ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ನಾಲೆ ಒತ್ತುವರಿ: ಶೇ 5ರಿಂದ 10ರಷ್ಟು!

ಡ್ರೋನ್‌ ಸರ್ವೆ ಜೊತೆ ಹೆಜ್ಜೆ ಹಾಕಿದ ಪರಿಸರ ತಜ್ಞರ ಅಭಿಮತ
ಮೋಹನ್ ಕುಮಾರ ಸಿ.
Published 27 ಡಿಸೆಂಬರ್ 2023, 8:00 IST
Last Updated 27 ಡಿಸೆಂಬರ್ 2023, 8:00 IST
ಅಕ್ಷರ ಗಾತ್ರ

ಮೈಸೂರು: ‘ಪಾರಂಪರಿಕ’ ಪೂರ್ಣಯ್ಯ ನಾಲೆ ಒತ್ತುವರಿ ಆಗಿರುವುದು ಶೇ 5ರಿಂದ 10ರಷ್ಟು ಮಾತ್ರ ಎಂಬ ಅಂಶ ಗೊತ್ತಾಗಿರುವುದು ಪರಿಸರ ತಜ್ಞರಲ್ಲಿ ಸಂತಸ ಮೂಡಿಸಿದೆ. 

ಕುಕ್ಕರಹಳ್ಳಿ ಕೆರೆಯಿಂದ ಹುಯಿಲಾಳು ಕೆರೆವರೆಗಿರುವ 21 ಕಿ.ಮೀ ಉದ್ದದ ನಾಲೆಯ ಹರಿವಿನ ಮಾರ್ಗದಲ್ಲಿ ಗಂಗೋತ್ರಿ, ವಿಜಯನಗರ 3ನೇ ಹಂತದ ಕೆಲವು ಭಾಗ ಹೊರತುಪಡಿಸಿದರೆ, ನಾಲೆಯನ್ನು ಮೂಲಸ್ಥಿತಿಗೆ ಮರಳಿಸಬಹುದೆಂಬ ಆಶಾವಾದ ಪರಿಸರ ತಜ್ಞರದ್ದು.

‘ಇನ್‌ಟ್ಯಾಕ್‌’ ಸಂಸ್ಥೆಗೆ ಜಿಲ್ಲಾಡಳಿತವು ಕುಕ್ಕರಹಳ್ಳಿ ಕೆರೆ ಹಾಗೂ ಪೂರ್ಣಯ್ಯ ನಾಲೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸುವ ಯೋಜನೆಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಇದೇ 22 ಹಾಗೂ 23ರಂದು ಪೂರ್ಣಯ್ಯ ನಾಲೆಯ ಡ್ರೋನ್‌ ಸಮೀಕ್ಷೆಯನ್ನು ಸಂಸ್ಥೆ ಕೈಗೊಂಡಿತ್ತು. ‘ಪ್ರಜಾವಾಣಿ’ ಪ್ರತಿನಿಧಿಯೂ ಸೇರಿದಂತೆ ಪರಿಸರ ತಜ್ಞರಾದ ಯು.ಎನ್‌.ರವಿಕುಮಾರ್, ಶೈಲಜೇಶ್‌, ವಿಶ್ವನಾಥ್, ಶೋಭಾ, ನಾಗರಿಕರಾದ ಮಹದೇವ್‌, ಶ್ರೀಪತಿ ಮೊದಲಾದವರು ತಂಡದೊಂದಿಗೆ ಹೆಜ್ಜೆಹಾಕಿದ್ದರು.

ಎರಡು ದಿನದಲ್ಲಿ ಹುಯಿಲಾಳು ಕೆರೆವರೆಗೆ ಸಮೀಕ್ಷೆಯನ್ನು ಪೂರ್ಣಗೊಳಿಸಿದ್ದ ತಂಡವು ನಗರ ಭಾಗದಲ್ಲಿ ನಾಲೆಯನ್ನು ಗುರುತಿಸಲು ಕಷ್ಟಪಟ್ಟರೆ, ಗ್ರಾಮೀಣ ಪ್ರದೇಶದಲ್ಲಿ ಸುಲಭವಾಗಿ ನಾಲೆಯನ್ನು ಡ್ರೋನ್ ಕ್ಯಾಮೆರಾಗೆ ಸುಲಭವಾಗಿ ಕಂಡಿತ್ತು!

ಕುಕ್ಕರಹಳ್ಳಿ ಕೆರೆ, ಕುದುರೆಮಾಳ, ಗಂಗೋತ್ರಿ ಬಡವಾಣೆ, ಟಿ.ಕೆ.ಬಡಾವಣೆ ಹಾಗೂ ಬೋಗಾದಿ 2ನೇ ಹಂತದ ಹರ್ಷಬಾರ್‌ವರೆಗೆ ಮೊದಲ ದಿನ 2.5 ಕಿ.ಮೀ ಸರ್ವೆ ನಡೆದರೆ, ಉಳಿದ 18 ಕಿ.ಮೀ ಸರ್ವೆಯು ಡಿ.23ರಂದು ಪೂರ್ಣಗೊಳಿಸಿತ್ತು.

ನಾಲೆ ಹಾದಿಯಲ್ಲಿ ಕಂಡದ್ದು: ವಿಜಯನಗರ 4ನೇ ಹಂತದಿಂದ ಎಸ್‌ಬಿಎಂ ಬಡಾವಣೆವರೆಗೂ ಕಟ್ಟಡ ತ್ಯಾಜ್ಯವನ್ನು ನಾಲೆಯ ಒಡಲಿಗೆ ತುಂಬಲಾಗುತ್ತಿದೆ. ಅದಕ್ಕೆ ತಡೆಯನ್ನು ಒಡ್ಡಬೇಕಿದೆ.

ರೈಲ್ವೆ ಬಡಾವಣೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರವು ನಾಲೆಯ ಏರಿಯನ್ನು ಸಮ ಮಾಡಿ, ರಸ್ತೆಯನ್ನು ಮಾಡಿದೆ. ಕೆಲವೆಡೆ ನಾಲೆ ಹಾಗೂ ಬಫರ್‌ ವಲಯವನ್ನು ಸಂಪೂರ್ಣ ಒತ್ತುವರಿ ನಡೆದಿದ್ದರೆ, ಉಳಿದೆಡೆ ನಾಲೆಯು ಸ್ಪಷ್ಟವಾಗಿ ಕಾಣುತ್ತದೆ.

ಒತ್ತುವರಿ ಮಾಡಿಕೊಂಡು ಫೆನ್ಸಿಂಗ್‌ ಕಲ್ಲುಗಳು, ತಂತಿಬೇಲಿ ಹಾಕಿಕೊಂಡಿದ್ದರೂ, ನಾಲೆಯ ಜಾಗದಲ್ಲಿ ಕಟ್ಟಡಗಳನ್ನು ಎಬ್ಬಿಸುವ ಕೆಲಸಕ್ಕೆ ಒತ್ತುವರಿದಾರರು ಮುಂದಾಗಿಲ್ಲ. ಅದಕ್ಕೆ ಈ ಹಿಂದೆ ಜಿಲ್ಲಾಡಳಿತವು ತೆಗೆದುಕೊಂಡಿದ್ದ ದಿಟ್ಟಕ್ರಮವೇ ಕಾರಣ. 

‘2012, 2017ರಲ್ಲಿ ಜಿಲ್ಲಾಡಳಿತವು ಒತ್ತುವರಿಯನ್ನು ತೆರವುಗೊಳಿಸಿತ್ತು. ಮನೆಗಳನ್ನು ಉರುಳಿಸಿತ್ತು. ಅದರಿಂದ ಈಗಲೂ ಬೋಗಾದಿ, ರೈಲ್ವೆ ಬಡಾವಣೆಯಲ್ಲಿ ಕಟ್ಟಡಗಳೆಬ್ಬಿಸುವ ಧೈರ್ಯವನ್ನು ಪ್ರದರ್ಶಿಸಿಲ್ಲ’ ಎನ್ನುತ್ತಾರೆ ಎಸ್‌ಬಿಎಂ ಬಡಾವಣೆಯ ಮಹದೇವ್.

‘ವಿಜಯನಗರ 3ನೇ ಹಂತದಲ್ಲಿ ಹಲವು ಭಾಗವನ್ನು ರಸ್ತೆಯಾಗಿ ಪರಿವರ್ತಿಸಲಾಗಿದೆ. ಉದ್ಯಾನಗಳು ಹಾಗೂ ಖಾಲಿ ನಿವೇಶನಗಳಿವೆ. ಎಸ್‌ಜೆಸಿಇ ಕಾಲೇಜಿನ ಹಿಂಭಾಗದಲ್ಲಿದ್ದ ನಾಲೆಯ ಭಾಗವನ್ನೇ ರಸ್ತೆಯಾಗಿ ಪರಿವರ್ತಿಸಲಾಗಿದೆ. ಕುಕ್ಕರಹಳ್ಳಿ ಕೆರೆಯಿಂದ ಎಸ್‌ಜಿಸಿಇ ಕಾಲೇಜಿನ ಹಿಂಭಾಗದವೆಗಿನ 2.5 ಕಿ.ಮೀ ನಾಲೆಯ ಒತ್ತುವರಿಯಲ್ಲಿ ನಾಲೆ ಹರಿವಿಗೆ ಒಂದಿಷ್ಟು ತೆರವುಗೊಳಿಸಿದರೂ ಶೇ 30ರಷ್ಟು ಮಳೆ ನೀರು ಕೆರೆಗೆ ಸಿಗಲಿದೆ. ಗಿಡ–ಮರಗಳು ಬೆಳೆದರೆ ಹಸಿರು ಪಟ್ಟಿಯು ನಗರಕ್ಕೆ ಸಿಗಲಿದೆ ಎನ್ನುತ್ತಾರೆ ಪರಿಸರ ತಜ್ಞ ಯು.ಎನ್.ರವಿಕುಮಾರ್.

‘ಹಲವೆಡೆ ನಾಲೆಯ ಕೆಲ ಭಾಗವನ್ನು ಮತ್ತೆ ವಶಕ್ಕೆ ಪಡೆಯಲು ಕಷ್ಟವಿದೆ. ಈಗಲೂ ಹಲವು ಭಾಗ ಖಾಲಿ ಜಾಗಗಳಿದ್ದು, ಅವುಗಳನ್ನು ಉದ್ಯಾನಗಳಾಗಿ ಪರಿವರ್ತಿಸಬಹುದು. ಹಳ್ಳದ ಭಾಗಗಳನ್ನು ಅಂತರ್ಜಲ ಮರುಪೂರಣದ ತಾಣವಾಗಿ ಬಳಸಿಕೊಳ್ಳಬಹುದು. ನಾಲೆಯು ಸುಸ್ಥಿತಿಯಲ್ಲಿರುವ ಭಾಗವನ್ನು ಹಾಗೆಯೇ ಉಳಿಸಿಕೊಂಡರೆ ಪ್ರವಾಹವಾಗುವುದು ತಪ್ಪಲಿದೆ’ ಎಂದರು.

‘ಜಾಗತಿಕ ತಾಪಮಾನ ಹೆಚ್ಚುತ್ತಿರುವುದರಿಂದ ಭವಿಷ್ಯದಲ್ಲಿ ನಗರದ ಹಸಿರು ಪ್ರದೇಶವನ್ನು ಉಳಿಸಿಕೊಳ್ಳುವುದು ಅನಿವಾರ್ಯ. ಕಬಿನಿ ನದಿಯ ಜಲಾನಯನ ಭಾಗವಾದ ಪೂರ್ಣಯ್ಯ ನಾಲಾ ಪ್ರದೇಶವನ್ನು ಉಳಿಸಿಕೊಂಡರೆ ಅಂತರ್ಜಲ ಹೆಚ್ಚಳ ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಯು.ಎನ್‌.ರವಿಕುಮಾರ್‌
ಯು.ಎನ್‌.ರವಿಕುಮಾರ್‌
ಭಾಮಿ ವಿ. ಶೆಣೈ
ಭಾಮಿ ವಿ. ಶೆಣೈ

ನಗರೀಕರಣ ತೀವ್ರವಾಗಿದ್ದು ನಾಲೆಯ ಉಳಿವಿನಿಂದ ಹಸಿರು ಪಟ್ಟಿಯು ಸಿಗಲಿದೆ. ಜಾಗತಿಕ ತಾಪಮಾನ ಏರಿಕೆ ವಾಸ್ತವ. ಭವಿಷ್ಯಕ್ಕಾಗಿ ನಾಲೆ ಉಳಿಸಿಕೊಳ್ಳಲೇ ಬೇಕು- ಯು.ಎನ್‌.ರವಿಕುಮಾರ್ ಪರಿಸರ ತಜ್ಞ

ಜಿಲ್ಲಾಡಳಿತವು ದಿಟ್ಟ ಕ್ರಮವಹಿಸಿದೆ. ಒತ್ತುವರಿದಾರರು ಕಡಿಮೆ ಸಂಖ್ಯೆಯಲ್ಲಿದ್ದು ಅವರು ಏನೇ ಪ್ರಭಾವ ಬಳಸಿದರೂ ಮೈಸೂರಿಗರು ಅವರ ಎದುರು ನಿಲ್ಲುತ್ತಾರೆ- ಭಾಮಿ ವಿ. ಶೆಣೈ ಮೈಸೂರು ಗ್ರಾಹಕರ ಪರಿಷತ್ತು

ಸಮೀಕ್ಷೆಯಲ್ಲಿ ಗೋಚರವಾಗಿದ್ದು.. l ನಾಲೆಯ ಒತ್ತುವರಿಯಾಗಿರುವ ಬಹುತೇಕ ಭಾಗವು ಸರ್ಕಾರಿ ಭೂಮಿಯೇ ಆಗಿದ್ದು ನಗರ ಭಾಗದಲ್ಲಿ ರಸ್ತೆ ಉದ್ಯಾನಗಳಾಗಿ ಪರಿವರ್ತಿತವಾಗಿವೆ. l ಹಲವು ಬಡಾವಣೆಗಳಲ್ಲಿ ನಾಲೆ ಒತ್ತುವರಿ ಸಕ್ರಮಗೊಳಿಸಿಕೊಂಡಿರುವ ಭಾಗವೂ ಇದೆ. ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರೆ ಕಾನೂನಾತ್ಮಕ ಕ್ರಮವಹಿಸಿ ಬಿಡಿಸಿಕೊಳ್ಳಬಹುದು.  l ವಿಜಯನಗರ ನಾಲ್ಕನೇ ಹಂತದಿಂದ ದಾಸನಕೊಪ್ಪಲುವರೆಗೂ ಅಲ್ಲಲ್ಲಿ ನಾಲೆಯನ್ನು ಒತ್ತುವರಿ ಮಾಡಲಾಗಿದ್ದು ಕಟ್ಟಡಗಳ ನಿರ್ಮಾಣವಾಗಿಲ್ಲ. ಕಟ್ಟಡ ತ್ಯಾಜ್ಯ ಸುರಿದು ಮುಚ್ಚಲಾಗಿದೆ. ನಾಲೆಯ ಅಕ್ಕಪಕ್ಕದ ಭೂಮಿಯು ಖಾಲಿಯಾಗಿಯೇ ಇದೆ. l ದಾಸನಕೊ‍ಪ್ಪಲು ಮರಟಿಕ್ಯಾತನಹಳ್ಳಿ ಹೆಮ್ಮನಹಳ್ಳಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ನಾಲೆಯಲ್ಲಿ ಮಳೆನೀರು ಹರಿದಿರುವುದನ್ನು ಕಾಣಬಹುದು l ದಾಸನಕೊಪ್ಪಲಿನಿಂದ ಹುಯಿಲಾಳು ಕೆರೆವರೆಗೂ ನಾಲೆಯು ಸುಸ್ಥಿತಿಯಲ್ಲಿದ್ದು ಕೆರೆ ಜಾಲವನ್ನು ಹಾಗೆಯೇ ಉಳಿಸಿಕೊಳ್ಳಬಹುದು. l ಮಾದಗಳ್ಳಿ ಕೆರೆಯಲ್ಲಿರುವ ಪೂರ್ಣಯ್ಯ ನಾಲೆಯ ತೂಬುಬಾಗಿಲನ್ನು ಪಾರಂಪರಿಕ ತಾಣವಾಗಿಸಬಹುದು l ಬಫರ್‌ ವಲಯದ ಬಹುಭಾಗ ಉದ್ಯಾನ ಖಾಲಿ ನಿವೇಶನಗಳಾಗಿವೆ. ಕಟ್ಟಡ ತ್ಯಾಜ್ಯದಿಂದ ಮುಚ್ಚಿಹೋದ ನಾಲೆಯ ಭಾಗವನ್ನು ಸುಲಭವಾಗಿ ತೆರವುಗೊಳಿಸಬಹುದು

‘ಪೂರ್ತಿ ಉಳಿಸುವ ಭರವಸೆಯಿದೆ’ ‘ಮೊದಲು ನಾಲೆಯು ಬಹುತೇಕ ಒತ್ತುವರಿಯಾಗಿದೆ ಎನ್ನಲಾಗಿತ್ತು. ಇದೀಗ ಶೇ 5ರಿಂದ 10ರಷ್ಟು ಮಾತ್ರ ಒತ್ತುವರಿಯಾಗಿರುವುದು ಗೊತ್ತಾಗಿದೆ. ಅದರಿಂದ ಸಂಪೂರ್ಣ ಉಳಿಸಿಕೊಳ್ಳುವ ವಿಶ್ವಾಸವಿದೆ’ ಎಂದು ಮೈಸೂರು ಗ್ರಾಹಕ ಪರಿಷತ್ತಿನ ಭಾಮಿ ವಿ.ಶೆಣೈ ‘ಪ್ರಜಾವಾಣಿ’ಗೆ ತಿಳಿಸಿದರು. ‘ಜಾಗತಿಕ ತಾಪಮಾನ ಏರಿಕೆಯ ಸವಾಲು ಮುಂದಿನ ಪೀಳಿಗೆಯ ಮೇಲಿದೆ. ಅದಕ್ಕೆ ನಾವು ಪರಿಸರವನ್ನು ಉಳಿಸಿಕೊಳ್ಳಬೇಕು. ಕೆರೆ ಕಟ್ಟೆ ನಾಲೆ ಉಳಿಸಿಕೊಂಡರೆ ನಾವು ಅವರಿಗೆ ನೀಡುವ ಕಾಣಿಕೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT