ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಲಕಾಡು: ಓವರ್‌ಹೆಡ್‌ ಟ್ಯಾಂಕ್‌ ಸೋರಿಕೆ

ತಲಕಾಡು: ಕಳಪೆ ಕಾಮಗಾರಿ– ಗ್ರಾಮಸ್ಥರ ಆರೋಪ
ಟಿ.ಎಂ.ವೆಂಕಟೇಶ್ ಮೂರ್ತಿ
Published 30 ಮೇ 2024, 5:07 IST
Last Updated 30 ಮೇ 2024, 5:07 IST
ಅಕ್ಷರ ಗಾತ್ರ

ತಲಕಾಡು: ಜಲಜೀವನ ಮಿಷನ್‌ ಯೋಜನೆಯ ಮೊದಲನೇ ಹಂತದ ಕಾಮಗಾರಿ ಬಹುತೇಕ ಮುಗಿದಿದ್ದು, ಯೋಜನೆಯಡಿ ನಿರ್ಮಿಸಿರುವ ಓವರ್‌ಹೆಡ್‌ ಟ್ಯಾಂಕ್‌ ಸೋರುತ್ತಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಲಕಾಡು, ವಡೆಯಂಡಹಳ್ಳಿ ಗ್ರಾಮದ 3, 5, 8 ಹಾಗೂ 9ನೇ ವಾರ್ಡ್‌ಗಳಲ್ಲಿ ₹6 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ. 

‘ಮನೆ ಮನೆಗಳಿಗೆ ಅಳವಡಿಸಿದ ನಲ್ಲಿಗಳು ಹಾಳಾಗಿವೆ. ದಂಡಿನ ಮಾರಮ್ಮ ದೇವಸ್ಥಾನದ ಬಳಿ ಹೊಸದಾಗಿ ನಿರ್ಮಿಸಿರುವ ಓವರ್‌ಹೆಡ್ ಟ್ಯಾಂಕ್ ಆರು ತಿಂಗಳಲ್ಲೇ ಸೋರುತ್ತಿದೆ. ವಿನಾಯಕ ನಗರದ ಬಡಾವಣೆಗೆ ಹೊಸ ಸಂಪರ್ಕದ ನೀರು ಸರಿಯಾಗಿ ಬರುತ್ತಿಲ್ಲ. ಸಹಾಯಕ ಎಂಜಿನಿಯರ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಮೊದಲನೇ ಹಂತದ ಯೋಜನೆಯ ಕಾಮಗಾರಿ ಲೋಪ ದೋಷದಿಂದ ಕೂಡಿದೆ’ ಎಂದು ಗ್ರಾಮದ ಮಹದೇವ್ ಪ್ರಭು ಆರೋಪಿಸಿದರು.

‘ನೂತನವಾಗಿ ನಿರ್ಮಿಸಿರುವ ಓವರ್‌ಹೆಡ್‌ ಟ್ಯಾಂಕ್‌ ಸೋರುತ್ತಿದ್ದು, ಅಧಿಕಾರಿಗಳು ತೇಪೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ಯೋಜನೆಗಷ್ಟೇ ಕೆಲಸ ಕಾಣಿಸುತ್ತಿದ್ದು, ಗುಣಮಟ್ಟದಲ್ಲಿ ಕೊರತೆ ಎದ್ದು ಕಾಣುತ್ತಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಟಿ.ಎಂ. ನಾಗೇಂದ್ರ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

‘ವಿನಾಯಕ ನಗರದ ಬಡಾವಣೆಗೆ ಇದುವರೆಗೂ ನೀರು ಬಂದಿಲ್ಲ, ಮನೆ ಸಂಪರ್ಕದ ನಲ್ಲಿಗಳು ಸಂಪೂರ್ಣ ಹಾಳಾಗಿವೆ, ಹಣ ಖರ್ಚು ಮಾಡಿ ನಲ್ಲಿ ಹಾಕಿಸಿಕೊಳ್ಳುವ ಪರಿಸ್ಥಿತಿ ಇದೆ’ ಎಂದು ಮಹದೇವ್ ಪ್ರಭು ಅಳಲು ತೋಡಿಕೊಂಡರು.

‘‌ಕಾಮಗಾರಿ ನಡೆಯುವ ಸಂದರ್ಭದಲ್ಲಿ ಲೋಪದೋಷ ಕಂಡುಬರುವುದು ಸಹಜ, ನೀರಿನ ಟ್ಯಾಂಕ್ ಸೋರುತ್ತಿರುವುದು ಹಾಗೂ ಮನೆ ನಲ್ಲಿ ಹಾಳಾಗಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಕೂಡಲೇ ಗುತ್ತಿಗೆದಾರರಿಗೆ ಸರಿಪಡಿಸಲು ಸೂಚಿಸುವೆ’ ಎಂದು  ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಎಇಇ ಕೈಲಾಸ್ ಮೂರ್ತಿ ‘ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT