ಕದ್ದು ಹೋಗುವ ಪ್ರಶ್ನೆಯೇ ಇಲ್ಲ: ಪುಟ್ಟರಾಜು

7
ನೂತನ ಉಸ್ತುವಾರಿ ಸಚಿವರಿಗೆ ಜೆಡಿಎಸ್‌ ಮುಖಂಡರಿಂದ ಅಭಿನಂದನೆ

ಕದ್ದು ಹೋಗುವ ಪ್ರಶ್ನೆಯೇ ಇಲ್ಲ: ಪುಟ್ಟರಾಜು

Published:
Updated:
Deccan Herald

ಮಂಡ್ಯ: ‘ನಾನು ಮಾತನಾಡುವುದಿಲ್ಲ, ಕೆಲಸ ಮಾಡಿ ತೋರಿಸುತ್ತೇನೆ. ಕದ್ದು ಓಡಿ ಹೋಗುವ ಪ್ರಶ್ನೇಯೇ ಇಲ್ಲ. ಇಲ್ಲೇ ವಾಸ್ತವ್ಯ ಹೂಡಿ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಹೇಳಿದರು.

ಉಸ್ತುವಾರಿ ಸಚಿವರಾದ ನಂತರ ಮೊದಲ ಬಾರಿ ನಗರಕ್ಕೆ ಬಂದ ಅವರಿಗೆ ಜಡಿಎಸ್‌ ಪಕ್ಷದ ಮುಖಂಡರು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ಕೆಆರ್‌ಎಸ್‌, ಹೇಮಾವತಿ ಜಲಾಶಯದಿಂದ ನೀರು ಹರಿಯುವಾಗ ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸಲು ಸಣ್ಣ ನೀರಾವರಿ ಇಲಾಖೆಯಿಂದ ಕ್ರಮ ಕೈಗೊಳ್ಳುತ್ತೇನೆ. ಈ ಉದ್ದೇಶಕ್ಕಾಗಿ ₹ 200 ಕೋಟಿ ವಿನಿಯೋಗಿಸಲು ಉದ್ದೇಶಿಸಲಾಗಿದೆ. ಮಂಡ್ಯ ಜಿಲ್ಲೆಯ ಕೀರ್ತಿ ಎಲ್ಲೆಡೆ ಇದೆ. ನಾನು ಸಂಸದನಾಗಿ ಕೆಲಸ ಮಾಡುವಾಗ ಉತ್ತರ ಭಾರತದ ಸಂಸದರು ನಮ್ಮ ಜಿಲ್ಲೆಯ ಬಗ್ಗೆ ಉತ್ತಮ ಮಾತು ಆಡುವುದನ್ನು ಕೇಳಿದ್ದೇನೆ. ಹೀಗಾಗಿ ಜಿಲ್ಲೆಯ ರೈತರಿಗೆ ಸಕಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ನಾನು ಕ್ರಮ ವಹಿಸುತ್ತೇನೆ’ ಎಂದು ಹೇಳಿದರು.

‘ನಗರದ ಐತಿಹಾಸಿಕ ಮೈಷುಗರ್‌ ಕಾರ್ಖಾನೆ ಹಾಗೂ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಿಸಲು ನಾನು ಬದ್ಧನಾಗಿದ್ದೇನೆ. ರೈತರ ನಿರ್ಧಾರಗಳಿಗೆ ನಾನು ತಲೆ ಬಾಗುತ್ತೇನೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮಂಡ್ಯ ಜಿಲ್ಲೆಯ ಬಗ್ಗೆ ವಿಶೇಷ ಪ್ರೀತಿ, ಕಾಳಜಿ ಇದೆ. ನಮ್ಮ ಜಿಲ್ಲೆಯ ಜನರು ಈ ಬಾರಿ ಚೆನ್ನಾಗಿ ಭತ್ತ ಬೆಳೆಯಬೇಕು ಎಂದು ಅವರು ಆಸೆ ಪಟ್ಟಿದ್ದಾರೆ. ಅವರೇ ಬಂದು ಭತ್ತದ ನಾಟಿಗೆ ಚಾಲನೆ ನೀಡುವುದಾಗಿ ತಿಳಿಸಿದ್ದಾರೆ. ಜಿಲ್ಲೆಯ ರೈತರಿಗೆ, ಸಾಮಾನ್ಯರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಅವರು ಎಲ್ಲಾ ಶಾಸಕರಿಗೆ ಸೂಚನೆ ಕೊಟ್ಟಿದ್ದಾರೆ’ ಎಂದು ಹೇಳಿದರು.‌

ಬಿಜೆಪಿ ವಿರುದ್ಧ ಆಕ್ರೋಶ:
‘ನಮ್ಮ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿದೆ. ನಾವು ಬಿಜೆಪಿಯಿಂದ ಪಾಠ ಕಲಿಯಬೇಕಾಗಿಲ್ಲ. ಅಖಂಡ ಕರ್ನಾಟಕ ನಿರ್ಮಾಣವೇ ನಮ್ಮ ಸರ್ಕಾರದ ಉದ್ದೇಶವಾಗಿದೆ. ಇಡೀ ಮಂತ್ರಿಮಂಡಲ ಉತ್ತರ ಕರ್ನಾಟಕದಲ್ಲಿ ನೆಲೆಯೂರಿ ಕೆಲಸ ಮಾಡುವ ಉದ್ದೇಶವನ್ನು ಮುಖ್ಯಮಂತ್ರಿಗಳು ಹೊಂದಿದ್ದಾರೆ. ಆದರೆ ಬಿಜೆಪಿ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡುತ್ತಿದೆ. ಇಡೀ ರಾಜ್ಯದ ರೈತರ ಬೆನ್ನುಲುಬಾಗಿ ಸರ್ಕಾರ ನಿಂತಿದೆ’ ಎಂದು ಹೇಳಿದರು.

‘ಕಾಂಗ್ರೆಸ್‌ ಪಕ್ಷದ ಬೆಂಬಲದೊಂದಿಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಹೀಗಿದ್ದರೂ ರೈತರ 48 ಸಾವಿರ ಕೋಟಿ ಸಾಲ  ಮಾನ್ನಾ ಮಾಡಿದ್ದಾರೆ. ಆದರೆ ಕೆಲವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ರೈತರನ್ನು ರಕ್ಷಣೆ ಮಾಡುವ ಹೊಣೆ ನಮ್ಮ ಸರ್ಕಾರಕ್ಕಿದೆ. ಈ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

ಶಾಸಕರಾದ ಎಂ.ಶ್ರೀನಿವಾಸ್‌, ಕೆ.ಸಿ.ನಾರಾಯಣಗೌಡ, ಸುರೇಶ್‌ಗೌಡ, ಡಾ.ಕೆ.ಅನ್ನದಾನಿ, ವಿಧಾನ ಪರಿಷತ್‌ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಎನ್‌.ಅಪ್ಪಾಜಿಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನಾ ಸ್ವಾಮಿ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್‌, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಲ್‌.ದೇವರಾಜು, ಮುಖಂಡರಾದ ಜಿ.ಬಿ.ಶಿವಕುಮಾರ್‌, ಲಕ್ಷ್ಮಿ ಅಶ್ವಿನ್‌ಗೌಡ ಹಾಜರಿದ್ದರು.

ನೀತಿ ಸಂಹಿತೆ ಉಲ್ಲಂಘನೆ ಆರೋಪ

ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೆ ಜೆಡಿಎಸ್‌ ಮುಖಂಡರು ನಗರದಾದ್ಯಂತ ಫ್ಲೆಕ್ಸ್‌, ಬ್ಯಾನರ್‌ ಅಳವಡಿಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಮುಖಂಡರು, ಜೆಡಿಎಸ್‌ ಮುಖಂಡರು ನಗರದ ಪ್ರಮುಖ ಬೀದಿಗಳಲ್ಲಿ, ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಫ್ಲೆಕ್ಸ್‌ ಅಳವಡಿಸಿದ್ದಾರೆ. ಜಿಲ್ಲೆಯ ವಿವಿಧ ಹಳ್ಳಿಗಳಿಂದ ಹಣ ಕೊಟ್ಟು ಜನರನ್ನು ತುಂಬಿಕೊಂಡು ಬಂದಿದ್ದಾರೆ. ಚುನಾವನಾ ನೀತಿ ಸಂಹಿತೆಯನ್ನು ಗಾಳಿಗೆ ತೂರಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಶೀಘ್ರ ಫ್ಲೆಕ್ಸ್‌ ತೆರವುಗೊಳಿಸಬೇಕು, ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !