುರು ಆಗಿರುವ ದಿ. ಹನುಮಂತರಾವ್‌ ಬಂಡಿ ಅವರ ಭೇಟಿಯ ಬಳಿಕ ಕಲಾ ಕ್ಷೇತ್ರದಲ್ಲಿ ಹತ್ತು ಹಲವು ವಿಷಯಗಳನ್ನು ಅರಿತುಕೊಂಡಿದ್ದಾರೆ. ಶಾಸ್ತ್ರೀಯ ಸಂಗೀತ ಕಲಿತು ಶಾಸ್ತ್ರೋಕ್ತವಾಗಿ ದಶಕದಿಂದ ತಬಲಾ ಬಾರಿಸುತ್ತಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ ಹೀಗೆ ದೇಶದ ಹಲವು ರಾಜ್ಯಗಳಲ್ಲಿ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದು ಹೆಗ್ಗಳಿಕೆ. ನಾಲ್ಕು ದಶಕಗಳ ಅವಧಿಯಲ್ಲಿ ಅಂದಾಜು ಎರಡೂವರೆ ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳ ಪ್ರದರ್ಶನ ಕೊಟ್ಟಿದ್ದಾರೆ.

ಹಾರ್ಮೋನಿಯಂ ಬಾರಿಸುವಲ್ಲಿ ಲಚ್ಚಣ್ಣ ಹಳಪೇಟೆ
ಹಾರ್ಮೋನಿಯಂ ಬಾರಿಸುವಲ್ಲಿ ಲಚ್ಚಣ್ಣ ಹಳಪೇಟೆ

ತಮ್ಮ ಕಲಾಸೇವೆ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ನನ್ನ ಬದುಕೇ ಕಲೆಗೆ ಮೀಸಲು ಎನ್ನುವ ಮನೋಭಾವದಂತೆ ಈ ಕೆಲಸದಲ್ಲಿ ತೊಡಗಿದ್ದೇನೆ. ನಾಲ್ಕು ದಶಕಗಳ ಪಯಣದಲ್ಲಿ ಅನೇಕ ನೋವು ನಲಿವುಗಳು, ಆರ್ಥಿಕ ಭಾರವೂ ಆಗಿದೆ. ಏನೇ ಆಗಲಿ ಮನಪೂರ್ವಕವಾಗಿ ಒಪ್ಪಿಕೊಂಡ ಸಂಗೀತ ಸೇವೆಯನ್ನು ಶ್ರದ್ಧೆಯಿಂದ ಮಾಡಬೇಕು ಎನ್ನುವುದಷ್ಟೇ ನನ್ನ ಆಸೆ. ಅದರಂತೆ ನಡೆದುಕೊಂಡಿದ್ದೇನೆ ಎನ್ನುವ ತೃಪ್ತಿ ಸದಾ ನನಗಿರುತ್ತದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT