ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡು ಹಂದಿ ದಾಳಿಗೆ ವ್ಯಕ್ತಿ ಬಲಿ: ಪ್ರತಿಭಟನೆ

ಸ್ಥಳದಲ್ಲಿಯೇ ಪರಿಹಾರ ಘೋಷಿಸಿದ ಶಾಸಕ
Published 17 ಮೇ 2024, 16:30 IST
Last Updated 17 ಮೇ 2024, 16:30 IST
ಅಕ್ಷರ ಗಾತ್ರ

ಮಂಡ್ಯ: ತಾಲ್ಲೂಕಿನ ಚಿಂದಗಿರಿದೊಡ್ಡಿಯಲ್ಲಿ ವ್ಯಕ್ತಿ ಮೇಲೆ ಕಾಡುಹಂದಿ ದಾಳಿಯಿಂದ ಮೃತಪಟ್ಟಿದ್ದ ಕುಟುಂಬದ ಸದಸ್ಯರು ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿ ಮಿಮ್ಸ್‌ ಎದುರು  ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ನಾಗಮಂಗಲ ರಸ್ತೆಯ ಚಿಕ್ಕಯಗಟಿ ಬಳಿ ಮಂಡ್ಯ ತಾಲ್ಲೂಕಿನ ಚಿಂದಗಿರಿದೊಡ್ಡಿ ಗ್ರಾಮದ ಪುಟ್ಟಸ್ವಾಮಿ ಅವರ ಮಗ ಶಿವ(48) ಅವರು ಕಾಡು ಹಂದಿಯ ದಾಳಿಗೆ ಗುರುವಾರ ಸಂಜೆ ಮೃತಪಟ್ಟಿದ್ದರು.

ಮಂಡ್ಯ-ನಾಗಮಂಗಲ ರಸ್ತೆಯಲ್ಲಿ ಬೈಕಿನಲ್ಲಿ ಬರುತ್ತಿದ್ದಾಗ ಚಿಕ್ಕಯಗಟಿ ಬಳಿ ಕಾಡು ಹಂದಿ ಏಕಾಏಕಿ ದಾಳಿ ಮಾಡಿದೆ. ಕೆಳಕ್ಕೆ ಬಿದ್ದ ಶಿವು ಎಡ ತೊಡೆ ಮತ್ತು ಮರ್ಮಾಂಗಕ್ಕೆ ಗುದ್ದಿದ ಪರಿಣಾಮ ತೀವ್ರ ರಕ್ತಸ್ರಾವಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ನಾಗಮಂಗಲ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದರು.

ಮಿಮ್ಸ್ ಶವಗಾರದ ಬಳಿ ಶುಕ್ರವಾರ ಬೆಳಿಗ್ಗೆ ಜಮಾಯಿಸಿದ ಮೃತನ ಸಂಬಂಧಿಕರು ಹಾಗೂ  ಚಿಂದಗಿರಿದೊಡ್ಡಿ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ಸುದ್ದಿ ತಿಳಿದ ಶಾಸಕ ರವಿಕುಮಾರ ಗಣಿಗ ಅವರು ಸ್ಥಳಕ್ಕೆ ಬರುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟರು.

ಮಧ್ಯಾಹ್ನದ ವೇಳೆಗೆ ಶಾಸಕರು ಆಗಮಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು, ನಂತರ ಅಲೆಮಾರಿ ಬುಡಕಟ್ಟು ಮಹಾಸಭಾ ಮತ್ತು ಮಂಡ್ಯ ಜಿಲ್ಲಾ ಕುಳುವ ಸಮಾಜದ ಆಶ್ರಯದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿದ ಸಂಬಂಧಿಕರು ಸೂಕ್ತ ಪರಿಹಾರ ದೊರಕಿಸಿ ಕೊಡುವಂತೆ ಒತ್ತಾಯಿಸಿದ್ದಾರೆ.

‘ಅಲೆಮಾರಿ ಸಮುದಾಯಕ್ಕೆ ಸೇರಿದ ಮೃತ ವ್ಯಕ್ತಿಯ ಕುಟುಂಬಕ್ಕೆ ಆಸ್ತಿ ಇಲ್ಲ. ಕೂಲಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು, ಮನೆ ನಿರ್ವಹಿಸುತ್ತಿದ್ದ ಶಿವು ಮೃತಪಟ್ಟ ಕಾರಣದಿಂದ ಕುಟುಂಬ ಬೀದಿಗೆ ಬಿದ್ದಂತಾಗಿದೆ, ಅವರ ಬದುಕು ಮೂರಾಬಟ್ಟೆಯಾಗಿದ್ದು ಸೂಕ್ತ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

‘ಮೃತನ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು. ಕುಟುಂಬದ ಜೀವನ ಭದ್ರತೆಗಾಗಿ ಮೃತರ ಪುತ್ರ ಶ್ರೀನಿವಾಸ್ ಅವರಿಗೆ ಖಾಯಂ ಸರ್ಕಾರಿ ಉದ್ಯೋಗ ನೀಡಬೇಕು. ಮೃತನ ಪತ್ನಿ ಅನಾರೋಗ್ಯ ಪೀಡಿತರಾಗಿದ್ದು ಇವರಿಗೆ ಮಾಸಿಕ ಪಿಂಚಣಿ ನೀಡಬೇಕು’ ಎಂದು ಒತ್ತಾಯಿಸಿದರು.

ಮೃತರ ಸಂಬಂಧಿಕರ ಬೇಡಿಕೆಗೆ ಸ್ಪಂದಿಸಿದ ಶಾಸಕರು, ಅರಣ್ಯ ಇಲಾಖೆ ವತಿಯಿಂದ ₹15 ಲಕ್ಷ ಪರಿಹಾರ ನೀಡಲಾಗುವುದು. ಪರಿಹಾರದ ಹಣವನ್ನು ಮೂರು ನಾಲ್ಕು ದಿನಗಳ ನಂತರ ನೀಡಲಾಗುವುದು, ಖಾಯಂ ಸರ್ಕಾರಿ ಉದ್ಯೋಗ ನೀಡಲು ಅವಕಾಶ ಇಲ್ಲದ ಪರಿಣಾಮ, ಯಾವುದಾದರೂ ಸರ್ಕಾರಿ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ದೊರಕಿಸಿ ಕೊಡುವ ಭರವಸೆ ನೀಡಿದರು. ಜೊತೆಗೆ ಮೃತನ ಕುಟುಂಬಕ್ಕೆ ವೈಯಕ್ತಿಕವಾಗಿ ಸ್ಥಳದಲ್ಲಿಯೇ ₹50 ಸಾವಿರ ಪರಿಹಾರ ನೀಡಿದರು.

ಕುಳುವ ಮಹಾ ಸಂಘದ ರಾಜ್ಯ ಮುಖಂಡ ಕಿರಣ್ ಕುಮಾರ್ ಕೊತ್ತಗೆರೆ, ರಾಮಶೆಟ್ಟಿ ಹನಕೆರೆ, ವೆಂಕಟೇಶ್, ಕೃಷ್ಣಕುಮಾರ್ ಗಣಂಗೂರು, ರವಿ ಕೊಡಗಹಳ್ಳಿ, ರಾಮಕೃಷ್ಣ, ಸಂದೀಪ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT