ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಬರ: ಸದ್ಯಕ್ಕಿಲ್ಲ ಮೇವಿನ ಕೊರತೆ

ಬರಗಾಲದಲ್ಲೂ ಜಾನುವಾರುಗಳಿಗೆ 5.42 ಲಕ್ಷ ಟನ್ ಮೇವು ಲಭ್ಯ
ರಾಘವೇಂದ್ರ ಎಂ.ವಿ
Published 29 ನವೆಂಬರ್ 2023, 5:18 IST
Last Updated 29 ನವೆಂಬರ್ 2023, 5:18 IST
ಅಕ್ಷರ ಗಾತ್ರ

ಮೈಸೂರು: ಈ ಮುಂಗಾರು–ಹಿಂಗಾರಿನಲ್ಲಿ ಇಡೀ ಜಿಲ್ಲೆ ಬರಪೀಡಿತವಾಗಿದ್ದು, ಬೆಳೆಗಳು ಒಣಗಿ ನಿಂತಿವೆ. ಆದಾಗ್ಯೂ ಸದ್ಯ ಜಾನುವಾರುಗಳಿಗೆ ಮೇವಿನ ಕೊರತೆ ಆಗದು ಎನ್ನುತ್ತಾರೆ ಪಶುಪಾಲನಾ ಇಲಾಖೆಯ ಅಧಿಕಾರಿಗಳು.

ಜಿಲ್ಲೆಯಲ್ಲಿ ಒಟ್ಟು 5.14 ಲಕ್ಷ ಜಾನುವಾರುಗಳಿವೆ. ಇವುಗಳಿಗೆ ಒಂದು ವಾರಕ್ಕೆ 22,044 ಮೆಟ್ರಿಕ್ ಟನ್‌ನಷ್ಟು ಮೇವು ಅವಶ್ಯಕತೆ ಇದೆ. ಸದ್ಯ 5,42,519 ಮೆಟ್ರಿಕ್ ಟನ್ ಮೇವು ಲಭ್ಯವಿದ್ದು, ಇದು ಮುಂದಿನ 23 ರಿಂದ 25 ವಾರಗಳಿಗೆ ಸಾಕಾಗಲಿದೆ.

ಜಿಲ್ಲೆಯಲ್ಲಿ ಈಗ ಲಭ್ಯವಿರುವ ಮೇವು ಇನ್ನೂ 6 ತಿಂಗಳು ಬರುವುದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಆಗುವುದಿಲ್ಲ. ಈ ಮುಂಗಾರಿನಲ್ಲಿ ಬೆಳೆದ ಬೆಳೆ ಈಗಾಗಲೇ ಕಟಾವಿಗೆ ಬಂದಿದೆ. ಮೇವಿಗೆ ಬರುವಷ್ಟು ಬೆಳೆ ಇದೆ. ಹಲವು ರೈತರು ಭತ್ತ ಹಾಗೂ ರಾಗಿ ಒಕ್ಕಣೆ ಸಮಯದಲ್ಲಿ ಮೇವು ಸಂಗ್ರಹಿಸಿದ್ದಾರೆ.

‘ಈಗಾಗಲೇ ಇರುವ ಒಣ ಹುಲ್ಲು ಶೇಖರಣೆ ಮಾಡಿಟ್ಟುಕೊಳ್ಳುವಂತೆ ರೈತರಿಗೆ ಮನವಿ ಮಾಡಲಾಗಿದೆ. ಜೋಳದ ಕಡ್ಡಿ, ಅವರೆ ಕಡ್ಡಿ, ಹುರುಳಿ ಜೊತೆಗೆ ಮೇವು ಕಿಟ್‌ ಮೂಲಕ ಹಸಿ ಮೇವು ಬೆಳೆದುಕೊಂಡು ತಾತ್ಕಾಲಿಕವಾಗಿ ಜಾನುವಾರುಗಳಿಗೆ ಒದಗಿಸಲು ಸೂಚಿಸಲಾಗಿದೆ’ ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ನಾಗರಾಜು ತಿಳಿಸಿದರು.

66,442 ಮಿನಿ ಕಿಟ್‌ ವಿತರಣೆ: ಬೇಸಿಗೆಯಲ್ಲಿ ಮೇವು ಕೊರತೆಯಾಗದಂತೆ ಹಸಿರು ಮೇವು ಬೆಳೆದುಕೊಳ್ಳಲು ಜಿಲ್ಲೆಯ 181 ಪಶು ಆಸ್ಪತ್ರೆ ಮೂಲಕ ರೈತರಿಗೆ ಮನೆ ಬಾಗಿಲಿಗೆ ಉಚಿತವಾಗಿ 5 ಕೆ.ಜಿ ಮೇವಿನ ಪೊಟ್ಟಣದ 66,442 ಮಿನಿ ಕಿಟ್‌ ವಿತರಿಸಲಾಗಿದೆ. ಈಗಾಗಲೇ ಇದರ ಬಿತ್ತನೆಯಾಗಿದೆ. ಇನ್ನು 3 ಸಾವಿರ ಕಿಟ್‌ ಕೊಡಲಾಗುತ್ತದೆ. ಒಟ್ಟಾರೆ 69,442 ಮಿನಿ ಕಿಟ್‌ಗಳನ್ನು ಜಿಲ್ಲೆಗೆ ಸರಬರಾಜು ಮಾಡಲಾಗುತ್ತದೆ. ಅಗತ್ಯವಿರುವ ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.

20 ಗುಂಟೆ ಜಾಗದಲ್ಲಿ ಈ ಬೀಜವನ್ನು ಹಾಕಿಕೊಳ್ಳಬಹುದು. 4 ಕ್ವಿಂಟಲ್‌ವರೆಗೆ ಮೇವು ಬರಲಿದೆ. ಸೋರ್ಗಮ್‌ ಮಲ್ಟಿಕಟ್‌, ಬಾಜೀರಾ, ಆಫ್ರಿಕನ್‌ ಟಾಲ್‌ಮೇಜ್‌ ತಳಿ ಬೀಜ ವಿತರಣೆ ಮಾಡಲಾಗಿದೆ. ಆಫ್ರಿಕನ್‌ ಟಾಲ್‌ಮೇಜ್‌ ಒಂದು ಬೆಳೆ ಬಂದರೆ, ಸೋರ್ಗಮ್‌ ಮಲ್ಟಿಕಟ್‌, ಬಾಜೀರಾ ತಳಿ ಮೇವಿನ ಬೀಜದಲ್ಲಿ ಬೆಳೆಯುವ ಮೇವು ಮೂರು ಬಾರಿ ದೊರೆಯಲಿದೆ.

ಈ ರೀತಿ ಹಸಿ ಮೇವು ನೀಡುವುದರಿಂದ ಜಾನುವಾರುಗಳಿಗೆ ಪೌಷ್ಟಿಕಾಂಶ ಹೆಚ್ಚು. ತೆನೆ ಕಟ್ಟು ಮಾಡದೆ ಕೊಟ್ಟರೆ, ಮೇವು ಚೆನ್ನಾಗಿರುತ್ತದೆ. ಹಾಲು ಉತ್ಪಾದನೆ ಹೆಚ್ಚುತ್ತೆ. ಇದರಿಂದ ಸಮತೋಲನ ಆಹಾರ ಕಡಿಮೆ ಮಾಡಿಕೊಳ್ಳಬಹುದು ಎನ್ನುತ್ತಾರೆ ಪಶುವೈದ್ಯರು.

ಡಾ.ನಾಗರಾಜು
ಡಾ.ನಾಗರಾಜು

‘ಮೇವು ಸಾಗಾಟಕ್ಕೆ ನಿರ್ಬಂಧ’

‘ಡಿಸೆಂಬರ್ ತಿಂಗಳಲ್ಲಿ ಮುಂಗಾರು ಬೆಳೆ ಭತ್ತ ರಾಗಿ ಕಟಾವಿಗೆ ಬರಲಿದೆ. ಕೆ.ಆರ್.ನಗರ ಪಿರಿಯಾಪಟ್ಟಣ ತಿ.ನರಸೀಪುರ ಎಚ್‌.ಡಿ.ಕೋಟೆ ಭಾಗದಲ್ಲಿ ಬಂದಿರುವ ಭತ್ತವನ್ನು ರೈತರು ಯಂತ್ರಗಳಲ್ಲಿ ಕಟಾವು ಮಾಡದಂತೆ ಹಾಗೂ ಬುಡಕ್ಕೆ ಕತ್ತರಿಸಿ ಜೋಪಾನವಾಗಿ ಶೇಖರಿಸಲು ಮನವಿ ಮಾಡಲಾಗಿದೆ. ಸರ್ಕಾರದ ಆದೇಶದಂತೆ ಹೊರ ರಾಜ್ಯಗಳಿಗೆ ಮೇವು ಸಾಗಾಟ ಮಾಡದಂತೆ ನಿರ್ಬಂಧ ಹಾಕಲಾಗಿದೆ’ ಎಂದು ಡಾ.ನಾಗರಾಜು ತಿಳಿಸಿದರು.

ಅಗತ್ಯಬಿದ್ದರೆ ‘ಮೇವು ಬ್ಯಾಂಕ್‌’

 ‘ಮೇವಿನ ಕೊರತೆ ಉಂಟಾದಲ್ಲಿ ಮೇವು ಬ್ಯಾಂಕ್ ತೆರೆಯುವ ಬಗ್ಗೆ ಆಲೋಚನೆಯಿದೆ. ಎಲ್ಲೆಲ್ಲಿ ತೆರೆಯಬೇಕು ಎನ್ನುವುದನ್ನು ಸಹ ತೀರ್ಮಾನಿಸಲಾಗಿದ್ದು ಫೆಬ್ರುವರಿ– ಮಾರ್ಚ್‌ ವೇಳೆ ತೆರೆಯಲಾಗುವುದು. ಸದ್ಯಕ್ಕೆ ನೀರಿನ ಸಮಸ್ಯೆಯೂ ಕಂಡುಬಂದಿಲ್ಲ. ಎಲ್ಲ ಗ್ರಾಮ ಪಂಚಾಯಿತಿ ಜೊತೆಗೆ ನಿಕಟ ಸಂಪರ್ಕದಲ್ಲಿದ್ದೇವೆ. ಎಲ್ಲಾದರೂ ಸಮಸ್ಯೆ ಬಂದರೆ ನೀರಿನ ತೊಟ್ಟಿ ಕಟ್ಟಿಸುವ ಬಗ್ಗೆ ಆಯಾ ತಾಲ್ಲೂಕು ಪಂಚಾಯಿತಿ ಇಒಗೆ ಮನವಿ ಮಾಡಲಾಗುವುದು’ ಎಂದು ಡಾ. ನಾಗರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT