ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವತಾ ಸಂಪ್ರೀತಿಗಾಗಿ ದೀಪಾರಾಧನೆ

Last Updated 25 ನವೆಂಬರ್ 2019, 19:45 IST
ಅಕ್ಷರ ಗಾತ್ರ

ದೀಪದ ಮಹತ್ವವನ್ನು ಸಾರುವ ಸಲುವಾಗಿ ದೀಪೋತ್ಸವ ಆಚರಣೆಗೆ ಬಂದಿದ್ದು, ತಿಂಗಳು ಕಾಲ ದೇವಾಲಯಗಳಲ್ಲಿ ದೀಪ ಹಚ್ಚಿ ಆರಾಧಿಸಲಾಗುತ್ತದೆ. ಮೈಸೂರಿನಲ್ಲಿ ಹಲವು ದೇವಾಲಯಗಳಲ್ಲಿ ನಿತ್ಯ ಸಂಜೆ ಸೇವಾರ್ಥಿಗಳಿಂದ ದೀಪೋತ್ಸವ ನಡೆದಿದ್ದು, ಸಾರ್ವಜನಿಕರು ಯಾವುದೇ ಜಾತಿ ಭೇದವಿಲ್ಲದೆ ದೀಪ ಬೆಳಗಿಸಲು ಕೈಜೋಡಿಸಿದ್ದಾರೆ. ಕೊನೆಯ ದಿನ ಸಾಮೂಹಿಕ ದೀಪ ಬೆಳಗಿಸಲು ದೇಗುಲಗಳಲ್ಲಿ ತಯಾರಿ ನಡೆದಿದ್ದು, ಎಲ್ಲೆಡೆ ಭಕ್ತ ಸಮೂಹ ಸೇರಲಿದೆ.

ನಗರದ ಖಿಲ್ಲೆ ಮೊಹಲ್ಲಾದಲ್ಲಿರುವ ದಕ್ಷಿಣಾಮ್ನಾಯ ಶಾರದಾ ಪೀಠದಲ್ಲಿ (ಅಭಿನವ ಶಂಕರಾಲಯ) ಶಾರದಾ ದೇವಿಗೆ ನಿತ್ಯ ಸಂಜೆ ವಿಶೇಷ ದೀಪೋತ್ಸವ ನಡೆಯಲಿದೆ.

ಶುಭಂ ಕರೋತು ಕಲ್ಯಾಣಂ, ಆರೋಗ್ಯಂ

ಧನಸಂಪದಂ, ಭಯ ಶತ್ರು ವಿನಾಶಾಯ, ದೀಪಂಜ್ಯೋತಿ ನಮೋಸ್ತುತೆ...

ಸೇವಾರ್ಥಿಗಳಿಂದಲೇ ಈ ಮಂತ್ರ ಹೇಳಿಸಿ ದೀಪ ಬೆಳಗಿಸುತ್ತಿರುವುದು ವಿಶೇಷ. ಮನುಕುಲಕ್ಕೆ ಶುಭವಾಗಲಿ, ಸರ್ವರ ಕಲ್ಯಾಣವಾಗಲಿ, ಆರೋಗ್ಯ ಪ್ರಾಪ್ತವಾಗಲಿ, ಧನ ಸಂಪತ್ತು ವೃದ್ಧಿಸಲಿ, ಭಯ ದೂರವಾಗಲಿ, ಮನುಷ್ಯನ ಶತ್ರುಗಳಾದ ಅರಿಷಡ್ವರ್ಗ ಗಳು ದೂರವಾಗಲಿ ಎಂದು ಪ್ರಾರ್ಥಿಸಿ ನಿನ್ನ ಮುಂದೆ ದೀಪ ಬೆಳಗಿಸುತ್ತಿದ್ದೇನೆ. ದೇವಿ ನಿನಗೆ ನಮಸ್ಕಾರ ಎನ್ನುತ್ತದೆ ಈ ಶ್ಲೋಕ.

ಬಲಿ ಚಕ್ರವರ್ತಿ ಭೂಮಿಗೆ ಬಂದು ವಿಷ್ಣುವಿನ ಆರಾಧನೆ ಮಾಡಿದ ಪ್ರತೀಕವಾಗಿ ದೀಪಾವಳಿ ಆಚರಣೆಗೆ ಬಂದಿದೆ. ಇದರ ಮುಂದುವರಿದ ಭಾಗವಾಗಿ ಕಾರ್ತೀಕ ಮಾಸವನ್ನು ದೀಪಗಳ ಮಾಸವಾಗಿ ಆಚರಿಸಲಾಗುತ್ತದೆ. ವೇದ ಸಂಪ್ರದಾಯದ ಪ್ರಕಾರ ಈ ಮಾಸದಲ್ಲಿ ದೀಪ ಬೆಳಗಿಸುವುದರಿಂದ ಮಾನವನಿಗೆ ಶುಭ, ಶ್ರೇಯಸ್ಸು ಲಭಿಸುತ್ತದೆ ಎಂಬ ನಂಬಿಕೆ ಬಲವಾಗಿದೆ.

ಅನೇನ ಕಾರ್ತೀಕ ಮಾಸ

ವಿಶೇಷ ದೀಪಾರಾಧನೇನ

ಶ್ರೀ ಶಾರದಾ ಪರಮೇಶ್ವರಿ ಪ್ರಿಯತಾಂ

ಕಾರ್ತೀಕ ಮಾಸದಲ್ಲಿ ಶಾರದಾ ಪರಮೇಶ್ವರಿ ಮುಂದೆ ದೀಪ ಬೆಳಗಿಸುವುದು ದೇವಿಗೆ ಪ್ರಿಯವಾದ ಕೆಲಸ ಎನ್ನುತ್ತದೆ ಈ ಸ್ತೋತ್ರ. ಇದರಿಂದ ದೇವಿ ಸಂಪ್ರೀತಳಾಗುತ್ತಾಳೆ. ದೀಪೋತ್ಸವದ ನಂತರ ಆಗಮಿಸಿದ ಎಲ್ಲ ಭಕ್ತರಿಗೂ ಪ್ರಸಾದ ವಿತರಿಸಲಾಗುತ್ತಿದೆ.

ಶಿವದೇವಾಲಯ, ಮಲೆಮಹದೇಶ್ವರಸ್ವಾಮಿ, ಕಾಮಕಾಮೇಶ್ವರಿ ದೇವಾಲಯಗಳಲ್ಲಿ ಮಾಸದ ಪ್ರತಿ ಸೋಮವಾರ ವಿಶೇಷ ದೀಪೋತ್ಸವ ನಡೆಯಿತು. ದಿವಾನ್ಸ್ ರಸ್ತೆಯ ಅಮೃತೇಶ್ವರ ದೇವಾಲಯದಲ್ಲಿ ಶಿವ ಹಾಗೂ ಪಾರ್ವತಿ ಸ್ವರೂಪದಲ್ಲಿರುವ ಅಮೃತೇಶ್ವರ ಹಾಗೂ ಬಾಲಾತ್ರಿಪುರಸುಂದರಿ ಅಮ್ಮನವರಿಗೆ ನಿತ್ಯ ವಿಶೇಷ ಪೂಜೆ ಅಲಂಕಾರ ನಡೆದಿದ್ದು, ಸ್ವಾಮಿಗೆ ನಾಲ್ಕೂ ಸೋಮವಾರ ವಿಶೇಷ ಹೋಮ ಹವನ, ಸಂಜೆ ದೀಪಾರಾಧನೆ ನಡೆಯಿತು. ಅಮ್ಮನವರಿಗೆ ಮಂಗಳವಾರ ಹಾಗೂ ಶುಕ್ರವಾರ ವಿಶೇಷ ದೀಪೋತ್ಸವವೂ ನಡೆಯಿತು. ಮಂಗಳವಾರ ಅಮಾವಾಸ್ಯೆ ಬಂದಿರುವುದರಿಂದ ಶಿವ ದೇವಾಲಯಗಳಲ್ಲಿ ಸೋಮವಾರ (ನ.25ರಂದು) ಕಡೇ ದೀಪೋತ್ಸವ ಆಚರಿಸಲಾಗುತ್ತಿದೆ.

ನಾರಾಯಣ ಶಾಸ್ತ್ರಿ ರಸ್ತೆಯ ಕೊಲ್ಹಾಪುರದಮ್ಮ ದೇವಸ್ಥಾನ (ಮಹಾಲಕ್ಷ್ಮೀ, ಕಾಳಿಕಾದೇವಿ), ಕೆ.ಆರ್‌. ಮೊಹಲ್ಲಾ, ತೊಗರಿ ಬೀದಿಯ ಕೊಲ್ಹಾಪುರದಮ್ಮನ (ಮಹಾಲಕ್ಷ್ಮೀ) ದೇಗುಲ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿವೆ. ಚಾಮರಾಜ ಪುರಂನ ಗೀತಾ ರಸ್ತೆಯಲ್ಲಿರುವ ವಿಜಯ ವಿಶ್ವೇಶ್ವರ ದೇವಾಲಯದಲ್ಲಿ ನಿತ್ಯ ದೀಪೋತ್ಸವದ ಜೊತೆಗೆ ಸೋಮವಾರ ಬೆಳಿಗ್ಗೆ ಮಹಾ ರುದ್ರಾಭಿಷೇಕ, ರುದ್ರ ಆರಾಧನೆ, ಮೃತ್ಯುಂಜಯ ಹೋಮ, ಪ್ರದೋಷ ಕಾಲದಲ್ಲಿ ವಿಶೇಷ ಪೂಜೆ, ರುದ್ರ ಪಠಣ, ಸಂಜೆ ದೀಪೋತ್ಸವ ಹಾಗೂ ಪ್ರಸಾದ ವಿತರಣೆ ನಡೆಯಿತು.

ಇಲ್ಲಿಯ ಬಹಳಷ್ಟು ದೇವಾಲಯಗಳಲ್ಲಿ ದೇವರ ಎದುರಿನ ಸಾಲುದೀಪಗಳ ಕಂಬದಲ್ಲಿ ದೀಪ ಬೆಳಗಿಸಿ ಆ ಬೆಳಕಲ್ಲಿ ದೇವರ ದರ್ಶನ ಮಾಡಿದ ಭಕ್ತರು ಕೃತಾರ್ಥಭಾವ ಮೆರೆದಿದ್ದಾರೆ.

ಈ ಮಾಸದಲ್ಲಿ ಕುಲದೇವತೆ, ಕುಲದೈವ, ಆರಾಧ್ಯದೇವರ ದೇವಸ್ಥಾನಕ್ಕೆ ತೆರಳಿ ಶಕ್ತ್ಯಾನುಸಾರ ದೀಪ ಹಚ್ಚಿ, ಹಣ್ಣು–ಕಾಯಿ ನೈವೇದ್ಯ ಮಾಡಿ ಅಲ್ಲಿ ಸೇರಿರುವ ಭಕ್ತರಿಗೆ ಪ್ರಸಾದ ನೀಡಿ ಕೃತಾರ್ಥಭಾವ ಹೊಂದುತ್ತಾರೆ.

ಮಾನವನ ಆಸೆ, ಆಕಾಂಕ್ಷೆಗಳನ್ನು ಹೋಗಲಾಡಿಸಲು ಕಾರ್ತೀಕ ಮಾಸದಲ್ಲಿ ದೀಪ ಬೆಳಗುತ್ತಾರೆ. ಹಿಂದೂ ಧರ್ಮದ ಪ್ರಕಾರ ಹಣತೆಯೇ ಬೆಳಕಿನ ಪ್ರತಿನಿಧಿ. ಬೆಳಕೆಂದರೆ ಸತ್ಯ, ಜ್ಞಾನ, ಪರಮೇಶ್ವರಿಯ ರೂಪ. ನಮ್ಮಲ್ಲಿರುವ ಅಂಧಕಾರ ಕಳೆಯಲಿ ಹೊಸಜೀವನ ಶುರುವಾಗಲಿ ಎಂಬುದನ್ನು ಸಾರುವುದೇ ಈ ಮಾಸದ ವಿಶೇಷ ಸಂದೇಶ ಎಂದು ಅಭಿನವ ಶಂಕರಾಲಯ ಪೀಠದ ಧರ್ಮಾಧಿಕಾರಿ ಎಚ್‌.ರಾಮಚಂದ್ರ ತಿಳಿಸಿದರು.

ದೀಪ ಆತ್ಮಸ್ವರೂಪ

ಜಗತ್ತಿನ ಬಹುಪಾಲು ದೇಶಗಳಿಗೆ ದೀಪವೆಂದರೆ ತಾತ್ಕಾಲಿಕವಾಗಿ ಬೆಳಕು ಅಷ್ಟೇ.
ಆದರೆ, ಭಾರತೀಯರ ಪಾಲಿಗೆ ದೀಪಕ್ಕೆ ವಿಶೇಷ ಅರ್ಥವಿದೆ, ಸಾರ್ಥಕ್ಯವಿದೆ, ಆತ್ಮೀಯ ಸೆಳೆತವಿದೆ.

ಧಾರ್ಮಿಕ, ಆಧ್ಯಾತ್ಮಿಕ, ಐತಿಹಾಸಿಕ, ಸಾಂಸ್ಕೃತಿಕ... ಹೀಗೆ ಬಹು ಆಯಾಮಗಳಲ್ಲಿ ದೀಪಕ್ಕೆ ವಿವರಣೆಗಳು ಇವೆ. ಇದೆಲ್ಲದರ ಆಚೆಗೂ ಅರ್ಥ ಮಾಡಿಕೊಳ್ಳಬೇಕಾದ ಒಂದು ಮಾತಿದೆ. ದೀಪ ಹುಟ್ಟಿದ್ದು ಭೌತಿಕ ಸ್ವರೂಪದಿಂದ. ಅದು ಯಾರ ಸಂಶೋಧನೆಯೂ ಅಲ್ಲ. ನಿಸರ್ಗದಲ್ಲಿರುವ ಗಾಳಿ, ಮಣ್ಣು, ತೈಲ, ಬತ್ತಿಗಳೇ ದೀಪದ ಮೂಲ ಸ್ವರೂಪಗಳು. ಹಾಗಾಗಿ, ದೀಪಕ್ಕೆ ಭೇದವಿಲ್ಲ. ದೀಪ ಎಲ್ಲೇ ಬೆಳಗಿದರೂ ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ಸ್ವೀಕರಿಸಿದೆ.

ಮನುಷ್ಯ ಹುಟ್ಟಿದಾಗ ಮನೆ ಬೆಳಕಾಯಿತು ಎನ್ನುತ್ತಾರೆ. ಜೀವ ಹೋದಾಗ ಮನೆ ಕತ್ತಲಾಗದಿರಲಿ ಎಂದು ಪುಟ್ಟ ಹಣತೆ ಹಚ್ಚಿಡುತ್ತಾರೆ. ದೀಪಕ್ಕೂ ಜೀವಕ್ಕೂ ವ್ಯತ್ಯಾಸವಿಲ್ಲ. ಅದಕ್ಕೆ ಹಿರಿಯರು ‘ಆತ್ಮಜ್ಯೋತಿ’ ಎಂದು ಕರೆದಿದ್ದಾರೆ.

ಸುಬ್ರಹ್ಮಣ್ಯ ಷಷ್ಠಿ ದೀಪಾರಾಧನೆ: ಕಾರ್ತೀಕ ಮಾಸದ ನಂತರ ಬರುವ ಮೊದಲ ಷಷ್ಠಿಯಂದು (ಡಿ.2ರಂದು) ಸುಬ್ರಹ್ಮಣ್ಯ ಷಷ್ಠಿ (ಚಂಪಾ ಷಷ್ಠಿ)ಯಂದು ಅಮೃತೇಶ್ವರ ದೇವಾಲಯದ ಆವರಣದಲ್ಲಿರುವ ಸುಬ್ರಹ್ಮಣ್ಯಸ್ವಾಮಿಗೆ ವಿಶೇಷ ಅಭಿಷೇಕ, ಅಲಂಕಾರ, ಶಾಂತಿ ಹೋಮ, ಸಾಮೂಹಿಕ ಪ್ರಾರ್ಥನೆ ಪ್ರಸಾದ ವಿನಿಯೋಗ, ಸಂಜೆ 6.30ಕ್ಕೆ ಮನಮೋಹಕ ದೀಪಾರಾಧನೆ ನಡೆಯಲಿದೆ ಎಂದು ಜಗದೀಶ ಶರ್ಮ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT