ಬುಧವಾರ, ನವೆಂಬರ್ 13, 2019
17 °C
ಮೂವರು ಮಕ್ಕಳನ್ನು ಕಳೆದುಕೊಂಡ ತಂದೆಯೂ ಅನಾಥ

ತಾಯಿಯಂತೆ ಇದ್ದ ಮಗಳನ್ನೇ ಕಿತ್ತುಕೊಂಡ ವಿಧಿ

Published:
Updated:
Prajavani

ಕೊಪ್ಪಳ: ಬೆಳಕು ಹರಿಯುವ ಮುನ್ನವೇ ಮನೆ ಮಂದಿಗೆ ಅಡುಗೆ ಮಾಡಿ, ಕಾಲೇಜಿಗೆ ಹೋಗುತ್ತಿದ್ದ ಮಗಳು ಮತ್ತು ಆಕೆಯ ಇಬ್ಬರು ಸಹೋದರರನ್ನು ಜವರಾಯ ಬಲಿ ಪಡೆದಿದ್ದಾನೆ. ಬಾಳಿ ಬದುಕಬೇಕಿದ್ದ ಮನೆ ಈಗ ಸ್ಮಶಾನವಾಗಿದೆ. 

ಯಲಮಗೇರಾ ಗ್ರಾಮ ಕೊಪ್ಪಳ ತಾಲ್ಲೂಕಿಗೆ ಸೇರಿದ್ದರೂ ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಗ್ರಾಮದಲ್ಲಿ ಮಂಗಳವಾರ ಈ ದುರ್ಮರಣ ಸುದ್ದಿ ಬೆಳ್ಳಂಬೆಳಿಗ್ಗೆಯೇ ಎಲ್ಲೆಡೆ ಹರಡಿ ಸೂತಕಕ್ಕೆ ಕಾರಣವಾಯಿತು.

ಹಳೆಯದಾದ ಮಣ್ಣಿನ ಮನೆಯಲ್ಲಿ ಸೋಮಣ್ಣ ಕುದರಿಮೋತಿ ತನ್ನ ಮೂವರು ಮಕ್ಕಳೊಂದಿಗೆ ವಾಸವಿದ್ದರು. ಹೆಂಡತಿ ಸತ್ತು 9 ವರ್ಷವಾಗಿತ್ತು. ಮನೆ ಮಂದಿಗೆ ತಾಯಿ ಸ್ಥಾನದಲ್ಲಿಯೇ ನಿಂತು ಹಿರಿಯ ಮಗಳು ಸುಜಾತಾ ಮನೆ ಕೆಲಸವನ್ನು ನೋಡಿಕೊಂಡು ಸಂಸಾರದ ಬಂಡಿಯನ್ನು ದೂಡುತ್ತಿದ್ದಳು. ತಾಯಿಯನ್ನು ಕಳೆದುಕೊಂಡು ಸಣ್ಣ ವಯಸ್ಸಿನಲ್ಲಿಯೇ ಗೃಹ ಕೃತ್ಯಗಳನ್ನು ನಿಭಾಯಿಸಿ ಸಣ್ಣ, ಪುಟ್ಟ ಕೂಲಿ ಕೆಲಸ ಮಾಡಿ, ಕಾಲೇಜಿಗೆ ಹೋಗುತ್ತಿದ್ದಳು.

ತಂದೆ ಮತ್ತು ತನ್ನ ಇಬ್ಬರು ಸಹೋದರರ ಪಾಲನೆಯಿಂದ ಗ್ರಾಮಸ್ಥರಿಂದ ಪ್ರಶಂಸೆ ಪಡೆದಿದ್ದಳು. ಮದುವೆ ವಯಸ್ಸಿಗೆ ಬಂದಿದ್ದರೂ ತವರು ಮನೆಯ ಕಷ್ಟವನ್ನು ನೋಡಿ ಮದುವೆ ಮುಂದೂಡುತ್ತಾ ಬಂದಿದ್ದಳು. ತಂದೆ ಮಕ್ಕಳ ಭವಿಷ್ಯಕ್ಕೆಗೋಸ್ಕರ ಹಗಲು, ರಾತ್ರಿ ಕೆಲಸ ಮಾಡುತ್ತಿದ್ದ. ಸುಜಾತಾಳ ಸಾವನ್ನು ಕಂಡು ಸಂಬಂಧಿಕರು, ಗ್ರಾಮಸ್ಥರು ನೆಲಕ್ಕೆ ಬಿದ್ದು ಉರುಳಾಡಿ ದುಃಖ ತೋಡಿಕೊಂಡರು. ವಿಧಿಯ ಆಟಕ್ಕೆ ಹಿಡಿ ಶಾಪ ಹಾಕಿದರು.

ಶಾಲೆಗೆ ಹೋಗುತ್ತಿದ್ದ ಇಬ್ಬರು ಗಂಡು ಮಕ್ಕಳು ಸತ್ತಿದ್ದು, ಅರಗಿಸಿಕೊಳ್ಳದಾಗಿತ್ತು. ಬಡತನವನ್ನೇ ಹಾಸಿಹೊದ್ದ ನೂರಾರು ಕುಟುಂಬಗಳು ಇಲ್ಲಿವೆ. ಸತತ ಮಳೆ ಕೊರತೆಯಿಂದ ಇಲ್ಲಿ ಕಾಯಂ ಬರಗಾಲ, ಹೊಟ್ಟೆ ತುಂಬಿಸಲು ಗುಳೆ, ಸಣ್ಣ, ಪುಟ್ಟ ಕೂಲಿ ಮಾಡಿಕೊಂಡಿರುವ ಗ್ರಾಮದಲ್ಲಿ ನಡೆದ ಘಟನೆಯಿಂದ ಜನತೆ ಮಮ್ಮಲ ಮರುಗಿದರು.

ಘಟನೆಯ ವಿವರ: ಹಳೆಯ ಮಣ್ಣಿನ ಮನೆಯಾಗಿದ್ದರಿಂದ ಮೇಲಿಂದ ಮೇಲೆ ಮಣ್ಣು ಬೀಳುತ್ತಿತ್ತು. ಈಚೆಗೆ ಬಿದ್ದ ಮಳೆಯಿಂದಲೂ ಛಾವಣಿ ನೆನೆದಿತ್ತು. ನಿತ್ಯ ಮನೆಯ ಹೊರಗಿನ ಕಟ್ಟೆಯ ಮೇಲೆ ಮಲಗುತ್ತಿದ್ದರು. ಸೋಮವಾರ ರಾತ್ರಿ ಬಂದ ಮಳೆಯಿಂದ ಮನೆಯ ಒಳಗಡೆ ಮಲಗಲು ಹೋಗಿದ್ದರು. ಭಾರವಾದ ದೊಡ್ಡ, ದೊಡ್ಡ ತೊಲೆಗಳು, ಮಣ್ಣಿನ ರಾಶಿ ಮಕ್ಕಳ ಮೇಲೆ ಬಿದ್ದಿದ್ದರಿಂದ ಉಸಿರುಗಟ್ಟಿಸಿ ಮೃತರಾದರು.

ಪಕ್ಕದ ಕೋಣೆಯಲ್ಲಿಯೇ ಮಲಗಿದ್ದ ತಂದೆ ಗಾಬರಿಗೊಂಡು ಚೀರಾಡುತ್ತಾ ಹೊರಗೆ ಬಂದರು. ಚೀರಾಟ ಕೇಳಿ ಅಕ್ಕ, ಪಕ್ಕದ ನಿವಾಸಿಗಳು ಹಾರೆ, ಸಲಕೆ, ಗುದ್ದಲಿ ತಂದು ಮಕ್ಕಳನ್ನು ಬದುಕಿಸಲು ಮಾಡಿದ ಪ್ರಯತ್ನವೂ ಫಲ ನೀಡಲಿಲ್ಲ. ಅಲ್ಲದೆ ಮನೆಯ ವಿದ್ಯುತ್ ತಂತಿ ಹರಿದು ಬಿದ್ದಿದ್ದರಿಂದ ಶಾಕ್ ಕೊಡುವಂತೆ ಆಗುತ್ತಿತ್ತು. ನಂತರ ಸಂಪರ್ಕ ತಪ್ಪಿಸಿ, ಮಕ್ಕಳನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದರೂ ನಿಸ್ತೇಜವಾಗಿದ್ದ ಮೂವರು ಮಕ್ಕಳು ಮೃತರಾಗಿದ್ದರು.

ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಇರಕಲ್ಲಗಡಾ ಜಿಲ್ಲಾ ಪಂಚಾಯಿತಿ ಸದಸ್ಯ ರಾಮಣ್ಣ ಚೌಡ್ಕಿ ಭೇಟಿ ನೀಡಿ ಸಾಂತ್ವನ ಹೇಳಿದರು.

ಪ್ರತಿಕ್ರಿಯಿಸಿ (+)