ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ನೀತಿಸಂಹಿತೆ; ‘ರಿಯಲ್‌ ಎಸ್ಟೇಟ್‌’ಗೆ ಅಂಕುಶ

₹50 ಸಾವಿರಕ್ಕಿಂತ ಹೆಚ್ಚು ನಗದು ಸಾಗಣೆಗೆ ನಿರ್ಬಂಧ; ಆನ್‌ಲೈನ್‌ ವಹಿವಾಟಿನ ಮೇಲೂ ಕಣ್ಣು
ಆರ್. ಜಿತೇಂದ್ರ
Published 21 ಮಾರ್ಚ್ 2024, 6:53 IST
Last Updated 21 ಮಾರ್ಚ್ 2024, 6:53 IST
ಅಕ್ಷರ ಗಾತ್ರ

ಮೈಸೂರು: ಲೋಕಸಭೆ ಚುನಾವಣೆಯ ನೀತಿಸಂಹಿತೆಯಿಂದಾಗಿ ನಗದು ವರ್ಗಾವಣೆಗೆ ನಿರ್ಬಂಧವಿದ್ದು, ರಿಯಲ್‌ ಎಸ್ಟೇಟ್ ಚಟುವಟಿಕೆಗಳನ್ನು ಪರೋಕ್ಷವಾಗಿ ನಿಯಂತ್ರಣಕ್ಕೆ ತಂದಿದೆ. ಉಪ ನೋಂದಣಿ ಕಚೇರಿಗಳ ಆದಾಯವೂ ಇಳಿಯತೊಡಗಿದೆ.

ರಿಯಲ್‌ ಎಸ್ಟೇಟ್‌ ವ್ಯವಹಾರಗಳಲ್ಲಿ ‘ಕಪ್ಪು ಬಿಳುಪಿನ’ ದಂಧೆ ಗುಟ್ಟಾಗೇನೂ ಉಳಿದಿಲ್ಲ. ಮಾರುಕಟ್ಟೆ ಮೌಲ್ಯಕ್ಕೆ ತಕ್ಕಂತೆ ನಿವೇಶನ, ಮನೆ ಇಲ್ಲವೇ ಕೃಷಿ ಜಮೀನು ಖರೀದಿ ಮಾಡುವವರಲ್ಲಿ ಬಹುತೇಕರು, ನೋಂದಣಿಯನ್ನು ಮಾರ್ಗಸೂಚಿ ದರದಂತೆಯೇ (ಎಸ್‌.ಆರ್‌) ಮಾಡುತ್ತಾರೆ. ಒಮ್ಮೊಮ್ಮೆ ಈ ಎರಡರ ನಡುವೆ ಶೇ 80–100ರಷ್ಟು ವ್ಯತ್ಯಾಸವೂ ಇರುತ್ತದೆ. ನೋಂದಣಿ ಸಂದರ್ಭ ನಮೂದಿಸುವ ಹಣವನ್ನು ಡಿಜಿಟಲ್‌ ವಹಿವಾಟಿನ ರೂಪದಲ್ಲಿ ನೀಡಿದರೆ, ಉಳಿದ ಮೊತ್ತವನ್ನು ಅನಧಿಕೃತವಾಗಿ ನಗದು ರೂಪದಲ್ಲಿ ನೀಡುವ ವ್ಯವಸ್ಥೆ ಬೆಳೆದಿದೆ. ಇದೆಲ್ಲದ್ದಕ್ಕೂ ನೀತಿಸಂಹಿತೆ ಅಂಕುಶ ಹಾಕಿದೆ.

ಜೂನ್‌ ಮೊದಲ ವಾರದವರೆಗೂ ದೇಶದಾದ್ಯಂತ ಮಾದರಿ ನೀತಿಸಂಹಿತೆಯು ಜಾರಿಯಲ್ಲಿ ಇರಲಿದೆ. ಈ ಅವಧಿಯಲ್ಲಿ ಯಾವುದೇ ವ್ಯಕ್ತಿ ಸೂಕ್ತ ದಾಖಲೆಗಳು ಇಲ್ಲದೆ ₹50 ಸಾವಿರಕ್ಕಿಂತ ಹೆಚ್ಚು ನಗದು ಸಾಗಿಸುವಂತಿಲ್ಲ. ಆನ್‌ಲೈನ್ ಮೂಲಕ ನಡೆಯುವ ಹಣ ವರ್ಗಾವಣೆಯ ಮೇಲೂ ಹದ್ದಿನ ಕಣ್ಣು ಇರಲಿದೆ. ಪೊಲೀಸರು ಈಗಾಗಲೇ ಚೆಕ್‌ಪೋಸ್ಟ್‌ಗಳನ್ನು ತೆರೆದಿದ್ದು, ದಾಖಲೆ ಇಲ್ಲದ ನಗದನ್ನೂ ವಶಕ್ಕೆ ಪಡೆಯುತ್ತಿದ್ದಾರೆ.

ಈ ಎಲ್ಲ ಕ್ರಮಗಳಿಂದಾಗಿ ಒಟ್ಟಾರೆ ಆರ್ಥಿಕ ವಹಿವಾಟಿನ ಚಲನೆಯು ಮಂದಗತಿಯಲ್ಲಿ ಸಾಗಿದೆ. ನಿವೇಶನ, ಮನೆಗಳನ್ನು ಕೊಳ್ಳಬಯಸುವ ಆಸಕ್ತರು ಯೋಜನೆಗಳನ್ನು ಕೆಲವು ತಿಂಗಳವರೆಗೂ ಮುಂದೂಡುತ್ತಿದ್ದಾರೆ.

‘ನಮ್ಮಲ್ಲಿ ತಿಂಗಳಿಗೆ ಸರಾಸರಿ 15–20 ನಿವೇಶನಗಳ ಮುಂಗಡ ಬುಕ್ಕಿಂಗ್ ನಡೆಯುತ್ತಿತ್ತು. ಚುನಾವಣೆ ಘೋಷಣೆಯಾದ ಒಂದು ವಾರದಲ್ಲೇ ಅರ್ಧದಷ್ಟು ಕಡಿಮೆಯಾಗಿದೆ. ಗ್ರಾಹಕರು ವಿಚಾರಿಸಿದರೂ ಚುನಾವಣೆ ನಂತರವೇ ನೋಂದಣಿಗೆ ಒಲವು ತೋರುತ್ತಿದ್ದಾರೆ’ ಎನ್ನುತ್ತಾರೆ ನಗರದ ರಿಯಲ್‌ ಎಸ್ಟೇಟ್ ಕಂಪನಿಯೊಂದರ ವ್ಯವಸ್ಥಾಪಕರು.

ಒಂದು ವಾರದಿಂದ ಜಿಲ್ಲೆಯ ಉಪ ನೋಂದಣಾಧಿಕಾರಿಗಳ ಕಚೇರಿಗಳ ಬಳಿ ಜನರೂ ಕಡಿಮೆಯಾಗಿದ್ದಾರೆ. ’ಉಳಿದ ಚಟುವಟಿಕೆಗಳು ನಡೆದಿದ್ದರೂ ಆಸ್ತಿ ನೋಂದಣಿ ಪ್ರಕ್ರಿಯೆಗಳು ಕಡಿಮೆಯಾಗಿವೆ’ ಎಂದು ಅಲ್ಲಿನ ಸಿಬ್ಬಂದಿ ಹೇಳುತ್ತಾರೆ. ಆದರೆ ಅವುಗಳ ಆದಾಯ ಎಷ್ಟರಮಟ್ಟಿಗೆ ಕುಸಿದಿದೆ ಎನ್ನುವ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

ನಗದು ಸಾಗಣೆ; ಹಿಂದಿನಿಂದಲೇ ನಿರ್ಬಂಧ

‘ಯಾವುದೇ ದಾಖಲೆ ಇಲ್ಲದ ನಗದು ಸಾಗಣೆಗೆ ಎಲ್ಲ ಕಾಲದಲ್ಲಿಯೂ ನಿರ್ಬಂಧ ಇದ್ದೇ ಇದೆ. ಆಸ್ತಿ ನೋಂದಣಿಯಂತಹ ಅಧಿಕ ಮೊತ್ತದ ವ್ಯವಹಾರಗಳನ್ನು ಚೆಕ್‌, ಡಿ.ಡಿ. ಮೊದಲಾದವುಗಳ ಮೂಲಕವೇ ನಿರ್ವಹಿಸಬೇಕು ಎಂಬ ನಿಯಮವೂ ಇದೆ. ಆದರೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಚೆಕ್‌ಪೋಸ್ಟ್‌ಗಳನ್ನು ಹಾಕಿ ತಪಾಸಣೆ ಮಾಡುತ್ತೇವೆ. ಚುನಾವಣೆಗೆ ಅಕ್ರಮವಾಗಿ ಹಣ ಬಳಕೆ ನಿಲ್ಲಲಿ ಎನ್ನುವುದು ಇದರ ಉದ್ದೇಶವಷ್ಟೇ. ರಿಯಲ್‌ ಎಸ್ಟೇಟ್‌ ವ್ಯವಹಾರಗಳನ್ನು ಅಧಿಕೃತವಾಗಿ ದಾಖಲೆಗಳ ರೂಪದಲ್ಲಿ ನಡೆಸಲು ಯಾವುದೇ ನೀತಿಸಂಹಿತೆಯು ಅಡ್ಡಿ ಇಲ್ಲ’ ಎನ್ನುತ್ತಾರೆ ಚುನಾವಣಾ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT