ಮೈಸೂರು: ಜಿಲ್ಲೆಯಲ್ಲಿ ಹೊಸದಾಗಿ 541 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ. ಇದರಿಂದ ಸೋಂಕಿತರ ಒಟ್ಟು ಸಂಖ್ಯೆ 42,064 ಕ್ಕೆ ಏರಿಕೆಯಾಗಿದೆ.
ಮತ್ತೆ 11 ಮಂದಿ ಮೃತಪಟ್ಟಿದ್ದು, ಒಟ್ಟು 886 ಮಂದಿ ಈ ಸೋಂಕಿಗೆ ಬಲಿಯಾದಂತಾಗಿದೆ. ಕಳೆದ ನಾಲ್ಕು ದಿನಗಳಲ್ಲಿ 46 ಸಾವು ವರದಿಯಾಗಿವೆ.
75, 50, 60 (ಇಬ್ಬರು), 68, 40 ವರ್ಷದ ಪುರುಷರು ಹಾಗೂ 60, 70 (ಇಬ್ಬರು), 80, 55 ವರ್ಷದ ಮಹಿಳೆಯರು ವಿವಿಧ ದಿನಗಳಲ್ಲಿ ಮೃತ ಪಟ್ಟಿರುವುದಾಗಿ ಆರೋಗ್ಯ ಇಲಾಖೆಯ ಭಾನುವಾರದ ವರದಿ ತಿಳಿಸಿದೆ.
ಇದೇ ವೇಳೆ 331 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 7,549 ಸಕ್ರಿಯ ಪ್ರಕರಣಗಳು ಇವೆ. 5,743 ಮಂದಿ ಮನೆಯಲ್ಲೇ ಐಸೊಲೇಷನ್ ಆಗಿದ್ದಾರೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 299 ಮಂದಿ, ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ 96, ಕೋವಿಡ್ ಕೇರ್ ಕೇಂದ್ರದಲ್ಲಿ 571, ಖಾಸಗಿ ಕೋವಿಡ್ ಕೇರ್ ಕೇಂದ್ರದಲ್ಲಿ 166 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 674 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೋಗಿಗಳ ಸಂಪರ್ಕಕ್ಕೆ ಬಂದ 302 ಮಂದಿಗೆ ಕೋವಿಡ್ ದೃಢಪಟ್ಟಿದೆ. ಶೀತ ಜ್ವರ ಮಾದರಿಯ ಅನಾರೋಗ್ಯ ಲಕ್ಷಣದಿಂದ ಬಳಲುತ್ತಿದ್ದ 164 ಮಂದಿ, ತೀವ್ರ ಉಸಿರಾಟ ಸಮಸ್ಯೆಯಿಂದ (ಎಸ್ಎಆರ್ಐ) ಬಳಲುತ್ತಿದ್ದ 15 ಮಂದಿಯಲ್ಲೂ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 2,22,559 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. 48,969 ಮಂದಿ ಹೋಂ ಕ್ವಾರಂಟೈನ್ನಲ್ಲಿದ್ದಾರೆ.