ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ದರ, ಆಸ್ತಿ ತೆರಿಗೆ ಹೆಚ್ಚಳಕ್ಕೆ ತಯಾರಿ

ಮುಂದಿನ ಹಣಕಾಸು ವರ್ಷದಿಂದ ಜಾರಿಗೆ ಮಹಾನಗರ ಪಾಲಿಕೆ ಸಿದ್ಧತೆ
Last Updated 22 ಫೆಬ್ರುವರಿ 2020, 11:26 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಮಹಾನಗರ ಪಾಲಿಕೆಯು ಮುಂದಿನ ಹಣಕಾಸು ವರ್ಷದಿಂದ ನಗರದಲ್ಲಿ ಕುಡಿಯುವ ನೀರಿನ ದರ ಹಾಗೂ ಆಸ್ತಿ ತೆರಿಗೆ ಹೆಚ್ಚಿಸಲು ಮುಂದಾಗಿದೆ.

ನೀರಿನ ದರ ಮತ್ತು ಆಸ್ತಿ ತೆರಿಗೆ ಹೆಚ್ಚಳ ಪ್ರಸ್ತಾವವನ್ನು ಮುಂಬರುವ ಕೌನ್ಸಿಲ್‌ ಸಭೆಯ ಮುಂದಿಡಲು ಸಿದ್ಧತೆ ನಡೆದಿದೆ. ಆಸ್ತಿ ತೆರಿಗೆಯು ಪಾಲಿಕೆಯ ಆದಾಯದ ಪ್ರಮುಖ ಮೂಲವಾಗಿದೆ.

‘ರಾಜ್ಯದ ಇತರ ಮಹಾನಗರ ಪಾಲಿಕೆ ಮತ್ತು ನಗರಸಭೆಗಳಿಗೆ ಹೋಲಿಸಿದರೆ ಮೈಸೂರಿನಲ್ಲಿ ನೀರಿಗೆ ತುಂಬಾ ಕಡಿಮೆ ದರ ವಿಧಿಸಲಾಗುತ್ತಿದೆ. ನೀರಿನ ಪೈಪ್‌ಲೈನ್‌ ಅಳವಡಿಕೆ ಮತ್ತು ನಿರ್ವಹಣೆಗೆ ಪಾಲಿಕೆಯು ಹಲವು ಕೋಟಿ ರೂಪಾಯಿ ವ್ಯಯಿಸುತ್ತದೆ. ಆದ್ದರಿಂದ ದರ ಏರಿಕೆ ಅನಿವಾರ್ಯ’ ಎಂದು ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ತಿಳಿಸಿದರು.

ನಗರದಲ್ಲಿ 25 ಸಾವಿರ ಲೀಟರ್‌ಗಳಷ್ಟು ನೀರಿನ ಬಳಕೆ ಮತ್ತು ಒಳಚರಂಡಿ ಸೆಸ್‌ ಸೇರಿದಂತೆ ₹ 150 ಕನಿಷ್ಠ ದರ ವಿಧಿಸಲಾಗುತ್ತಿದೆ. ಕೆಲವು ನಗರಸಭೆಗಳಲ್ಲಿ ಕನಿಷ್ಠ ದರ ₹ 260 ಇದೆ ಎಂದು ಅವರು ಹೇಳಿದರು.

ಹಲವು ಕೋಟಿ ಬಾಕಿ: ಪಾಲಿಕೆಯು ಕಡಿಮೆ ದರದಲ್ಲಿ ನೀರು ಪೂರೈಸುತ್ತಿದ್ದರೂ, ಕೆಲವರು 8–10 ವರ್ಷಗಳಿಂದಲೂ ನೀರಿನ ಬಿಲ್‌ ಪಾವತಿಸಿಲ್ಲ. ಪಾಲಿಕೆಗೆ ಸರ್ಕಾರಿ ಇಲಾಖೆಗಳಿಂದಲೇ ಸುಮಾರು ₹ 30 ಕೋಟಿಯಷ್ಟು ನೀರಿನ ಬಿಲ್‌ ಬರಬೇಕಿದೆ.

‘ಕೆಲವು ಮನೆಗಳು ಮತ್ತು ವಾಣಿಜ್ಯ ಸಂಕೀರ್ಣಗಳು ಹಲವಾರು ವರ್ಷಗಳಿಂದ ಬಿಲ್‌ ಬಾಕಿ ಉಳಿಸಿಕೊಂಡಿವೆ. ಸುಮಾರು ₹ 120 ಕೋಟಿಯಷ್ಟು ನೀರಿನ ಬಿಲ್‌ ಬಾಕಿ ಬರಬೇಕಿದೆ’ ಎಂದು ಪಾಲಿಕೆ ಸದಸ್ಯ ಶಿವಕುಮಾರ್‌ ತಿಳಿಸಿದರು.

ಸುಮಾರು ಒಂದೂವರೆ ಲಕ್ಷ ಗ್ರಾಹಕರಲ್ಲಿ ಶೇ 70 ರಷ್ಟು ಗ್ರಾಹಕರು ಮಾತ್ರ ಪ್ರತಿ ತಿಂಗಳು ನೀರಿನ ಬಿಲ್‌ ಪಾವತಿ ಮಾಡುವರು. ಇನ್ನುಳಿದ ಶೇ 30 ರಷ್ಟು ಮಂದಿ ಮಾಡುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಆಸ್ತಿ ತೆರಿಗೆ ಏರಿಕೆ: ನೀರಿನ ದರದ ಜತೆಗೆ ಆಸ್ತಿ ತೆರಿಗೆ ಹೆಚ್ಚಳಕ್ಕೂ ಪಾಲಿಕೆ ಮುಂದಾಗಿದೆ. ಕರ್ನಾಟಕ ಮುನಿಸಿಪಲ್‌ ಕಾಯ್ದೆಯಡಿ ಮೂರು ವರ್ಷಗಳಿಗೊಮ್ಮೆ ಆಸ್ತಿ ತೆರಿಗೆಯನ್ನು ಶೇ 15 ರಿಂದ 30 ರಷ್ಟು ಹೆಚ್ಚಳ ಮಾಡುವ ಅವಕಾಶವಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮನೆಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಅಪಾರ್ಟ್‌ಮೆಂಟ್‌ಗಳು ಒಳಗೊಂಡಂತೆ ಸುಮಾರು 2 ಲಕ್ಷ ಆಸ್ತಿಗಳಿವೆ. 2019–20ರ ಸಾಲಿನಲ್ಲಿ ಆಸ್ತಿ ತೆರಿಗೆ ರೂಪದಲ್ಲಿ ₹ 160 ಕೋಟಿ ಸಂಗ್ರಹಿಸುವ ಗುರಿಯನ್ನು ಪಾಲಿಕೆ ಇಟ್ಟುಕೊಂಡಿದೆ.

ಆನ್‌ಲೈನ್‌ ಪಾವತಿ ವ್ಯವಸ್ಥೆ: ಆಸ್ತಿ ತೆರಿಗೆಯನ್ನು ಆನ್‌ಲೈನ್‌ ಮೂಲಕ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಲು ಪಾಲಿಕೆ ಸಿದ್ಧತೆ ನಡೆಸಿದೆ. ಈಗಾಗಲೇ ಬಹುತೇಕ ಆಸ್ತಿಗಳ ದಾಖಲೆಗಳನ್ನು ಅಪ್‌ಲೋಡ್‌ ಮಾಡುವ ಪ್ರಕ್ರಿಯೆ ಪೂರ್ಣಗೊಂಡಿದೆ. 2020 ಏಪ್ರಿಲ್‌ನಿಂದ ಆನ್‌ಲೈನ್‌ ವ್ಯವಸ್ಥೆ ಜಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT