ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಕನ್ನಡಕ್ಕಾಗಿ ತುಡಿಯುತ್ತಿದ್ದ ‘ರವಿ ಮನಸ್ಸು’

ಸಾಹಿತ್ಯ ಸಮ್ಮೇಳನಗಳಿಗೆ ವೈಭವ ತುಂದುಕೊಟ್ಟಿದ್ದ ರವಿಕುಮಾರ್‌ ಚಾಮಲಾಪುರ
ಎಂ.ಎನ್‌.ಯೋಗೇಶ್‌
Published 5 ಮಾರ್ಚ್ 2024, 6:59 IST
Last Updated 5 ಮಾರ್ಚ್ 2024, 6:59 IST
ಅಕ್ಷರ ಗಾತ್ರ

ಮಂಡ್ಯ: ಕನ್ನಡ ಭಾಷಾ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮಾಡಿದ್ದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ್‌ ಚಾಮಲಪುರ ಮನಸ್ಸು ಸದಾ ಕನ್ನಡಕ್ಕಾಗಿ ತುಡಿಯುತ್ತಿತ್ತು. ಕನ್ನಡ ಪರ ಕಾರ್ಯಕ್ರಮಗಳಿಗೆ ವೈಭವ ತಂದುಕೊಟ್ಟಿದ್ದ ಅವರು ಕೇವಲ 52ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದು ಕನ್ನಡ ಸಂಗಾತಿಗಳನ್ನು ನೋವಿಗೆ ದೂಡಿದೆ.

ವ್ಯಕ್ತಿಯಂತೆ ರವಿಕುಮಾರ್‌ ವ್ಯಕ್ತಿತ್ವವೂ ಅಜಾನುಬಾಹು ರೂಪ ಪಡೆದಿತ್ತು. ಯಾವುದೇ ಕಾರ್ಯಕ್ರಮವಾದರೂ ಸಂಪೂರ್ಣವಾಗಿ ಅರ್ಪಿಸಿಕೊಂಡು ಅದರ ಅಂದ ಹೆಚ್ಚಿಸುತ್ತಿದ್ದರು. ಅನುದಿನವೂ ಕನ್ನಡದ ಕೆಲಸಗಳ ಬಗ್ಗೆಯೇ ಯೋಚಿಸುತ್ತಿದ್ದ ಅವರು ಮಂಡ್ಯದಲ್ಲಿ ವೈಭವಯುತವಾಗಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಕನಸು ಕಟ್ಟಿದ್ದರು. ಹಲವು ಸವಾಲುಗಳನ್ನು ಎದುರಿಸಿ ಸಮ್ಮೇಳನವನ್ನು ಸಕ್ಕರೆ ನಾಡಿಗೆ ತರುವಲ್ಲಿ ಅವಿರತ ಶ್ರಮಿಸಿದ್ದರು.

ಬೆನ್ನುಹುರಿಗೆ ತೀವ್ರ ಹಾನಿಯಾಗಿ 10 ತಿಂಗಳುಗಳಿಂದ ಹಾಸಿಗೆ ಮೇಲಿದ್ದರೂ ‘ಬಂದೇ ಬರುತ್ತೇನೆ, ವಿಶ್ವವೇ ಮೆಚ್ಚುವ ರೀತಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾಡೋಣ’ ಎನ್ನುತ್ತಿದ್ದ ಅವರು ಬದುಕಿನ ಭರವಸೆ ಬಿಟ್ಟುಕೊಟ್ಟಿರಲಿಲ್ಲ. ಮರಣಶೆಯ್ಯೆಯಲ್ಲಿ ಮಲಗಿದ್ದರೂ ಅವರ ಮಾತುಗಳ ಹೊಳಪು ಮಾಗಿರಲಿಲ್ಲ. ಒಳಗೆ ಅತೀವ ನೋವು, ಸಂಕಟ ಅನುಭವಿಸುತ್ತಿದ್ದರೂ ಹೊರಗೆ ನಗಲೆತ್ನಿಸುತ್ತಲೇ ಇದ್ದ ಅವರು ಈಗ ಹಾಸಿಗೆ ಬಿಟ್ಟು ಹೊರ ನಡೆದಿದ್ದಾರೆ.

ತಮ್ಮ ಹೋರಾಟದ ದಾರಿಯಲ್ಲಿ ಮಿತ್ರರೊಂದಿಗೆ ಶತ್ರುಗಳನ್ನೂ ಸಂಪಾದಿಸಿಕೊಂಡಿದ್ದ ಅವರು ತಮ್ಮ ಹಾಸಿಗೆ ಮೇಲಿನ ವನವಾಸದಲ್ಲಿ ಎಲ್ಲರ ಜೊತೆಗೂ ಮಾತನಾಡುವ ಪ್ರಯತ್ನ ಮಾಡಿದ್ದರು. ತಪ್ಪುಒಪ್ಪುಗಳನ್ನು ಅರಿವಿಗೆ ತಂದುಕೊಂಡು ವಿಷಾದವನ್ನೂ ವಕ್ತಪಡಿಸಿದ್ದರು. ಎಲ್ಲವನ್ನೂ ತೀರಿಸಿಯೇ ಹೊರಟ ರವಿಕುಮಾರ್‌ ನೆನಪುಗಳನ್ನು ಉಳಿಸಿದ್ದಾರೆ. ಜೂನ್‌ ತಿಂಗಳಲ್ಲಿ ನಡೆಯಲಿರುವ ಕನ್ನಡ ನುಡಿಜಾತ್ರೆಯಲ್ಲಿ ರವಿಕುಮಾರ್‌ ಚಾಮಲಾಪುರ ಅನುಪಸ್ಥಿತಿ ಕಾಡದೇ ಇರದು.

ಸಕ್ಕರೆ ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಶಸ್ತಿ ಪ್ರದಾನ ಮಾಡುತ್ತಿದ್ದ ರವಿಕುಮಾರ್‌ ಸಂಘಟನಾ ಚತುರ ಎನಿಸಿಕೊಂಡಿದ್ದರು. ಹಳ್ಳಿಹಳ್ಳಿಗಳಲ್ಲಿ ಪ್ರಗತಿಪರ ರೈತರು, ಶಿಕ್ಷಕರು, ಕಲಾವಿದರು, ಮೌನಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದರು. ಕನ್ನಡ ಉಪನ್ಯಾಸಕನಾಗಿ, ಸಾಹಿತಿಯಾಗಿ, ಕಸಾಪ ಅಧ್ಯಕ್ಷನಾಗಿ ಅವರು ಎಲ್ಲಾ ವರ್ಗದ ಜನರನ್ನೂ ಒಳಗೊಂಡು ಕಾರ್ಯಕ್ರಮ ಆಯೋಜಿಸುತ್ತಿದ್ದರು.

ಸಾಹಿತ್ಯ ಪರ ಕಾರ್ಯಕ್ರಮಗಳಿಗೆ ರಾಜಕಾರಣಿಗಳನ್ನು ಸೇರಿಸಿಕೊಳ್ಳುತ್ತಿದ್ದ ಕಾರಣಕ್ಕೆ ಹಲವರಿಂದ ಆಕ್ಷೇಪವಿತ್ತು. ಆದರೆ ‘ರಾಜಾಶ್ರಯವಿಲ್ಲದೇ ಯಾವುದೇ ಕಾರ್ಯಕ್ರಮದ ಉದ್ದೇಶ ಈಡೇರದು’ ಎನ್ನುತ್ತಿದ್ದ ಅವರು ಜನಪ್ರತಿನಿಧಿಗಳ ಸಹಾಯ ಪಡೆಯುತ್ತಿದ್ದರು. ಜಿಲ್ಲಾ ಸಾಹಿತ್ಯ ಸಮ್ಮೇಳನಗಳಿಗೆ ಅದ್ಧೂರಿತನ ತಂದುಕೊಟ್ಟಿದ್ದರು. ನಗರ, ಹೋಬಳಿ ಮಟ್ಟದಲ್ಲೂ ಸಾಹತ್ಯ ಸಮ್ಮೇಳನ  ಆಯೋಜಿಸಿ ಹೊಸ ಸಂಪ್ರದಾಯ ಹುಟ್ಟುಹಾಕಿದ್ದರು.

8 ವರ್ಷ ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದ ಅವರು 50ಕ್ಕೂ ಹೆಚ್ಚು ಸಾಹಿತ್ಯ ಸಮ್ಮೇಳನ ಆಯೋಜಿಸಿ 30ಕ್ಕೂ ಹೆಚ್ಚ ಪುಸ್ತಕ ಪ್ರಕಟಿಸಿದ್ದಾರೆ. ಜಿಲ್ಲೆಯಾದ್ಯಂತ ತಮ್ಮದೇ ಆದ ಸ್ನೇಹಪಡೆ ಕಟ್ಟಿಕೊಂಡಿದ್ದ ರವಿಕುಮಾರ್‌ ಚಾಮಲಾಪುರ ಅವರು ಎಲ್ಲರ ಮನಸ್ಸಿನಲ್ಲೂ ಭಾರವಾದ ನೆನಪು ಬಿಟ್ಟು ಹೋಗಿದ್ದಾರೆ. ಸ್ನೇಹಿತರೆಲ್ಲರೂ ಸೇರಿ ಮುಂದೆ ಜಿಲ್ಲೆಯಾದ್ಯಂತ ರವಿ ಮನಸ್ಸಿನ ತುಡಿತಗಳನ್ನು ಜೀವಂತವಾಗಿಟ್ಟುಕೊಳ್ಳುತ್ತಾರೆ ಎಂಬುದು ಉತ್ಪ್ರೇಕ್ಷೆಯಲ್ಲ.

ಕಂಬನಿ ಮಿಡಿದ ಗಣ್ಯರು

ರವಿಕುಮಾರ್‌ ಚಾಮಲಾಪುರ ನಿಧನಕ್ಕೆ ಜಿಲ್ಲೆಯಾದ್ಯಂದ ಜನಪ್ರತಿನಿಧಿಗಳು ಅಧಿಕಾರಿಗಳು ಸಾಹಿತಿಗಳು ಕಂಬನಿ ಮಿಡಿದರು. ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಕೇಂದ್ರ ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಸೇರಿದಂತೆ ಹಲವು ಅಂತಿಮ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT