ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಮಿಕರ ಮಕ್ಕಳಿಗಾಗಿ ‘ಕೂಸಿನ ಮನೆ’

ತಾಲ್ಲೂಕಿನ 18 ಗ್ರಾಮ ಪಂಚಾಯಿತಿಗಳಲ್ಲಿ ಕೇಂದ್ರ ಸ್ಥಾಪನೆ
ಎಂ.ಪ್ರಕಾಶ್
Published 31 ಜನವರಿ 2024, 6:26 IST
Last Updated 31 ಜನವರಿ 2024, 6:26 IST
ಅಕ್ಷರ ಗಾತ್ರ

ನಂಜನಗೂಡು: ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಗ್ರಾಮೀಣ ಕಾರ್ಮಿಕರ ಮಕ್ಕಳ ಲಾಲನೆ‌ ಪಾಲನೆಗಾಗಿ ಇಲ್ಲಿನ 18 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ‘ಕೂಸಿನ ಮನೆ’ ಶೀಘ್ರ ಬಾಗಿಲು ತೆರೆಯಲಿದೆ.

ತಾಲ್ಲೂಕಿನ ದೇಬೂರು, ದೇವನೂರು, ದೇವರಾಯಶೆಟ್ಟಿಪುರ, ದೇವಿರಮ್ಮನಹಳ್ಳಿ, ಹದಿನಾರು, ಹಾಡ್ಯ, ಹರದನಹಳ್ಳಿ, ಹುಲ್ಲಹಳ್ಳಿ, ಹುರಾ, ಕೋಣನೂರು, ನಗರ್ಲೆ, ನಲ್ಲಿತಾಳಪುರ, ನವಿಲೂರು, ನೇರಳೆ, ರಾಂಪುರ, ಸುತ್ತೂರು, ತಗಡೂರು, ತಾಂಡವಪುರ ಪಂಚಾಯಿತಿಗಳು ಯೋಜನೆಗೆ ಆಯ್ಕೆಯಾಗಿವೆ.

ಪಂಚಾಯಿತಿಯ ಕಟ್ಟಡಗಳಲ್ಲಿ ‌ಭರದ ಸಿದ್ಧತೆ ನಡೆದಿದ್ದು, ನರೇಗಾ ಕಾಮಗಾರಿಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದರ ಜೊತೆಗೆ ಕಾರ್ಮಿಕರ ಮಕ್ಕಳನ್ನು ಪೋಷಿಸುವುದು ಕೇಂದ್ರದ ಉದ್ದೇಶ.

ಆರು ತಿಂಗಳಿನಿಂದ 3 ವರ್ಷದೊಳಗಿನ ಮಕ್ಕಳ ವ್ಯವಸ್ಥಿತ ಪಾಲನೆ, ಪೋಷಣೆ ಮಾಡಲಾಗುತ್ತದೆ. ಮಕ್ಕಳ ಪೋಷಣೆಗೆ ಹೆಚ್ಚು ಸಮಯ ನೀಡಲು ಸಾಧ್ಯವಾಗದವರು, ಕೂಸಿನ ಮನೆಯಲ್ಲಿ ಬಿಟ್ಟು ತಮ್ಮ ಕೆಲಸಕ್ಕೆ ತೆರಳಲು ಇದು ಅನುಕೂಲ ಕಲ್ಪಿಸುತ್ತದೆ.

ತಾಯಂದಿರು ಎದೆ ಹಾಲುಣಿಸಲು ಪ್ರತ್ಯೇಕ ಸ್ಥಳ, ಮಕ್ಕಳ ಚಟುವಟಿಕೆ ಪ್ರದರ್ಶನ ಫಲಕ, ಶುದ್ಧ ಕುಡಿಯುವ ನೀರು, ಸುಸಜ್ಜಿತ ಅಡುಗೆ ಕೋಣೆ, ಶೌಚಾಲಯ ಸೌಕರ್ಯವಿರಲಿದೆ. ಮಧ್ಯಾಹ್ನದ ಊಟ, ಸಂಜೆ ಉಪಾಹಾರ, ಪೌಷ್ಟಿಕ ಆಹಾರ, ಹಾಲು ನೀಡಲಾಗುತ್ತದೆ.

ತರಬೇತಿ: ಪ್ರತಿ ಗ್ರಾಮ ಪಂಚಾಯಿತಿಗೆ 8 ಮಂದಿಯಂತೆ, 25 ರಿಂದ 45 ವಯೋಮಾನದ, ಜಾಬ್ ಕಾರ್ಡ್ ಹೊಂದಿರುವ ಸ್ಥಳೀಯ ಮಹಿಳೆಯರನ್ನು ಆಯ್ಕೆ ಮಾಡಿ, ತರಬೇತಿ ನೀಡಲಾಗಿದೆ. ಮೊದಲ ಹಂತದಲ್ಲಿ, 60ಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ನೀಡಲಾಗಿದೆ. ಈ ಆರೈಕೆದಾರರು ಜಾಬ್ ಕಾರ್ಡ್ ಆಧಾರದಲ್ಲಿ ಒಂದು ಬಾರಿ ಇಬ್ಬರಂತೆ 100 ದಿನಗಳ ಕೆಲಸ ಮಾಡಲು ಅವಕಾಶವಿದ್ದು, ಅವರಿಗೆ ದಿನಕ್ಕೆ ₹ 316 ಸಂಭಾವನೆ ನೀಡಲಾಗುವುದು. ಮಕ್ಕಳ ಆಹಾರ, ಆರೋಗ್ಯ, ಸುರಕ್ಷತೆ, ಸ್ವಚ್ಛತೆ ಬಗೆಗೆ ತಿಳಿಸಿಕೊಡಲಾಗಿದೆ. ಪ್ರಾತ್ಯಕ್ಷಿಕೆ, ಹಾಡು-ನೃತ್ಯ, ಆಟದ ಮೂಲಕ‌ ಪಾಠ ನಡೆಯಲಿದೆ.

ಜೆರಾಲ್ಡ್ ರಾಜೇಶ್
ಜೆರಾಲ್ಡ್ ರಾಜೇಶ್

3 ವರ್ಷದೊಳಗಿನ ಶಿಶುಗಳ ಪಾಲನೆ ಆರೈಕೆದಾರರಿಗೆ ತರಬೇತಿ ಪೂರ್ಣ ನೀರು, ಶೌಚಾಲಯ, ಅಡುಗೆ ಕೋಣೆ

ಮಕ್ಕಳ ಸಮಗ್ರ ಬೆಳವಣಿಗೆಗೆ ತಕ್ಕಂತೆ ಕೇಂದ್ರದಲ್ಲಿ ಆಕರ್ಷಕ ಕಾರ್ಟೂನ್ ಪೇಂಟಿಂಗ್ ಮಾಡಿಸಲಾಗಿದೆ. ಶೀಘ್ರ ಕೂಸಿನ ಮನೆಗಳು ಆರಂಭವಾಗಲಿವೆ.
ಜೆರಾಲ್ಡ್ ರಾಜೇಶ್ ತಾ.ಪಂ ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT