ಶುಕ್ರವಾರ, ಮಾರ್ಚ್ 24, 2023
31 °C

ವಿದ್ಯುತ್ ವ್ಯತ್ಯಯ ನಿಲ್ಲಿಸಿ: ರೈತರ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾಂಡವಪುರ: ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ಹಾಗೂ ರೈತರ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರೈತ ಸಂಘದ ಮುಖಂಡ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಪಟ್ಟಣದ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು, ಸೆಸ್ಕ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ಬಡವರ ನಿರ್ಗತಿಕರ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದರಿಂದ ಬಡಜನರು ಕತ್ತಲೆಯಲ್ಲಿ ಬದುಕುವಂತೆ ಆಗಿದೆ. ಈ ಹಿಂದೆ ರೈತರೊಂದಿಗೆ ಮುಖ್ಯಮಂತ್ರಿ ಸಭೆ ನಡೆಸಿದಾಗ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ ನೀವು ಯಾಕೆ ಇಂಥ ನಿರ್ಧಾರ ತೆಗೆದುಕೊಂಡಿದ್ದೀರಿ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸೆಸ್ಕ್ ಇಇ ರಘು ಮಾತನಾಡಿ, ಈ ಯೋಜನೆಯ ಫಲಾನುಭವಿಗಳು ಹಳೆ ಬಾಕಿ ಪಾವತಿ ಮಾಡಿದರಷ್ಟೇ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು.

ಇದರಿಂದ ಕೋಪಗೊಂಡ ದರ್ಶನ್ ಪುಟ್ಟಣ್ಣಯ್ಯ, ಸಾವಿರಾರು ರೂಪಾಯಿಯ ಬಿಲ್‌ ನೀಡಿರುವುದರಿಂದ ಬಡವರು, ಕೂಲಿಕಾರರು ಬಿಲ್‌ ಪಾವತಿಸಲು ಸಾಧ್ಯವಿಲ್ಲ. ಬಾಕಿ ಪಾವತಿ ಮಾಡುವುದಿಲ್ಲ. ಕೂಡಲೇ ವಿದ್ಯುತ್ ಪೂರೈಕೆ ಮಾಡಬೇಕು. ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಬರುವ ಸೆಸ್ಕ್ ಸಿಬ್ಬಂದಿಯನ್ನು ಗ್ರಾಮದಲ್ಲೇ ಕೂಡಿ ಹಾಕಲಾಗುವುದು ಎಂದು ಎಚ್ಚರಿಸಿದರು.

ಬೆಳಿಗ್ಗೆ ವಿದ್ಯುತ್ ನೀಡಿ: ರಾತ್ರಿ ವೇಳೆ ಕಬ್ಬು ಇನ್ನಿತರ ಬೆಳೆಗಳ ನೀರು ಪೂರೈಕೆಗಾಗಿ ವಿದ್ಯುತ್ ನೀಡುತ್ತಿದ್ದೀರಿ. ಚಿರತೆ, ಹಂದಿ ಸೇರಿದಂತೆ ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಈ ಕಾರಣದಿಂದ ರಾತ್ರಿ ಬದಲು ಬೆಳಗ್ಗಿನ ವೇಳೆ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.

ಬೆಳಗ್ಗಿನ ವೇಳೆ ಹಲವು ಕ್ಷೇತ್ರಗಳಿಗೆ ವಿದ್ಯುತ್ ಪೂರೈಕೆ ಮಾಡಬೇಕಾಗಿರುವುದರಿಂದ ಕೊರತೆ ಬರುತ್ತದೆ ಎಂದು ಸೆಸ್ಕ್ ಇಇ ರಘು ಹೇಳಿದರು.

ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಹಾಗೂ ರೈತರ ಜಮೀನಿಗಳಿಗೆ ವಿದ್ಯುತ್ ಪೂರೈಕೆ ಬಗ್ಗೆ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರ ಜತೆ ಚರ್ಚೆ ನಡೆಸಲಾಗುವುದು. ಪಾಂಡವಪುರ ಸೆಸ್ಕ್ ಕಚೇರಿಯಲ್ಲಿ ರೈತರೊಂದಿಗೆ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ಸೆಸ್ಕ್ ಇಇ ರಘು ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯಗೊಂಡಿತು.

ಸೆಸ್ಕ್ ಎಇಇ ವಿ.ಪುಟ್ಟಸ್ವಾಮಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು