ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘₹2500 ಕೋಟಿ ಮೊತ್ತದ ಯೋಜನೆಗಳಿಗೆ ಶೀಘ್ರ ಚಾಲನೆ’

ಮಾಗಡಿ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
Last Updated 28 ಫೆಬ್ರುವರಿ 2019, 13:36 IST
ಅಕ್ಷರ ಗಾತ್ರ

ಕೂಟಗಲ್(ರಾಮನಗರ): ಮಾಗಡಿ ಕ್ಷೇತ್ರದಲ್ಲಿ ರಸ್ತೆ ನಿರ್ಮಾಣ, ಕುಡಿಯುವ ನೀರಿನ ಯೋಜನೆ ಸೇರಿದಂತೆ ಸುಮಾರು ₹2500 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಶೀಘ್ರದಲ್ಲಿಯೇ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಎ.ಮಂಜುನಾಥ್ ಹೇಳಿದರು.

ಇಲ್ಲಿನ ಅಕ್ಕೂರು ಕುಣಿಗಲ್ ರಸ್ತೆಯಿಂದ ಗೊಲ್ಲರದೊಡ್ಡಿ ಗ್ರಾಮಕ್ಕೆ ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ‘ಮಾಗಡಿಯಲ್ಲಿ ಮಾರ್ಚ್ 2ರಂದು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಧರಿಸಿದ್ದರು. ಒಂದು ದಿನದಲ್ಲಿ ಕಾರ್ಯಕ್ರಮ ನಡೆಸಲು ಆಗುವುದಿಲ್ಲವೆಂದು ಮತ್ತೊಂದು ದಿನಾಂಕ ನಿಗದಿ ಪಡಿಸುವಂತೆ ಕೇಳಿಕೊಂಡಿದ್ದೆ. ಅದಕ್ಕೆ ಮುಖ್ಯಮಂತ್ರಿಗಳು ಸಮ್ಮತಿ ಸೂಚಿಸಿ ದಿನಾಂಕ ಗೊತ್ತು ಪಡಿಸುವುದಾಗಿ ಹೇಳಿದ್ದಾರೆ’ ಎಂದರು.

ನೈಸ್ ರಸ್ತೆಯಿಂದ ಮಾಗಡಿ ರಸ್ತೆ -ತಾಳೆಕೆರೆ ಹ್ಯಾಂಡ್ ಪೋಸ್ಟ್‌ ವರೆಗಿನ ರಸ್ತೆ ಅಭಿವೃದ್ಧಿಗೆ ಕೆಶಿಪ್ ನಿಂದ ₹1250 ಕೋಟಿ ಅನುದಾನ ದೊರಕಿದೆ. ಸುಮಾರು ₹540 ಕೋಟಿ ವೆಚ್ಚದಲ್ಲಿ ಕಣ್ವ ಜಲಾಶಯದಿಂದ ಮಂಚನಬೆಲೆ, ವೈ.ಜಿ.ಗುಡ್ಡ ಜಲಾಶಯದಲ್ಲಿ ನೀರು ತುಂಬಿಸಿದ ನಂತರ ಕೆರೆ ತುಂಬಿಸುವ ಯೋಜನೆಯನ್ನೂ ರೂಪಿಸಲಾಗಿದೆ ಎಂದರು.

ಈ ಎರಡು ಜಲಾಶಯಗಳ ನೀರನ್ನು ಎರಡು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಣ್ಣ ನೀರಾವರಿ ಪದ್ಧತಿಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಇದರ ವಿಸ್ತೃತ ಯೋಜನಾ ವರದಿ ತಯಾರಿಸಲಾಗಿದೆ. ಇದಕ್ಕಾಗಿ ಮುಖ್ಯಮಂತ್ರಿಗಳು ₹40 ಕೋಟಿ ರುಪಾಯಿ ಅನುದಾನ ಬಿಡುಗಡೆಗೆ ಮಂಜೂರಾತಿ ನೀಡಿದ್ದಾರೆ ಎಂದರು.

ವೃಷಭಾವತಿ ನದಿಯ ಶುದ್ಧೀಕರಿಸಿದ ನೀರನ್ನು ದೊಡ್ಡಬೆಲೆಯಿಂದ ಪೈಪ್‌ಲೈನ್ ಮೂಲಕ ಬೈರಮಂಗಲ ಕೆರೆ ತುಂಬಿಸಲಾಗುವುದು. ಆ ನೀರನ್ನು ಬಿಡದಿ, ಹಾರೋಹಳ್ಳಿ, ರಾಮನಗರ ಕಸಬಾ ಹಾಗೂ ಕೂಟಗಲ್ ಹೋಬಳಿ ಸೇರಿದಂತೆ 56 ಕೆರೆಗಳಲ್ಲಿ ತುಂಬಿಸುವ ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ₹156 ಕೋಟಿ ಮೀಸಲಿಡಲಾಗಿದೆ ಎಂದರು.

ಕೆಆರ್ಎಸ್ ಬೃಂದಾವನದ ಮಾದರಿಯಲ್ಲಿಯೇ ಮಂಚನಬೆಲೆ ಜಲಾಶಯದಲ್ಲಿ ಬೃಂದಾವನ ನಿರ್ಮಿಸಲಾಗುತ್ತಿದ್ದು, ಗುಜರಾತ್ ಮೂಲದ ಕಂಪನಿ ಡಿಪಿಆರ್ ಸಿದ್ಧಪಡಿಸುತ್ತಿದೆ ಎಂದು ಹೇಳಿದರು.

ಕೂಟಗಲ್ ಹೋಬಳಿ ವ್ಯಾಪ್ತಿಯಲ್ಲಿ ಲೋಕೋಪಯೋಗಿ, ಕಾವೇರಿ ನೀರಾವರಿ ನಿಗಮ ಸೇರಿದಂತೆ ಹಲವಾರು ಇಲಾಖೆಗಳ ಕಾಮಗಾರಿಗೆ ಶೀಘ್ರದಲಿಯೇ ಚಾಲನೆ ನೀಡಲಾಗುವುದು. ಜನರಿಗೆ ದೀರ್ಘ ಕಾಲ ಬಾಳಿಕೆ ಬರುವಂತೆ ರಸ್ತೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.

'ಬೇಸಿಗೆ ಆರಂಭವಾಗುತ್ತಿದ್ದಂತೆ ಕುಡಿಯುವ ನೀರಿನ ಸಮಸ್ಯೆ ದೊಡ್ಡ ಸವಾಲು. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ನಾನು ಅಧಿಕಾರಿಗಳ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ ಆಗದಂತೆ ಎಚ್ಚರ ವಹಿಸುವಂತೆ ಸೂಚನೆ ನೀಡಿದ್ದೇವೆ' ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಕುಡಿಯುವ ನೀರಿನ ಅಗತ್ಯ ಇರುವ ಕಡೆಗಳಲ್ಲಿ ಕೊಳವೆಬಾವಿ ಕೊರೆಸಲು ಆರಂಭಿಸಿದ್ದೇವೆ. ನೀರಿನ ಲಭ್ಯತೆ ಇರುವ ಹಾಗೂ ಬರಪೀಡಿತ ಗ್ರಾಮಗಳಿಗೆ ಪೂರೈಕೆ ಮಾಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್.ಪಿ. ಜಗದೀಶ್, ಮುಖಂಡ ಎಚ್. ಶಿವಪ್ರಸಾದ್, ಎಪಿಎಂಸಿ ನಿರ್ದೇಶರಾದ ವಿ. ವೆಂಕಟರಂಗಯ್ಯ, ಪುಟ್ಟರಾಮಯ್ಯ, ಲಕ್ಷ್ಮೀಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ರಮೇಶ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಕುಮಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಸನ್ನಕುಮಾರ್, ಗ್ರಾಮಾಂತರ ಬ್ಲಾಕ್ ಜೆಡಿಎಸ್ ಅಧ್ಯಕ್ಷ ಅಜಯ್ ದೇವೇಗೌಡ, ಮುಖಂಡರಾದ ಹೊಸೂರು ಜಗದೀಶ್, ರಾಜು, ಸುಮಿತ್ರಾ ರಂಗಸ್ವಾಮಿ, ಜಯಕುಮಾರ್, ವಕೀಲ ರಾಜಶೇಖರ್ ಇದ್ದರು.

*
ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಜಿಲ್ಲೆಗೆ ಮಾವು ಸಂಸ್ಕರಣ ಘಟಕ ಮಂಜೂರು ಮಾಡಿದ್ದು, ಇದಕ್ಕಾಗಿ ಕೂಟಗಲ್‌ ಹೋಬಳಿಯಲ್ಲಿ ಜಾಗ ಗುರುತಿಸಲಾಗುವುದು.
–ಎ.ಮಂಜುನಾಥ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT