ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದ, ದಲಿತ ಸಮಾಜಗಳನ್ನು ಮರೆತ ಸಿದ್ದರಾಮಯ್ಯ: ಬಿ.ವೈ.ವಿಜಯೇಂದ್ರ

ಬಿಜೆಪಿ ಒಬಿಸಿ ಮೋರ್ಚಾದಿಂದ ಕಾಯಕ ಸಮುದಾಯಗಳ ಸಮಾವೇಶದಲ್ಲಿ ಬಿ.ವೈ.ವಿಜಯೇಂದ್ರ ಟೀಕೆ
Published 21 ಏಪ್ರಿಲ್ 2024, 14:39 IST
Last Updated 21 ಏಪ್ರಿಲ್ 2024, 14:39 IST
ಅಕ್ಷರ ಗಾತ್ರ

ಮೈಸೂರು: ‘ಸಿದ್ದರಾಮಯ್ಯ ಅಹಿಂದ ಮುಖಂಡ ಎನ್ನುತ್ತಾರೆ. ಆದರೆ, ಹಿಂದುಳಿದ, ದಲಿತ ಸಮಾಜಗಳನ್ನು ಮರೆತು ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ವಸ್ತುಪ್ರದರ್ಶನ ಮೈದಾನದಲ್ಲಿ ಭಾನುವಾರ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾ ಆಯೋಜಿಸಿದ್ದ ಕಾಯಕ ಸಮುದಾಯಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ಹತ್ಯೆ ಆಗಿದೆ. ಆದರೆ ಮುಖ್ಯಮಂತ್ರಿ, ಗೃಹ ಸಚಿವರಿಗೆ ಮಾತ್ರ ಈ ಬಗ್ಗೆ ಚಿಂತೆ ಇಲ್ಲ. ಬೆಳಗಾವಿಯಲ್ಲಿ ಅಧಿವೇಶನದ ಸಂದರ್ಭವೇ ಮಹಿಳೆಯ ವಿವಸ್ತ್ರಗೊಳಿಸುವ ಪ್ರಯತ್ನ ನಡೆದಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮಹಿಳೆಯರ ರಕ್ಷಣೆಯೇ ಸವಾಲಾಗಿದೆ’ ಎಂದು ದೂರಿದರು.

‘ರಾಜ್ಯದಲ್ಲಿ 18ಕ್ಕೂ ಹೆಚ್ಚು ಕಾಯಕ ಸಮುದಾಯಗಳಿದ್ದು, ಅವರ ಕುಲಕಸುಬು ಮುಂದಿನ ಪೀಳಿಗೆಗೆ ತಲುಪಬೇಕು ಎನ್ನುವುದು ಬಿಜೆಪಿ ಆಶಯ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಹಿಂದುಳಿದ ವರ್ಗಗಳಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಿ ಅನುದಾನ ಒದಗಿಸಿದ್ದರು. ಜಾತಿ ನೋಡದೇ ಎಲ್ಲ ಮಠಗಳಿಗೆ ಹಣ ನೀಡಿದ್ದರು’ ಎಂದರು.

‘‌ಕಳೆದ ಹತ್ತು ವರ್ಷದಿಂದ ಪ್ರಧಾನಿ ನರೇಂದ್ರ ಮೋದಿ ಒಂದು ದಿನ ವಿಶ್ರಾಂತಿ ಪಡೆದಿಲ್ಲ. ಅಂಬೇಡ್ಕರ್ ಆಶಯದಂತೆ ಈ ದೇಶದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಹಾಗೂ ಸವಲತ್ತು ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ದೇಶದಲ್ಲಿ ಕಳೆದ ಐದು ವರ್ಷದಲ್ಲಿ 3 ಕೋಟಿ ಮನೆ ಕಟ್ಟಿದ್ದು, ಮುಂದಿನ ಐದು ವರ್ಷದಲ್ಲಿ 5 ಕೋಟಿ ಮನೆ ಕಟ್ಟಲಾಗುವುದು’ ಎಂದು ಭರವಸೆ ನೀಡಿದರು.

‘ರಾಜ್ಯ ಸರ್ಕಾರ ಗ್ಯಾರಂಟಿ ಭರಾಟೆಯಲ್ಲಿ ಮುಳುಗಿದ್ದು, ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಅಣೆಕಟ್ಟು ನಿರ್ಮಾಣಕ್ಕೆ‌ ಒಡವೆ ಒತ್ತೆ ಇಟ್ಟ ಮೈಸೂರು ಅರಸರ ಕುಡಿ ಯದುವೀರ್. ಮೋದಿ ಅಪೇಕ್ಷೆಯಂತೆ ಅವರು ಅಭ್ಯರ್ಥಿಯಾಗಿದ್ದು, ಜನರು ಯಾವುದೇ ಜಾತಿ ನೋಡದೇ ಯದುವೀರ್ ಅವರನ್ನು ಬೆಂಬಲಿಸಬೇಕು. ಚಾಮರಾಜನಗರ ಕ್ಷೇತ್ರದ ಬಾಲರಾಜ್ ಅವರಿಗೂ ಶಕ್ತಿ ತುಂಬಬೇಕು’ ಎಂದು ಕೋರಿದರು.

ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಅಧ್ಯಕ್ಷ ರಘು ಕೌಟಿಲ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಲ್ಲಿ‌ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಹಣ ಕಸಿಯುತ್ತಿದೆ. ನಿಗಮಗಳಿಗೆ ಅನುದಾನ ನಿಲ್ಲಿಸಿದೆ. ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದೆ’ ಎಂದು ದೂರಿದರು.‌

ಶಾಸಕ‌ ಟಿ.ಎಸ್. ಶ್ರೀವತ್ಸ, ಪಕ್ಷದ ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಎಲ್.ಆರ್. ‌ಮಹದೇವ ಸ್ವಾಮಿ, ನಗರ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ, ಮುಖಂಡರಾದ ಸಿ.ಎಚ್. ವಿಜಯ ಶಂಕರ್, ನರೇಂದ್ರ ಬಾಬು, ಎಚ್.ಆರ್.‌ ಸುರೇಶ ಬಾಬು, ಬಾಲಚಂದ್ರ, ಎಂ. ಶಿವಕುಮಾರ್, ಬಾಬು ಪತ್ತಾರ, ಸೋಮಶೇಖರ್, ಬಸವರಾಜು, ರಾಜಶೇಖರ್, ನಾಗರಾಜು, ವೆಂಕಟೇಶ, ಸಂಗಣ್ಣ ಪಾಲ್ಗೊಂಡರು.

ವಸ್ತು ಪ್ರದರ್ಶನದ ಆವರಣದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡ ಜನಸ್ತೋಮ –ಪ್ರಜಾವಾಣಿ ಚಿತ್ರ
ವಸ್ತು ಪ್ರದರ್ಶನದ ಆವರಣದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡ ಜನಸ್ತೋಮ –ಪ್ರಜಾವಾಣಿ ಚಿತ್ರ

ಅವಿರೋಧ ಆಯ್ಕೆಗೆ ಪ್ರಯತ್ನಿಸಿದ್ದೆ: ವಿಶ್ವನಾಥ್‌ ‘ಯದುವೀರ್‌ ಮೈತ್ರಿಕೂಟದ ಅಭ್ಯರ್ಥಿಯಾಗುತ್ತಾರೆ ಎಂದು ಗೊತ್ತಾಗುತ್ತಲೇ ಕಾಂಗ್ರೆಸ್ ಅಭ್ಯರ್ಥಿ ಹಾಕದೇ ಅವಿರೋಧ ಆಯ್ಕೆಗೆ ಅವಕಾಶ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೆ. ಆದರೆ ಸಿದ್ದು– ಡಿಕೆಶಿ ಮಹಾರಾಜರ ಬಗ್ಗೆ ಗೇಲಿ ಮಾಡಿದ್ದರು’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಹೇಳಿದರು. ‘ಮೈಸೂರಿನಲ್ಲಿ ಅರಸು ಪ್ರತಿಮೆಗೆ ಹಿಂದಿನ ಬಿಜೆಪಿ ಸರ್ಕಾರ ₹92 ಲಕ್ಷ ಘೋಷಿಸಿತ್ತು. ಅದನ್ನು ಬಿಡುಗಡೆ ಮಾಡಲು ಸಿದ್ದರಾಮಯ್ಯ ಮೀನಮೇಷ ಎಣಿಸಿದ್ದು ಪ್ರತಿಭಟನೆ ಎಚ್ಚರಿಕೆ ಮಾಡಿದ ನಂತರವಷ್ಟೇ ಹಣ ಬಂದಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT