ಶನಿವಾರ, ಜೂನ್ 25, 2022
28 °C
ರಸ್ತೆಬದಿ ಎಳನೀರು ಮಾರುವ ವೃತ್ತಿ

ಹಸಿರು ಕಾಯುವ ಕಾಯಕದ ಈರಣ್ಣ: ಪರಿಸರ ಸಂರಕ್ಷಣೆಯೇ ಇವರ ಪ್ರವೃತ್ತಿ

ಗುರುರಾಜ ಅಂಗಡಿ Updated:

ಅಕ್ಷರ ಗಾತ್ರ : | |

Prajavani

ಮುನಿರಾಬಾದ್: ಸಮೀಪದ ಶಹಾಪುರ ಗ್ರಾಮದ ಈರಣ್ಣ ಕೋಮಲಾಪುರ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ನಿರತರಾಗಿದ್ದು, ಕುಟುಂಬಕ್ಕಿಂತ ಹೆಚ್ಚು ಪರಿಸರವನ್ನು ಹಚ್ಚಿಕೊಂಡಿದ್ದಾರೆ.

ಈರಣ್ಣನ ಪರಿಸರ ಸೇವೆ ಕಣ್ತುಂಬಿಕೊಳ್ಳಲು ಗಂಗಾವತಿ-ಮುನಿರಾಬಾದ್ ರಾಜ್ಯ ಹೆದ್ದಾರಿ ಬದಿಯ ಅಗಳಕೇರಾ ಗುಡ್ಡದ ಆಂಜನೇಯ ದೇವಸ್ಥಾನ ಅಥವಾ ಅಂದಿಗಾಲಪ್ಪನ ಗುಡ್ಡಕ್ಕೆ ಭೇಟಿ ನೀಡಬೇಕು.

ಅಗಳಕೇರಾ ಗ್ರಾಮದಿಂದ ಉತ್ತರಕ್ಕೆ ಮೂರು ಕಿ.ಮೀ ಕ್ರಮಿಸಿದರೆ ಗುಡ್ಡ ಸಿಗುತ್ತದೆ. ಬೆಟ್ಟದ ಮೇಲೆ ಪ್ರಥಮ ಆಂಜನೇಯ ದೇವಸ್ಥಾನವಿದೆ. ಅಲ್ಲಿಗೆ ತಲುಪಲು ಸುಮಾರು 960 ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ.

ಬೆಟ್ಟದ ಕೆಳಭಾಗದಲ್ಲಿ ಸೃಷ್ಟಿಯಾಗಿರುವುದೇ ಈರಣ್ಣನ ಪರಿಸರ ಕ್ಷೇತ್ರ.

ಇಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಗಿಡ–ಮರಗಳನ್ನು ಬೆಳೆಸಲಾಗುತ್ತಿದೆ. ಇದರಲ್ಲಿ ತೆಂಗು, ಪೇರಲ, ನೇರಳೆ, ಸಕ್ಕರೆ ಹಣ್ಣು( ಸಿಂಗಾಪುರ ಚರ್ರಿ), ಮಾವು, ಹಲಸಿನ ಗಿಡಗಳು ಮತ್ತು ಸಾಗುವಾನಿ, ಬಿಲ್ವಪತ್ರೆ ಮತ್ತು ಬನ್ನಿ ಗಿಡಗಳನ್ನು ಬೆಳೆಸಲಾಗುತ್ತಿದೆ.

ಈ ಗಿಡ ಮರಗಳಿಗೆಲ್ಲ ನೀರುಣಿಸಿ ಬೆಳೆಸುತ್ತಿರುವುದು ಈರಣ್ಣ. ದೇವಸ್ಥಾನ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ತೊಟ್ಟಿ, ಕೊಳವೆ ಬಾವಿ ಆಸರೆಯಾಗಿವೆ.

ಅಲ್ಲದೆ, ಈರಣ್ಣ ಅವರು ರಸ್ತೆಬದಿ ಎಳನೀರು ವ್ಯಾಪಾರ ಮಾಡುತ್ತಾರೆ. ಪ್ರವೃತ್ತಿಯಿಂದ ಪರಿಸರ ಪ್ರೇಮಿಯಾಗಿ ಬೆಳೆದಿದ್ದಾರೆ. ಇಲ್ಲಿನ ಗಿಡ-ಮರಗಳಲ್ಲಿನ ಹಣ್ಣು-ಕಾಯಿಗಳನ್ನು ತಿನ್ನಲು ಬರುವ ಪಕ್ಷಿಗಳು ಅಲ್ಲೇ ಗೂಡುಕಟ್ಟಿ ವಾಸಿಸುವ ಪರಿಸರವನ್ನು ಸೃಷ್ಟಿಸಲಾಗಿದೆ.
ಈರಣ್ಣನ ಅನುಪಸ್ಥಿತಿಯಲ್ಲಿ ಅಗಳಕೇರಾ ಗ್ರಾಮದ ಹನುಮಂತಪ್ಪ ಅರಳಿ ಅವರು ಕೂಡ ಗಿಡ-ಮರಗಳಿಗೆ ನೀರುಣಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ಗಿಡಮೂಲಿಕೆಗಳ ಆಗರ ಅಂದಿಗಾಲೇಶ್ವರ ಬೆಟ್ಟ: ಇಲ್ಲಿನ ಬೆಟ್ಟದಲ್ಲಿ ಹಲವು ರೋಗಗಳನ್ನು ವಾಸಿ ಮಾಡುವ ಗಿಡಮೂಲಿಕೆಗಳು ಇದ್ದು, ಇದನ್ನು ಸಂರಕ್ಷಿಸಿದರೆ ದೊಡ್ಡ ಔಷಧವನವಾಗುವುದರಲ್ಲಿ ಸಂದೇಹವೇ ಇಲ್ಲ.

‘ಲಾಕ್‌ಡೌನ್ ಪರಿಣಾಮ ಬೆಟ್ಟಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ’ ಎಂದು ತಿಳಿಸುತ್ತಾರೆ ಶಹಾಪುರ ಗ್ರಾಮದ ಎಂ.ವಿ.ಜೋಶಿ.

‘ಕೋತಿಗಳಿಗೆ ಆಹಾರ ಮತ್ತು ನೀರು ಕೊರತೆಯಾಗದಂತೆ ಈರಣ್ಣ ಅವರು ನೋಡಿಕೊಳ್ಳುತ್ತಿದ್ದಾರೆ. ಪ್ರತಿ ಶನಿವಾರ ವಾನರ ಸೈನ್ಯಕ್ಕೆ ಕೇಸರಿ ಬಾತ್ ಮತ್ತು ಪಲಾವ್ ನೀಡುವ ಈರಣ್ಣ ಅವರ ಸೇವೆ ಮಾದರಿಯಾಗಿದೆ ಎನ್ನುತ್ತಾರೆ ಜೋಶಿ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು